ಬುಧವಾರ, ಜೂನ್ 3, 2020
27 °C

ಜಿಪಂ- ತಾಪಂ ಮತ ಎಣಿಕೆ ಶಾಂತಿಯುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಹಣೆಬರಹ ಮಂಗಳವಾರ ಬಯಲಾಯಿತು. ಆದರೆ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆದ ಕಾರಣ, ಜಿಲ್ಲಾ ಕೇಂದ್ರವಾದ ಗುಲ್ಬರ್ಗದಲ್ಲಿ ಅಷ್ಟೊಂದು ಗದ್ದಲದ ವಾತಾವರಣ ಕಂಡುಬರಲಿಲ್ಲ.ಮೇ ತಿಂಗಳಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಸಂದರ್ಭದಲ್ಲಿ ಜನಪ್ರವಾಹ ಹರಿದು ಬಂದಿತ್ತು. ಎಣಿಕೆ ನಡೆಯುತ್ತಿದ್ದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸುತ್ತ ಬೇಸಿಗೆಯ ಸುಡು ಬಿಸಿಲನ್ನೂ ಲೆಕ್ಕಿಸದೇ ಸಾವಿರಾರು ಜಮಾಯಿಸಿದ್ದರು.ಆದರೆ ಇಂದು ಅದೇ ಪಾಲಿಟೆಕ್ನಿಕ್ ಕಾಲೇಜಿನ ಸುತ್ತಲೂ ಪೊಲೀಸ್ ಬಿಗಿ ಪಹರೆ ಹಾಕಿದ ಕಾರಣ, ಜನಜಂಗುಳಿ ಕಾಣಿಸಲೇ ಇಲ್ಲ. ಬೆಳಿಗ್ಗೆ 7 ಗಂಟೆ ಹೊತ್ತಿಗೆ ಮತ ಎಣಿಕೆ ಸಿಬ್ಬಂದಿ, ಅಭ್ಯರ್ಥಿಗಳು ಹಾಗೂ ಮತ ಎಣಿಕೆ ಏಜೆಂಟರು ಸ್ಥಳಕ್ಕೆ ಆಗಮಿಸಿದರು. ಪೊಲೀಸರಂತೂ 6 ಗಂಟೆಗೇ ಹಾಜರಿದ್ದರು.ನೋ ಎಂಟ್ರಿ’:

ಇತ್ತ ಐವಾನ್-ಶಾಹಿ ಅತಿಥಿ ಗೃಹದ ಸಮೀಪವೇ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ಹಾಗೂ ಜನಸಂಚಾರ ನಿರ್ಬಂಧಿಸಿದರು. ಅತ್ತ ಪಿ.ಡಿ.ಎ. ಎಂಜಿನಿಯರಿಂಗ್ ಕಾಲೇಜಿನ ಬಳಿ ಇಂಥದೇ ನಿರ್ಬಂಧ ಹಾಕಲಾಯಿತು. ಚುನಾವಣಾ ಆಯೋಗದ ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಯಿತು. ಇದರಿಂದ ಎಣಿಕೆ ಕೇಂದ್ರದ ಸುತ್ತ ಜನರ ಗದ್ದಲ ಇಲ್ಲದೇ ‘ಶಾಂತ’ ವಾತಾವರಣ ಸೃಷ್ಟಿಯಾಯಿತು.ಮನಿಯವ್ರ ಬರ್ತಾರ್ರಿ..:

ಈ ಸಲ ವಿದ್ಯುನ್ಮಾನ ಮತಯಂತ್ರ ಬಳಸಿದ ಕಾರಣ, ಬೆಳಿಗ್ಗೆ 10.30ರ ಹೊತ್ತಿಗೆ ಅಭ್ಯರ್ಥಿಗಳ ಹಣೆಬರಹ ನಿಚ್ಚಳವಾಯಿತು. ಪರಾಭವಗೊಂಡ ಅಭ್ಯರ್ಥಿಗಳು ಒಬ್ಬೊಬ್ಬರೇ ನಿರಾಶೆಯ ಮುಖ ಹೊತ್ತು ಹೊರನಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಜಯ ಗಳಿಸಿದ ಪುರುಷ ಅಭ್ಯರ್ಥಿ ಗಳು ಕೇಂದ್ರದಿಂದ ಹೊರ ಬಂದರೂ ಅವರನ್ನು ಹರ್ಷದಿಂದ ಎದುರು ಗೊಳ್ಳುವ ಕಾರ್ಯಕರ್ತರು ಪಾಲಿ ಟೆಕ್ನಿಕ್ ಕಾಲೇಜಿನ ಬಳಿ ಇರಲಿಲ್ಲ. ಹೀಗಾಗಿ ಅವರು ಐವಾನ್‌ಶಾಹಿ ಬಳಿ ಹೋಗಿ, ಬೆಂಬಲಿಗರ ಜತೆ ಸಂಭ್ರಮಿಸಿ ಮತ್ತೆ ವಾಪಸು ಬರಬೇಕಾಯಿತು.ಆದರೆ ಮಹಿಳಾ ಅಭ್ಯರ್ಥಿಗಳು ಮಾತ್ರ ಮನೆಯಲ್ಲೇ ಇದ್ದುದರಿಂದ ಅವರ ಪತಿರಾಯರು ವಿಜಯದ ಸುದ್ದಿ ತಿಳಿಸಿದ ಮೇಲಷ್ಟೇ ಕೇಂದ್ರಕ್ಕೆ ಬಂದರು. “ಕ್ಯಾಂಡಿಡೇಟ್ ಎಲ್ರಿ? ಫೋಟೋ ತೆಕ್ಕೋಬೇಕು” ಎಂದು ಮಾಧ್ಯಮಗಳ ಛಾಯಾಗ್ರಾಹಕರು ಕೇಳಿದಾಗ, “ಮನಿಯವ್ರ ಈಗ್ ಬರ್ತಾರ್ರಿ...” ಎಂದು ಪತಿರಾಯರು ಹೇಳುತ್ತಿದ್ದರು!ಭರ್ಜರಿ ವ್ಯಾಪಾರ: ಮತ ಎಣಿಕೆ ಕೇಂದ್ರದ ಹೊರಗಡೆ ವ್ಯಾಪಾರಿಗಳಿಗೆ ಸುಗ್ಗಿ. ಎರಡು ರೂಪಾಯಿ ಬೆಲೆಯ ನೀರಿನ ಪಾಕೆಟ್ ಐದು ರೂಪಾಯಿಗೆ ಮಾರಾಟವಾಯಿತು. ಟೈಂಪಾಸ್ ಶೇಂಗಾ, ಕಡಲೆ ವಹಿವಾಟು ಕೂಡ ಜೋರಾಗಿ ನಡೆಯಿತು.ಡಿ.ಸಿ. ಭೇಟಿ: ಮತ ಎಣಿಕೆ ನಡೆಯುತ್ತಿದ್ದ ವೇಳೆ ಜಿಲ್ಲಾಧಿಕಾರಿ ಡಾ. ಆರ್.ವಿಶಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಮಠ ಮಲ್ಲಿಕಾರ್ಜುನ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.