ಸೋಮವಾರ, ಮೇ 23, 2022
28 °C

ಔರಾದ: ಕೃಷಿ ಕಚೇರಿ ಎದುರು ಚರಂಡಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್:  ಪಟ್ಟಣದ ವಾರ್ಡ್ 14ರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರಿನ ಖಾಲಿ ನಿವೇಶನದಲ್ಲಿ ಚರಂಡಿ ನೀರು ನಿಂತು ಅಲ್ಲಿಯ ಜನರ ನೆಮ್ಮದಿಗೆ ಭಂಗ ತಂದಿದೆ.ತಾಲ್ಲೂಕು ಕೃಷಿ ಕಚೇರಿ ಎದುರಲ್ಲೇ ಚರಂಡಿ ನೀರಿನ ಹೊಳೆ ನಿಂತಿರುವುದು ಇಲ್ಲಿ ಬಂದು ಹೋಗುವ ಸಾರ್ವಜನಿಕರಿಗೆ ಅಸ್ವಚ್ಛತೆ ಮತ್ತು ಗಬ್ಬು ವಾಸನೆ ದರ್ಶನವಾಗುತ್ತಿದೆ. ಸಾಕಷ್ಟು ರೈತರು ಈ ಕುರಿತು ಕೃಷಿ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಕಚೇರಿ ಸುತ್ತಲೂ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿಯವರಿಗೆ ಕೇಳಿಕೊಳ್ಳಲಾಗಿದೆ. ಆದಾಗ್ಯೂ ಪರಿಹಾರ ಸಿಕ್ಕಿಲ್ಲ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.ಖಾಲಿ ನಿವೇಶನದಲ್ಲಿ ಸುತ್ತಲಿನ ಮನೆಗಳ ಬಚ್ಚಲ ನೀರು ನಿಲ್ಲುತ್ತಿದೆ. ಈ ನೀರು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದರೆ ಹೊಳೆಯಾಗುತ್ತಿದೆ. ಸುತ್ತಲಿನ ಮನೆಗಳಿಗೂ ನುಗ್ಗುತ್ತಿದೆ. ಇದರಿಂದಾಗಿ ಶಾಲೆಗೆ ಹೋಗುವ ಮಕ್ಕಳು ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ ಎಂದು ಇಲ್ಲಿಯ ನಿವಾಸಿಗಳು ಅಲವತ್ತುಕೊಂಡಿದ್ದಾರೆ.ಚಂಡಿ ನೀರು ಮತ್ತು ಕಸ ಇಲ್ಲಿ ಸಂಗ್ರಹವಾಗುತ್ತಿರುವ ಕಾರಣ ನಾಯಿ ಮತ್ತು ಹಂದಿಗಳ ಕಾಟ ಜಾಸ್ತಿಯಾಗಿದೆ. ಮಕ್ಕಳಿಗೆ ಹೊರಗೆ ಬಿಡಲು ನಮಗೆ ಆತಂಕವಾಗುತ್ತಿದೆ ಎಂದು ಪಾಲಕರು ಗೋಳು ತೋಡಿಕೊಂಡಿದ್ದಾರೆ. ಈ ಅಸ್ವಚ್ಛ ಪರಿಸರದಿಂದಾಗಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಈಗ ಮಳೆಗಾಲ ಇರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದ್ದು, ಡೆಂಗ್ಯೂ, ಕಾಲರಾ ಭೀತಿಯಿಂದ ಇಲ್ಲಿಯ ಜನ ಆತಂಕಗೊಂಡಿದ್ದಾರೆ.ಇಲ್ಲಿಯ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಈಚೆಗೆ ಪಟ್ಟಣ ಪಂಚಾಯಿತಿ ನೌಕರರು ಸ್ಥಳ ಪರಿಶೀಲನೆ ಮಾಡಿ ಹೋಗಿದ್ದಾರೆ. ಆದರೆ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ. ಈಗ ಮಳೆಗಾಲ ಇರುವುದರಿಂದ ನಿಂತ ನೀರು ಮುಂದಕ್ಕೆ ಹೋಗಲು ತಾತ್ಕಾಲಿಕ ವ್ಯವಸ್ಥೆಯಾದರೂ ಮಾಡುವಂತೆ ಇಲ್ಲಿಯ ನಿವಾಸಿಗಳು ಪಟ್ಟಣ ಪಂಚಾಯ್ತಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.