ಭಾನುವಾರ, ಜೂನ್ 13, 2021
24 °C

ರೂ. 107.69 ಕೋಟಿ ಆದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗುಲ್ಬರ್ಗ ವಿಭಾಗವು ಪ್ರತಿನಿತ್ಯ 2 ಲಕ್ಷ ಕಿ.ಮೀ. ಕಾರ್ಯಾಚರಣೆ ಮಾಡಿ ಸರಾಸರಿ 40 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದೆ. ಪ್ರಸಕ್ತ 2011-12ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ 107.69 ಕೋಟಿ ರೂಪಾಯಿ ಆದಾಯ ಗಳಿಸಿದೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಮುನಿಯಲ್ಲಪ್ಪ ತಿಳಿಸಿದ್ದಾರೆ.ಗುಲ್ಬರ್ಗ ಜಿಲ್ಲೆಯ ಚಿಂಚೋಳಿ, ಚಿತ್ತಾಪುರ, ಗುಲ್ಬರ್ಗ, ಅಫಜಲಪುರ, ಆಳಂದ, ಜೇವರ್ಗಿ ತಾಲ್ಲೂಕುಗಳನ್ನು ಈ ವಿಭಾಗ ಒಳಗೊಂಡಿದೆ. ಈ ವಿಭಾಗವನ್ನು ಪ್ರಸಕ್ತ ಸಾಲಿನ ಜನವರಿ 26ರಂದು ಬೇರ್ಪಡಿಸಿ ಗುಲ್ಬರ್ಗ ಪೂರ್ವ ಮತ್ತು ಗುಲ್ಬರ್ಗ ಪಶ್ಚಿಮವೆಂದು ಬೇರ್ಪಡಿಸಲಾಗಿದೆ.  ಪೂರ್ವ ವಿಭಾಗದ ವ್ಯಾಪ್ತಿಗೆ ಗುಲ್ಬರ್ಗ -1, ಚಿತ್ತಾಪುರ, ಕಾಳಗಿ, ಚಿಂಚೋಳಿ ಹಾಗೂ ಸೇಡಂ ಬಸ್ ಘಟಕಗಳು ಸೇರಿವೆ. ಪಶ್ಚಿಮ ವಿಭಾಗಕ್ಕೆ ಗುಲ್ಬರ್ಗ-2 ಮತ್ತು 3, ಆಳಂದ, ಆಫಜಲಪುರ ಹಾಗೂ ಜೇವರ್ಗಿ ಬಸ್ ಘಟಕಗಳು ಒಳಪಟ್ಟಿವೆ.ಜಿಲ್ಲೆಯ 811 ಹಳ್ಳಿಗಳ ಪೈಕಿ 706 ಹಳ್ಳಿಗಳು ಸಮರ್ಪಕ ಬಸ್ ಸಾರಿಗೆ ಸೌಲಭ್ಯ ಪಡೆದಿವೆ. ಉಳಿದ ಜನವಸತಿ ರಹಿತ 36 ಗ್ರಾಮಗಳು ಮತ್ತು ರಸ್ತೆ ಸರಿಯಿಲ್ಲದ 69 ಗ್ರಾಮಗಳು ಸೇರಿದಂತೆ 105 ಹಳ್ಳಿಗಳು ಬಸ್ಸುಗಳ ಸೇವಾ ಸೌಲಭ್ಯ ಪಡೆದಿಲ್ಲ.ಈ ವಿಭಾಗದ ವ್ಯಾಪ್ತಿಯಲ್ಲಿ 9 ಬಸ್ ಘಟಕಗಳ ಮೂಲಕ ಗ್ರಾಮೀಣ, ನಗರ ಪ್ರದೇಶ, ರಾಜಧಾನಿ ಮತ್ತು ಅಂತರರಾಜ್ಯಗಳಲ್ಲಿ ಹಲವಾರು ವೇಗದೂತ, ಸುಖಾಸೀನ ರಾಜಹಂಸ, ಅರೆ ಸುಖಾಸೀನ, ಹವಾನಿಯಂತ್ರಿತ ಐರಾವತ ಮತ್ತು ಕರೋನಾ ಸ್ಲೀಪರ್ ಕೋಚ್ ಮುಂತಾದ  640 ಬಸ್ಸುಗಳಿಂದ 26 ನಗರ, 28 ಉಪನಗರ, 227 ಗ್ರಾಮೀಣ ಹಾಗೂ 233 ವೇಗದೂತ ಬಸ್ ಸೇರಿದಂತೆ ಒಟ್ಟು 564 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಕಾರ್ಯಾಚರಣೆಯಿಂದ ಪ್ರತಿದಿನ ಸರಾಸರಿ 2 ಲಕ್ಷ ಕಿ.ಮೀ. ಕ್ರಮಿಸುತ್ತಿದ್ದು, ಸರಾಸರಿ 3 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.ನೆರೆಯ ರಾಜ್ಯಗಳ ಮತ್ತು ರಾಜ್ಯದ ಪ್ರಮುಖ ಐತಿಹಾಸಿಕ, ಪ್ರವಾಸಿ ತಾಣ ಮತ್ತು ಧಾರ್ಮಿಕ ನಗರಗಳಿಗೆ ಪ್ರತಿದಿನ 134 ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಭಾಗದಲ್ಲಿ ಖಾಸಗಿ ವಾಹನಗಳ ತೀವ್ರ ಪೈಪೋಟಿ ಇರುವುದರಿಂದ ಗುಲ್ಬರ್ಗ- ಬೆಂಗಳೂರು, ಗುಲ್ಬರ್ಗ- ಧಾರವಾಡ, ಗುಲ್ಬರ್ಗ- ವಿಜಾಪುರ, ಗುಲ್ಬರ್ಗ- ಬಸವಕಲ್ಯಾಣ ಮಾರ್ಗಗಳಲ್ಲಿ ಪ್ರೋತ್ಸಾಹದಾಯಕ ಪ್ರಯಾಣದರದಲ್ಲಿ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.ವಿಭಾಗದಲ್ಲಿ 875 ಚಾಲಕರು, 526 ನಿರ್ವಾಹಕರು, 778 ಚಾಲಕ ಕಮ್ ನಿರ್ವಾಹಕರು ಹಾಗೂ 878 ಇತರ ಸಿಬ್ಬಂದಿ ಸೇರಿದಂತೆ ಒಟ್ಟು 3,057 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.  ಚಾಲಕ ನಿರ್ವಹಕರ ಕೊರತೆಯನ್ನು ಕಳೆದೆರಡು ವರ್ಷಗಳಲ್ಲಿ ಸತತ ನೇಮಕಾತಿ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಿ ಸರಿಪಡಿಸಲಾಗಿದೆ.

 

ಪ್ರಸ್ತುತ ವರ್ಷ ವಿಭಾಗದಿಂದ ಪ್ರಾಥಮಿಕ ಶಾಲೆಯ 4,780 ವಿದ್ಯಾರ್ಥಿಗಳಿಗೆ ಮತ್ತು 167 ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ, 3,842 ಅಂಗವಿಕಲರಿಗೆ, 1156 ಅಂಧರಿಗೆ ರಿಯಾಯಿತಿ  ಬಸ್ ಪಾಸ್, 3,332  ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ  ಮತ್ತು 1,54,171 ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ಶೇ. 25 ರಷ್ಟು ರಿಯಾಯಿತಿ ನೀಡಲಾಗಿದೆ. ಮಾನ್ಯತೆ ಪಡೆದ ಪತ್ರಕರ್ತರಿಗೂ ವಿವಿಧ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ.ಗುಲ್ಬರ್ಗ ನಗರದ ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಸೌಕರ್ಯ ಒದಗಿಸಲು ನಗರ ಸಾರಿಗೆಯನ್ನು ಉನ್ನತೀಕರಿಸಿ ಹೊಸ 50 ನಗರ ಸಾರಿಗೆ ವಾಹನಗಳ ಕಾರ್ಯಾಚರಣೆ ಮಾಡಲು ಯೋಜಿಸಿದೆ. ಅಫಜಲಪುರ ಮತ್ತು ಕಾಳಗಿ ಘಟಕಗಳಿಂದ ಹೆಚ್ಚಿನ ವಾಹನಗಳ ಕಾರ್ಯಾಚರಣೆ ಮಾಡಲು, ಮುಂಬರುವ ದಿನಗಳಲ್ಲಿ ಗುಲ್ಬರ್ಗದಲ್ಲಿ 4ನೇ ಹೊಸ ಬಸ್ ಘಟಕ ಪ್ರಾರಂಭಿಸಲು ಮತ್ತು ಗುಲ್ಬರ್ಗ ನಗರದ ಒಟ್ಟು 28 ಸ್ಥಳಗಳಲ್ಲಿ ಅತ್ಯಾಧುನಿಕ ಮಾದರಿಯ ನಗರ ಸಾರಿಗೆ ಬಸ್ ತಂಗುದಾಣಗಳನ್ನು ನಿರ್ಮಿಸುವ ಯೋಜನೆ ಹಮ್ಮಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.