86 ಐಸಿಟಿಸಿ ಕೇಂದ್ರಗಳ ಸೇವೆ ಸ್ಥಗಿತ; ಸೋಂಕಿತರ ಅಲೆದಾಟ..!

7
ಎಚ್‌ಐವಿ ಪೀಡಿತರ ಚಿಕಿತ್ಸೆ, ಸೋಂಕಿತರ ಪತ್ತೆಯಲ್ಲಿ ಪರಿಣಾಮಕಾರಿ ಕಾರ್ಯ ನಿರ್ವಹಿಸಿದ್ದ ಕೇಂದ್ರಗಳಿವು...

86 ಐಸಿಟಿಸಿ ಕೇಂದ್ರಗಳ ಸೇವೆ ಸ್ಥಗಿತ; ಸೋಂಕಿತರ ಅಲೆದಾಟ..!

Published:
Updated:
Deccan Herald

ವಿಜಯಪುರ: ದಶಕದ ಅವಧಿಯಿಂದಲೂ ರಾಜ್ಯದಲ್ಲಿ ಎಚ್‌ಐವಿ ಸೋಂಕು ನಿಯಂತ್ರಿಸುವಲ್ಲಿ ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷನ್‌ ಸೊಸೈಟಿ (ಕೆಸಾಪ್ಸ್‌)ಯಡಿ ಪರಿಣಾಮಕಾರಿ ಪಾತ್ರ ನಿರ್ವಹಿಸಿದ್ದ; ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರ (ಐಸಿಟಿಸಿ)ಗಳಲ್ಲಿನ ಸೇವೆಯನ್ನು ಹಂತ ಹಂತವಾಗಿ ರದ್ದುಗೊಳಿಸುತ್ತಿರುವುದು ಸೋಂಕಿತರನ್ನು ಕಂಗಾಲಾಗಿಸಿದೆ.

ರಾಜ್ಯದಲ್ಲಿ 544 ಐಸಿಟಿಸಿ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, ಇವುಗಳಲ್ಲಿ ಈಗಾಗಲೇ ಹಂತ ಹಂತವಾಗಿ 86 ಕೇಂದ್ರಗಳಲ್ಲಿನ ಸೇವೆ ಸ್ಥಗಿತಗೊಳಿಸಿರುವುದರ ಜತೆಗೆ; 19 ಚಿಕಿತ್ಸಾ ಆರೈಕೆ ಉಪ ಕೇಂದ್ರ (ಲಿಂಕ್‌ ಎಆರ್‌ಟಿ)ಗಳಲ್ಲಿ ದೊರಕುತ್ತಿದ್ದ ಚಿಕಿತ್ಸಾ ಸೌಲಭ್ಯವೂ ಸ್ಥಗಿತಗೊಂಡಿದ್ದು, ಸೋಂಕಿತರು ಚಿಕಿತ್ಸೆಗಾಗಿ ದೂರದ ಪಟ್ಟಣ, ನಗರ ಪ್ರದೇಶಗಳಿಗೆ ತೆರಳಬೇಕಿದೆ.

‘ನಾವೂ ಇಲ್ಲಿಯವರೆಗೂ ಐಸಿಟಿಸಿ ಕೇಂದ್ರಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದೆವು. ಆಪ್ತ ಸಮಾಲೋಚಕರು, ಸಿಬ್ಬಂದಿ ಜತೆ ಒಡನಾಟ ಹೊಂದಿದ್ದೆವು. ಆದರೆ ಇದೀಗ ಏಕಾಏಕಿ ನಮ್ಮಲ್ಲಿನ ಸೇವೆ ಸ್ಥಗಿತಗೊಳಿಸಿದ್ದಾರೆ. ಇದರಿಂದ ಮಾತ್ರೆ, ಚಿಕಿತ್ಸೆ ಬೇಕೆಂದರೇ ಕನಿಷ್ಠ 30 ಕಿ.ಮೀ. ದೂರದ ಪಟ್ಟಣ ಅಥವಾ ನಗರಕ್ಕೆ ಹೋಗಬೇಕಿದೆ. ಹೊಸ ಪರಿಸರಕ್ಕೆ ಚಿಕಿತ್ಸೆಗಾಗಿ ಹೋಗುವುದು ಮುಜುಗರವುಂಟು ಮಾಡಿದೆ’ ಎಂದು ಸೋಂಕಿತರೊಬ್ಬರು ‘ಪ್ರಜಾವಾಣಿ’ ಬಳಿ ಅಸಹಾಯಕತೆ ತೋಡಿಕೊಂಡರು.

ಆಘಾತಕಾರಿ: ‘ಪ್ರಸ್ತುತ ಕಾರ್ಯಾಚರಿಸುತ್ತಿರುವ ಪ್ರತಿ ಐಸಿಟಿಸಿ ಕೇಂದ್ರಕ್ಕೆ ತಪಾಸಣೆಗಾಗಿ ತಿಂಗಳಿಗೆ ಕನಿಷ್ಠ 300 ಮಂದಿ ಭೇಟಿ ನೀಡುತ್ತಾರೆ. ಇದರಲ್ಲಿ 15ರಿಂದ 20 ಮಂದಿ ಸೋಂಕಿತರು ಪತ್ತೆಯಾಗುತ್ತಾರೆ. ಇದರ ಜತೆಗೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಆಪ್ತ ಸಮಾಲೋಚನೆ ಒದಗಿಸುವ ಜತೆಯಲ್ಲೇ ಚಿಕಿತ್ಸೆ ಸಹ ನೀಡುತ್ತಿದ್ದರು.

ಇದೀಗ ಕೆಲ ಐಸಿಟಿಸಿ ಕೇಂದ್ರಗಳ ಸೇವೆ ಸ್ಥಗಿತಗೊಳಿಸಲಾಗಿದೆ. ಈ ಕೇಂದ್ರಗಳಿದ್ದ ಸ್ಥಳದಲ್ಲಿಯೇ ಎಫ್‌ಐಸಿಟಿಸಿ ಕೇಂದ್ರ ಆರಂಭಿಸಿ ಆರೋಗ್ಯ ಇಲಾಖೆಯ ನೌಕರರಿಗೆ, ತರಬೇತಿ ನೀಡಿ ನಿಯೋಜಿಸಿದ್ದಾರೆ. ಈ ಕೇಂದ್ರಗಳಲ್ಲಿ ಪ್ರಸ್ತುತ ಎಚ್‌ಐವಿ ಸೋಂಕು ತಗುಲಿರುವುದನ್ನು ಖಚಿತಪಡಿಸಲ್ಲ. ಇದರ ಜತೆಗೆ ಚಿಕಿತ್ಸೆಯನ್ನೂ ನೀಡುತ್ತಿಲ್ಲ.

ಇದು ಸೋಂಕಿತರ ಪಾಲಿಗೆ ಆಘಾತಕಾರಿ ಬೆಳವಣಿಗೆಯಾಗಿದೆ’ ಎನ್ನುತ್ತಾರೆ ರಾಯಚೂರು ಜಿಲ್ಲೆಯ ಸಿಂಧನೂರ ತಾಲ್ಲೂಕಿನ ಜವಳಗೇರಾ ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕ ಪಾಮೇಶ ಕಟ್ಟಿಮನಿ.

ಅನುದಾನ ಕೊರತೆ:‘ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ‘ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ’ (ನ್ಯಾಕೋ) ಎಲ್ಲಾ ರಾಜ್ಯಗಳಿಗೆ ಎಚ್‌ಐವಿ/ಏಡ್ಸ್‌ ನಿಯಂತ್ರಣಕ್ಕೆ ವ್ಯಾಪಕವಾಗಿ ಅನುದಾನವನ್ನು 2006–07ರಿಂದ ನೀಡಲಾರಂಭಿಸಿತ್ತು.

ಈ ಅನುದಾನ ಬಳಸಿಕೊಂಡೇ ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷನ್‌ ಸೊಸೈಟಿ ಹಲ ಕಾರ್ಯಕ್ರಮ ರೂಪಿಸಿತ್ತು. ಇದರ ಅಂಗವಾಗಿ ಐಸಿಟಿಸಿ ಕೇಂದ್ರಗಳು ಆರಂಭಗೊಂಡಿದ್ದವು. 2014ರಿಂದ ಕೇಂದ್ರ ಅನುದಾನ ಒದಗಿಸುವುದನ್ನು ನಿಲ್ಲಿಸಿದೆ.

ಆದರೂ 2017ರವರೆಗೆ ರಾಜ್ಯ ಸರ್ಕಾರವೇ ಅನುದಾನ ನೀಡಿದೆ. ಆದರೆ ಇದೀಗ ಯಾವ ಅನುದಾನವೂ ದೊರೆಯದಿದ್ದರಿಂದ ಹಾಗೂ ನ್ಯಾಕ್ ಸೂಚನೆಯಂತೆ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗುತ್ತಿದೆ’ ಎಂದು ಕೆಸಾಪ್ಸ್‌ನ ಯೋಜನಾ ನಿರ್ದೇಶಕಿ ಶ್ಯಾಮಲಾ ಇಕ್ಬಾಲ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಈ ಐಸಿಟಿಸಿ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿದ್ದ ನೌಕರರನ್ನು ಬೇರೆಡೆ ನಿಯೋಜಿಸಲಾಗಿದೆ. 110 ಮಂದಿ ಕೆಲಸ ಮಾಡುತ್ತಿದ್ದಾರೆ. ಉಳಿದ ಕೆಲವರು ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !