ಗುರುವಾರ , ಮೇ 13, 2021
40 °C

ಅನುಭವ ಮಂಟಪ ವಿಶ್ವದ ಮೊದಲ ಪಾರ್ಲಿಮೆಂಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: 12ನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾಪಿಸಿದ್ದ ಅನುಭವ ಮಂಟಪ ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಆಗಿತ್ತು ಎಂದು ಶಾಸಕ ಚಂದ್ರಕಾಂತ ಬೆಲ್ಲದ ಅಭಿಪ್ರಾಯಪಟ್ಟರು.ನಗರದ ಎಚ್‌ಕೆಇ ಸೊಸೈಟಿಯ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನದ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಬಹುಶಃ ಆಗಲೇ ಕರ್ನಾಟಕದಲ್ಲಿ ಪ್ರಜಾತಂತ್ರದ ಕುರುಹು ಕಂಡು ಬಂದಿತ್ತು. ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಿಯಾಗಿದ್ದ ಬಸವಣ್ಣನವರು ದಲಿತರ ಕೇರಿಗಳಿಗೆ ಹೋಗಿ ಅವರನ್ನು ಅಪ್ಪ, ಅಣ್ಣ, ಅಕ್ಕ ಎಂದು ಕರೆದಿರುವುದು ಜಗತ್ತಿನ ಇತಿಹಾಸದಲ್ಲಿಯೇ ಮೊದಲು ಎಂದು ತಿಳಿಸಿದರು.ಶರಣರ ಚಿಂತನೆಗಳು ಕಲುಷಿತಗೊಂಡಿರುವ ಇಂದಿನ ವಾತಾವರಣಕ್ಕೆ ದಿವ್ಯ ಔಷಧಿಗಳಾಗಿವೆ. ಸಮಾಜ ಸುಧಾರಣೆ ಎನ್ನುವುದು ಕೇವಲ ಹೇಳುವುದರಿಂದ, ಕೇಳುವುದರಿಂದ ಬರುವುದಿಲ್ಲ. ಅದು ನಮ್ಮಳಗಿನಿಂದಲೇ ಬರಬೇಕು. ಅಂತಹ ಮನ ಪರಿವರ್ತಿಸುವ ಕೆಲಸವನ್ನು ಶರಣರು ಅಂದೇ ಮಾಡಿದ್ದರು ಎಂದು ವಿವರಿಸಿದರು.ಜಾತಿಯತೆ, ಮೂಢನಂಬಿಕೆ ಮತ್ತು ಭ್ರಷ್ಟಾಚಾರ ಕುರಿತು ವಿಚಾರ ಮಂಡಿಸಿದ ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಶಾಂತಾ ಅಸ್ಟಗಿ ಅವರು, ಜನಪರ ಧರ್ಮವನ್ನು ಸ್ಥಾಪಿಸಿದ್ದ ಶರಣ ಧರ್ಮದಲ್ಲಿ ಮಹಿಳೆಯರಿಗೆ, ದಲಿತರಿಗೆ ಸಮಾನವಾದ ಅವಕಾಶಗಳನ್ನು ಕಲ್ಪಿಸಲಾಗಿದೆ.ಜಾತಿ ಮನೆಯಿಂದ ಮಹಾಮನೆ, ಕರ್ಮ ಸಿದ್ಧಾಂತದಿಂದ ಕಾಯಕ ಸಿದ್ಧಾಂತ, ಬಹುದೇವೋಪಾಸನೆಯಿಂದ ಏಕದೇವೋಪಾಸನೆಯನ್ನು ಹೇಳಿದ ಬಸವಣ್ಣನ ನೇತೃತ್ವದ ವಚನ ಚಳವಳಿ ಕ್ರಾಂತಿಕಾರಿ ಚಳವಳಿ ಎಂದು ಬಣ್ಣಿಸಿದರು. ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧಾರ್ಥ ಬಸರಿಗಿಡ, ಕಾಲೇಜಿನ ಪ್ರಾಚಾರ್ಯ ಎನ್.ಜಿ. ಪಾಟೀಲ ವೇದಿಕೆಯಲ್ಲಿದ್ದರು.ಕೆ. ಗಿರಿಮಲ್ಲ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿದರು. ಶಿವರಾಜ ಅಂಡಗಿ ವಂದಿಸಿದರು.ಸತ್ಕಾರ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವಿಶ್ವನಾಥ ಕಾಡಾದಿ, ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ, ಶಹಾಬಾದನ ವಾಸುದೇವ ಚವ್ಹಾಣ, ಆಳಂದನ ಮಹಿಬೂಬ್ ಎಂ. ಫಣಿಬಂದ, ಸಿದ್ಧರಾಮ ಹಂಚನಾಳ ಅವರನ್ನು ಸತ್ಕರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.