ಬಾಯಲ್ಲಿ ನೀರೂರಿಸುವ ಸೌತೆಕಾಯಿ ಸೊಪ್ಪಿನ ಕರಿ

7

ಬಾಯಲ್ಲಿ ನೀರೂರಿಸುವ ಸೌತೆಕಾಯಿ ಸೊಪ್ಪಿನ ಕರಿ

Published:
Updated:
Deccan Herald

ಸೌ ತೆಕಾಯಿ ಸೊಪ್ಪಿನಿಂದ ಸಿದ್ಧಪಡಿಸಿದ್ದ, ಬಿಳಿ ಮತ್ತು ಹಸಿರು ಮಿಶ್ರಿತ ಬಣ್ಣದಿಂದ ಕೂಡಿದ್ದ ಕರಿಯನ್ನು ರೋಟಿಯ ಜತೆಗೆ ಬಾಯಿಗಿಟ್ಟಾಗ ನಾಲಿಗೆಯಲ್ಲಿ ಲಾಲಾರಸ ಹರಿದಾಡಿತು. ನಿಮಿಷದಲ್ಲಿ ರೋಟಿಯೂ ಖಾಲಿಯಾಗಿತ್ತು. ರುಚಿಕರವಾಗಿದ್ದ ಕರಿಯನ್ನು ಬೆರಳಿನಿಂದ ನೆಕ್ಕಿ ಸವಿಯುತ್ತಿದ್ದಂತೆ ಕುಲ್ಚಾ ಬಂದಿತು. ಅದರೊಟ್ಟಿಗಿನ ಕರಿಯ ರುಚಿ ವರ್ಣನಾತೀತ.

ಸೌತೆಕಾಯಿ ಸೊಪ್ಪಿನ ಜತೆಗೆ ಪನ್ನೀರು, ಕಾಜು, ಚೀಸ್‌ ಹಾಗೂ ಕೊತ್ತಂಬರಿ ಸೊಪ್ಪು ಬಳಸಿದ್ದರಿಂದ ಕರಿಗೆ ವಿವಿಧ ಬಗೆಯ ಫ್ಲೇವರ್‌ನ ಸ್ಪರ್ಶವೂ ಸಿಕ್ಕಿದಂತಾಗಿತ್ತು. ಇವೆಲ್ಲವೂ ಕೂಡಿದ್ದರಿಂದ ಅದು ಸ್ವಾದಿಷ್ಟಕರವೂ ಆಗಿತ್ತು.

ಇದು, ‘ಸೌತ್‌ ತಡ್ಕಾ ಸ್ಪೆಷಲ್‌’. ಕುಂದಾಪುರ ಮೂಲದ ಹೋಟೆಲ್‌ ಉದ್ಯಮಿ ಎಂ. ವ್ಯಾಸರಾವ್‌ ಅವರ ಮಾರ್ಗದರ್ಶನದಲ್ಲಿ ಅವರ ಮಗ ಎಂ.ವಿ. ಸುಹಾನ್‌ ಹಾಗೂ ಸಂಬಂಧಿಕರಾದ ಸಂತೋಷ್‌ ಕುಮಾರ್‌, ರಾಜು ಹೊಸಂಗಡಿ ಅವರು ಸೇರಿ ಮುನೇಶ್ವರನಗರದ ಉಲ್ಲಾಳ ಮುಖ್ಯರಸ್ತೆ ಬದಿಯಲ್ಲಿ ಎರಡು ತಿಂಗಳ ಹಿಂದೆಯಷ್ಟೇ ತೆರೆದಿರುವ ಹೋಟೆಲ್‌ ‘ಸೌತ್‌ ತಡ್ಕಾ ಗ್ರ್ಯಾಂಡ್’. ಇದು ಪಕ್ಕಾ ಸಸ್ಯಾಹಾರಿ ಹೋಟೆಲ್‌. ಇಲ್ಲಿ ದಕ್ಷಿಣ ಮತ್ತು ಉತ್ತರ ಭಾರತದ ವಿಭಿನ್ನ ಬಗೆಯ ಖಾದ್ಯಗಳು ಲಭ್ಯ.

ಹೋಟೆಲ್‌ಗೆ ಪ್ರವೇಶಿಸುತ್ತಿದ್ದಂತೆ ಆತ್ಮೀಯ ಸ್ವಾಗತ ಕೋರಿದ ಸಂತೋಷ್‌ ಅವರು, ಅಲ್ಲಿನ ವಿಶೇಷ ತಿನಿಸುಗಳ ಬಗ್ಗೆ ಪರಿಚಯಿಸಿದರು. ಮಶ್ರೂಮ್‌ ಸ್ವೀಟ್‌ ಅಂಡ್‌ ಸಾಲ್ಟ್‌ ಸೂಪ್‌ನಿಂದ ಇಲ್ಲಿನ ಖಾದ್ಯಗಳ ರುಚಿ ಬೇಟೆ ಆರಂಭವಾಯಿತು. ಹಾಟ್‌ ಮತ್ತು ಸ್ಪೈಸಿಯಾಗಿದ್ದ ಸೂಪ್‌ ಹೋಟೆಲ್‌ ಒಳಗಿನ ಹವಾನಿಯಂತ್ರಿತ ವಾತಾವರಣಕ್ಕೆ ಹಿತವೆನಿಸಿತು. ಸೂಪ್‌ ಮುಗಿಯುತ್ತಿದ್ದಂತೆ ಟೇಬಲ್‌ ಮೇಲೆ ‘ಸ್ಪೆಷಲ್‌ ಮಶ್ರೂಮ್‌ ರೋಲ್‌’ ಬಂದಿತು. ಮಶ್ರೂಮ್‌ಗೆ ಪೆಪ್ಪರ್‌ ಮತ್ತು ಮಸಾಲಾ ಮಿಕ್ಸ್‌ ಮಾಡಿ ಸಿದ್ಧಪಡಿಸಿದ್ದ ರೋಲ್‌ ನೆನೆದರೆ ಈಗಲೂ ಬೇಕೆನಿಸುತ್ತಿದೆ.

ಬಾಯಲ್ಲಿ ನೀರೂರಿಸುವಂತೆ ಮಾಡಿದ ಸ್ಟಾಟರ್ಸ್‌ಗಳಾದ ಮಶ್ರೂಮ್‌ ಪೆಪ್ಪರ್‌ ಡ್ರೈ ಮತ್ತು ಪನ್ನೀರ್‌ ಚಿಲ್ಲಿ ಡ್ರೈ ಮರೆಯಲಾಗದು. ಇವುಗಳ ನಡುವೆ ಸವಿದ ರಾಗಿ ಉತ್ತಪ್ಪ ಅಂತೂ ಅದ್ಭುತವಾಗಿತ್ತು. ಉತ್ತಪ್ಪದಲ್ಲಿ ಈರುಳ್ಳಿಯ ಜತೆಗೆ ಜೀರಿಗೆ, ಸಾಸಿವೆ, ಕೊತಂಬರಿ, ಕೊಬ್ಬರಿ ಪುಡಿ ಸ್ವಾದಿಷ್ಟವನ್ನು ಹೆಚ್ಚಿಸಿದ್ದವು. ಕಾಯಿ ಚಟ್ನಿ ಮತ್ತು ಆಲೂ ಸಾಗೂವಿನೊಂದಿಗೆ ಚಪ್ಪರಿಸಿ ತಿನ್ನುತ್ತಿದ್ದ ರಾಗಿ ಉತ್ತಪ್ಪ ಅದ್ಯಾವಾಗ ಖಾಲಿಯಾಯಿತೋ ಗೊತ್ತಾಗಲೇ ಇಲ್ಲ!

ಸೌತ್‌ ತಡ್ಕಾ ಗ್ರ್ಯಾಂಡ್‌ನ ಸ್ಪೆಷಲ್‌ಗಳಲ್ಲಿ ಒಂದಾದ ‘ಕಾಶ್ಮೀರಿ ಪಲಾವ್‌’ ಕೂಡ ಸೂಪರ್ಬ್‌. ಬಾಸ್ಮತಿ ಅಕ್ಕಿಯಿಂದ ತಯಾರಿಸಿದ್ದ ಕೇಸರಿ ಬಣ್ಣದಿಂದ ಕೂಡಿದ ಈ ಪಲಾವ್‌ಗೆ ‘ಹಾರ್ಟ್‌ ಶೇಪ್‌’ನ ಸ್ಪರ್ಶ ನೀಡಲಾಗಿತ್ತು. ಕಾಶ್ಮೀರ ಎಂದ ಕೂಡಲೇ ಅಲ್ಲಿನ ಆ್ಯಪಲ್‌ ನೆನಪಾಗುವುದು ಸಹಜ. ಈ ಪಲಾವ್‌ ಅನ್ನು ಸೇಬ್‌ನಿಂದ ಅಲಂಕರಿಸಲಾಗಿತ್ತು. ಅದರ ಜತೆಗೆ ಬಳಸಲಾಗಿದ್ದ ಚೆರ್ರಿ, ಒಣ ದ್ರಾಕ್ಷಿ, ಗೋಡಂಬಿ ಪಲಾವ್‌ನ ಅಲಂಕಾರವನ್ನು ಮತ್ತಷ್ಟು ಹೆಚ್ಚಿಸಿತ್ತು. ‘ಕಾಶ್ಮೀರಿ ಪಲಾವ್‌ ಅನ್ನು ವಿವಿಧ ಶೇಪ್‌ನಲ್ಲಿ ಅಲಂಕರಿಸಿ ಗ್ರಾಹಕರಿಗೆ ಉಣಬಡಿಸುತ್ತೇವೆ’ ಎಂದರು ಸಂತೋಷ್‌.

‘ಕಾಶ್ಮೀರಿ ಪಲಾವ್‌’ ರುಚಿಕರವಾಗಿತ್ತಾದರೂ, ಐದಾರು ತುತ್ತುಗಳಿಗಿಂತ ಹೆಚ್ಚು ತಿನ್ನಲಾಗಲಿಲ್ಲ. ಅದರಲ್ಲಿದ್ದ ಹಣ್ಣುಗಳ ಮಿಶ್ರಣದಿಂದ ಸಿಹಿ ಹೆಚ್ಚಾಗಿ ಆವರಿಸಿತ್ತು. ಈ ಪಲಾವ್‌ನ ಪ್ರಮಾಣವೂ ಹೆಚ್ಚಿರುವುದನ್ನು ನೋಡಿ, ‘ಇದನ್ನು ಒಂದಿಬ್ಬರು ತಿನ್ನುವುದಕ್ಕೆ ಆಗುವುದಿಲ್ಲ, ಕನಿಷ್ಠ ನಾಲ್ಕರಿಂದ ಐದು ಮಂದಿಯಾದರೂ ಬೇಕು’ ಎಂದು ಹೇಳಿ ಊಟ ಮುಗಿಸಿ ಹೋಟೆಲ್‌ನಿಂದ ಹೊರನಡೆದೆ. ಆದರೆ ಸೌತೆಕಾಯಿ ಸೊಪ್ಪಿನ ‘ಕರಿ’ ಮತ್ತು ರಾಗಿ ಉತ್ತಪ್ಪದ ರುಚಿ ಮತ್ತೆ ಬಾ ಎಂದು ಸೆಳೆಯುತ್ತಿರುವುದಂತೂ ದಿಟ.

ಹಲವು ಬಗೆಯ ದೋಸೆಗಳು

ಸೌತ್‌ ತಡ್ಕಾ ಗ್ರ್ಯಾಂಡ್ ಹಲವು ಬಗೆಯ ವಿಶೇಷ ದೋಸೆಗಳಿಂದಾಗಿಯೇ ಈ ಭಾಗದ ಜನರ ಮನಗೆದ್ದಿದೆ. ಇಲ್ಲಿ 25ಕ್ಕೂ ಹೆಚ್ಚು ಬಗೆಯ ದೋಸೆಗಳನ್ನು ಸಿದ್ಧಪಡಿಸಲಾಗುತ್ತದೆ. ಅದರಲ್ಲಿ 15ಕ್ಕೂ ಹೆಚ್ಚು ವಿಶೇಷ ದೋಸೆಗಳು. ಆದರೆ ಇವು ವಾರದ ಎಲ್ಲ ದಿನವೂ ದೊರೆಯುವುದಿಲ್ಲ.

ಮಸಾಲೆ, ಸೆಟ್‌, ಖಾಲಿ, ರವಾ ದೋಸೆಗಳ ಜತೆಗೆ ನಿತ್ಯ ಎರಡು ವಿಶೇಷ ದೋಸೆಗಳನ್ನು ಈ ಹೋಟೆಲ್‌ ಗ್ರಾಹಕರಿಗೆ ನೀಡುತ್ತಿದೆ. ಅವುಗಳಲ್ಲಿ ರಾಗಿ ಉತ್ತಪ್ಪ, ಪೈನಾಪಲ್‌ ದೋಸೆ, ಹೆಸರಕಾಳು ದೋಸೆ, ಮೆಂತ್ಯಾ ದೋಸೆ, ಪಾಲಕ್‌ ದೋಸೆ, ಕ್ಯಾಪ್ಸಿಕಂ ದೋಸೆ, ಕಾರ್ನ್‌ ದೋಸೆ, ಗೋಬಿ ದೋಸೆ, ಸೌತೆಕಾಯಿ ದೋಸೆ, ಸ್ಪ್ರಿಂಗ್ ದೋಸೆ, ಸ್ಪಂಜ್‌ ದೋಸೆಗಳು ವಿಶೇಷ. ಇವುಗಳ ಜತೆಗೆ ಚೈನೀಸ್‌ ಚಾಟ್ಸ್ ಮತ್ತು ವಿವಿಧ ಬಗೆಯ ಐಸ್‌ಕ್ರೀಮ್‌ ಕೂಡ ಲಭ್ಯ.

***********

ಸಮಯ: ಬೆಳಿಗ್ಗೆ 6.30 ಯಿಂದ ರಾತ್ರಿ 11

ವಿಶೇಷ : ಸೌತ್ ತಡ್ಕಾ ಸ್ಪೆಷಲ್ ಕರಿ

ಒಂದಕ್ಕೆ: ₹199

ಸ್ಥಳ: ನಂ 21, ಮುನೇಶ್ವರನಗರ, ಉಲ್ಲಾಳ್‌ ಮುಖ್ಯ ರಸ್ತೆ, ರಿಲೆಯನ್ಸ್‌ ಫ್ರೆಶ್‌ ಎದುರು

ಟೇಬಲ್ ಕಾಯ್ದಿರಿಸಲು: 9900735007/ 9739888451/ 99459273680

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !