ಸಂದರ್ಶನ: ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ ವಿಶ್ವಮಟ್ಟಕ್ಕೆ

7

ಸಂದರ್ಶನ: ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ ವಿಶ್ವಮಟ್ಟಕ್ಕೆ

Published:
Updated:
ಸಂದರ್ಶನ: ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ ವಿಶ್ವಮಟ್ಟಕ್ಕೆ

ಗುಲ್ಬರ್ಗ: ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ, ಈಗಾಗಲೇ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಮುನ್ನಡೆಸಲು ಅವರು ಹಾಕಿಕೊಂಡಿರುವ ಯೋಜನೆಗಳ ಕುರಿತು `ಪ್ರಜಾವಾಣಿ~ ವಿಚಾರಿಸಿತು. ಕನ್ನಡ ಸಾಹಿತ್ಯ, ಸಂಸ್ಕೃತಿ ಸೇವೆಗಾಗಿ ಸದಾ ಬದ್ಧನಾಗಿದ್ದೇನೆ ಎಂದು ಜಿಲ್ಲೆಯ ಸಾಹಿತಿಗಳಿಗೆ, ಕನ್ನಡಪ್ರೇಮಿಗಳಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಅವರು ಕಟ್ಟಿಕೊಂಡ ಕನಸಿನ ಕೆಲವು ಅನಿಸಿಕೆಗಳು ಇಲ್ಲಿವೆ...* ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾರಥ್ಯ ವಹಿಸಿಕೊಂಡ ಈ ಕ್ಷಣ ನಿಮ್ಮ ಅನಿಸಿಕೆ ಏನು?

- ಅಧ್ಯಕ್ಷನಾಗಿ ಆಯ್ಕೆಯಾದ ಬಗ್ಗೆ ಯಾವುದೇ ಹಮ್ಮು ನನಗಿಲ್ಲ. ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಎಲ್ಲ ಹಿರಿಯ, ಯುವ, ಮಹಿಳಾ, ದಲಿತ ಸಾಹಿತಿ, ಕವಿಗಳನ್ನು ಒಟ್ಟುಗೂಡಿಸಿಕೊಂಡು ಕನ್ನಡಮಾತೆಯ ಸೇವೆಯನ್ನು ಪಾರದರ್ಶಕವಾಗಿ ಪ್ರಾಮಾಣಿಕವಾಗಿ ಮಾಡಬೇಕು ಎನ್ನುವ ವಿಚಾರ ಈ ಕ್ಷಣದಲ್ಲಿ ಇನ್ನಷ್ಟು ಗಟ್ಟಿಗೊಂಡಿದೆ ಎನಿಸುತ್ತಿದೆ.* ಕಸಾಪ ಜಿಲ್ಲಾ ಘಟಕದ ಮೂಲಕ ನೀವು ಮಾಡಬೇಕಾದ ಕಾರ್ಯಯೋಜನೆ ಏನಿದೆ?

- ಹಿರಿಯ ಸಾಹಿತಿಗಳು, ವಿಚಾರವಂತರ ಮಾರ್ಗದರ್ಶನದಲ್ಲಿ ಇನ್ನೆರಡು ದಿನದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ರಚಿಸುವುದು ಮೊದಲ ಪ್ರಾಶಸ್ತ್ಯ. ನಂತರದ ಒಂದು ವಾರ ಪ್ರತಿ ತಾಲ್ಲೂಕಿಗೂ ಪ್ರವಾಸ ಕೈಗೊಂಡು, ಕಸಾಪ ತಾಲ್ಲೂಕು ಸಮಿತಿಗಳ ಅಧ್ಯಕ್ಷರನ್ನು ಆಯ್ಕೆ ಮಾಡುವ ಕಾರ್ಯಯೋಜನೆ ಮಾಡಿಕೊಂಡಿದ್ದೇನೆ. ಜಿಲ್ಲಾ ಘಟಕದ ಅಧ್ಯಕ್ಷನಾಗಿ ನೇರವಾಗಿ ತಾಲ್ಲೂಕು ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡಬಹುದಾಗಿದೆ. ಆದರೆ ಪ್ರತಿ ತಾಲ್ಲೂಕಿನಲ್ಲೂ ಸದಸ್ಯರ ಒಟ್ಟು ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು, ಬಹುಮತರು ಒಪ್ಪಿಕೊಳ್ಳುವವರನ್ನೆ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಲಾಗುವುದು.* ಜಿಲ್ಲೆಯ ಸಾಹಿತ್ಯರಥ ಸಾಗುವ ಪಥ ಹೇಗಿರಬೇಕು ಎನ್ನುವ ಪರಿಕಲ್ಪನೆ ನಿಮ್ಮದು?

- ಗುಲ್ಬರ್ಗ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿಯನ್ನು ವಿಶ್ವಮಟ್ಟಕ್ಕೆ ಪಸರಿಸಬೇಕು ಎನ್ನುವುದು ನನ್ನ ಕನಸು. ಸೂಫಿ ಸಂತರ, ಕವಿಗಳ, ದಾಸರ ಬೀಡಾದ ಹೈದರಾಬಾದ್ ಕರ್ನಾಟಕ ಪ್ರದೇಶದ ಸಾಹಿತ್ಯ, ಜೀವನದ ಬಗ್ಗೆ ವಿಶ್ವದ ಪ್ರತಿ ಮೂಲೆಯ ವ್ಯಕ್ತಿಗೂ ಅರಿತುಕೊಳ್ಳುವಂತಾಗಲು ಪ್ರತ್ಯೇಕ ಅಂತರ್ಜಾಲ ತಾಣ (ವೆಬ್‌ಸೈಟ್) ತೆರೆಯುವ ಯೋಜನೆ ಇದೆ. ಮಹಿಳಾ, ದಾಸ, ಮಕ್ಕಳು, ಯುವಕರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮ್ಮೇಳನವನ್ನು ಆಯೋಜಿಸಿ ವಿಶೇಷ ಚಿಂತನ ಮಂಥನಕ್ಕೆ ಅವಕಾಶ ಕಲ್ಪಿಸಲಾಗುವುದು.* ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ತ್ರೈಮಾಸಿಕ ಪತ್ರಿಕೆ ಯಾವಾಗ ಆರಂಭಿಸುವಿರಿ? ಅದರ ಉದ್ದೇಶ ಏನು?

- ತ್ರೈಮಾಸಿಕ ಪತ್ರಿಕೆಯನ್ನು ಶೀಘ್ರ ಆರಂಭಿಸಲು ಯೋಜನೆ ಇದೆ. ಇದಕ್ಕಾಗಿ ಪ್ರತ್ಯೇಕ ಸಂಪಾದಕೀಯ ಮಂಡಳಿ ರಚಿಸಲಾಗುವುದು. 16 ಪುಟಗಳ ಈ ಪತ್ರಿಕೆಯಲ್ಲಿ ಯುವ ಸಾಹಿತಿಗಳ, ಕವಿಗಳ ಲೇಖನಗಳನ್ನು ಪ್ರಕಟಿಸಲಾಗುವುದು. ಪ್ರತಿಭಾವಂತರನ್ನು ಗುರುತಿಸುವುದು ಈ ಮೂಲಕ ಅವರ ಸಾಹಿತ್ಯ ಪೋಷಣೆಗೆ ನೆರವಾಗುವುದು ಮುಖ್ಯ ಉದ್ದೇಶ.* ನಾಮಕಾವಸ್ತೆ ಜಾತ್ರೆಯಂತೆ ಮುಗಿದುಹೋಗುವ ತಾಲ್ಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಅರ್ಥಪೂರ್ಣಗೊಳಿಸಲು ನಿಮ್ಮ ಪ್ರಯತ್ನ?

- ಸಮ್ಮೇಳನಗಳು ಬರೀ ಭಾಷಣ, ಊಟದಿಂದಷ್ಟೆ ಕೂಡಿರಬಾರದು ಎನ್ನುವುದು ನನ್ನ ಉದ್ದೇಶ. ಕಡ್ಡಾಯವಾಗಿ ಪ್ರತಿ ತಾಲ್ಲೂಕಿನಲ್ಲೂ ಪ್ರತಿ ವರ್ಷ ಸಾಹಿತ್ಯ ಸಮ್ಮೇಳನ ಮಾಡುವುದರೊಂದಿಗೆ ಆಯಾ ತಾಲ್ಲೂಕಿನ ಸಾಹಿತಿಗಳ ಒಂದಿಷ್ಟು ಕೃತಿಗಳನ್ನು ಬಿಡುಗಡೆಗೊಳಿಸಲಾಗುವುದು. ಸಮ್ಮೇಳನದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ ಆಚರಿಸುವಂತಾಬೇಕು.* ತಾಲ್ಲೂಕಿಗೊಂದು ಕನ್ನಡ ಭವನ ನಿರ್ಮಿಸುವ ಸಂಕಲ್ಪ ನಿಮ್ಮದು? ಅದನ್ನು ಹೇಗೆ ಕೈಗೂಡಿಸುವಿರಿ?

- ಈಗಾಗಲೇ ಕೆಲವು ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಿಸಲು ನಿವೇಶನ ಸಿಕ್ಕಿದೆ. ಅಂಥ ಕಡೆಗಳಲ್ಲಿ ಕಟ್ಟಡ ನಿರ್ಮಿಸಲಾಗುವುದು. ನಿವೇಶನ ಸಿಗದಿರುವ ಕಡೆಗಳಲ್ಲಿ ಪ್ರಥಮ ಹಂತವಾಗಿ ನಿವೇಶನ ದೊರಕಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ಚುನಾಯಿತ ಪ್ರತಿನಿಧಿಗಳ ಸಹಕಾರ ಅಗತ್ಯ. ಸಾಹಿತಿಗಳ ತಂಡದೊಂದಿಗೆ ಕನ್ನಡ ಭವನ ನಿರ್ಮಿಸುವುದು ಕಷ್ಟದ ಕೆಲಸವೇನು ಅಲ್ಲ.* ಕನ್ನಡ ಪರ ಸಂಘಟನೆಗಳೊಂದಿಗೆ ಕಸಾಪ ಕೈಜೋಡಿಸುವುದೆ?

- ಕನ್ನಡ ನೆಲ, ಜಲ ಹಾಗೂ ಭಾಷೆಗೆ ಧಕ್ಕೆ ಒದಗಿದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಯಾವಾಗಲೂ ಹೋರಾಟ ಮಾಡಿಕೊಂಡು ಬಂದಿದೆ. ಕನ್ನಡಪರ ಸಂಘಟನೆಗಳ ಸಹಕಾರ, ಬಾಂಧವ್ಯ ಬೇಕೇಬೇಕು.

ಹೋರಾಟ ಮಾಡಬೇಕಾದ ಸಂದರ್ಭದಲ್ಲಿ ಸಾಹಿತಿಗಳು, ಕವಿಗಳನ್ನು ಸೇರ್ಪಡೆಗೊಳಿಸಿ ಏಕಾಭಿಪ್ರಾಯ ಮೂಡಿಸುವ ಕೆಲಸವನ್ನು ಮಾಡುತ್ತೇವೆ.* ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಒಮ್ಮೆ ಸೋತಿದ್ದರೂ ಮರಳಿ ಚುನಾವಣೆಗೆ ಸ್ಪರ್ಧಿಸಲು ಯಾವ ಅಂಶಗಳು ಕಾರಣವಾದವು?

- ಕಸಾಪ ಚುನಾವಣೆಯಲ್ಲಿ ಗೆಲುವು ಸಿಗುವ ತನಕ ಸ್ಪರ್ಧಿಸುವುದು ನನ್ನ ಉದ್ದೇಶವಾಗಿತ್ತು. ಎರಡನೇ ಅವಧಿಯ ಚುನಾವಣೆಯಲ್ಲಿ ಗೆಲುವು ಸಿಕ್ಕಿದೆ. ಈ ಮೂಲಕ ಕನ್ನಡ ಸಾಹಿತ್ಯ ಸೇವೆಗೆ ದೊರಕಿದೆ. ಮೂರು ವರ್ಷದ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಮೂರು ತಾಲ್ಲೂಕಾ, ಜಿಲ್ಲಾ ಸಮ್ಮೇಳನಗಳನ್ನು ಯಶಸ್ವಿಯಾಗಿ ಮಾಡುತ್ತೇನೆ. `ಕವಿರಾಜಮಾರ್ಗ~ ರಚಿತವಾದ ಈ ನೆಲದಲ್ಲಿ 2014ಕ್ಕೆ ಅಖಿಲ ಭಾರತ ಸಮ್ಮೇಳನ ನಡೆಯಬೇಕು ಎನ್ನುವ ಒತ್ತಾಸೆ ಇದೆ. ಇದಕ್ಕೆ ಎಲ್ಲ ಸಾಹಿತಿಗಳ, ಹಿರಿಯರ ಸಹಕಾರದೊಂದಿಗೆ ಯತ್ನಿಸುತ್ತೇನೆ.* ಇನ್ನು ಹೇಳಿಕೊಳ್ಳಬೇಕಿರುವ ಯೋಜನೆಗಳೇನು?

- ಸರ್ಕಾರವು ಆಚರಿಸುವ ಉತ್ಸವಗಳ ಬದಲಿಗೆ `ಸಗರ ವೈಭವ~ `ರಾಷ್ಟ್ರಕೂಟ ವೈಭವ~ `ನಾಗಾವಿ ವೈಭವ~ಗಳನ್ನು ಕಸಾಪದಿಂದ ಆಚರಿಸಲಾಗುವುದು. ಈ ಮೂಲಕ ಆ ಪ್ರದೇಶದ ಸಾಹಿತ್ಯಕ, ಐತಿಹಾಸಿಕ ಪರಂಪರೆಯನ್ನು ದಾಖಲಿಸುವುದರೊಂದಿಗೆ ಪ್ರಚುರ ಪಡಿಸಲಾಗುವುದು. ಹೈದರಾಬಾದ್ ಕರ್ನಾಟಕದ ಪ್ರತಿ ಜಿಲ್ಲಾ ಕಸಾಪ ಅಧ್ಯಕ್ಷರು ಒಂದಾಗಿ ಹೈ.ಕ. ಕನ್ನಡ ಸಾಹಿತ್ಯ ಸಮ್ಮೇಳನ ರೂಪಿಸುವ ಬಗ್ಗೆ ಕೆಲವರು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಲಹೆ, ಸೂಚನೆಗಳನ್ನು ನೋಡಿಕೊಂಡು ಅನುಷ್ಠಾನಕ್ಕೆ ಯತ್ನಿಸಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry