ಅಪಘಾತ; ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

7

ಅಪಘಾತ; ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

Published:
Updated:
ಭೂಮಿಕಾ

ಬೆಂಗಳೂರು: ಯಲಹಂಕ ಬಳಿಯ ಜಕ್ಕೂರು ಏರೋಡ್ರಮ್ ಮೇಲ್ಸೇತುವೆಯಲ್ಲಿ ಭಾನುವಾರ ಅಪಘಾತ ಸಂಭವಿಸಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿನಿ ಭೂಮಿಕಾ ಎಂಬುವರು ಮೃತಪಟ್ಟಿದ್ದಾರೆ.

ಸ್ಥಳೀಯ ನಿವಾಸಿಯಾದ ಅವರು, ಚಿಕ್ಕಬಳ್ಳಾಪುರದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸ್ನೇಹಿತ ಮಣಿಕಂಠ್ ಜತೆಯಲ್ಲಿ ಬೈಕ್‌ನಲ್ಲಿ ನಗರಕ್ಕೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಯಲಹಂಕ ಸಂಚಾರ ಪೊಲೀಸರು ತಿಳಿಸಿದರು.

‘ಚಿಕ್ಕಬಳ್ಳಾಪುರಕ್ಕೆ ಬೆಳಿಗ್ಗೆ ಹೋಗಿದ್ದ ಮಣಿಕಂಠ್, ಊಟಕ್ಕೆಂದು ಭೂಮಿಕಾ ಅವರನ್ನು ಕರೆದುಕೊಂಡು ನಗರಕ್ಕೆ ಬರುತ್ತಿದ್ದರು. ಮೇಲ್ಸೇತುವೆಯಲ್ಲಿ ಸ್ಕಾರ್ಪಿಯೊ ವಾಹನಕ್ಕೆ ಬೈಕ್‌ ಗುದಿಸಿದ್ದರು. ಕೆಳಗೆ ಬಿದ್ದ ಭೂಮಿಕಾರ ಮೈ ಮೇಲೆ ಮತ್ತೊಂದು ವಾಹನ ಹಾಯ್ದು ಹೋಗಿತ್ತು’ ಎಂದು ಹೇಳಿದರು.

‘ಗಾಯಗೊಂಡು ನರಳಾಡುತ್ತಿದ್ದ ಅವರಿಬ್ಬರನ್ನು ಸ್ಥಳೀಯರೇ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಭೂಮಿಕಾ ಅಸುನೀಗಿದರು. ಮಣಿಕಂಠ್‌ ಚೇತರಿಕೊಳ್ಳುತ್ತಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ಪೋಷಕರಿಗೆ ತಿಳಿಸದೆ ಬಂದಿದ್ದರು: ಕಾಲೇಜಿನ ವಸತಿಗೃಹದಲ್ಲಿ ಭೂಮಿಕಾ ಉಳಿದುಕೊಂಡಿದ್ದರು. ಸ್ನೇಹಿತನ ಜತೆಯಲ್ಲಿ ಬೆಂಗಳೂರಿಗೆ ಬರುವಾಗ ಪೋಷಕರಿಗೆ ತಿಳಿಸಿರಲಿಲ್ಲ. ಅಪಘಾತದ ಸುದ್ದಿ ತಿಳಿದು ಆಸ್ಪತ್ರೆಗೆ ಬಂದ ಪೋಷಕರು, ಮಗಳನ್ನು ನೆನೆದು ಕಣ್ಣೀರಿಟ್ಟರು. 

‘ಮಗಳ ಸಾವಿನ ಬಗ್ಗೆ ಅನುಮಾನವಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಅವರು ನೀಡಿದ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ’ ಎಂದು ಪೊಲೀಸರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 5

  Sad
 • 1

  Frustrated
 • 4

  Angry

Comments:

0 comments

Write the first review for this !