ನಿಯಂತ್ರಣವಿಲ್ಲದ ವಾಹನ ನಿಲುಗಡೆ!

7

ನಿಯಂತ್ರಣವಿಲ್ಲದ ವಾಹನ ನಿಲುಗಡೆ!

Published:
Updated:
ನಿಯಂತ್ರಣವಿಲ್ಲದ ವಾಹನ ನಿಲುಗಡೆ!

ಗುಲ್ಬರ್ಗ: 1.14 ಲಕ್ಷ ದ್ವಿಚಕ್ರ ವಾಹನಗಳು, 8,300ಕಾರುಗಳು, 6 ಸಾವಿರ ಆಟೋಗಳು, 1,200 ಜೀಪುಗಳು, 2,200ಟ್ರ್ಯಾಕ್ಟರ್‌ಗಳು, 3,384 ಲಾರಿಗಳು, 1,888 ಸರ್ಕಾರಿ ಬಸ್‌ಗಳು... ಹೀಗೆ ಮಾರ್ಚ್ 31ರೊಳಗೆ ಅಧಿಕೃತವಾಗಿ ನೋಂದಾಯಿತ 1,48,962 ವಾಹನಗಳು ನಗರದಲ್ಲಿವೆ. ಇನ್ನು ತಾಲ್ಲೂಕು, ಪಕ್ಕದ ಜಿಲ್ಲೆ, ನೆರೆ ರಾಜ್ಯದಿಂದ ಆಗಮಿಸುವ ಮತ್ತು ಅನಧಿಕೃತ ವಾಹನಗಳು ಸೇರಿದರೆ ಎರಡು ಲಕ್ಷಕ್ಕೂ ಅಧಿಕ. ಇಷ್ಟೊಂದು ವಾಹನಗಳನ್ನು ನಿಲ್ಲಿಸಲು ಅಧಿಕೃತವಾದ ಸಾರ್ವಜನಿಕ ಸ್ಥಳ ನಗರದಲ್ಲಿ ಇಲ್ಲ. (ನಗರಾಭಿವೃದ್ಧಿ ಪ್ರಾಧಿಕಾರ 2007ರಲ್ಲಿ ತಯಾರಿಸಿದ ಮಾಸ್ಟರ್ ಪ್ಲಾನ್ ಆಧಾರದ ಅನ್ವಯ.) ಇದು ಸುಮಾರು 6.5 ಲಕ್ಷ ಜನಸಂಖ್ಯೆ ಗುಲ್ಬರ್ಗ ಮಹಾನಗರದ ದುಸ್ಥಿತಿ.ಹೀಗಾಗಿ ನಗರದಲ್ಲಿ ವಾಹನಗಳು ಸಾಗಿದ್ದೇ ದಾರಿ, ನಿಂತದ್ದೇ ನಿಲುಗಡೆ. ದಿನನಿತ್ಯವೂ ಸಂಚಾರ ಅಸ್ತವ್ಯಸ್ತ. ದಾರಿಯಲ್ಲೇ ನಿಲ್ಲುವ ಆಟೋ- ಕಾರು, ವಾರಕ್ಕೆರಡು ಬೈಕ್ ಕಳವು, ಸವಾರರ ನಡುವೆ ಜಗಳ ಸಾಮಾನ್ಯ. ಇದರಿಂದಾಗಿ ಉತ್ತರ ಕರ್ನಾಟಕದಲ್ಲಿ ವೇಗವಾಗಿ ಬೆಳೆಯುವ ಗರಿಮೆಯ ನಗರದ ಸಂಚಾರಕ್ಕೆ ಸಂಚಕಾರ ಬಂದಿದೆ. ಇದಕ್ಕೆ ಪಾರ್ಕಿಂಗ್ ಅವ್ಯವಸ್ಥೆಯೇ ಕಾರಣ.  ಇಲ್ಲೆಲ್ಲ ಹೀಗೆ: ಕೇಂದ್ರೀಯ ಬಸ್ ನಿಲ್ದಾಣ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ರೈಲ್ವೆ ನಿಲ್ದಾಣ, ಸೂಪರ್ ಮಾರ್ಕೆಟ್, ಗಂಜ್, ಶರಣಬಸವೇಶ್ವರ ದೇಗುಲ, ಖ್ವಾಜಾ ಬಂದೇನವಾಜ್ ದರ್ಗಾ, ಶಹಾಬಜಾರ್, ಖೂಬಾ ಕಲ್ಯಾಣ ಮಂಟಪ, ಆಳಂದ ನಾಕಾ ಮತ್ತಿತರ ಕಡೆ ವ್ಯವಸ್ಥಿತ ಪಾರ್ಕಿಂಗ್ ಇಲ್ಲದೇ ಸಂಚಾರ ಅಡಚಣೆ ಆಗುತ್ತಿರುವುದು ದಿನನಿತ್ಯದ ಚಿತ್ರಣ.ಕಟ್ಟಡ: ಕೇವಲ ಸಾರ್ವಜನಿಕ ನಿಲುಗಡೆ ಮಾತ್ರವಲ್ಲ, ಶೇ 90ರಷ್ಟು ಕಟ್ಟಡಗಳು ನಿರ್ಮಾಣ ನಿಯಮಾವಳಿಯನ್ನು ಪಾಲಿಸಿಲ್ಲ. ವಾಣಿಜ್ಯ ಸಂಕೀರ್ಣ, ಶಾಲಾ-ಕಾಲೇಜುಗಳು, ಕಲ್ಯಾಣ ಮಂಟಪ, ಫ್ಲಾಟ್‌ಗಳು, ಸೂಪರ್ ಬಜಾರ್, ಬಹುಮಹಡಿ ಕಟ್ಟಡ ಮತ್ತಿತರ ಜನಸಂದಣಿ ಕೇಂದ್ರಗಳಲ್ಲೇ ಪಾರ್ಕಿಂಗ್ ಸ್ಥಳವನ್ನು ಬಿಟ್ಟಿಲ್ಲ. ಹಲವೆಡೆ ಪರವಾನಗಿಗಿಂತ ಕಟ್ಟಡದ ವಿಸ್ತೀರ್ಣ ಹೆಚ್ಚಿವೆ. ಕೆಲವು ರಸ್ತೆ ಅತಿಕ್ರಮಿಸಿಕೊಂಡಿವೆ. ಅಳಿದುಳಿದ ಜಾಗದಲ್ಲಿ ಬಂಡಿ, ಪೆಟ್ಟಿಗೆ ಅಂಗಡಿಗಳು ಠಿಕಾಣಿ ಹೂಡಿವೆ. ಇದರಿಂದ ರಸ್ತೆ ಮತ್ತು ಪಾದಚಾರಿ ಹಾದಿಯೇ `ಪಾರ್ಕಿಂಗ್~ ತಾಣವಾಗಿದೆ.ಪೊಲೀಸ್: `ರಸ್ತೆಗಳ ಕಾಮಗಾರಿಗಳು ನಡೆಯುತ್ತಿವೆ. ಆ ಬಳಿಕ ನಿಲುಗಡೆ, ಸಂಚಾರ ನಿಯಮಗಳ ಸೂಚನಾ ಫಲಕ ಹಾಕಲಾಗುವುದು. ರಸ್ತೆ ಬದಿಗೆ ಬಿಳಿ ಬಣ್ಣದ ಗೆರೆಯನ್ನು ಬಳಿದು ನಿಲುಗಡೆ ನಿಗದಿ ಮಾಡಲಾಗುವುದು. ಗುರುತುಗಳನ್ನು ಮೀರಿ ನಿಲುಗಡೆ ಮಾಡಿದರೆ ದಂಡ ವಿಧಿಸಲಾಗುವುದು. ನಗರದ 15 ಪ್ರಮುಖ ಜಂಕ್ಷನ್‌ಗಳಲ್ಲಿ ಕ್ಯಾಮರಾ, ಸಿಗ್ನಲ್ ಮತ್ತಿತರ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು~ ಎಂದು ಪ್ರೊಬೆಷನರಿ ಐಪಿಎಸ್ ಅಧಿಕಾರಿ ಭೂಷಣ ಬೊಸರೆ ತಿಳಿಸಿದರು.ಸಂಚಾರ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿರುವ ಅವರು, `ಅವ್ಯವಸ್ಥಿತ ಚಾಲನಾ ಅಭ್ಯಾಸ, ಪಥ ಶಿಸ್ತು ಪಾಲಿಸದಿರುವುದು, ಜಾಗೃತಿಯ ಕೊರತೆ, ಅನಧಿಕೃತ ವಾಹನ ಮತ್ತು ಪಾರ್ಕಿಂಗ್ ಕೊರತೆಯು ಪ್ರಮುಖ ಅಡ್ಡಿಯಾಗಿವೆ~ ಎನ್ನುತ್ತಾರೆ.ಪಾಲಿಕೆ: ಪ್ರಮುಖ ಜನಸಂದಣಿ ಜಂಕ್ಷನ್‌ಗಳ ಲಭ್ಯ ಸ್ಥಳಾವಕಾಶದಲ್ಲಿ `ಪೇ ಆ್ಯಂಡ್ ಪಾರ್ಕ್~ ನಿರ್ಮಿಸುವ ಉದ್ದೇಶವಿದೆ. ಈ ಬಗ್ಗೆ ಅಧಿಕಾರಿಗಳು, ಹಿರಿಯ ಸದಸ್ಯರ ನೇತೃತ್ವದಲ್ಲಿ ಉಪ ಸಮಿತಿ ರಚಿಸಿ ಸ್ಥಳಾವಕಾಶ, ನಿರ್ಮಾಣ ವೆಚ್ಚ, ದರ ನಿಗದಿ, ಗುತ್ತಿಗೆ ನೀಡುವ ಬಗ್ಗೆ ಅಧ್ಯಯನ ನಡೆಸಲಾಗುವುದು. ಈ ಸಮಿತಿ ವರದಿ ಆಧಾರದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಇದರಿಂದ ಪಾಲಿಕೆಗೆ ಆದಾಯ, ವಾಹನಕ್ಕೆ ಸುರಕ್ಷತೆ, ನಗರ ಸೌಂದರ್ಯ, ಸಂಚಾರ ಸುಗಮವಾಗಲಿದೆ~ ಎಂದು ಯೋಜನಾ ಮತ್ತು ನಗರ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯ್ಯದ್ ಅಹ್ಮದ್ ಮತ್ತು ಕರ ಮತ್ತು ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರೆಡ್ಡಿ ಕುರಕುಂದಾ ಪ್ರತಿಕ್ರಿಯಿಸಿದ್ದಾರೆ.`ಮಹಡಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಪಾರ್ಕಿಂಗ್ ಸ್ಥಳ ಬಿಡಬೇಕು ಎಂಬ ನಿಯಮವಿದೆ. ಆದರೆ ನಗರದಲ್ಲಿ ನಿಯಮಾವಳಿ ಉಲ್ಲಂಘಿಸಿದ ಸುಮಾರು 142 ಕಟ್ಟಡಗಳು ಪತ್ತೆಯಾಗಿವೆ. ಕಟ್ಟಡಗಳಲ್ಲಿ ಪಾರ್ಕಿಂಗ್ ಸೌಲಭ್ಯವಿಲ್ಲ. ಕೆಲವೆಡೆ ಅಂಗಡಿ ನಿರ್ಮಿಸಲಾಗಿದೆ. ಪಾಲಿಕೆಯ ಮುಂಭಾಗವೂ `ಪೇ ಆ್ಯಂಡ್ ಪಾರ್ಕ್~ ನಿರ್ಮಿಸುವ ಉದ್ದೇಶವಿದೆ. ಇದರ ಜೊತೆ ನಗರದ ರಸ್ತೆಗಳ ಇಕ್ಕೆಲೆಗಳಲ್ಲಿ ಗಿಡ ನೆಡಲು ಸುಮಾರು 50 ಲಕ್ಷ ರೂಪಾಯಿ ಅನುದಾನ ಕಲ್ಪಿಸಲಾಗುವುದು~ ಎಂದು ಅವರು ವಿವರಿಸಿದರು.ಇದರೊಂದಿಗೆ ಆಟೋಗಳು ಸರದಿಯಲ್ಲಿ ನಿಲ್ಲುವ ವ್ಯವಸ್ಥೆ, ಬಸ್ ನಿಲುಗಡೆಗೆ ತಂಗುದಾಣ ನಿರ್ಮಿಸಬೇಕಾಗಿದೆ. `ಪೇ ಆ್ಯಂಡ್ ಪಾರ್ಕ್~ ದರವು ಕನಿಷ್ಠವಾಗಿದ್ದರೆ ಜನತೆ ಕಾನೂನು ಪಾಲಿಸುತ್ತಾರೆ. ಇಲ್ಲದಿದ್ದರೆ ಮತ್ತೊಂದು ದಾರಿ ಹಿಡಿಯುತ್ತಾರೆ ಎಂಬುದಕ್ಕೆ ನಗರದಲ್ಲಿ ನಡೆದಿರುವ ಈ ಹಿಂದಿನ ಪ್ರಯೋಗಗಳೇ ಸಾಕ್ಷಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry