ಶುಕ್ರವಾರ, ಮೇ 27, 2022
22 °C

ಜನತೆಗೆ ಎಂದೂ ಮರೆಯದ ಕೊಡುಗೆ: ಚುಲ್‌ಬುಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನೀರು, ನೈರ್ಮಲ್ಯ, ಚರಂಡಿ, ರಸ್ತೆ, ದೀಪ, ತೆರಿಗೆ, ತೆರವು, ಕಸ, ಕನ್‌ವರ್ಷನ್, ಮಾಮೂಲು, ಕಮಿಷನ್ ಎಂಬೀ ಎಂದೂ ಮುಗಿಯದ ರಗಳೆಗಳು. ಹೀಗೆ ಸಮಸ್ಯೆಗಳ ಸವಾಲಿನ ಹಾದಿಯಲ್ಲಿರುವ ಗುಲ್ಬರ್ಗ ಮಹಾನಗರ ಪಾಲಿಕೆಯ ಮುಂದಿನ ಒಂದು ವರ್ಷಕ್ಕೆ ಜೆಡಿಎಸ್‌ನ ಮಹ್ಮದ್ ಅಷ್ಫಕ್ ಚುಲ್‌ಬುಲ್ ಮೇಯರ್.ಸಂಗೀತ, ಶಿಕ್ಷಣ ಮತ್ತು ರಾಜಕೀಯ ಅವರ ಈತನಕದ ಕ್ಷೇತ್ರ. ಪಿಯುಸಿಯಲ್ಲಿ ಶಿಕ್ಷಣಕ್ಕೆ ಗುಡ್‌ಬೈ ಹೇಳಿ, ಬದಲಾದ ಬದುಕಿನಲ್ಲಿ ಉರ್ದು ಎಂಎ ಮಾಡಿದ ಶಿಕ್ಷಣ ಪ್ರೇಮಿ. ರಫಿ ಗುಂಗಿನಲ್ಲಿ ರಾತ್ರಿ ಇಡೀ ಹಾಡಿ ಮೈಮರೆವ ಕಲಾರಾಧಕ. 62ರ ಹರೆಯದಲ್ಲೂ ಬತ್ತದ ಪ್ರೀತಿ. ಜನರ ಒಡನಾಟ. ಹಿಂದಿ-ಉರ್ದು ಮಿಶ್ರಿತ ಮಾತು. ಸೌಮ್ಯ ಸ್ವಭಾವ. ಅವರ ಜೊತೆ ‘ಪ್ರಜಾವಾಣಿ’ ಮಾತುಕತೆ ಹೀಗಿದೆ...ರಾಜಕೀಯ ಜೀವನ...

1977ರಲ್ಲಿ ಸಾದತ್ ಹುಸೇನ್ ಅವರಿಂದಾಗಿ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದೆ. ಅಂದಿನಿಂದ ಇಂದಿನ ತನಕ ಜನತಾ ಪರಿವಾರದಲ್ಲೇ ಇದ್ದೇನೆ. ಎರಡನೇ ಬಾರಿ ಪಾಲಿಕೆ ಸದಸ್ಯನಾಗಿದ್ದೇನೆ. ಈಗ ಮೇಯರ್. ಇನ್ನೂ ಮೇಲೇರಬೇಕು ಎಂಬ ಹಂಬಲವಿದೆ. ಅಷ್ಟೇ ಹೆಸರೂ ಸ್ವಚ್ಛವಾಗಿರಬೇಕು.ಮೇಯರ್ ಆದ ನಿಮ್ಮ ಕನಸು...

ನನ್ನ ಅವಧಿ ಕೇವಲ 12 ತಿಂಗಳು. ಆದರೆ 12 ವರ್ಷ ಕಳೆದರೂ ಜನತೆ ನೆನಪಿಡುವ ಒಂದು ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಅದು ಬಡವರ ಪರವಾಗಿರಬೇಕು. ಆಡಳಿತದ ಬಗ್ಗೆ...

ಒಳ್ಳೆಯ ಆಯುಕ್ತರು ಇದ್ದಾರೆ. ಆಯುಕ್ತರಿಂದ ಹಿಡಿದು ಗುಮಾಸ್ತರ ತನಕ ಸೌಹಾರ್ದ ಸಂಬಂಧ ಬೆಳೆಸಿಕೊಂಡು ಕಾರ್ಯ ನಿರ್ವಹಿಸುತ್ತೇನೆ. ಅಧಿಕಾರಿ ಮತ್ತು ಜನಪ್ರತಿನಿಧಿಗಳ ಕಚ್ಚಾಟದಿಂದ ಜನತೆಗೆ ವಂಚನೆ ಆಗಬಾರದು. ಏನಾದರು ಒಳ್ಳೆ ಕೆಲಸ ಆಗಬೇಕು. ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಬಗ್ಗೆ...

ವಿಶ್ವವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಹಿಂದೆ ಬಂದ ದೂರುಗಳ ಬಗ್ಗೆ ಹಿರಿಯ ಸದಸ್ಯರ ಜೊತೆ ಚರ್ಚಿಸಿ ಕಾನೂನಾತ್ಮಕ ನಿರ್ಧಾರ ಕೈಗೊಳ್ಳುತ್ತೇನೆ. ಮುಂದೆ ಕಡಿವಾಣ ಹಾಕಲು ಯತ್ನಿಸುತ್ತೇನೆ. ವಾರದ ಐದು ದಿನ 3ರಿಂದ 5 ಗಂಟೆ ತನಕ ಪಾಲಿಕೆಯ ಮೇಯರ್ ಕಚೇರಿಗೆ ಜನರು ನೇರವಾಗಿ ಬಂದು ನನ್ನನ್ನು ಭೇಟಿಯಾಗಬಹುದು. ಸಮಸ್ಯೆ ತೋಡಿಕೊಳ್ಳಬಹುದು. ಸಕ್ರಿಯರಲ್ಲದ ಸದಸ್ಯರ ಬಗ್ಗೆ...

ಕೆಲವು ಸದಸ್ಯರಿಗೆ ತಮ್ಮ ಹಕ್ಕು-ಕರ್ತವ್ಯವೇ ಗೊತ್ತಿಲ್ಲ. ಆಡಳಿತದ ಮಾಹಿತಿಯೂ ಇಲ್ಲ. ಚರ್ಚೆಯಲ್ಲೂ ಪಾಲ್ಗೊಳ್ಳುವುದಿಲ್ಲ. ಅಂತಹವರ ಕ್ಷೇತ್ರದ ಜನರ ಸಮಸ್ಯೆಯನ್ನು ಸ್ವತಃ ಪರಿಹರಿಸಲು ಯತ್ನಿಸುತ್ತೇನೆ. ಸದಸ್ಯರನ್ನು ಮನವೊಲಿಸಲು ಪ್ರಯತ್ನಿಸುತ್ತೇನೆ. ಜ್ಞಾನವುಳ್ಳ ಸದಸ್ಯರು ಚರ್ಚೆಯಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು.ಸ್ವಚ್ಛತೆ, ನೀರು, ವಿದ್ಯುತ್...

ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಪೂರೈಕೆ ವ್ಯವಸ್ಥೆ ಮತ್ತು ವಿದ್ಯುತ್ ಮಿತವ್ಯಯಕ್ಕೆ ಯತ್ನಿಸುತ್ತೇನೆ. ಗುಲ್ಬರ್ಗ ಗಬ್ಬೆದ್ದು ನಾರುತ್ತಿದೆ. ಅದಕ್ಕಾಗಿ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ವಿಶೇಷ ಸಭೆ ನಡೆಸಿ ಪರ್ಯಾಯ ಮಾರ್ಗಗಳನ್ನು ಹುಡುಕುತ್ತೇವೆ.ರಾಜ್ಯದೊಂದಿಗೆ ಸಂಬಂಧ...

ನಾವು ಜೆಡಿಎಸ್-ಕಾಂಗ್ರೆಸ್. ರಾಜ್ಯದಲ್ಲಿ ಬಿಜೆಪಿ ಇದೆ. ಹೀಗಾಗಿ ರಾಜ್ಯ ಹಾಗೂ ಪಾಲಿಕೆಯ ಸುಗಮ ಸಂಬಂಧಕ್ಕಾಗಿ ಸಮಿತಿ ರಚಿಸುತ್ತೇನೆ. ಅದರಲ್ಲಿ ಬಿಜೆಪಿ ಸದಸ್ಯರು ಹಾಗೂ ಜನಪ್ರತಿನಿಧಿಗಳು ಇರುತ್ತಾರೆ. ಮುಖ್ಯಮಂತ್ರಿ ಅವರು ಬಿಜೆಪಿ ಸದಸ್ಯರ ಮುಖ ನೋಡಿಯಾದರೂ ಹೆಚ್ಚು ಅನುದಾನ ನೀಡಬೇಕು.ಎಸ್‌ಎಎಸ್, ಇತರ ತೆರಿಗೆ, ತೆರವು ಕಾರ್ಯಾಚರಣೆ...

ಸಮಾಜದ ಯಾವುದೇ ವರ್ಗಗಳು ಇರಲಿ. ತೆರಿಗೆ, ತೆರವು, ಅಥವಾ ಇನ್ನೇನೇ ಬರಲಿ. ಗುಲ್ಬರ್ಗ ನಗರ ಅಭಿವೃದ್ಧಿಗೆ ನನ್ನ ಆದ್ಯತೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೈಗೊಳ್ಳುವ ಜನಪರ ಕೆಲಸಗಳಿಗೆ ನನ್ನ ಬೆಂಬಲ.100 ಕೋಟಿ, ಮತ್ತಿತರ ಕಾಮಗಾರಿಗಳ ಬಗ್ಗೆ...

ರಾಜ್ಯದಲ್ಲೇ ಮುಂಚೂಣಿಗೆ ಬರುವುದು ಕಷ್ಟ. ಆದರೆ ಗುಲ್ಬರ್ಗ ಅಭಿವೃದ್ಧಿ ಆಗಬೇಕು. ಅದಕ್ಕಾಗಿ ಈಗಿರುವ ಯೋಜನೆಗಳು, ವಿಶೇಷ ಅನುದಾನದ ಕಾಮಗಾರಿಗಳನ್ನು ವೇಗಗೊಳಿಸಲು ಯತ್ನ. ತಪ್ಪುಗಳನ್ನು ತಿದ್ದಿಕೊಳ್ಳುವಂತೆ ಅಧಿಕಾರಿಗಳಿಗೆ ಪ್ರೇರೇಪಿಸುತ್ತೇನೆ.

ನೋವು ಆಲಿಸು...ಮಹ್ಮದ್ ರಫಿಯೇ ದೇವರೆನ್ನುವ ಸಹೃದಯಿ, ಮೃದುಭಾಷಿ 62 ಹರೆಯದ ಚುಲ್‌ಬುಲ್ ತಮ್ಮ ಶಿಕ್ಷಣ ಸಂಸ್ಥೆಗೆ ರಫಿ, ದಿಲೀಪ್ ಹೆಸರಿಟ್ಟಿದ್ದಾರೆ. ಅಷ್ಟು ಮಾತ್ರವಲ್ಲ ತಮ್ಮ ಪತ್ನಿ (ಚಾಂದ್ ಬೀಬಿ) ಹೆಸರನ್ನೂ ಇಟ್ಟಿದ್ದಾರೆ. ಸಂದರ್ಶನದ ಕೊನೆಯಲ್ಲಿ ಅವರು ರಫಿಯ ‘ಬಿರ್ಜು ಬಾವರಿ’ ಚಿತ್ರದ

‘ಏ ದುನಿಯಾ ಕೇ ರಖ್‌ವಾಲೋ

ಸುನ್ ಧರ್‌ದ್ ಭರೇ ಮೆರೆ ನಾಲೆ...’

ಹಾಡನ್ನು ಹಾಡಿದರು. ಇದು ಜಗತ್ತನ್ನು ನಿಯಂತ್ರಿಸುವವನೇ ನಮ್ಮ ನೋವನ್ನು ಆಲಿಸು, ಮಳೆಯನ್ನು ಹರಿಸು ಎಂಬ ಭಾವಾರ್ಥ ಹೊಂದಿದೆ. ಗುಲ್ಬರ್ಗ ಜನತೆ ಈಗ ‘ಏ ಪಾಲಿಕೆಯನ್ನು ನಿಯಂತ್ರಿಸುವವನೇ ....’ ಎಂದು ಎದುರು ನೋಡುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.