ಭಾನುವಾರ, ಮೇ 16, 2021
21 °C

ವಿಮಾನಯಾನಕ್ಕೆ ನಿಲ್ದಾಣ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದ ಜನತೆ ಬಹು ದಿನಗಳಿಂದ ಕಾತರದಿಂದ ಕಾಯುತ್ತಿರುವ ವಿಮಾನಯಾನಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಜೂನ್ 7 ಅಥವಾ 8ರಂದು ಗುಲ್ಬರ್ಗ ವಿಮಾನನಿಲ್ದಾಣದಿಂದ ವಿಮಾನ ಹಾರಾಟ ಆರಂಭವಾಗುವ ಸಾಧ್ಯತೆಗಳಿವೆ. ನಿಲ್ದಾಣ ಉದ್ಘಾಟಿಸಿ, ವಿಮಾನಯಾನಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಬರಲಿದ್ದಾರೆ.ನಗರದ ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಬಳಿ ನಿರ್ಮಾಣವಾಗುತ್ತಿರುವ ವಿಮಾನನಿಲ್ದಾಣ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ರನ್‌ವೇ, ಆವರಣ ಗೋಡೆ ಕಾಮಗಾರಿ ಮುಗಿದಿದೆ. ಟರ್ಮಿನಲ್ ಕಟ್ಟಡ ಕೆಲಸ ಮೇ 31ರೊಳಗೆ ಪೂರ್ಣಗೊಳ್ಳಲಿದೆ.ರೀಜನಲ್ ಏರ್‌ಪೋರ್ಟ್ ಹೋಲ್ಡಿಂಗ್ಸ್ ಇಂಟರ್‌ನ್ಯಾಷನಲ್ (ರಾಹಿ) ಲಿಮಿಟೆಡ್‌ನ ಪ್ರತಿನಿಧಿಗಳು ಜಿಲ್ಲೆಯ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರ ಪ್ರತಿನಿಧಿಗಳ ಜತೆ ಬುಧವಾರ ಇಲ್ಲಿ ಚರ್ಚೆ ನಡೆಸಿದರು. ಸ್ಥಳೀಯ ಅರ್ಥ ವ್ಯವಸ್ಥೆ ಮೇಲೆ ವಿಮಾನನಿಲ್ದಾಣ ಬೀರುವ ಪರಿಣಾಮ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಿಗುವ ಪ್ರಯೋಜನಗಳ ಬಗ್ಗೆ ಚರ್ಚಿಸಲಾಯಿತು.“ವಿಮಾನಯಾನ ಆರಂಭದಿಂದಾಗಿ ಈ ಪ್ರಾಂತ್ಯದ ವಹಿವಾಟು, ಪ್ರವಾಸೋದ್ಯಮ ಚುರುಕುಗೊಳ್ಳಲಿದೆ. ನಿಲ್ದಾಣವು ಅಭಿವೃದ್ಧಿಗೆ ನಾಂದಿಯಾಗುವ ನಿರೀಕ್ಷೆಯಿದ್ದು, ಜನರ ಬಹುದಿನಗಳ ಕನಸು ನನಸಾಗಲಿದೆ” ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್.  ತಿಳಿಸಿದರು.`ರಾಹಿ~ ಸಂಸ್ಥೆಯಡಿ ಸ್ಥಾಪನೆಯಾದ ಗುಲ್ಬರ್ಗ ಏರ್‌ಪೋರ್ಟ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ (ಜಿಎಡಿಪಿಎಲ್), ವಿಮಾನನಿಲ್ದಾಣ ಸ್ಥಾಪನೆ ಹಾಗೂ ಸೇವೆ ಒದಗಿಸಲಿದೆ.ಯಾವಾಗ- ಹೇಗೆ?: ಗುಲ್ಬರ್ಗ ವಿಮಾನನಿಲ್ದಾಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ (ಎಎಐ) ಹಾಗೂ ವಿಮಾನನಿಲ್ದಾಣ ಗಡಿ ನಿಯಂತ್ರಣ ಭದ್ರತೆ ಹಾಗೂ ಸುರಕ್ಷತೆ (ಬಿಸಿಎಎಸ್‌ಎಸ್) ಅನುಮತಿ ಪಡೆಯಲಾಗಿದೆ.ಜೂನ್‌ನಲ್ಲಿ ವಿಮಾನನಿಲ್ದಾಣ ಉದ್ಘಾಟನೆಯಾಗುತ್ತಿದ್ದಂತೆ, ಸಂಚಾರವೂ ಶುರುವಾಗಲಿದೆ.

ಆರಂಭದಲ್ಲಿ ವಿಮಾನಯಾನ ಸಂಸ್ಥೆಗಳನ್ನು ಗುರುತಿಸಿ, ಗುಲ್ಬರ್ಗಕ್ಕೆ ಸಂಚಾರ ಆರಂಭಿಸಲು ಮನವಿ ಮಾಡುವುದು. ಇದರ ಜತೆಗೆ ಬೆಂಗಳೂರಿಗೆ 10 ಆಸನಗಳ ಒಂದು ಅಥವಾ ಎರಡು ವಿಮಾನಗಳ ಸಂಚಾರ ನಡೆಸುವುದು, ಗುಲ್ಬರ್ಗದಿಂದ ಹಲವು ಮಹಾನಗರಗಳಿಗೆ ತನ್ನದೇ ಆದ ಏರ್ ಟ್ಯಾಕ್ಸಿ ಸೇವೆ ಆರಂಭಿಸುವುದು `ರಾಹಿ~ ಉದ್ದೇಶ.“ಆರೇಳು ತಿಂಗಳ ಬಳಿಕ 20 ಆಸನಗಳ ವಿಮಾನ ಸಂಚಾರಕ್ಕೆ ಮುಂದಾಗಲಿದ್ದೇವೆ. ನಮ್ಮ ಮುಖ್ಯ ಗುರಿಯಾದ ಗುಲ್ಬರ್ಗ- ಬೆಂಗಳೂರು ವಾಯುಮಾರ್ಗದ ಬಳಿಕ, ಗುಲ್ಬರ್ಗದಿಂದ ಹೈದರಾಬಾದ್, ಬಳ್ಳಾರಿ ಹಾಗೂ ಮೈಸೂರಿನತ್ತ ಸಂಚಾರ ಆರಂಭಿಸುತ್ತೇವೆ.ಬೆಳಿಗ್ಗೆ ಇಲ್ಲಿಂದ ಬೆಂಗಳೂರಿಗೆ ಹೊರಟು, ಸಂಜೆ ವಾಪಸು- ಈ ಯಾನಕ್ಕೆ ಮೊದಲ ಆದ್ಯತೆ” ಎಂದು `ರಾಹಿ~ ಸಂಸ್ಥೆಯ ವಾಣಿಜ್ಯ ಸೇವೆ ಮುಖ್ಯಸ್ಥ ಸೌರಭ್ ಶಹಾ ತಿಳಿಸಿದರು.ತರಬೇತಿ ಕೇಂದ್ರ: ಗುಲ್ಬರ್ಗದಲ್ಲಿ ಬೆಳಕಿನ ಅತಿ ಹೆಚ್ಚು ದಿನಗಳು (ಕ್ಲಿಯರ್ ಸ್ಕೈ) ಲಭ್ಯವಿರುವ ಕಾರಣ, ಈ ಪ್ರದೇಶ ಪೈಲಟ್ ತರಬೇತಿಗೆ ಸೂಕ್ತವಾಗಿದೆ. ಇದರೊಂದಿಗೆ ಎಂಜಿನಿಯರಿಂಗ್ ಕಾಲೇಜು, ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರವೂ ಆರಂಭವಾಗಿದ್ದು, ವಾಯುಯಾನ ಕ್ಷೇತ್ರಕ್ಕೆ ಸೇರಿದ ಹಲವು ಬಗೆಯ ತರಬೇತಿಗಳನ್ನು ನೀಡಲು ವಿಮಾನನಿಲ್ದಾಣದ ಆವರಣದಲ್ಲೇ ತರಬೇತಿ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ನಿರ್ದೇಶಕ ರಾಜಗೋಪಾಲ ಜೋಶಿ ವಿವರಿಸಿದರು.

ಯೋಜನೆ ವಿವರ

ವಿಮಾನನಿಲ್ದಾಣ:               692 ಎಕರೆಯೋಜನಾ ವೆಚ್ಚ:               ರೂ.187 ಕೋಟಿರನ್‌ವೇ:                            1900 ಮೀ. ಉದ್ದ

                                         45 ಮೀ. ಅಗಲನೆರವು ನೀಡಿದ ಬ್ಯಾಂಕ್:             ದೇನಾ, ಬ್ಯಾಂಕ್ ಆಫ್                                       

                                      ಬರೋಡಾ, ಕಾರ್ಪೊರೇಶನ್ಟರ್ಮಿನಲ್ ಕಟ್ಟಡ

 

ಒಟ್ಟು ವ್ಯಾಪ್ತಿ 1000 ಚದರ ಮೀದೊರೆಯುವ ಸೌಕರ್ಯ:   ಪ್ರಯಾಣಿಕರು, ವಿಐಪಿ ತಂಗುದಾಣ, ಸುರಕ್ಷತೆ ತಪಾಸಣೆ ಸ್ಥಳ, ಚೆಕ್-ಇನ್          ಕೌಂಟರ್, ಟಿಕೆಟ್ ಕೌಂಟರ್, ತಿಂಡಿ ತಿನಿಸು ಮಳಿಗೆ, ಸಿಬ್ಬಂದಿ ಕೊಠಡಿ,  ಏರ್‌ಲೈನ್ಸ್ ಕಚೇರಿ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.