ಕೈಗೆ ಹೊಸ ಕಳೆ: ಆಸ್ಕರ್

ಗುಲ್ಬರ್ಗ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಜಯದ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿ ಹೊಸ ಹುರುಪು ಮೂಡಿದೆ ಎಂದು ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿದರು.
ಗುಲ್ಬರ್ಗದ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೆಶಿಸಿ ಅವರು ಮಾತನಾಡಿದರು.
ಉಡುಪಿ-ಚಿಕ್ಕಮಗಳೂರು `ಇಂದಿರಾ ಗಾಂಧಿ ಕ್ಷೇತ್ರ~ ಎಂಬ ದೃಷ್ಟಿಯಿಂದ ಪ್ರಚಾರಕ್ಕೆ ನಡೆಸಿದ್ದೆವು. ಜನತೆ ಹರಸಿದರು. ಇದರಿಂದ ಕಾಂಗ್ರೆಸ್ನಲ್ಲಿ ಹೊಸ ಹುರುಪು ಮೂಡಿದೆ ಎಂದರು.
ಶಿಕ್ಷಣ, ಬಡತನ, ನಿರುದ್ಯೋಗ, ಆಹಾರ ಮತ್ತಿತರ ಸಮಸ್ಯೆ ನಿವಾರಿಸಲು ಕಡ್ಡಾಯ ಶಿಕ್ಷಣ ಕಾಯಿದೆ, ಉದ್ಯೋಗ ಖಾತರಿ ಯೋಜನೆ, ಆಹಾರ ಭದ್ರತೆಯಂತಹ ಮಹತ್ತರ ಯೋಜನೆ- ಕಾಯಿದೆ- ನಿರ್ಣಯಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದರು.
ವೈದ್ಯಕೀಯ ಕಾಲೇಜು, ಆಸ್ಪತ್ರೆ, ಭವಿಷ್ಯ ನಿಧಿ ಕಚೇರಿ, ಕೇಂದ್ರೀಯ ವಿವಿ, ಕೌಶಲ್ಯಾಭಿವೃದ್ಧಿ ಕೇಂದ್ರದಂತಹ ಮಹತ್ತರ ಯೋಜನೆಗಳನ್ನು ಖರ್ಗೆ ಗುಲ್ಬರ್ಗಕ್ಕೆ ತಂದಿದ್ದಾರೆ. ಅವರ ಸಾಧನೆಯನ್ನು ಮೆಚ್ಚಲೇ ಬೇಕು. ಹೀಗಾಗಿ ಗುಲ್ಬರ್ಗ ವಿಶೇಷ ಜಿಲ್ಲೆಯಾಗಿದೆ ಎಂದು ಬಣ್ಣಿಸಿದರು.
ಕಾಂಗ್ರೆಸಿಗರು ಒಗ್ಗಟ್ಟಾದರೆ ಬಿಜೆಪಿಯನ್ನು ಬೇರು ಸಹಿತ ಕಿತ್ತೊಗೆಯಲು ಸಾಧ್ಯ. ಅಂತಹ ಹುರುಪು ಈಗ ಬಂದಿದೆ. ಬಿಜೆಪಿಯಿಂದ ಬೇಸತ್ತ ಜನತೆ ಕಾಂಗ್ರೆಸ್ನತ್ತ ನೋಡುತ್ತಿದ್ದಾರೆ. ನಾವೆಲ್ಲ ಒಂದಾಗಿ ದುಡಿಯಬೇಕು. ಯುವಕರ ಆಗಮನಕ್ಕೆ ಹಿರಿಯರು ಸ್ವಾಗತ ನೀಡಬೇಕು ಎಂದು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಶಾಸಕ ಶರಣ ಪ್ರಕಾಶ ಪಾಟೀಲ ಸೇಡಂ, ಖಮರುಲ್ ಇಸ್ಲಾಂ, ಬಾಬುರಾವ ಚಿಂಚನಸೂರ, ವಿಧಾನಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ, ಮಾಜಿ ಸಚಿವ ಬಾಬುರಾವ ಚೌಹಾಣ್, ಜಿ. ರಾಮಕೃಷ್ಣ, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಮುಖಂಡರಾದ ಮಾರುತಿರಾವ್ ಡಿ ಮಾಲೆ, ನಾಸೀರ್, ಸಿದ್ರಾಮಪ್ಪ ಐರೆಡ್ಡಿ, ಡಾ.ಮುಸ್ತಾಫ ಹುಸೈನಿ, ಆಸ್ಕರ್ ಪತ್ನಿ ಬ್ಲೋಸಂ ಫರ್ನಾಂಡಿಸ್ ಮತ್ತಿತರರು ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.