ಬಡವರ ನಿವಾರಣೆಯ ಸಂಚು!

7
‘ಆಧಾರ್’ ಅಲ್ಲೋಲಕಲ್ಲೋಲವನ್ನೇ ಉಂಟುಮಾಡಿದ್ದು ಸುದ್ದಿಯೇ ಆಗಿಲ್ಲ

ಬಡವರ ನಿವಾರಣೆಯ ಸಂಚು!

Published:
Updated:
Deccan Herald

ಸುಪ್ರೀಂ ಕೋರ್ಟಿನ ಇತ್ತೀಚಿನ ಮೂರು ತೀರ್ಪುಗಳು ಇಡೀ ದೇಶದ ಗಮನ ಸೆಳೆದವು. ಅತ್ಯಂತ ಕುತೂಹಲದಿಂದ ಕಾದು ನೋಡುತ್ತಿದ್ದ ಮಹತ್ವದ ತೀರ್ಪೊಂದು ಮೊದಲ ದಿನ ಹೊರಬಿತ್ತು. ಅದೇ ಆಧಾರ್‌ ಕಾರ್ಡಿಗೆ ಸಂಬಂಧಪಟ್ಟ ತೀರ್ಪು. ಮರುದಿನ ಬಂದಿದ್ದು ಶಬರಿಮಲೆ
ಮತ್ತು ಅನೈತಿಕ ಸಂಬಂಧಗಳ ಬಗೆಗಿನ ತೀರ್ಪುಗಳು.

ಮೊದಲ ದಿನದ್ದು ನಮ್ಮ ಗುರುತಿಗೆ ಸಂಬಂಧಪಟ್ಟ, ನಮ್ಮ ಗುರುತಿನ ಮೇಲೆ ದೇಶದೊಳಗೆ ಸಿಗಬೇಕಾದ, ಸಿಗಲಾರದ ಸೌಲಭ್ಯಗಳ ಬಗೆಗಿನ ತೀರ್ಪು. ಅದರಲ್ಲೂ ಬಡವರಿಗೆ ಬದುಕಲು ಬೇಕಾದ ಆಹಾರ, ಉದ್ಯೋಗ, ಪಿಂಚಣಿಗಳ ಹಕ್ಕನ್ನೇ ಮೊಟಕುಗೊಳಿಸಬಹುದಾದ ಆಧಾರ್ ಕಾರ್ಡುಗಳ ಮೇಲಿನ ತೀರ್ಪು. ಎರಡು ಮತ್ತು ಮೂರನೆಯದ್ದು ಬದುಕಿದ್ದರೆ, ಹೊಟ್ಟೆ ತುಂಬ ಉಣ್ಣಲು ಇದ್ದಾಗ ಸಮಯವನ್ನು ತಳ್ಳಲು, ಉಂಡಿದ್ದನ್ನು ಅರಗಿಸಿಕೊಳ್ಳಲು ನಾವು ಆಚರಿಸುವ ಧರ್ಮ, ಕಾಮ, ಮೋಕ್ಷಕ್ಕೆ ಸಂಬಂಧಿಸಿದ್ದು.

ಇವೆರಡರಲ್ಲಿ ಯಾವುದು ಮುಖ್ಯ ಎಂದು ಯಾರನ್ನು ಕೇಳಿದರೂ ಥಟ್ಟಂತ ಉತ್ತರಿಸಬಹುದು, ಜೀವನಕ್ಕೆ ಮೊದಲ ತೀರ್ಪೇ ಬಹು ಮುಖ್ಯವಾದದ್ದೆಂದು. ಆದರೆ ಬಹುಶಃ ಉಂಡುಟ್ಟವರಿಗೆ ಎರಡನೆಯ, ಮೂರನೆಯ ತೀರ್ಪು ಮುಖ್ಯವೆನಿಸುತ್ತದೇನೋ. ಬಹುಸಂಖ್ಯಾತ ಜನರು ಹಸಿವಿನಿಂದ ಕೂಡಿದ್ದವರೇ ಆದರೂ, ಮಾತನಾಡುವವರು, ಬರೆಯುವವರು, ಓದುವವರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು ಎರಡನೆಯ, ಮೂರನೆಯ ತೀರ್ಪನ್ನು ಮುಖ್ಯ ಎಂದುಕೊಂಡಿರುವ ಅಲ್ಪಸಂಖ್ಯಾತರೇ ಆಗಿದ್ದಾರೆ. ಅಲ್ಪಸಂಖ್ಯಾತರಾಗಿದ್ದರೂ ಅವರ ದನಿ ದೊಡ್ಡದು, ಎಲ್ಲರಿಗೂ ಕೇಳಿಸುವಂಥದ್ದು. ಹಾಗಾಗಿ ಈ ತೀರ್ಪುಗಳ ಬಗ್ಗೆ ಅದೆಷ್ಟು ಚರ್ಚೆ ನಡೆದಿದೆ ಎಂದರೆ ಮೊದಲನೆಯದನ್ನು, ಅದು ಮಾಡಿರುವ ಹಾನಿಯನ್ನು ಎಲ್ಲರೂ ಮರೆತೇಬಿಟ್ಟಿದ್ದಾರೆ.

2015ರಿಂದ 2018ರವರೆಗೆ ದೇಶದಲ್ಲಿ ದಾಖಲಿಸಲಾದ ಹಸಿವಿನ ಸಾವುಗಳನ್ನು ಅಧ್ಯಯನ ಮಾಡಿದಾಗ, ಕಳೆದ 4 ವರ್ಷಗಳಲ್ಲಿ 11 ರಾಜ್ಯಗಳಲ್ಲಿ 61 ಜನ ಹಸಿವಿಗೆ ಬಲಿಯಾದದ್ದು ಬೆಳಕಿಗೆ ಬಂದಿದೆ. ಉತ್ತರದ ಜಾರ್ಖಂಡ್, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನಗಳಂತೂ ‘ಬೀಮಾರು’ ರಾಜ್ಯಗಳೆಂದೇ ಹೆಸರಾಗಿದ್ದು ಅಲ್ಲಿ ರೋಗ, ಹಸಿವಿನ ವಿರುದ್ಧ ಹೋರಾಟ ನಿತ್ಯ. ಆದರೆ ಕರ್ನಾಟಕ, ಮಹಾರಾಷ್ಟ್ರಗಳಂಥ ದಕ್ಷಿಣದ ರಾಜ್ಯಗಳಲ್ಲಿಯೂ ಹಸಿವಿನ ಸಾವು ಹೆಡೆಯೆತ್ತಿದೆ. ಹಸಿದ 119 ದೇಶಗಳಲ್ಲಿ 103ನೇ ಸ್ಥಾನಕ್ಕೇರಿದೆ ಭಾರತ.

ಹಸಿವಿನಿಂದ ಜನ ಹೇಗೆ ಸತ್ತರು? ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾನೂನನ್ನು ಜಾರಿಗೊಳಿಸುವ ಮೊದಲು ಹೊಸ ರೇಷನ್ ಕಾರ್ಡುಗಳನ್ನು ನೀಡುವಾಗ ಒಂದಷ್ಟು ಜನರ ಕಾರ್ಡುಗಳು ಕಾಣೆಯಾದವು. ತಾಲ್ಲೂಕು ಕೇಂದ್ರಕ್ಕೆ ಅಲೆದಾಡಿ ತಮ್ಮ ಅಸ್ತಿತ್ವವನ್ನು,
ಬಡತನವನ್ನು ಸಾಬೀತು ಮಾಡಿದರೂ ಆ ಕುಟುಂಬಗಳಿಗೆ ಕಾರ್ಡುಗಳು ದೊರೆಯದಿದ್ದುದು ಒಂದು ಕಾರಣ. ಕಾರ್ಡುಗಳಿಗೆ ಆಧಾರ್ ಜೋಡಣೆಯಾಗಿಲ್ಲದೆ ಕುಟುಂಬಗಳು ಬಿಟ್ಟು ಹೋಗಿದ್ದು ಇನ್ನೊಂದು ಕಾರಣ. ಸರ್ಕಾರದ ಆಹಾರ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಗಳ ಸೌಲಭ್ಯಗಳನ್ನವಲಂಬಿಸಿರುವವರ ಜೀವನದಲ್ಲಿ ಆಧಾರ್ ಮತ್ತು ಬಯೊಮೆಟ್ರಿಕ್ ಅಲ್ಲೋಲಕಲ್ಲೋಲವನ್ನೇ ಉಂಟುಮಾಡಿದ್ದು, ಅನೇಕರ ಸಾವಿಗೆ ಕಾರಣವಾಗಿರುವುದು ನಮ್ಮ ಮಾಧ್ಯಮಗಳಿಗೆ ದೊಡ್ಡ ವಿಷಯವಾಗಿಲ್ಲದಿರುವುದರಿಂದ ಬಹುತೇಕ ಜನರಿಗದು ತಿಳಿದಿಲ್ಲ.

ಆಧಾರ್ ಜೋಡಣೆ ಮಾಡಿಸಿ ಉದ್ಯೋಗ ಖಾತರಿ ಕೆಲಸ ಪಡೆದವರು, ತಾವು ಮಾಡಿದ ಕೆಲಸಕ್ಕೆ ಕೂಲಿ ಪಡೆಯುವಷ್ಟರಲ್ಲಿ ತಾಂತ್ರಿಕ ದೋಷವುಂಟಾಗಿ ಜೋಡಣೆ ತುಂಡಾಗಿರುತ್ತದೆ. ಬಡ, ದಲಿತ ಉದ್ಯೋಗ ಖಾತರಿ ಕೆಲಸಗಾರರಲ್ಲಿ ಬಹುತೇಕರಿಗೆ ನೇರವಾಗಿ ಖಾತೆಗೆ ಹೋಗುತ್ತಿದ್ದ ಹಣ ಈ ವರ್ಷ ಆಧಾರ್ ಜೋಡಣೆಯ ಕಾರಣದಿಂದ ಎಲ್ಲಿಂದೆಲ್ಲಿಗೋ ಹೋಗಿಬಿಡುತ್ತಿದೆ. ರಾಯಚೂರು ಜಿಲ್ಲೆಯ ಹೊಸಳ್ಳಿಈಜೆ ಪಂಚಾಯಿತಿಯಲ್ಲಿ 25 ಜನರ 13 ದಿನಗಳ ಕೂಲಿಯು ಯಾರ‍್ಯಾರದ್ದೋ ಖಾತೆಗಳಿಗೆ ಹೋಗಿ, ಪಂಚಾಯಿತಿಯು ಇನ್ನೂ 13 ದಿನಗಳ ಹಾಜರಿ ಹಾಕಿ ಕಳೆದುಕೊಂಡಿದ್ದವರಿಗೆ ಅಷ್ಟು ಕೂಲಿಯನ್ನು ಪಾವತಿಸಿತು. 13 ದಿನಗಳ ಕೂಲಿ ನಷ್ಟವಾದದ್ದು ಹೊರಜಗತ್ತಿಗೆ ಸುದ್ದಿಯೆನಿಸಲಿಕ್ಕಿಲ್ಲ. ಆಧಾರ್‌ದಿಂದಾಗಿ ಸಾವಿರಾರು ಗ್ರಾಮೀಣ ಕೂಲಿಕಾರರ ಹಣ ಎಲ್ಲಿಂದೆಲ್ಲಿಗೋ ಹೋಗುತ್ತಿದ್ದರೂ ಎಲ್ಲಿಯೂ ಸುದ್ದಿಯೇ ಆಗಿಲ್ಲ.

ಕೈ ಬೆರಳಚ್ಚು ಸರಿಯಾಗಿ ಮೂಡದಿರುವ ಅಥವಾ ಮಶೀನು ಅದನ್ನು ಗುರುತಿಸದಿರುವ, ಗುರುತಿಸಿದರೂ ಆಧಾರಕ್ಕೆ ಜೋಡಣೆ ಆಗದಿರುವ ಕಾರಣದಿಂದಾಗಿ ಜನರಿಗೆ ಪಿಂಚಣಿಯ ನಿರಾಕರಣೆ ಆಗುತ್ತಿದೆ. ₹ 600ನ್ನೇ ನೆಚ್ಚಿ ಜೀವ ಹಿಡಿದಿಟ್ಟುಕೊಂಡಿರುವ ಮುದುಕರು ಪೋಸ್ಟಾಫೀಸಿಗೆ ಹೋಗಿ ‘ಪಿಂಚಣಿ ಬಂತೇನು?’ ಎಂದು ಕೇಳಿ ಕೇಳಿ ಕೃಶರಾಗುತ್ತಾರೆ. ಹೊಟ್ಟೆಗೆ ಹಿಟ್ಟು ಕೊಳ್ಳಲೂ ಗತಿಯಿಲ್ಲದೆ ಸಾಯುತ್ತಾರೆ. ರಾಜಸ್ಥಾನದ ರಾಜಸಮನಂದ್‍ನ ಚುನ್ನಿದೇವಿ ಸತ್ತದ್ದು ಹೀಗೇ. ‘ವರ್ಷದಿಂದಲೂ ಅವರಿಗೆ ರೇಷನ್ ಸಿಗ್ತಾ ಇಲ್ಲ. ದುಡಿಯಲು ತಾಕತ್ತಿದ್ದಷ್ಟು ದಿನ ದುಡಿದು ತಿಂದರು. ಈಗ ಹೊಟ್ಟೆಗೆ ಯಾರು ಹಾಕಬೇಕು? ನಾವು ನೆರೆಯವರು ಎಷ್ಟು ದಿನ ರೊಟ್ಟಿ ಕೊಟ್ಟೇವು? ನಮಗೂ ದುಡಿದರಷ್ಟೇ ರೊಟ್ಟಿ. ಸ್ವಲ್ಪ ದಿನ ಕೊಟ್ಟು ಮತ್ತೆ ನಮ್ಮ ಜೀವನ ನಾವು ನೋಡಿಕೊಂಡ್ವಿ, ಆ ಮುದುಕಿ ಹೊಟ್ಟೆಗಿಲ್ಲದೆ ಸತ್ತುಹೋದಳು’. ನೆರೆಹೊರೆಯವರು ವಿವರಿಸಿದಾಗ ಹಸಿವಿನ ಭೀಕರತೆ, ಅಸಹಾಯಕತೆಗಳು ನಮ್ಮನ್ನು ಹಿಡಿದು ಅಲುಗಾಡಿಸುತ್ತವೆ.

ಇಂಥ ಉದಾಹರಣೆಗಳು ತೇಲುತ್ತಿರುವ ಮಂಜುಗಡ್ಡೆಯ ತುದಿ ಮಾತ್ರ. ಎಲ್ಲೆಲ್ಲಿ ಜನ ಸಂಘಟನೆಗಳು ಜನರ ಆಹಾರ, ಉದ್ಯೋಗಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿವೆಯೋ ಅಲ್ಲಿಂದ ಮಾತ್ರ ಇಂಥ ಉದಾಹರಣೆಗಳು ಹೊರಬೀಳುತ್ತವೆ. ಆದರೆ ತಕ್ಷಣವೇ ರಾಜ್ಯ ಸರ್ಕಾರದಿಂದ ಇದೇನೂ ಹಸಿವಿನಿಂದಾದ ಸಾವಲ್ಲ ಎಂಬ ಸ್ಪಷ್ಟನೆ ಬಂದುಬಿಡುತ್ತದೆ. ಆಧಾರ್ ಕಾರಣಕ್ಕೆ ಆಹಾ
ರದ ನಿರಾಕರಣೆ ಆಗಬಾರದು ಎಂದು ಹೇಳಿಕೆ ಬರುತ್ತದೆ. ಮನಸ್ಥಿತಿಯಲ್ಲಾಗಲೀ, ನಿಜ ನಿಯಮದಲ್ಲಾಗಲೀ ಬದಲಾವಣೆ ಬಂದಿರುವುದಿಲ್ಲ.

ಆಧಾರ್ ಕೇಸಿನ ಪುರಾವೆಗೆಂದು ಇಂಥ ಸಾವಿರಾರು ಕೇಸ್‍ಗಳನ್ನು ದೇಶದೆಲ್ಲೆಡೆಯಿಂದ ಕೊಡಲಾಗಿತ್ತು. ಹಾಗಿದ್ದೂ ದೇಶದ ಸರ್ವೋಚ್ಚ ನ್ಯಾಯಾಲಯ ಜನರ ಬದುಕಿನ ಹಕ್ಕನ್ನು ಎತ್ತಿಹಿಡಿಯಲಿಲ್ಲ. ಖಾಸಗಿತನದ ಹಕ್ಕನ್ನು ಎತ್ತಿಹಿಡಿದರೂ, ‘ಸರ್ಕಾರಿ ಸೌಲಭ್ಯಗಳಿಗೆ ಆಧಾರ್‌ ಅನ್ನು ಕಡ್ಡಾಯ’ ಮಾಡುವ ಕಾನೂನಿನ 7ನೇ ಪರಿಚ್ಛೇದವನ್ನು ಇರಲಿ ಎನ್ನುವ ಮೂಲಕ ಬದುಕುವ ಮೂಲಭೂತ ಹಕ್ಕನ್ನೇ ನಿರಾಕರಿಸಿತು. ಬ್ಯಾಂಕು, ಮೊಬೈಲ್‍ಗಳಿಗೆ ಆಧಾರ್‌ ಕಡ್ಡಾಯವಲ್ಲ ಎನ್ನುವುದರ ಮೂಲಕ ಮಧ್ಯಮ ವರ್ಗಕ್ಕೆ ನಿರಾಳ ಮಾಡಿ ಅವರು ಶಬರಿಮಲೆ ತೀರ್ಪಿನಲ್ಲಿ ತಲೆಕೆಡಿಸಿಕೊಳ್ಳುತ್ತ ಬದುಕಿನ ಹಕ್ಕು ನಿರಾಕರಣೆ ಆಗಿರುವ ಬಗ್ಗೆ ಚರ್ಚೆಯೇ ಏಳದಂತಾಯಿತು.

ದೇಶದ ಅತ್ಯುನ್ನತ ಕೋರ್ಟಿನ ಆದೇಶದ ನಂತರವೂ ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಪ್ರತಿರೋಧ, ತಡೆ. ಧರ್ಮದ, ಆಚರಣೆಗಳ ಚರ್ಚೆಯಲ್ಲಿ ಸದಾ ದೇಶವು ಮುಳುಗಿಕೊಂಡಿರುವುದು ಯಾರಿಗೋ ಬೇಕಾಗಿದೆ. ಯಾರಿಗೆ? ಜನರು ಜಾತಿಜಗಳದಲ್ಲಿ ಮಗ್ನರಾಗಿರುವ ಹೊತ್ತಿಗೇ ಊರುಗಳ ಮಧ್ಯೆ ರಸ್ತೆಯ ಅಗಲೀಕರಣ ಪ್ರಕ್ರಿಯೆ ಶುರುವಾಗುತ್ತದೆ. ಅಕ್ಕಪಕ್ಕದ ಮರಗಳ ಹನನವಾದರೂ ಕೇಳಲು ಯಾರಿಗೂ ಪುರುಸೊತ್ತಿಲ್ಲ. ಜಾತಿಜಗಳದ ಬಿಸಿ ಆರಿಲ್ಲ. ಅತ್ತ ರಸ್ತೆ ಕೆಲಸ ಅತ್ಯಂತ ವ್ಯವಸ್ಥಿತವಾಗಿ ಜಾರಿಯಲ್ಲಿದೆ. ಆಗಾಗ್ಗೆ ಹಾದು ಹೋಗುವ ಬೃಹದಾಕಾರದ ಯಂತ್ರಗಳು, ರೆಕ್ಕೆಗಳು, ಬೀಸಣಿಕೆಗಳು. ಜಾತಿಜಗಳಕ್ಕೆ ನಿತ್ಯ ಹೊಸ ವಿಷಯದ ಸೇರ್ಪಡೆ. ದೊಡ್ಡ ರಸ್ತೆ, ದೊಡ್ಡ ಮಶೀನು, ದೊಡ್ಡ ಕಟ್ಟಡ, ದೊಡ್ಡ ಕೈಗಾರಿಕೆ... ಇವೆಲ್ಲವೂ ಒಂದಾದ ಮೇಲೊಂದು ಸ್ಥಾಪನೆಗೊಂಡು ದೇಶವನ್ನು ಅಭಿವೃದ್ಧಿಯತ್ತ ಒಯ್ಯುತ್ತಿರುತ್ತವೆ.

ಜಗಳ ನಿರತ ಜನಕ್ಕೆ ಗೊತ್ತೇ ಆಗುವುದಿಲ್ಲ, ತಾವು ನಿಂತ ನೆಲವೇ ಕುಸಿದದ್ದು.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !