ಸ್ವಚ್ಛಗೊಂಡ ಸೂಪರ್ ಮಾರ್ಕೆಟ್ ಪ್ರದೇಶ

7

ಸ್ವಚ್ಛಗೊಂಡ ಸೂಪರ್ ಮಾರ್ಕೆಟ್ ಪ್ರದೇಶ

Published:
Updated:

ಗುಲ್ಬರ್ಗ: ನಗರದ ಹೃದಯ ಭಾಗದಲ್ಲಿರುವ ಸೂಪರ್ ಮಾರ್ಕೆಟ್ ರಸ್ತೆಗಳು ಶುಕ್ರವಾರ  ಕಸದ ರಾಶಿಯಿಂದ ಮುಕ್ತಿ ಹೊಂದುವ ಮೂಲಕ ಸಂಪೂರ್ಣ ಸ್ವಚ್ಛಗೊಂಡಿರುವುದು ಕಂಡು ಬಂದಿತು.“ಸೂಪರ್ ಮಾರ್ಕೆಟ್‌ನ `ನರಕ” ದರ್ಶನ ಎಂಬ ತಲೆ ಬರಹದ ಅಡಿಯಲ್ಲಿ ಮೇ 25ರ `ಪ್ರಜಾವಾಣಿ~ ಸಂಚಿಕೆಯಲ್ಲಿ ಪ್ರಕಟಗೊಂಡ ಸಚಿತ್ರ ವರದಿಗೆ ಸ್ಪಂದಿಸಿದ ಮಹಾನಗರ ಪಾಲಿಕೆ ಮೇಯರ್ ಸೋಮಶೇಖರ ಮೇಲಿನಮನಿ ಅವರು ಸಂಬಂಧಿಸಿದ ನೈರ್ಮಲ್ಯ ಅಧಿಕಾರಿಗೆ ಸೂಚಿಸಿ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡರು.ಶುಕ್ರವಾರ ಬೆಳಿಗ್ಗೆಯಿಂದಲೇ ಕಾರ್ಯಪ್ರವೃತ್ತರಾದ ಪಾಲಿಕೆ ಸಿಬ್ಬಂದಿ ಹಾಗೂ ಕಾರ್ಮಿಕರು ರಸ್ತೆ ಹಾಗೂ ಅಲ್ಲಲ್ಲಿ ಬಿದ್ದಿದ್ದ ಕಸದ ಕೊಂಪೆಯನ್ನು ಎತ್ತಿ ಹಾಕಿದರು.ಸ್ವತಃ ಮೇಯರ್ ಅವರು ಖುದ್ದಾಗಿ ಸೂಪರ್ ಮಾರ್ಕೆಟ್‌ನಲ್ಲಿನ ಮಲಿನಗೊಂಡ ಸ್ಥಳಗಳಿಗೆ ಭೇಟಿ ನೀಡಿ ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಸ್ವಚ್ಛಗೊಳಿಸುವಂತೆ ಕ್ರಮ ಜರುಗಿಸಿದರು.ಅತ್ಯಂತ ಜನನಿಬಿಡ ಪ್ರದೇಶವಾದ ಸೂಪರ್ ಮಾರ್ಕೆಟ್ ಸುತ್ತಮುತ್ತ ಕಸದ ರಾಶಿ ತುಂಬಿಕೊಂಡು ಸಾಕ್ಷಾತ್ `ನರಕ~ ದರ್ಶನ ಮಾಡಿದಂತಾಗುತ್ತದೆ ಎಂದು ಗುರುವಾರದ ಸಂಚಿಕೆಯಲ್ಲಿ ಬರೆಯಲಾಗಿದ್ದ ವರದಿಗೆ ಸ್ಪಂದಿಸಿದ ಮಹಾನಗರ ಪಾಲಿಕೆ ಕ್ರಮಕ್ಕೆ ಅಲ್ಲಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.ಮಾಧ್ಯಮಗಳಲ್ಲಿ ಬೆಳಕು ಕಾಣುವ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ಮೇಯರ್ ಸೋಮಶೇಖರ ಮೇಲಿನಮನಿ ಆಡಳಿತದ ಕ್ರಮದಿಂದಾಗಿ ನಗರದ ವಿವಿಧ ಪ್ರದೇಶಗಳು ಸ್ವಚ್ಛಗೊಳ್ಳುತ್ತಿರುವುದು ಸಮಾಧಾನದ ಸಂಗತಿ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂದಿತು.ಮೇಯರ್ ಮನವಿ: ಸಾರ್ವಜನಿಕರು ತಮ್ಮ ಮನೆಯ ಕಸವನ್ನು ಎಲ್ಲೆಂದರಲ್ಲಿ ಚೆಲ್ಲದೆ ಸಮೀಪದ ಕಂಟೇನರ್‌ನಲ್ಲಿ ಹಾಕಬೇಕು. ಮಾರ್ಕೆಟ್ ಪ್ರದೇಶದ ಹಣ್ಣಿನ ವ್ಯಾಪಾರಿಗಳು ಸಹ ಕೊಳೆತ ಹಣ್ಣುಗಳನ್ನು ಕಂಟೇನರ್‌ನಲ್ಲಿಯೇ ಹಾಕುವಂತೆ ಮನವಿ ಮಾಡಿದ್ದಾರೆ.ಸರ್ಕಾರದಿಂದ ಉದ್ದನೆಯ ಟ್ರಾಲಿಯುಳ್ಳ ವಿಶೇಷ ವಾಹನವೊಂದು ತರಿಸಿಕೊಳ್ಳಲಾಗಿದ್ದು, ಈಶಾನ್ಯ ವಲಯ ಪದವೀಧರರ ಚುನಾವಣೆ ಮುಗಿದ ನಂತರ ಆ ವಾಹನವನ್ನು ಬಳಸಿ  ನಗರದ ಸ್ವಚ್ಛತೆ ಕಾಪಾಡಲಾಗುವುದು ಎಂದು ಮೇಯರ್ ಸೋಮಶೇಖರ ಮೇಲಿನಮನಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry