ಮಹಿಷಮ್ಮ ಬೆಟ್ಟದಲ್ಲೊಂದು ವಿಸ್ಮಯ!

7

ಮಹಿಷಮ್ಮ ಬೆಟ್ಟದಲ್ಲೊಂದು ವಿಸ್ಮಯ!

Published:
Updated:
ಮಹಿಷಮ್ಮ ಬೆಟ್ಟದಲ್ಲೊಂದು ವಿಸ್ಮಯ!

ಚಿಂಚೋಳಿ: `ತಾಲ್ಲೂಕಿನ ಕೊಂಚಾವರಂ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿರುವ ಸೋಮಲಿಂಗದಳ್ಳಿ ಕಾಡಿಗೆ ಹೊಂದಿಕೊಂಡ ಮಹಿಷಮ್ಮನ ಗುಡಿ ಹತ್ತಿರದ `ತಮಲನಲೊದ್ದಿ~ ಬೆಟ್ಟದಲ್ಲಿ  ನೀರು ಜಿನುಗುತ್ತಿದ್ದು, ಅಲ್ಲಿ ಸಾಕ್ಷಾತ್ `ಗಂಗೆ~ ಅವತರಿಸಿದ್ದಾಳೆ ಎಂದು ಭಾವಿಸಿರುವ ಆಸ್ತಿಕ ಜನರು ಅದನ್ನು ನೋಡಲು ಧಾವಿಸಿ ಬರುತ್ತಿದ್ದಾರೆ.ಪ್ರಸಕ್ತ ವರ್ಷ ಬೇಸಿಗೆಯ ಬೇಗೆ ಹೆಚ್ಚಾಗಿ ಬರಗಾಲ ಕಾಣಿಸಿಕೊಂಡಿದೆ. ಅಂತರ್ಜಲ ಪಾತಾಳಕ್ಕಿಳಿದಿದೆ. ನದಿ, ತೊರೆ, ಬಾವಿ ಕೆರೆ ಕುಂಟೆಗಳು ಬತ್ತಿವೆ. ಆದರೂ ಸಮುದ್ರ ಮಟ್ಟದಿಂದ ಸುಮಾರು 472 ಮೀಟರ್ ಎತ್ತರದಲ್ಲಿರುವ ಬೆಟ್ಟದಿಂದ ನೀರು ಒಸರುತ್ತಿರುವುದು ಜನರಲ್ಲಿ ಸೋಜಿಗವನ್ನುಂಟು ಮಾಡಿದೆ.ಸೋಮಲಿಂಗದಳ್ಳಿ ಭೈರಂಪಳ್ಳಿ (ಬಂಡಿ ದಾರಿ) ಮಾರ್ಗದಿಂದ ಈಶಾನ್ಯ ದಿಕ್ಕಿಗೆ ಕಾಡು ಪ್ರವೇಶಿಸಿ ಒಂದುವರೆ ಕಿ.ಮೀ. ಕ್ರಮಿಸಿದರೆ ಮಹಿಷಮ್ಮನ ಗುಡಿಯ ಪ್ರದೇಶದ ತಮಲನಲೊದ್ದಿ ಬೆಟ್ಟ ಕಾಣಸಿಗುತ್ತದೆ. ಬೆಟ್ಟದ ಮಧ್ಯ ಭಾಗದಲ್ಲಿ ಸುಮಾರು ಒಂದು ನೂರು ಅಡಿ ಸುತ್ತಳತೆಯಲ್ಲಿ ಹತ್ತಾರು ಕಡೆಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ನೀರಿನ ಒರತೆ ಕಾಣಿಸಿಕೊಂಡು ಜನರಲ್ಲಿ ಕುತೂಹಲ ಮೂಡಿಸಿದೆ.`ಗಂಗೆ~ ಅವತರಿಸಿದ ಸುದ್ದಿ ತಿಳಿದು ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಬಂದು ನೋಡುತ್ತಿದ್ದಾರೆ. `ನಾನು ಕಳೆದ ಎಳ್ಳ ಅಮಾವಾಸ್ಯೆಗೆ ಇಲ್ಲಿಗೆ ಬಂದಿದ್ದೆ. ಆಗ ತೊರೆಯಲ್ಲಿ ಹನಿ ನೀರು ಇರಲಿಲ್ಲ. ಆದರೆ ಈಗ ತೊರೆಯಲ್ಲಿ ನೀರು ಹರಿಯುತ್ತಿದೆ.  ಎಲ್ಲಿಂದ ಬರುತ್ತಿದೆ? ಎಂದು ನೋಡಿದರೆ ಬೆಟ್ಟದ ಅನೇಕ ಕಡೆಗಳಿಂದ ನೀರು ಜಿನುಗುತ್ತಿರುವುದು ಕಂಡಿತು~ ಎನ್ನುತ್ತಾರೆ ಸೋಮಲಿಂಗದಳ್ಳಿ ನಿವಾಸಿ ನರಸಪ್ಪ ಗುಮ್ಮೇದು. `ಆಗಾಗ ಕುರಿ ಮೇಯಿಸಲು ಬಂದರೂ ಇಲ್ಲಿ ನೀರಿರಲಿಲ್ಲ. ಪ್ರಸಕ್ತ ಬೇಸಿಗೆಯಲ್ಲಿ ಇಲ್ಲಿ ಮಳೆಯೂ ಸುರಿದಿಲ್ಲ ಹೀಗಿದ್ದರೂ ಈಗ ಬೆಟ್ಟದಿಂದ ತಾನಾಗಿಯೇ ನೀರು ಒಸರುತ್ತಿರುವುದು ಕಂಡು ನಮಗೆ ಅಚ್ಚರಿಯಾಗಿದೆ~ ಎಂದು ಕುರಿಗಾರರು ಹೇಳುತ್ತಾರೆ.ಹತ್ತಿರದ ಮಹಿಷಮ್ಮನ ಗುಡಿ ಬಳಿ ಕೊಳವೆ ಬಾವಿ ಕೊರೆಸಲು ಮುಂದಾದಾಗ, ಅರಣ್ಯ ಇಲಾಖೆಯವರು ಅದಕ್ಕೆ ತಡೆಯೊಡ್ಡಿದ್ದರು. ಆದರೆ ಅದೇ ಮಹಿಷಮ್ಮನ ಪ್ರದೇಶಕ್ಕೆ ಹೊಂದಿಕೊಂಡ ತಮಲನಲೊದ್ದಿ ಬೆಟ್ಟದಲ್ಲಿಯೇ `ಗಂಗೆ~ ಪ್ರತ್ಯಕ್ಷಳಾಗಿದ್ದಾಳೆ.ಈ ನೀರು ಜಿನುಗಿ ತೊರೆ ಸೇರುತ್ತಿದೆ. ಬರಿದಾದ ತೊರೆಯಲ್ಲಿ ಈಗ ಎರಡು ಫರ್ಲಾಂಗ್ ದೂರದವರೆಗೂ ನೀರು ಹರಿಯುತ್ತಿರುವುದು ಕಂಡು ಬಂದಿದೆ.`ಮಳೆಗಾಲದಲ್ಲಿ ಮಾತ್ರ ಇಲ್ಲಿ ನೀರಿನ ಒರತೆ ಕಾಣುತ್ತಿತ್ತು ಆದರೆ ಪ್ರಸಕ್ತ ವರ್ಷ ಕಡು ಬೇಸಿಗೆಯ ಮೇ ತಿಂಗಳಲ್ಲಿ ನೀರು ಜಿನುಗುವ ಮೂಲಕ ನಿಸರ್ಗ ಪವಾಡ ಮೆರೆದಿದೆ. ಇದರಿಂದಾಗಿ ಒಣಗಿದ ಹುಲ್ಲು ಚಿಗುರುತ್ತಿದೆ. ಹೊಸಕಳೆ ಕಾಣುತ್ತಿದೆ. ವನ್ಯ ಜೀವಿಗಳಿಗಿನ್ನು ನೀರಿನ ತಾಪತ್ರಯ ತಪ್ಪಿದಂತೆ. ಜಿನುಗುತ್ತಿರುವ ನೀರು ಸಿಹಿಯಾಗಿದೆ~ ಎಂದು ವಲಯ ಅರಣ್ಯಾಧಿಕಾರಿ ಎಂ.ಎಲ್ ಬಾವಿಕಟ್ಟಿ ತಿಳಿಸಿದರು.

ಉಪವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ, ಹಣಮಂತರಾಯ ಬಿರಾದಾರ ಸೇರಿದಂತೆ ಅನೇಕರು ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಅಲ್ಲಿಗೆ ಹೋಗಬೇಕಾದರೆ ಪ್ರಾದೇಶಿಕ ಅರಣ್ಯ ಇಲಾಖೆಯ ಅನುಮತಿ ಹಾಗೂ ಅವರ ನೆರವು ಅಗತ್ಯವಾಗಿದೆ. ಒಬ್ಬರೆ ಅಲ್ಲಿಗೇ ಹೋಗುವುದು ಅಪಾಯಕಾರಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry