ಸರ್ಕಾರಿ ಆಸ್ಪತ್ರೆಯಲ್ಲಿ ಬದಲಾವಣೆಗಾಗಿ ನಾವು

7

ಸರ್ಕಾರಿ ಆಸ್ಪತ್ರೆಯಲ್ಲಿ ಬದಲಾವಣೆಗಾಗಿ ನಾವು

Published:
Updated:
ಸರ್ಕಾರಿ ಆಸ್ಪತ್ರೆಯಲ್ಲಿ ಬದಲಾವಣೆಗಾಗಿ ನಾವು

ಗುಲ್ಬರ್ಗ: `ಆಹಾರವಿಲ್ಲ. ಸರಿಯಾಗಿ ನೀರು ಸಿಗದೆ ಮೂರು ದಿನ. ಕರೆದರೂ ಕೇಳುವವರಿಲ್ಲ. ಬಂದು ನೋಡುವವರಿಲ್ಲ. ನೆಲವೇ ಹಾಸಿಗೆ. ಮಂಚವೇ ಸೂರು. ಮೂತ್ರ ನೆಲದಲ್ಲೇ ಹರಿಯುತ್ತಿದೆ...~-ಗುಲ್ಬರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಅನಾಥನಂತೆ ನೆಲದ ಮೇಲೆ ಬಿದ್ದಿದ್ದ ರೋಗಿಯೊಬ್ಬರ ದಯನೀಯ ಸ್ಥಿತಿಯನ್ನು `ಬದಲಾವಣೆಗಾಗಿ ನಾವು~ (ವಿ ಸ್ಟ್ಯಾಂಡ್ ಫೋರ್ ಚೇಂಜ್) ತಂಡದ ಶರಣ ದೇಸಾಯಿ ತಿಳಿಸುವಾಗ ನೋವು ತುಂಬಿತ್ತು. ಸಮಾಜದ ಪರಿವರ್ತನೆಗಾಗಿ ಸ್ವಯಂ ಸೇವೆ ಸಲ್ಲಿಸುವ ಯುವ ಉತ್ಸಾಹಿಗಳ ತಂಡ `ಬದಲಾವಣೆಗಾಗಿ ನಾವು~ (ವಿ ಸ್ಟ್ಯಾಂಡ್ ಫೋರ್ ಚೇಂಜ್) ವತಿಯಿಂದ ಭಾನುವಾರ ಬೆಳಿಗ್ಗೆ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸುವಾಗ ಈ ಚಿತ್ರಣ ಕಂಡು ಬಂದಿತ್ತು.`ಇನ್ನೊಂದೆಡೆ ಈಚೆಗೆ ಹುಟ್ಟಿದ ಅವಳಿ ಮಕ್ಕಳನ್ನು ಹಿಡಿದುಕೊಂಡು ತಾಯಿ ನೆಲದ ಮೇಲೆ ಒರಗಿದ್ದಳು.  ಆಕೆಯ ಆರೈಕೆಗೆ ಶುಶ್ರೂಷಕಿಯರು ಸ್ಪಂದಿಸುತ್ತಿರಲಿಲ್ಲ. ಕಟ್ಟಡದ ಮೂಲೆ ಮೂಲೆಗಳಲ್ಲಿ ಗುಟ್ಕಾ, ಬೀಡಾ ತಿಂದು ಉಗುಳಿದ ಕೆಂಪು ರಂಗವಲ್ಲಿಯು ಚೆಲ್ಲಿತ್ತು. ಜನಗಳು ಇಲ್ಲದಿದ್ದರೂ ಫ್ಯಾನ್‌ಗಳು ಗಿರಗಿರನೇ ತಿರುಗುತ್ತಿದ್ದವು. ವೈದ್ಯಾಧಿಕಾರಿ ಕಚೇರಿಯಲ್ಲಿ ಹವಾನಿಯಂತ್ರಣ ಚಾಲನೆಯಲ್ಲಿಯೇ ಇತ್ತು.~ ಎಂದು ಅವರು ಅಲ್ಲಿನ ಸ್ಥಿತಿಯನ್ನು ಬೇಸರದಿಂದ ವಿವರಿಸಿದರು.ಸೌದಿಯಲ್ಲಿ ವೃತ್ತಿ ನಿರ್ವಹಿಸುತ್ತಿರುವ ವೈದ್ಯ ಡಾ.ಅನ್ವರ್ ಖುರ್ಷಿದ್ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು. ಆಪರೇಷನ್ ಥಿಯೇಟರ್‌ನಲ್ಲಿ 12 ಚಿಕಿತ್ಸೆಯ ಬಳಿಕವೂ ಸಲಕರಣೆ ಬದಲಾಯಿಸದೇ ಇರುವುದು ಪತ್ತೆಯಾಯಿತು. ಚುಚ್ಚುಮದ್ದುಗಳು ಸ್ವಚ್ಛವಾಗಿರಲಿಲ್ಲ. ತೀವ್ರ ನಿಗಾ ಘಟಕದ ಪರಿಸ್ಥಿತಿ ಹೇಳುವಂತಿರಲಿಲ್ಲ. ಉಸ್ತುವಾರಿ ನಡೆಸಲು ಕಂಪ್ಯುಟರ್ ಮಾನಿಟರ್ ಇರಲಿಲ್ಲ. ಒಟ್ಟಾರೆ ಆಸ್ಪತ್ರೆಯಲ್ಲಿ ಬಹುತೇಕ ಖಾಲಿ ಬಿದ್ದಿತ್ತು ಎನ್ನಲಾಗಿದೆ.`ಬದಲಾವಣೆಗಾಗಿ ನಾವು~ ತಂಡದ ವತಿಯಿಂದ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಜ್ಯಾಕೆಟ್ ಧರಿಸಿ, ಪೊರಕೆ ಹಿಡಿದ ವೈದ್ಯ, ಎಂಜಿನಿಯರ್, ಉದ್ಯಮಿ ಮತ್ತಿತರ ತರುಣರು ಸ್ವಚ್ಛಗೊಳಿಸಿದರು. ಈ ಸಂದರ್ಭ ಆಸ್ಪತ್ರೆ ಆವರಣದಲ್ಲಿ ವ್ಯರ್ಥ ಔಷಧಿ, ಚುಚ್ಚುಮದ್ದು, ಆಹಾರ ಪದಾರ್ಥಗಳು ಸಿಕ್ಕಿವೆ. ಬಳಿಕ ಟ್ರೈಸೈಕಲ್ ಬಳಸಿ ಕಸವನ್ನು ಹೊರಗೆ ಸಾಗಿಸಲಾಯಿತು.`ಸ್ವಚ್ಛತಾ ಕಾರ್ಯದ ಬಗ್ಗೆ ಮಾಹಿತಿ ದೊರೆತ ಸಿಬ್ಬಂದಿ ಒಂದು ವಾರದ ಹಿಂದೆಯಿಂದಲೇ ಆವರಣ ಶುಚಿಗೊಳಿಸಲು ಆರಂಭಿಸಿದ್ದರು. ಆದರೂ ಶುಚಿತ್ವ ಇರಲಿಲ್ಲ. ಸಾಮಾನ್ಯ ದಿನಗಳಲ್ಲಿ ಹೇಗೆ ಇದ್ದರಿಬಹುದು ಎಂದು ನೀವೇ ಊಹಿಸಿ~ ಎಂದು ಕಾಶ್ಮೀರ ಮೂಲದ ಬ್ಯಾನರ್ಜಿ ವೈಷ್ಣವಿ ಪ್ರಶ್ನಿಸಿದರು.ಶುಚಿತ್ವ ಕಾಪಾಡುವ, ಅಭಿವೃದ್ಧಿಗಾಗಿ ಕೊಡುಗೆ ನೀಡುವ, ಸಮಾಜಮುಖಿಯಾಗಿ ಚಿಂತಿಸುವ, ಏಕತೆ, ಸಮಾನತೆಯನ್ನು ಸಾಧಿಸಲು ಜನತೆ ಸ್ವಯಂಪ್ರೇರಿತರಾಗುವಂತೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿರುವ ಈ ಸ್ವಯಂ ಸೇವಕರ ತಂಡವು ಮಾ.17ರಂದು ಸೂಪರ್ ಮಾರ್ಕೆಟ್‌ನ ಪ್ರಮುಖ ರಸ್ತೆ ಮತ್ತು ಏ.8ರಂದು ವಾರ್ಡ್ 25ಮತ್ತು 26ರ ಸರ್ದಾರ್ ಮೊಹಲ್ಲಾ ಹಾಗೂ ಖುರೇಶಿ ಮಸೀದ್ ಪ್ರದೇಶವನ್ನು ಸ್ವಚ್ಛಗೊಳಿಸಿ ಜಾಗೃತಿ ಮೂಡಿಸಲು ಯತ್ನಿಸಿತ್ತು. ಇದು ಮೂರನೇ ಪ್ರಯತ್ನ. ವಿಕ್ರಮಾದಿತ್ಯ, ಯೋಗೇಶ್ ಶಹಾ, ತಾರಿಕ್ ಮಹಡಿ, ಸಾಹಿಲ್, ಶಿವಶರಣ ಮೂಲಗೆ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry