ಗುರುವಾರ , ಮೇ 28, 2020
27 °C

ಸೋಲಿಗೆ ಪಕ್ಷದ ತಾಲ್ಲೂಕಿನ ಮುಖಂಡರೇ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಆಳಂದ ತಾಲ್ಲೂಕಿನ ತಡಕಲ್ ಜಿಲ್ಲಾ ಪಂಚಾಯಿತಿ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನಗೆ ತಾಲ್ಲೂಕಿನ ಯಾವ ಮುಖಂಡರೂ ಬೆಂಬಲ ವ್ಯಕ್ತಪಡಿಸಿಲ್ಲ. ನನ್ನ ಅಪಹರಣಕ್ಕೂ ಪರೋಕ್ಷವಾಗಿ ಅವರೇ ಕಾರಣ ಎಂದು ಚಂದ್ರಕಾಂತ ಗುರುಲಿಂಗಪ್ಪ ಮುನ್ನೋಳಿ ಆರೋಪಿಸಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಹೇಳಿದ್ದಿಷ್ಟು;  ಬಿಜೆಪಿ ವತಿಯಿಂದ ನಾನು ಟಿಕೆಟ್ ಪಡೆದಿರುವುದರಿಂದ ಅಲ್ಲಿನ ಮುಖಂಡರಿಗೆ ನನ್ನ ಬಗ್ಗೆ ಮೊದಲೇ ಅಸಮಾಧಾನವಿತ್ತು. ಹೀಗಾಗಿ ಗಿರೀಶ ಮಟ್ಟೆಣ್ಣವರ್, ಪವಾಡಶೆಟ್ಟಿ, ವಿರೂಪಾಕ್ಷಪ್ಪ ರುದ್ರವಾಡಿ ಮುಂತಾದ ಮುಖಂಡರು ನನ್ನ ಪರವಾಗಿ ಪ್ರಚಾರ ಮಾಡಲೇ ಇಲ್ಲ. ಡಿ. 28ರಂದು ಪಕ್ಷದ ತಾ.ಪಂ. ಅಭ್ಯರ್ಥಿ, ಅಳಿಯ ಬಸವರಾಜ ಹಾಗೂ ನಾನು ಸೇರಿ ಆಳಂದ ಪಟ್ಟಣಕ್ಕೆ ಬಂದಿದ್ದಾಗ, ಬಿಜೆಪಿ ಧ್ವಜ ಹೊಂದಿದ್ದ ಟವೆರಾ ವಾಹನದಲ್ಲಿನ ಮೂರ್ನಾಲ್ಕು ಜನ ಸೇರಿ ನನ್ನನ್ನು ಯಾಮಾರಿಸಿ ಚಾಕು, ಪಿಸ್ತೂಲ್ ತೋರಿಸಿ, ನಿನಗೆ ನಾವು ಏನೂ ಮಾಡುವುದಿಲ್ಲ. ಆದರೆ ನೀನು ಮಾತ್ರ ಜ.1ರವರೆಗೆ ನಮ್ಮ ಜೊತೆ ಸುಮ್ಮನೆ ಇರಬೇಕು ಎಂದು ತಾಕೀತು ಮಾಡಿದರು.ಅದರಂತೆ ಕಾಡು, ಮೇಡು ಸುತ್ತಾಡಿಸಿ 29ರಂದು ಒಂದು ಗೋದಾಮಿನಲ್ಲಿ ಕೂಡಿ ಹಾಕಿದರು. ಮಧ್ಯಾಹ್ನ ಎದ್ದು ನೋಡಿದರೆ ಅಲ್ಲಿ ಯಾರೂ ಇರಲಿಲ್ಲ. ಸ್ವಿಚ್ ಆಫ್ ಮಾಡಿಟ್ಟಿದ್ದ ನನ್ನ ಮೊಬೈಲ್ ತೆಗೆದು ಮನೆಯವರೊಂದಿಗೆ ಮಾತನಾಡಿದ್ದು ಕೇಳಿಸಿಕೊಂಡ ಅವರು, ಮೊಬೈಲ್‌ನಲ್ಲಿನ ಸಿಮ್ ಕಿತ್ತು ಹಾಕಿದರು. ಕೆ.ಎ. 32-ಎಂ-2727 ಎಂದಿದ್ದ ವಾಹನ ಸಂಖ್ಯೆ ಅಲ್ಲಿಗೆ ಬಂದಿದ್ದಾಗ ಎಪಿ-20-ಎಂ-2727 ಆಗಿತ್ತು. ಮರುದಿನ ಮೂತ್ರ ವಿಸರ್ಜನೆ ನೆಪ ಹೇಳಿ ಅವರಿಂದ ತಪ್ಪಿಸಿಕೊಂಡು ಓಡೋಡಿ ಬಂದೆ. ಮಹಾರಾಷ್ಟ್ರದ ಯಾವತಮಲ್ ಜಿಲ್ಲೆಯ ಪಾಂಡರಕವಾಡದ ಬಿಜೆಪಿ ಮುಖಂಡರು ನನ್ನನ್ನು ಜ.1ರಂದು ಆಳಂದಗೆ ಕರೆದು ತರುವಲ್ಲಿ ಸಹಾಯ ಮಾಡಿದರು.ಆದರೆ ಆಳಂದ ಪೊಲೀಸರು ನನ್ನನ್ನು ಬಿಡುಗಡೆ ಮಾಡಲು ಮಧ್ಯಾಹ್ನದವರೆಗೆ ಸಮಯ ತೆಗೆದುಕೊಂಡರು. ವಾಹನ ಹಾಗೂ ವಾಹನದಲ್ಲಿದ್ದ ಆರು ವ್ಯಕ್ತಿಗಳಲ್ಲಿ ಇಬ್ಬರನ್ನು ಚೆನ್ನಾಗಿ ಗುರುತಿಸುತ್ತೇನೆ. ಆದ್ದರಿಂದ ಎಸ್ಪಿ ಸಾಹೇಬರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಪಕ್ಷದ ಸ್ಥಳೀಯ ಮುಖಂಡರ ಈ ವರ್ತನೆ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರಿಗೆ ದೂರು ಸಲ್ಲಿಸುವೆ ಎಂದರು.ಹೆಣ್ಣುಮಕ್ಕಳ ಸಮಸ್ಯೆ: 8ರಂದು ತರಬೇತಿ

ಗುಲ್ಬರ್ಗ: ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಶಿಕ್ಷಕರಿಗಾಗಿ ಒಂದು ದಿನದ ತರಬೇತಿಯನ್ನು ಜಿಲ್ಲಾ ಪಂಚಾಯಿತಿ ಹಳೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಸ್.ಪರಮೇಶ ತಿಳಿಸಿದ್ದಾರೆ. ಜ. 8ರಂದು ಅಫಜಲಪುರ,ಆಳಂದ, ಚಿಂಚೋಳಿ ಹಾಗೂ ಚಿತ್ತಾಪುರ, ಜ.9 ರಂದು ಗುಲ್ಬರ್ಗ ಉತ್ತರ, ಗುಲ್ಬರ್ಗ ದಕ್ಷಿಣ, ಜೇವರ್ಗಿ ಹಾಗೂ ಸೇಡಂ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗುವುದು.ನಿಗದಿಪಡಿಸಿದ ದಿನಾಂಕದಂದು ಎಲ್ಲ ಸರ್ಕಾರಿ ಪ್ರೌಢಶಾಲೆಗಳ (ಗಂಡು ಮಕ್ಕಳ ಶಾಲೆ ಹೊರತುಪಡಿಸಿ) ಮುಖ್ಯಸ್ಥರು ಒಬ್ಬ ಮಹಿಳಾ ಶಿಕ್ಷಕಿಯನ್ನು (ಸರ್ಕಾರಿ ಪ್ರೌಢ ಶಾಲೆಯಲ್ಲಿ  ಮಹಿಳಾ ಶಿಕ್ಷಕಿಯರು  ಇರದೆ ಇದ್ದಲ್ಲಿ ಆ ಊರಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಒಬ್ಬ ಮಹಿಳಾ ಶಿಕ್ಷಕಿಯನ್ನು) ತರಬೇತಿಗೆ ನಿಯೋಜಿ ಸಲು ತಿಳಿಸಲಾಗಿದೆ. ನಿಯೋಜ ನೆಗೊಂಡ ಶಿಕ್ಷಕಿಯರು ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕು ಇಲ್ಲದಿದ್ದಲ್ಲಿ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಉಪನಿರ್ದೇಶಕರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.