ಗುರುವಾರ , ಮೇ 13, 2021
35 °C

ವಾಡಿ ಪುರಸಭೆ ಸಾಮಾನ್ಯ ಸಭೆ ನೀರಿನ ಸಮಸ್ಯೆ: ಸದಸ್ಯರ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: `ಪಟ್ಟಣದ ಪ್ರತಿಯೊಂದು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದರಿಂದ ಜನರು ದಿನಾಲು ನೀರಿಗಾಗಿ ಪರದಾಡುವಂತ ದೃಶ್ಯ ಸಾಮಾನ್ಯವಾಗಿದೆ. ಆದರೂ ಇಲ್ಲಿಯವರೆಗೆ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ~ ಎಂದು ಸದಸ್ಯರು ಸಭೆಯಲ್ಲಿ ಗದ್ದಲ ಎಬ್ಬಸಿದ ಪ್ರಸಂಗ ನಡೆಯಿತು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಂಗಳವಾರ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮೊದಲನೆ ಬಾರಿಗೆ ಕರೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಪಕ್ಷದ ಸದಸ್ಯ ಬಾಗವತ ಸುಳೆ ಮಾತನಾಡಿ, `3 ವರ್ಷದ ಹಿಂದೆ ಹನುಮಾನ ನಗರದ ವಾರ್ಡ್ ಸಂಖ್ಯೆ 12ರಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಅದಕ್ಕೆ ನೀರು ಸರಬರಾಜು ಮಾಡಿಲ್ಲ.ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಟ್ಯಾಂಕಿಗೆ ನೀರು ತುಂಬಿಸಿ ಅನುಕೂಲ ಮಾಡಿಕೊಡಿ~ ಎಂದು ಒತ್ತಾಯಿಸಿದರು.ಸಭೆಯಲ್ಲಿ ಯೋಜನಾಧಿಕಾರಿ 2.33ಕೋಟಿ ರೂಪಾಯಿ ಕ್ರೀಯಾ ಯೋಜನೆ ಮಂಡಿಸುತ್ತಿದ್ದಂತೆ, ವಿವಿಧ ವಾರ್ಡ್ ಸದಸ್ಯರು ಅಧಿಕಾರಿಗಳ ಮೇಲೆ ಮುಗಿಬಿದ್ದರು. ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ 10ಹೆಚ್‌ಪಿ ಯಂತ್ರ ಖರೀದಿಸವುದಕ್ಕೆ ಹಣ ಮೀಸಲಿಡಬೇಕು.ವಾರ್ಡ್ ಸಂಖ್ಯೆ 6ರಲ್ಲಿ ಇರುವ ಕುಡಿಯುವ ನೀರಿನ ತೆರೆದ ಬಿರ್ಲಾ ಟ್ಯಾಂಕ್ ಸ್ವಚ್ಛತೆಗೆ, ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜಯಂತಿಗೆ ರೂ.25ಸಾವಿರ ಪ್ರತಿವರ್ಷ ಮೀಸಲಿಡುವ ಪ್ರಸ್ತಾವಕ್ಕೆ ಸದಸ್ಯರು ಒಪ್ಪಿಗೆ ನೀಡಿದರು. ಮುಖ್ಯಾಧಿಕಾರಿ ಕುಮಾರ ನಾಯಕ, ಯೋಜನಾಧಿಕಾರಿ  ಭೀಮಾಶಂಕರ, ಎಂಜನಿಯರ್ ಸಿದ್ದಪ್ಪ ಸೋಮಪೂರ, ವಿರುಪಾಕ್ಷಿ, ಶ್ರೀಮಂತ, ಜೆಸ್ಕಾಂ ಎಂಜಿನಿಯರ್ ಯೂನುಸ್ ಖಾನ್ ಸಭೆಯಲ್ಲಿ ಭಾಗವಹಿಸಿದರು.

ಅಧ್ಯಕ್ಷೆ ಹಸೀನಾಬೇಗಂ ಖುರೇಷಿ, ಉಪಾಧ್ಯಕ್ಷ ಮಲ್ಲೇಶಿ ಚುಕ್ಕೇರಿ ಸಭೆಯ ಅಧ್ಯಕ್ಷತೆ ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.