ಸೋಮವಾರ, ಮೇ 17, 2021
28 °C

ಬಡತನ ಮಾನದಂಡ ನಿಗದಿ: ಪರಿಶೀಲನೆಗೆ ತಾಂತ್ರಿಕ ಸಮಿತಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ದಿನಗಳಿಕೆಯ ಆಧಾರದ ಮೇಲೆ ಬಡತನದ ರೇಖೆಯನ್ನು ನಿಗದಿ ಮಾಡುವ ಮಾನದಂಡದ ಬಗ್ಗೆ ಪುನರ್‌ಪರಿಶೀಲಿಸಲು ತಾಂತ್ರಿಕ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಡಾ. ಮಾಂಟೆಕ್‌ಸಿಂಗ್ ಅಹ್ಲುವಾಲಿಯಾ ತಿಳಿಸಿದ್ದಾರೆ.ಸೋಮವಾರ ಇಲ್ಲಿ ಬಹು ಕೌಶಲ ಅಭಿವೃದ್ಧಿ ಕೇಂದ್ರದ ಶಂಕುಸ್ಥಾಪನೆ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. “ಬಡತನವನ್ನು ಅಳೆಯಲು ಅನೇಕ ಮಾನದಂಡಗಳು ನಮ್ಮೆದುರಿಗೆ ಇವೆ. ಮೂಲಸೌಲಭ್ಯ, ಪದಾರ್ಥಗಳ ಬಳಕೆ ಇತ್ಯಾದಿಗಳನ್ನು ಪರಿಶೀಲಿಸಿ, ವಿಶ್ಲೇಷಿಸಿದ ಬಳಿಕವಷ್ಟೇ ನಿಗದಿ ಮಾಡಬೇಕು” ಎಂದು ಅವರು ನುಡಿದರು.ಬಡತನದ ರೇಖೆ ವ್ಯಾಪ್ತಿಯನ್ನು ಪರಿಷ್ಕರಿಸುವ ಮೂಲಕ ಬಹು ದೊಡ್ಡ ಸಂಖ್ಯೆಯ ಜನತೆಯನ್ನು ಪಡಿತರ ವಿತರಣಾ ವ್ಯವಸ್ಥೆಯಿಂದ ಹೊರಗಿಡಲಾಗುತ್ತಿದೆ ಎಂಬ ಆತಂಕನ್ನು ಅವರು ತಳ್ಳಿಹಾಕಿದರು. “ಬಿಪಿಎಲ್ ಮಾತ್ರವಲ್ಲದೇ ಉಳಿದ ವರ್ಗಗಳಿಗೂ ಸರ್ಕಾರ ಪಡಿತರ ವ್ಯವಸ್ಥೆಯಡಿ ಆಹಾರ ಧಾನ್ಯ ವಿತರಿಸಬಹುದಾಗಿದೆ. ಅಷ್ಟಕ್ಕೂ ಆಹಾರ ಭದ್ರತಾ ಕಾಯ್ದೆಯು ದೇಶದ ಎಲ್ಲ ವರ್ಗಗಳ ಜನತೆಯ ಕಾಳಜಿ ವಹಿಸಲಿದೆ” ಎಂದರು.ನಗರ ಪ್ರದೇಶದಲ್ಲಿ ಪ್ರತಿ ದಿನದ ಗಳಿಕೆ ರೂ. 32 ಹಾಗೂ ಗ್ರಾಮೀಣ ಪ್ರದೇಶದಲ್ಲಿ ರೂ. 26 ಇದ್ದರೆ, ಆ ವ್ಯಕ್ತಿ ಬಡತನದ ರೇಖೆ ಕೆಳಗಿನ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುರೇಶ ತೆಂಡೂಲ್ಕರ್ ಸಮಿತಿಯು ನೀಡಿದ್ದ ವರದಿಯನ್ನು ಯೋಜನಾ ಆಯೋಗ ಒಪ್ಪಿಕೊಂಡು ವಿವಾದ ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಶಿಕ್ಷಣ ಹಕ್ಕು: ಶಿಕ್ಷಣ ಹಕ್ಕು ಕಾಯ್ದೆ ಪರಿಣಾಮಕಾರಿ ಅನುಷ್ಠಾನದ ಕುರಿತು ಕೇಳಿದ ಪ್ರಶ್ನೆಗೆ “ಕಾಯ್ದೆ ಜಾರಿಗೆ ಪರಿಣಿತ ಶಿಕ್ಷಕರ ನೇಮಕ ಮಾಡಿಕೊಳ್ಳುವುದೇ ರಾಜ್ಯ ಸರ್ಕಾರಗಳ ಮುಂದಿರುವ ಸವಾಲು” ಎಂದು ಅಹ್ಲುವಾಲಿಯಾ ಪ್ರತಿಕ್ರಿಯಿಸಿದರು. ಕಾಯ್ದೆ ಅನುಷ್ಠಾನಕ್ಕೆ ಹಣಕಾಸು ಕೊರತೆ ಖಂಡಿತ ಉಂಟಾಗದು ಎಂದೂ ಅವರು ಸ್ಪಷ್ಟಪಡಿಸಿದರು.ನದಿ ಜೋಡಣೆ ಯೋಜನೆಯನ್ನು ಶೀಘ್ರ ಆರಂಭಿಸುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಇದೊಂದು ಸಂಕೀರ್ಣ ವಿಷಯ. ಪರಿಸರಕ್ಕೆ ಯಾವುದೇ ಹಾನಿ ಉಂಟಾಗದಂತೆ ಕ್ರಿಯಾಯೋಜನೆ ಸಿದ್ಧಪಡಿಸಬೇಕಿದೆ. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಈ ಬಗ್ಗೆ ಗಮನ ಹರಿಸಲಾಗುವುದು” ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.