ಮನೆ ಬಾಗಿಲಿಗೆ ಸೌಲಭ್ಯ

7

ಮನೆ ಬಾಗಿಲಿಗೆ ಸೌಲಭ್ಯ

Published:
Updated:

ಔರಾದ್: ಗ್ರಾಮೀಣ ಪ್ರದೇಶದ ಜನರಿಗೆ ಕುಟುಂಬ ಯೋಜನಾ ಸೇವಾ ಸೌಲಭ್ಯ ಸುಲಭವಾಗಿ ಸಿಗುವ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ವಿನೂತನ ಯೋಜನೆಯೊಂದನ್ನು ಜಾರಿಗೊಳಿಸಲಾಗಿದೆ.ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್.ಪಿ.ಎ.ಐ) ವತಿಯಿಂದ `ಸೇತು~ ಎಂಬ ಹೆಸರಿನ ಹೊಸ ಯೋಜನೆ ಜಾರಿಗೆ ಬಂದಿದೆ. 2012ರಿಂದ 2014ರ ವರೆಗಿನ ಮೂರು ವರ್ಷದ ಈ ಯೋಜನೆ ಮೊದಲಿಗೆ ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ ಎಂದು ಎಫ್‌ಪಿಎಐ ಜಿಲ್ಲಾ ಅಧ್ಯಕ್ಷೆ ಡಾ. ವಿಜಯಶ್ರೀ ಭರಶೆಟ್ಟಿ ಈಚೆಗೆ ಇಲ್ಲಿ ನಡೆದ ಯೋಜನೆ ಅನುಷ್ಠಾನ ಸಭೆಯಲ್ಲಿ ಮಾತನಾಡಿದರು.ಗ್ರಾಮೀಣ ಪ್ರದೇಶದ ಬಡ ಮಹಿಳೆ ಮತ್ತು ಮಕ್ಕಳ ಆರೋಗ್ಯ ಸಂರಕ್ಷಣೆ, ಸಂತಾನೋತ್ಪತ್ತಿ, ಕುಟುಂಬ ಯೋಜನೆ ಸೇವೆ ಮತ್ತು ಶಿಕ್ಷಣ, ತರಬೇತಿ ನೀಡುವುದು ಯೋಜನೆ ಪ್ರಮುಖ ಉದ್ದೇಶವಾಗಿದೆ. ಈಗಾಗಲೇ ತಾಲ್ಲೂಕಿನ ಜಮಗಿ ಗ್ರಾಮದಲ್ಲಿ ಇದರ ಕೇಂದ್ರ ಕಚೇರಿ ತೆರೆಯಲಾಗಿದೆ. ಇದರ ಮೂಲಕ ತಾಲ್ಲೂಕಿನಾದ್ಯಂತ ಜನರಿಗೆ ಸಂಚಾರಿ (ಮೊಬೈಲ್) ಸೇವೆ ನೀಡಲಾಗುತ್ತದೆ.ಸೇವಾ ಸೌಲಭ್ಯ

 ಮಹಿಳೆ ಮತ್ತು ಪುರುಷರ ಸಂತಾನೋತ್ಪತ್ತಿ ಆರೋಗ್ಯ ಕುರಿತು ಮಾಹಿತಿ ಹಾಗೂ ಶಿಕ್ಷಣ ನೀಡುವುದು, ಸುರಕ್ಷಿತ ತಾಯ್ತಿನ ಹಾಗೂ ಶಿಶು ಆರೋಗ್ಯ ರಕ್ಷಣೆಗಾಗಿ ರೋಗ ನಿರೋಧಕ ಲಸಿಕೆ ಹಾಕುವುದು, ಸುರಕ್ಷಿತ ಗರ್ಭಪಾತ, ಬಂಜೆತನ ಹೋಗಲಾಡಿಸುವ ಕುರಿತು ಸಲಹೆ ನೀಡುವುದು, ಲೈಂಗಿಕ ರೋಗದ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಸುಖಿ ಕೌಟುಂಬಿಕ ಜೀವನ, ವಿವಾಹ ಮತ್ತು ಲೈಂಗಿಕತೆ ಕುರಿತು ಆಪ್ತ ಸಲಹೆ ನೀಡುವುದು. ಗರ್ಭ ನಿರೋಧಕ ವಿತರಣೆ, ಕಾಪರ್-ಟಿ ಅಳವಡಿಕೆ, ಕಾಂಡೋಮ್, ಗುಳಿಗೆಗಳ ಉಚಿತ ವಿತರಣೆ, ತುರ್ತು ಗರ್ಭ ನಿರೋಧಕ ಮಾತ್ರೆ ಮತ್ತು ಗರ್ಭ ನಿರೋಧಕ ಚುಚ್ಚುಮದ್ದು ನೀಡುವುದು ಸೇತು ಯೋಜನೆ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿವೆ.ಮೊಬೈಲ್ ಘಟಕ

 ಜನರ ಮನೆ ಬಾಗಿಲಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಮೊಬೈಲ್ ಘಟಕ (ವಾಹನ) ಬಳಕೆ ಮಾಡಲಾಗುತ್ತದೆ. ಇದರಲ್ಲಿ ಒಬ್ಬರು ತಜ್ಞ ವೈದ್ಯ, ನರ್ಸ್ ಮತ್ತು ಇತರೆ ಚಿಕಿತ್ಸಾ ಸೌಲಭ್ಯಗಳಿರುತ್ತವೆ. ಈ ವಾಹನ ಪ್ರತಿ ದಿನ ಮೂರು ಗ್ರಾಮಗಳಿಗೆ ಹೋಗಿ ಅಲ್ಲಿಯ ಜನರಿಗೆ ಸೇವೆ ನೀಡಲಿದೆ. ಯೋಜನೆ ಅನುಷ್ಠಾನಕ್ಕಾಗಿ ಮೂವರು ಸಮುದಾಯ ಸಂಘಟಕರು, ಪ್ರತಿ ಗ್ರಾಮ ಪಂಚಾಯ್ತಿಗೆ ಮೂವರಂತೆ 15 ಜನ ಲಿಂಕವರ್ಕರ್ಸ್‌ ಮತ್ತು 150 ಯುವಕರು ಸಮುದಾಯ ಆಧಾರಿತ ಕೇಂದ್ರ ನಿರ್ವಾಹಕರು ಕೆಲಸ ನಿರ್ವಹಿಸುತ್ತಿದ್ದಾರೆ.ಈ ಎಲ್ಲರೂ ಸೇತು ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಶ್ರಮಿಸುವರು ಎಂದು ಎಫ್‌ಪಿಎಐ ವ್ಯವಸ್ಥಾಪಕ ಶೇಖ್ ಮುಸ್ತಾಕ್ ಅಲಿ ಯೋಜನೆ ಕುರಿತು ಸಮಗ್ರ ಮಾಹಿತಿ ನೀಡಿದರು. ಯೋಜನಾ ಅಧಿಕಾರಿ ಶ್ರೀನಿವಾಸ ಬಿರಾದಾರ, ಸಮುದಾಯ ಸಂಘಟಕ ರಾಜಕುಮಾರ ಬಿರಾದಾರ, ವಿಜಯಕುಮಾರ ಇತರರು ಸಭೆಯಲ್ಲಿ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry