ಶನಿವಾರ, ಮೇ 15, 2021
24 °C

ವಿದ್ಯುತ್ ನಷ್ಟ ತಡೆಗೆ ಹೊಸ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹಗಲು ಹೊತ್ತಿನಲ್ಲೂ ಬೀದಿ ವಿದ್ಯುತ್ ದೀಪಗಳು ಉರಿಯುವುದು, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುವುದು ಸಹಜ ಎನ್ನುವಂತೆ ನಡೆದುಕೊಂಡು ಬರುತ್ತಿದೆ. ವಿದ್ಯುತ್ ನಷ್ಟ ತಡೆಯಲು ಯಾವುದೇ ಪರಿಣಾಮಕಾರಿ ತಂತ್ರಜ್ಞಾನವನ್ನು ಸಂಬಂಧಿಸಿದವರು ಇಂದಿಗೂ ಅಳವಡಿಸಿಲ್ಲ ಎನ್ನುವುದು ಮಾತ್ರ ಗಮನಾರ್ಹ.ಇದೀಗ ಗುಲ್ಬರ್ಗದ ಎಚ್‌ಕೆಇ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂಚಾಲಿತ (ಅಟೋಮ್ಯಾಟಿಕ್) ವಿದ್ಯುತ್ ನಷ್ಟ ತಡೆಯುವ ಉಪಕರಣ ಅಭಿವೃದ್ಧಿಗೊಳಿಸಿ ಗಮನ ಸೆಳೆದಿದ್ದಾರೆ.ಪಾಲಿಟೆಕ್ನಿಕ್ `ವಿದ್ಯುತ್ ಮತ್ತು ವಿದ್ಯುನ್ಮಾನ~ ವಿಭಾಗದಲ್ಲಿ ನಾಲ್ಕನೇ ಸೆಮಿಸ್ಟರ್ ಓದುತ್ತಿರುವ ದಯಾನಂದ ಎಂ. ಪಾಂಚಾಳ, ಸಂತೋಷ ರೆಡ್ಡಿ, ಪೃಥ್ವಿರಾಜ ಸಿ. ಮದನಸೂರೆ, ನರೇಶಕುಮಾರ ಕೋಬಾಳಶೆಟ್ಟರ ಅವರು ಒಟ್ಟಾಗಿ, ವಿಭಾಗದ ಮುಖ್ಯಸ್ಥ ರಾಜಶೇಖರ ಹಾಗೂ ಉಪನ್ಯಾಸಕಿ ಶ್ವೇತಾ ಮುತ್ತಗಿ ಮಾರ್ಗದರ್ಶನದಲ್ಲಿ `ಸ್ವಯಂ ಬೀದಿದೀಪ ನಿಯಂತ್ರಣ~ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ.ಗುಲ್ಬರ್ಗ ನಗರವೊಂದರಲ್ಲೆ ನಾಲ್ಕು ಸಾವಿರ ಮೇಲ್ಪಟ್ಟು ಬೀದಿ ದೀಪಗಳಿದ್ದು, ದಿನದ ಬೆಳಕಿನಲ್ಲಿ ಒಂದು ಗಂಟೆ ಹೆಚ್ಚಿಗೆ ಬೆಳಗಿದರೂ ಅಪಾರ ಪ್ರಮಾಣದ ವಿದ್ಯುತ್ ನಷ್ಟವಾಗುತ್ತದೆ. ಸಾರ್ವಜನಿಕ ಬೀದಿ ಕಂಬಗಳಿಗೆ ಸಾಮಾನ್ಯವಾಗಿ 200 ವ್ಯಾಟ್ಸ್‌ಗಿಂತ ಅಧಿಕ ಸಾಮರ್ಥ್ಯದ ದೀಪ ಅಳವಡಿಸಲಾಗಿರುತ್ತದೆ.

 

ಒಂದು ಗಂಟೆಯಲ್ಲಾಗುವ ವಿದ್ಯುತ್ ನಷ್ಟ ದೊಡ್ಡ ಮೊತ್ತದ್ದಾಗಿದೆ. ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಅಭಿವೃದ್ಧಿಗೊಳಿಸಿರುವ ಎಲೆಕ್ಟ್ರಾನಿಕ್ ಉಪಕರಣದ ಮೂಲಕ ಸೂರ್ಯೋದಯವಾದ ಕ್ಷಣದಿಂದಲೇ ಅನವಶ್ಯಕವಾಗಿ  ಬೀದಿ ದೀಪಗಳು ಉರಿಯುವುದನ್ನು ಅಟೊಮ್ಯಾಟಿಕ್ ಸ್ಥಗಿತಗೊಳಿಸಬಹುದಾಗಿದೆ.ವಿದ್ಯುತ್ ಸ್ಥಗಿತ ಹೇಗೆ: ಬೀದಿದೀಪಗಳಿಗೆ ವಿದ್ಯುತ್ ಪೂರೈಕೆಯಾಗುವ ಆರಂಭದ ಮೊದಲ ಕಂಬಕ್ಕೆ ಅಥವಾ ಪ್ರತ್ಯೇಕವಾಗಿ ಈ ನೂತನ ಸಾಧನ ಅಳವಡಿಸಿದರೆ ಸಾಕು, ರಾತ್ರಿ ಕತ್ತಲು ಆವರಿಸಿಕೊಳ್ಳುತ್ತಿದ್ದಂತೆ ದೀಪಗಳು ಉರಿಯಲಾರಂಭಿಸುತ್ತವೆ. ಬೆಳಿಗ್ಗೆ ಸೂರ್ಯನ ಸಣ್ಣ ಬೆಳಕು ಸೋಕಿದರೆ ಸಾಕು, ವಿದ್ಯುತ್ ದೀಪಗಳು ಬೆಳಗುವುದನ್ನು ನಿಲ್ಲಿಸುತ್ತವೆ! ಇದೆಂಥಹ ಉಪಕರಣ ಎಂದು ಅಚ್ಚರಿ ಉಂಟಾಗಿರಬಹುದು. ನಿಜಕ್ಕೂ ಇದು ಅಗ್ಗದಲ್ಲೆ ದೊರೆಯುವ ಸಾಧನವಾಗಿದ್ದು, ಕೆಲಸವನ್ನು ಮಾತ್ರ ಭಾರಿಪ್ರಮಾಣದಲ್ಲಿ ನೆರವೇರಿಸುತ್ತಿದೆ.`ಲೈಟ್ ಡಿಪೆಂಡೆಂಟ್ ರೆಸಿಸ್ಟ್‌ನ್ಸ್ (ಎಲ್‌ಡಿಆರ್)~ ಸಾಧನವನ್ನು ಬಳಸಿಕೊಂಡು ಬೀದಿ ದೀಪಗಳ ವಿದ್ಯುತ್ ನಷ್ಟ ತಡೆ ಯೋಜನೆಯನ್ನು ವಿದ್ಯಾರ್ಥಿಗಳು ಸಿದ್ಧಗೊಳಿಸಿದ್ದಾರೆ. ಬೀದಿ ದೀಪಗಳಿಗೆ ಪೂರೈಕೆಯಾಗುವ ವಿದ್ಯುತ್ ಕಂಬದ ಆರಂಭದಲ್ಲೆ ಸರ್ಕಿಟ್ ನೆರವಿನೊಂದಿಗೆ ಎಲ್‌ಡಿಆರ್ ಸಾಧನವನ್ನು ಅಳವಡಿಸಬೇಕಾಗುತ್ತದೆ.

 

ಬೀದಿ ದೀಪಗಳ ಸಂಖ್ಯೆಯನ್ನು ಆಧರಿಸಿ ಸರ್ಕಿಟ್‌ಬೋರ್ಡ್ ಸಿದ್ಧಪಡಿಸಬೇಕು. ಎಲ್‌ಡಿಆರ್ ಮೇಲೆ ಸುರ್ಯೋದಯದ ಬೆಳಕಿನ ಒಂದು ಕಿರಣವು ಬಿದ್ದ ಕೂಡಲೇ ವಿದ್ಯುತ್ ಪ್ರವಹನ ತನ್ನಿಂತಾನೆ ನಿಂತುಹೋಗುತ್ತದೆ.ವಿದ್ಯುತ್ ಅಭಾವದಿಂದ ಸಮಸ್ಯೆ ಬಿಗಡಾಯಿಸುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ವಿದ್ಯುತ್ ಉಳಿತಾಯ ಮಾಡುವುದು ಅತ್ಯಂತ ಅವಶ್ಯಕ. ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಅಭಿವೃದ್ಧಿಗೊಳಿಸಿರುವ ತಂತ್ರಜ್ಞಾನವನ್ನು ಬೀದಿ ದೀಪಗಳಿಗೆ ಅಳವಡಿಸಿದರೆ, ಖಂಡಿತವಾಗಿಯೂ ವಿದ್ಯುತ್ ಉಳಿತಾಯವಾಗುವುದರ ಜತೆಗೆ ಇದಕ್ಕಾಗಿ ಮಾನವಶಕ್ತಿ ಬಳಕೆಯಾಗುವುದನ್ನು ತಪ್ಪಿಸಬಹುದು.ಎಚ್‌ಕೆಇ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ನೂತನ ಯೋಜನೆ ಕುರಿತು ಕಾಲೇಜಿನ ಪ್ರಾಂಶುಪಾಲ ಜಯರಾಮ ಪಾಟೀಲ ಓಕಳಿ  ಸೋಮವಾರ ಮಾಧ್ಯಮಗಳಿಗೆ ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.