ಸ್ವಚ್ಛ ಭಾರತ ಅಭಿಯಾನ: ರಾಜ್ಯದಲ್ಲಿ ಶೇ 99ರಷ್ಟು ಪ್ರಗತಿ– ಐಯ್ಯರ್ ಪ್ರಶಂಸೆ

7
ಸ್ವಚ್ಛ ಭಾರತ ಮಿಷನ್‌ನಡಿ ಸಾಧಿಸಿರುವ ಪ್ರಗತಿ ಹಾಗೂ ಕುಡಿಯುವ ನೀರು ಕಾಮಗಾರಿಗಳ ಪರಿಶೀಲನೆ

ಸ್ವಚ್ಛ ಭಾರತ ಅಭಿಯಾನ: ರಾಜ್ಯದಲ್ಲಿ ಶೇ 99ರಷ್ಟು ಪ್ರಗತಿ– ಐಯ್ಯರ್ ಪ್ರಶಂಸೆ

Published:
Updated:
Deccan Herald

ವಿಜಯಪುರ: ಸ್ವಚ್ಛ ಭಾರತ ಅಭಿಯಾನದಡಿ ಕರ್ನಾಟಕ ರಾಜ್ಯ ಗಣನೀಯ ಪ್ರಮಾಣದಲ್ಲಿ ಸಾಧನೆ ಮಾಡಿರುವುದಕ್ಕೆ ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಕಾರ್ಯದರ್ಶಿ ಪರಮೇಶ್ವರ ಐಯ್ಯರ್‌ ಪ್ರಶಂಸೆ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಸ್ವಚ್ಛ ಭಾರತ ಮಿಷನ್‌ನಡಿ ಸಾಧಿಸಿರುವ ಪ್ರಗತಿ ಹಾಗೂ ಕುಡಿಯುವ ನೀರು ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ಕರ್ನಾಟಕ ರಾಜ್ಯದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಶೇ 99ರಷ್ಟು ಪ್ರಗತಿ ಸಾಧಿಸಿದೆ ಎಂದರು.

ರಾಜ್ಯದ ರಾಯಚೂರು, ಬೀದರ್‌, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಇನ್ನೂ ಚುರುಕಾಗಿ ಶೌಚಾಲಯ ನಿರ್ಮಾಣ ಕಾರ್ಯ ಕೈಗೊಳ್ಳಬೇಕು. ಬಾಕಿ ಇರುವ ಶೌಚಾಲಯಗಳನ್ನು ಅಕ್ಟೋಬರ್ ಅಂತ್ಯದೊಳಗೆ ನಿರ್ಮಿಸಿ ಎಲ್ಲ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳಬೇಕು. ಘೋಷಿಸುವ ಮುನ್ನ ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು ಸೂಚನೆ ನೀಡಿದರು.

ಗ್ರಾಮಗಳಲ್ಲಿ ಸ್ವಚ್ಛತೆ ಹಾಗೂ ಶೌಚಾಲಯ ನಿರ್ಮಾಣಕ್ಕಾಗಿ ಸೂಕ್ತ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸಲು ಸ್ವಚ್ಛ ಗ್ರಾಹಿ ಕಾರ್ಯಕರ್ತರನ್ನು ತರಬೇತುಗೊಳಿಸಿ ಸೂಕ್ತ ಅರಿವು ಕಾರ್ಯವನ್ನು ಕೈಗೊಳ್ಳಬೇಕು. ಅತ್ಯುತ್ತಮ ಸಾಧನೆ ಮಾಡಿರುವವರ ಕುರಿತು ಯಶಸ್ವಿ ಯಶೋಗಾತೆಗಳನ್ನು ಪ್ರಚುರಪಡಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಈಗ ನಿರ್ಮಾಣಗೊಳ್ಳುತ್ತಿರುವ ಶೌಚಾಲಯಗಳ ಗುರಿ ಸಾಧನೆ ನಂತರ ಹೆಚ್ಚುವರಿಯಾಗಿ 4.5 ಲಕ್ಷ ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಡಬೇಕಾಗಿದ್ದು, ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ. 4 ವರ್ಷಗಳಲ್ಲಿ ಜನಾಂದೋಲನ, ರಾಜಕೀಯ ನಾಯಕತ್ವ, ಸರ್ಕಾರೇತರ ಸಂಘ-ಸಂಸ್ಥೆಗಳು, ಜನರ ಸಹಭಾಗಿತ್ವದೊಂದಿಗೆ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ದೇಶದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಗಣನೀಯ ಪ್ರಮಾಣದಲ್ಲಿ ಶೌಚಾಲಯಗಳು ನಿರ್ಮಾಣಗೊಂಡಿದ್ದರಿಂದ ಸುಮಾರು 3ಲಕ್ಷಕ್ಕೂ ಹೆಚ್ಚು ಜನರ ಜೀವಹಾನಿ ತಪ್ಪಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದೆ. ಸ್ವಚ್ಛ ಭಾರತ ಅಭಿಯಾನ ಯೋಜನೆ ಜಾರಿಯಿಂದ ಮಹಿಳೆಯರ ಗೌರವ ಹೆಚ್ಚಿಸುವ ಜತೆಗೆ ರಕ್ಷಣೆಗೂ ನೆರವಾಗಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ ಸೂಕ್ತ ಪ್ರಗತಿ ಸಾಧಿಸಬೇಕು. ಕೊಳವೆ ನೀರು ಸರಬರಾಜು ಯೋಜನೆಯಲ್ಲಿ ಹಾಗೂ ಮನೆ-ಮನೆಗೆ ನೀರು ಸರಬರಾಜು ಯೋಜನೆಯಡಿ ಶೇ 100 ರಷ್ಟು ಪ್ರಗತಿ ಸಾಧಿಸಬೇಕು. ಸಿಎಸ್ಆರ್ ಸಂಸ್ಥೆಗಳ ಸಹಯೋಗದೊಂದಿಗೆ ಅಂತರಜಲ ಹೆಚ್ಚಳ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು. ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಅಶುದ್ಧ ನೀರಿನ ರಾಸಾಯನಿಕ ಹಾಗೂ ಬಯಾಲಾಜಿಕಲ್ ಪರೀಕ್ಷೆ ನಡೆಸುವ ಕಾರ್ಯ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಮೇಟಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ರಾಜ್ಯ ಆರ್‌ಡಿಪಿಆರ್ ಹೆಚ್ಚುವರಿ ಕಾರ್ಯದರ್ಶಿ ಎಲ್.ಅತೀಕ್‌, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಧಾ, ಮುಖ್ಯ ಅಧೀಕ್ಷಕ ಎಂಜಿನಿಯರ್ ಪ್ರಕಾಶ, ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್‌ ಕಿಶೋರ್ ಸುರಳಕರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !