ರಾತ್ರಿ ನಿರಾಶ್ರಿತರಿಗಾಗಿ ತಂಗುದಾಣ

7

ರಾತ್ರಿ ನಿರಾಶ್ರಿತರಿಗಾಗಿ ತಂಗುದಾಣ

Published:
Updated:

ಗುಲ್ಬರ್ಗ: ನಗರವು ದಿನೇ ದಿನೇ ವೇಗದಿಂದ ಬೆಳೆಯುತ್ತಿದೆ. ಜೊತೆಗೆ ವಲಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಹಾಗಾಗಿ ನಿರಾಶ್ರಿತರ ಸಂಖ್ಯೆಯು ಹೆಚ್ಚಾಗುತ್ತಿದೆ ಎಂದು ಮಹಾನಗರ ಪಾಲಿಕೆಯ ಮೇಯರ್ ಸೋಮಶೇಖರ ಮೇಲಿನಮನಿ ತಿಳಿಸಿದರು.ನಗರದ ಟೌನ್‌ಹಾಲ್‌ನಲ್ಲಿ ಮಹಾನಗರ ಪಾಲಿಕೆ ಹಾಗೂ ವಿಶ್ವ ಸೇವಾ ಮಿಷನ್ ಸಹಯೋಗದಲ್ಲಿ ಮಹಾನಗರ ಪಾಲಿಕೆ ಸದಸ್ಯರಿಗೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಸದಸ್ಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಲಸೆ ಬಂದ ನಿರಾಶ್ರಿತರು ರೈಲು ನಿಲ್ದಾಣ, ಬಸ್ ನಿಲ್ದಾಣ ಹಾಗೂ ದೇವಾಲಯ, ಮಸೀದಿಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ತಂಗುತ್ತಿದ್ದಾರೆ. ಅದಕ್ಕಾಗಿ ಮಹಾನಗರ ಪಾಲಿಕೆ ವತಿಯಿಂದ ವಸತಿ ರಹಿತ ನಾಗರಿಕರಿಗೆ ರಾತ್ರಿ ವಸತಿ ವ್ಯವಸ್ಥೆ ಆರಂಭಿಸಲಾಗಿದೆ ಎಂದರು.ಈ ಯೋಜನೆಯು ಸರಿಯಾದ ಫಲಾನುಭವಿಗೆ ತಲುಪಬೇಕು. ಹಾಗಾಗಿ ನಿರಾಶ್ರಿತರನ್ನು ಗುರುತಿಸಿ ವಸತಿ ಕೇಂದ್ರಗಳಿಗೆ ಕರೆತರುವ ಕೆಲಸವನ್ನು ಪಾಲಿಕೆಯ ಅಧಿಕಾರಿಗಳು ಮತ್ತು ಸ್ವಯಂಸೇವಾ ಸಂಸ್ಥೆಯ ಕಾರ್ಯಕರ್ತರು ಪರಿಣಾಮಕಾರಿಯಾಗಿ ನಡೆಸಬೇಕೆಂದು ತಿಳಿಸಿದರು.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಲಾಲ ಅಹ್ಮದ್ ಮಾತನಾಡಿ, ವಸತಿ ರಹಿತ ನಿರಾಶ್ರಿತರಿಗಾಗಿ ನಡೆಯುತ್ತಿರುವ ಈ ಯೋಜನೆಯಲಿ ್ಲಆಹಾರ, ನೀರು, ಆರೋಗ್ಯ ಸೌಲಭ್ಯಗಳಂತಹ ಮೂಲ ಸೌಲಭ್ಯಗಳನ್ನು ನೀಡಿ, ಅವರಿಗೆ ಪುನರ್ವಸತಿಗಳನ್ನು ಕಲ್ಪಿಸಿಕೊಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಕರೆತರಬೇಕು. ಈ ಯೋಜನೆಯ ಯಶಸ್ವಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಪಾತ್ರ ಮುಖ್ಯ ಎಂದು ತಿಳಿಸಿದರು.ಪಾಲಿಕೆ ಮಾಜಿ ಸದಸ್ಯ ಹಣಮಂತ ಗುಡ್ಡಾ ಮಾತನಾಡಿ, 12ನೇ ಶತಮಾನದಿಂದಲೂ ನಿರಾಶ್ರಿತರಿಗಾಗಿ ಸಾರ್ವಜನಿಕ ಸ್ಥಳಗಳಾದ ಮಠ-ಮಾನ್ಯಗಳು, ಮಂದಿರಗಳು, ಯತೀಂಖಾನೆಗಳು, ಮಸೀದಿಗಳಲ್ಲಿ ಮಲಗುವ ಪದ್ದತಿ ರೂಢಿಯಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಜನರಿಗೆ ಒಳ್ಳೆಯ ಮೂಲ ಸೌಲಭ್ಯಗಳನ್ನು ಒದಗಿಸಿಕೊಡುವ ಸಲುವಾಗಿ ಈ ರಾತ್ರಿ ನಿರಾಶ್ರಿತ ಯೋಜನೆ ಪ್ರಾರಂಭಿಸಿರುವುದು ನಿಜಕ್ಕೂ ಪ್ರಶಂಸನಾರ್ಹ ಎಂದು ತಿಳಿಸಿದರು.ಪಾಲಿಕೆಯ ಸಮುದಾಯ ವ್ಯವಹಾರಿಕ ಅಧಿಕಾರಿ ವಿಜಯಲಕ್ಷ್ಮೀ ಪಟ್ಟೇದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಪಾಲಿಕೆಯು ರಾತ್ರಿ ನಿರಾಶ್ರಿತರನ್ನು ಗುರುತಿಸಿ ಸಂಖ್ಯೆಗೆ ಅನುಗುಣವಾಗಿ `ಬರ್ಡ್ಸ್‌ಹಿಲ್~ ಹಾಗೂ `ಆಶ್ರಯಧಾಮ~ ಎಂಬ ಎರಡು ಸಂಸ್ಥೆಗಳನ್ನು ಆಯ್ಕೆ ಮಾಡಿ ತಂಗುದಾಣಗಳನ್ನು ನಡೆಸಲಾಗುತ್ತಿದೆ.ಇಲ್ಲಿ ರಾತ್ರಿ ನಿರಾಶ್ರಿತರಿಗೆ ವಸತಿ, ಆಹಾರ, ನೀರು ಮತ್ತು ಆರೋಗ್ಯ ಸೌಲಭ್ಯ ಮುಂತಾದವುಗಳನ್ನು ಒದಗಿಸಿಕೊಡಲಾಗುತ್ತಿದೆ. ಎರಡು ಸಂಸ್ಥೆಗಳ ಮೇಲ್ವಿಚಾರಣೆಗಳನ್ನು ವಿಶ್ವ ಸೇವಾ ಮಿಷನ್ ಸಂಸ್ಥೆಯು ಲೀಡ್ ಎನ್‌ಜಿಓ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.ವೇದಿಕೆಯ ಮೇಲೆ ಭೀಮರೆಡ್ಡಿ ಪಾಟೀಲ್ ಕುರಕುಂದಾ, ಶಿವಾನಂದ ಪಾಟೀಲ್ ಅಷ್ಟಗಿ, ವಿಶ್ವನಾಥ ಸ್ವಾಮೀಜಿ, ವಿಠ್ಠಲ್ ಹಾದಿಮನಿ ಉಪಸ್ಥಿತರಿದ್ದರು. ದೇವಿಂದ್ರಪ್ಪ ಕಟ್ಟಿಮನಿ, ಜಸ್ವಂತ ಅಗಸ್ಟಿನ್, ಲೋಕೇಶ ಕುಲಕರ್ಣಿ, ಸಂಸ್ಥೆಯ ಪದಾಧಿಕಾರಿಗಳು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಹಾಜರಿದ್ದರು.

ಅಶೋಕ ಕುಮಾರ ನಿಲೂರ ಸ್ವಾಗತಿಸಿದರು. ಗುರುಲಿಂಗಪ್ಪಾ ಪಿ.ಎಚ್. ನಿರೂಪಿಸಿ ವಂದಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry