ತಾಲ್ಲೂಕುಗಳ ಮಧ್ಯೆ ನೀರಿನ ವಿವಾದ!

7

ತಾಲ್ಲೂಕುಗಳ ಮಧ್ಯೆ ನೀರಿನ ವಿವಾದ!

Published:
Updated:

ಗುಲ್ಬರ್ಗ: ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಅಂತರರಾಜ್ಯಗಳ ನಡುವೆ ವಿವಾದಗಳು ಏರ್ಪಡುವುದು ಸಾಮಾನ್ಯ. ಇದೀಗ ಗುಲ್ಬರ್ಗ ಜಿಲ್ಲೆಯಲ್ಲಿ ಅಂತರ ತಾಲ್ಲೂಕಿನ ನಡುವೆ ಕುಡಿಯುವ ನೀರು ಹರಿಸುವ ಸಂಬಂಧವಾಗಿ ವಿವಾದ ತಾರಕಕ್ಕೇರಿದೆ.

 

ಆಳಂದ ತಾಲ್ಲೂಕಿನ ಅಮರ್ಜಾ ಆಣೆಕಟ್ಟಿನಿಂದ ಗುಲ್ಬರ್ಗ ತಾಲ್ಲೂಕಿಗೆ ನೀರು ಹರಿಸಲು ಅಲ್ಲಿನ ರೈತರು ತೀವ್ರ ಪ್ರತಿರೋಧ ಒಡ್ಡುತ್ತಿದ್ದಾರೆ. ಗುಲ್ಬರ್ಗ ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಅಮರ್ಜಾದಿಂದ ನೀಡು ಹರಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿರುವುದು ವಿವಾದ ಭುಗಿಲೇಳಲು ಕಾರಣವಾಗಿದೆ.ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಅಮರ್ಜಾ ಆಣೆಕಟ್ಟೆಯನ್ನು ನಿರ್ಮಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಒಟ್ಟು 8,903 ಹೇಕ್ಟೆರ್ ಪ್ರದೇಶಕ್ಕೆ ನೀರು ಹರಿಸುವ ಉದ್ದೇಶಿಸಲಾಗಿದೆ. ಇದೀಗ ಆಣೆಕಟ್ಟಿನ ನೀರನ್ನು ಬರೀ ಕುಡಿಯುವ ನೀರಿನ ಯೋಜನೆಗಳಿಗೆ ಉಪಯೋಗಿಸಲಾಗುತ್ತಿದೆ. ಕೃಷಿ ನೀರಾವರಿಗೆ ಈ ನೀರನ್ನೆ ಅವಲಂಬಿಸಿರುವ ಅಳಂದದ ರೈತರು ಏನು ಮಾಡಬೇಕು ಎನ್ನುವ ಪ್ರಶ್ನೆಯನ್ನು ಆಳಂದ ತಾಲ್ಲೂಕಿನ ಜನಪ್ರತಿನಿಧಿಗಳು ಕೇಳುತ್ತಿದ್ದಾರೆ.ಆಳಂದ ಹಾಗೂ ಅಫಜಲಪುರ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಪೈಪ್‌ಲೈನ್ ಅಳವಡಿಸುವ ಯೋಜನೆಗಳಿಗೆ ಯಾವ ರೈತರು ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಅಮರ್ಜಾದಿಂದ ಭೀಮಾನದಿಗೆ ನೀರು ಹರಿಸಿ ಗುಲ್ಬರ್ಗ ತಾಲ್ಲೂಕಿಗೆ ನೀರು ಪೂರೈಸುವುದಕ್ಕೆ ಮಾತ್ರ ಆಳಂದ ತಾಲ್ಲೂಕಿನ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ರೈತರು ಅವಕಾಶ ನೀಡುವುದಿಲ್ಲ ಎನ್ನುತ್ತಿದ್ದಾರೆ. ಅಮರ್ಜಾ ನೀರು ಬಿಡುವುದನ್ನು ವಿರೋಧಿಸಿ ಶಾಸಕ ಸುಭಾಷ್ ಗುತ್ತೇದಾರ ಹಾಗೂ ಬೆಂಬಲಿಗರು ಶುಕ್ರವಾರ ರಸ್ತೆ ತಡೆ ನಡೆಸಿದರು.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಅವರು ಹೇಳುವಂತೆ, `ಕುಡಿಯುವ ನೀರು ಪೂರೈಸಲು ನಮ್ಮದೇನು ಅಭ್ಯಂತರವಿಲ್ಲ. ಇಡೀ ಅಳಂದ ತಾಲ್ಲೂಕು ಅಮರ್ಜಾ ಮೇಲೆ ಅವಲಂಬನೆಯಾಗಿದೆ. ಇಂಥ ಸಂದರ್ಭದಲ್ಲಿ ಆಳಂದ ತಾಲ್ಲೂಕಿನ ಜನರ ನೆಮ್ಮದಿ ಹಾಳು ಮಾಡುವುದು ಸರಿಯಿಲ್ಲ. ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ. ಈ ಮೂಲಕ ಭೀಮಾ ನದಿಗೆ ಮಹಾರಾಷ್ಟ್ರದ ಕೋಯ್ನಾದಿಂದ ನೀರು ಪಡೆದುಕೊಳ್ಳಲು ಯತ್ನಿಸಬೇಕು~ ಎಂದರು.`ಅಮರ್ಜಾದಿಂದ ನೀರು ಬಿಡುತ್ತಿರುವುದರಿಂದ, ಆಳಂದಕ್ಕೆ ಕುಡಿಯುವ ನೀರು ಕಡಿಮೆಯಾಗುತ್ತಿದೆ. ಅಲ್ಲಿನ ರೈತರು ಅಮರ್ಜಾ ನೀರಿನ ಮೇಲೆ ಅವಲಂಬನೆಯಾಗಿ ಕಬ್ಬು ಬೆಳೆದಿದ್ದಾರೆ. ನೀರು ಕಡಿಮೆಯಾದರೆ ಕಾರ್ಖಾನೆಯು ನಡೆಯುವುದಿಲ್ಲ, ರೈತರು ಉಳಿಯುದಿಲ್ಲ. ಗಾಣಗಾಪುರ ಆಣೆಕಟ್ಟು ಭರ್ತಿಯಾದ ನಂತರ ನೀರು ಸರಡಗಿಗೆ ಬರಬೇಕಿದೆ ಅಷ್ಟರೊಳಗೆ ಅಮರ್ಜಾ ಖಾಲಿಯಾಗುತ್ತದೆ. ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳುವ ಮೊದಲು ನೀರಿನ ಸಲಹಾ ಸಮಿತಿಯ ಸಭೆ ಕರೆಯಬೇಕಿತ್ತು. ಜನಪ್ರತಿನಿಧಿಗಳಿಗೆ ವಾಸ್ತವ ಚಿತ್ರಣ ಮನವರಿಕೆ ಮಾಡಬೇಕಿತ್ತು. ಗುಲ್ಬರ್ಗಕ್ಕೆ ನೀರು ಪೂರೈಸಲು ಗಂಡೋರಿ ನಾಲಾ, ಬೆಣ್ಣೆತೋರಾ ಇದೆ. ನಾರಾಯಣಪುರ ಡ್ಯಾಂದಿಂದಲೂ ಭೀಮಾನದಿಗೆ ನೀರು ತರಬಹುದು. ಅಮರ್ಜಾ ಖಾಲಿಯಾದರೆ ಪರ್ಯಾಯ ಮಾರ್ಗಗಳೇ ಇಲ್ಲ.

 

ಬರೀ ಕುಡಿಯುವ ನೀರಿನ ಲೆಕ್ಕವನ್ನು ಜಿಲ್ಲಾಡಳಿತ ಹೇಳುತ್ತಿದೆ. ಆದರೆ ರೈತರ ಸಂಕಷ್ಟದ ಬಗ್ಗೆ ಜಿಲ್ಲಾಧಿಕಾರಿ ಯೋಚಿಸುತ್ತಿಲ್ಲ. ನೀರು ಹರಿಸುವುದನ್ನು ನಿಲ್ಲಿಸುವ ತನಕ ಪಕ್ಷಬೇಧ ಮರೆತು ಇಡೀ ಆಳಂದ ಹೋರಾಟ ಮುಂದುವರೆಸಲಿದೆ~ ಎನ್ನುವುದು ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಅವರ ವಿಶ್ಲೇಷಣೆ.ಎಷ್ಟು ನೀರು ಬಿಡಲಾಗುತ್ತಿದೆ: ಗುಲ್ಬರ್ಗ ಜಿಲ್ಲಾಧಿಕಾರಿಗಳ ಆದೇಶದಂತೆ ಅಮರ್ಜಾ ಅಣೆಕಟ್ಟಿನಿಂದ ಒಟ್ಟು 0.15 ಟಿಎಂಸಿ ನೀರನ್ನು ಅಮರ್ಜಾದಿಂದ ಹರಿಬಿಡಲಾಗುತ್ತಿದೆ. ಗುರುವಾರದಿಂದ ಒಂದು ಕ್ರೆಸ್ಟ್‌ಗೇಟ್ ಮಾತ್ರ ತೆರೆಯಲಾಗಿದ್ದು, ಪ್ರತಿದಿನಕ್ಕೆ ಸುಮಾರು 200 ಕ್ಯೂಸೆಕ್ ನೀರು ಅಮರ್ಜಾದಿಂದ ಹೊರ ಬರುತ್ತಿದೆ. ಇದೊಂದೆ ಗೇಟ್‌ನಿಂದ ಆದೇಶದ ಪ್ರಕಾರ ನೀರು ಹರಿಬಿಡಲು ಕನಿಷ್ಠ 15 ದಿನ ಗೇಟ್ ತೆರೆಯಬೇಕಾಗಿದೆ. ಈಗ ಹರಿಬಿಡಲಾದ ನೀರು ದೇವಣಗಾಂವ ತಲುಪಿದೆ ಎನ್ನುವುದು ನೀರಾವರಿ ಇಲಾಖೆಯ ಅಧಿಕಾರಿಗಳ ವಿವರಣೆ.ಅಮರ್ಜಾ ಆಣೆಕಟ್ಟು ಒಟ್ಟು 1.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಅದರಲ್ಲಿ ಪ್ರತಿವರ್ಷ ಆಳಂದ ನಗರಕ್ಕೆ ಕುಡಿಯುವ ನೀರಿಗಾಗಿ 0.075 ಟಿಎಂಸಿ ಬಳಕೆಯಾಗುತ್ತಿದೆ. ಇನ್ನು ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಒಟ್ಟು ಪ್ರತಿದಿನ ಸರಾಸರಿ ಸುಮಾರು 80 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ಕಾಲುವೆಗಳಿಗೆ ಹರಿಸುವ ನೀರಿನ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.ಈಗಲಾದರೂ ಜಿಲ್ಲಾಧಿಕಾರಿಗಳು ತುರ್ತು ಸಭೆ ನಡೆಸಿ ಜನಪ್ರತಿನಿಧಿಗಳು ಹಾಗೂ ರೈತರಿಗೆ ವಾಸ್ತವ ಚಿತ್ರಣ ಮನವರಿಕೆ ಮಾಡಿಕೊಟ್ಟು, ವಿವಾದಕ್ಕೆ ತೆರೆ ಎಳೆಯಬೇಕು ಎನ್ನುವುದು ಗುಲ್ಬರ್ಗ ಪ್ರಜ್ಞಾವಂತರ ಅನಿಸಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry