ಶುಕ್ರವಾರ, ಮೇ 7, 2021
21 °C

ಗೋಟೂರ: 4 ದಿನಕ್ಕೊಮ್ಮೆ ನೀರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: ಈಗೇನೋ ಬೇಸಿಗೆಯಿದೆ; ನೀರಿನ ಬರ ಎದುರಾಗಿದೆ ಎಂದರೆ ಎಂಥವರೂ ನಂಬುತ್ತಾರೆ. ಮಳೆಗಾಲ, ಚಳಿಗಾಲದಲ್ಲೂ ನಾಲ್ಕು ದಿನಕ್ಕೊಮ್ಮೆ ನೀರು ಸಿಗುತ್ತೆ ಎಂದರೆ ಅದು ಆಶ್ಚರ್ಯ ಪಡುವಂಥ ಸಂಗತಿಯೇ ಸರಿ!

ಹೌದು, ಇಂಥದೊಂದು ಪ್ರಸಂಗ ಚಿತ್ತಾಪುರ ತಾಲ್ಲೂಕಿನ ಗೋಟೂರ ಗ್ರಾಮದಲ್ಲಿ ಯಾವಾಗಲೂ ಬಂದು ನೋಡಬಹುದು ಎನ್ನುತ್ತಾರೆ ಸ್ಥಳೀಯರು.

 

ಗ್ರಾಮ ಪಂಚಾಯತಿ ಕೇಂದ್ರಸ್ಥಾನವಾಗಿ ಮೂರು ಸಾವಿರ ಜನಸಂಖ್ಯೆ ಇರುವ ಇಲ್ಲಿ ಹಳೆಯದಾದ ನೀರಿನ ಟ್ಯಾಂಕ್ ಇದೆ. ಅದು ಸೋರತೊಡಗಿ ನೀರು ಸರಬರಾಜು ಮಾಡಲಾಗುತ್ತಿಲ್ಲ.ಜನರ ಕುಡಿಯುವ ನೀರಿನ ಪರದಾಟ ನೋಡಲಾಗದ ಗ್ರಾಮಾಡಳಿತ ಇತ್ತೀಚಿನ ವರ್ಷಗಳಲ್ಲಿ ಚಿಂಚೋಳಿ ಎಚ್. ರಸ್ತೆಯ ಮಾರ್ಗದಲ್ಲಿ ಹೊಸ ನೀರಿನ ಟ್ಯಾಂಕ್ ನಿರ್ಮಿಸಿದೆ. ಅದೇ ಮಾರ್ಗದ ಸ್ವಲ್ಪ ದೂರದಲ್ಲಿ ಕೊಳವೆ ಬಾವಿ ಕೊರೆದು ನೀರಿನ ಹರಿವು ಟ್ಯಾಂಕಿಗೆ ಕೊಡಲಾಗಿದೆ.  ಆದರೆ ಒಮ್ಮೆಯೂ ಈ ಟ್ಯಾಂಕ್ ಪೂರ್ತಿಯಾಗಿ ನೀರು ತುಂಬಿಕೊಂಡಿಲ್ಲ ಎಂಬುದು ಜನರ ದೂರು.ವಿದ್ಯುತ್ ಸರಬರಾಜಿನ ಕೊರತೆ ಬಹಳಷ್ಟಿದ್ದು ಒಮ್ಮೆಯೂ ಟ್ಯಾಂಕ್ ಪೂರ್ಣ ತುಂಬಿಕೊಳ್ಳುವಷ್ಟು ಕರೆಂಟ್ ನಿಂತಿಲ್ಲ ಎಂಬ ಕೊರಗು ಜನತೆಯಲ್ಲಿ ಮನೆ ಮಾಡಿದೆ. ಕರೆಂಟ್ ಇದ್ದಾಗಲೇ ಅಷ್ಟಿಷ್ಟು ನೀರು ತುಂಬಿಕೊಳ್ಳುವ ಟ್ಯಾಂಕ್ ಒಂದು ವಾರ್ಡಿನ ಜನರಿಗಾದರೂ ಸರಿಯಾದ ಪ್ರಮಾಣದಲ್ಲಿ ನೀರು ಪೂರೈಕೆ ಮಾಡದ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದೆ.ಹೀಗಾಗಿ ಒಂದು ವಾರ್ಡಿನ ಜನತೆಗೆ ಒಂದು ದಿನ ನೀರು ಬಿಟ್ಟರೆ ಇನ್ನೊಂದು ವಾರ್ಡಿನ ಜನತೆಗೆ ಮತ್ತೊಂದು ದಿನ ನೀರು ಹರಿಸುವ ಪದ್ಧತಿ ಇಲ್ಲಿ ಬೆಳೆದುಬಂದಿದೆ. ಈ ರೂಢಿಯಿಂದ ಪ್ರತಿ ವಾರ್ಡಿನ ಜನತೆಗೆ ತಾಜಿ ನೀರು ಸಿಗಬೇಕಾದರೆ ನಾಲ್ಕು ದಿನಗಳು ಕಾಯಬೇಕಾದ ಸಮಯ ಬಂದೊದಗಿದೆ ಎಂದು ಹೇಳಲಾಗುತ್ತಿದೆ. ಊರಲ್ಲಿನ ಆರು ತೆರೆದ ಬಾವಿಗಳತ್ತ ಕೊಡ ಹಿಡಿದು ಹೆಜ್ಜೆ ಹಾಕಿದರೆ, ಮೂರು ಬತ್ತಿಹೋಗಿವೆ; ಮೂರು ನಾಮಕೆವಾಸ್ತೆ ನೀರು ಕೊಡುತ್ತಿವೆ ಎಂಬ ಅಳಲು ಮಹಿಳೆಯರದ್ದು.15 ಸರ್ಕಾರಿ ನಳಗಳು, 8 ಕೊಳವೆ ಬಾವಿಗಳು ಅದೆಷ್ಟು ನೀರು ಕೊಡಬಲ್ಲವು ಎಂಬ ಚಿಂತೆ ಗ್ರಾಮಸ್ಥರಲ್ಲಿದೆ. ಒಟ್ಟಾರೆ ಹಿಂದಿನಿಂದಲೂ ನೀರಿನ ಬರದಲ್ಲಿ ತೇಲಾಡುತ್ತಿರುವ `ಗೋಟೂರ ಗ್ರಾಮ~ದೆಡೆಗೆ ಇಲ್ಲಿಯ ತನಕ ಯಾವೊಬ್ಬ ಜನನಾಯಕ ಅಥವಾ ಅಧಿಕಾರಿ ಭೇಟಿ ನೀಡಿ ಈ ಬಗ್ಗೆ ಕಿವಿಗೆ ಹಾಕಿಕೊಳ್ಳದಿರುವುದು ದುರದೃಷ್ಟಕರ. ಈಗಲಾದರೂ ಸಂಬಂಧಪಟ್ಟವರು ಈ ಕಡೆ ನೋಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.