ಹೆಲ್ಮೆಟ್‌ ಇಲ್ಲದೆ ಬೈಕ್‌ ಓಡಿಸಿದ್ದ ಟೆಕಿ ದುರ್ಮರಣ

ಶನಿವಾರ, ಏಪ್ರಿಲ್ 20, 2019
29 °C
ಪ್ರತ್ಯೇಕ ಅಪಘಾತ: ಮೂವರ ಸಾವು

ಹೆಲ್ಮೆಟ್‌ ಇಲ್ಲದೆ ಬೈಕ್‌ ಓಡಿಸಿದ್ದ ಟೆಕಿ ದುರ್ಮರಣ

Published:
Updated:

ಬೆಂಗಳೂರು: ನಗರದ ಮೂರು ಕಡೆಗಳಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಅಪಘಾತ ಸಂಭವಿಸಿದ್ದು, ಸಾಫ್ಟ್‌ವೇರ್‌ ಎಂಜಿನಿಯರ್ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ಸುಮೇಗ್ ಸಾವಂತ್ (35), ಹರಪನಹಳ್ಳಿಯ ಸಚಿನ್ (25) ಮೃತರು. ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ.

‘ಐಟಿಪಿಎಲ್‌ನ ಟಾಟಾ ಕನ್ಸಲ್ಟೆನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಮೇಗ್, ಸೋಮವಾರ ಬೆಳಿಗ್ಗೆ ಹೂಡಿಯಿಂದ ಐಟಿಪಿಎಲ್‌ ಕಡೆಗೆ ರಾಯಲ್ ಎನ್‌ಫೀಲ್ಡ್‌ ಬೈಕ್‌ನಲ್ಲಿ ಹೊರಟಿದ್ದರು. ಹೆಲ್ಮೆಟ್‌ ಧರಿಸದೇ ಬೈಕ್‌ ಓಡಿಸುತ್ತಿದ್ದರು. ಐಟಿಪಿಎಲ್ ರಸ್ತೆಯ ಜ್ಯೂರಿ ಹೋಟೆಲ್ ಬಳಿ ಬೈಕ್‌ ಉರುಳಿ ಬಿದ್ದಿತ್ತು. ಕೆಳಗೆ ಬಿದ್ದ ಸುಮೇಗ್ ಅವರ ತಲೆ, ಫುಟ್‌ಪಾತ್‌ ಅಂಚಿನಲ್ಲಿದ್ದ ಕಲ್ಲಿಗೆ ಬಡಿದಿತ್ತು‘  ಎಂದು ಕೆ.ಆರ್.ಪುರ ಸಂಚಾರ ಪೊಲೀಸರು ಹೇಳಿದರು.

‘ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲಿ ನರಳುತ್ತ ಬಿದ್ದಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗಮಧ್ಯೆ ಅವರು ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದರು.

‘ಐಟಿಪಿಎಲ್ ರಸ್ತೆಯಲ್ಲಿ ಮುಂಜಾನೆ ಅವಧಿಯಲ್ಲಿ ವಾಹನಗಳ ಓಡಾಟ ಕಡಿಮೆ ಇರುತ್ತದೆ. ಇಂಥ ರಸ್ತೆಯಲ್ಲಿ ಸುಮೇಗ್, ವೇಗವಾಗಿ ಬೈಕ್ ಚಲಾಯಿಸಿದ್ದರು. ಹೀಗಾಗಿ ಬೈಕ್ ಉರುಳಿಬಿದ್ದಿತ್ತು. ಹೆಲ್ಮೆಟ್‌ ಧರಿಸದಿದ್ದಕ್ಕೆ ಕಲ್ಲಿಗೆ ತಲೆ ಬಡಿದು ಪ್ರಾಣ ಹೋಗಿದೆ’ ಎಂದು ಪೊಲೀಸರು ಹೇಳಿದರು.

ಬೈಕ್‌ಗಳ ನಡುವೆ ಅಪಘಾತ: ದೇವನಹಳ್ಳಿ ಚಿಕ್ಕಸಣ್ಣೆ ಗೇಟ್ ಬಳಿ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಸಚಿನ್ (25) ಎಂಬುವರು ಮೃತಪಟ್ಟಿದ್ದಾರೆ.

‘ಹರಪನಹಳ್ಳಿಯ ಸಚಿನ್, ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲೆಸಿದ್ದರು. ತಮ್ಮದೇ ಊರಿನ ಸ್ನೇಹಿತ ಕುಬೇಂದ್ರ ಜೊತೆಯಲ್ಲಿ ರಾತ್ರಿ 11ರ ಸುಮಾರಿಗೆ ಬೈಕ್‌ನಲ್ಲಿ ನಂದಿಬೆಟ್ಟಕ್ಕೆ ಹೊರಟಿದ್ದರು’ ಎಂದು ದೇವನಹಳ್ಳಿ ಸಂಚಾರ ಪೊಲೀಸರು ಹೇಳಿದರು.

‘ಚಿಕ್ಕಸಣ್ಣೆ ಗೇಟ್‌ನ ತಿರುವಿನಲ್ಲಿ ಮುನಿರಾಜು ಎಂಬುವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್‌ಗೂ ಸಚಿನ್ ಅವರ ಬೈಕ್‌ಗೂ ಅಪಘಾತವಾಗಿತ್ತು. ತೀವ್ರ ಗಾಯಗೊಂಡು ಸಚಿನ್ ಮೃತಪಟ್ಟರು. ಅಪಘಾತದಲ್ಲಿ ಕುಬೇಂದ್ರ ಹಾಗೂ ಮುನಿರಾಜು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

ಬಿಎಂಟಿಸಿ ಬಸ್‌ ಹರಿದು ಸಾವು: ರಿಚ್ಮಂಡ್ ವೃತ್ತದಲ್ಲಿ ಬಿಎಂಟಿಸಿ ಬಸ್‌ ಮೈಮೇಲೆ ಹರಿದಿದ್ದರಿಂದ ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ.

ಮೃತರ ಹೆಸರು ಗೊತ್ತಾಗಿಲ್ಲ. ಶವವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

‘ಕೋರಮಂಗಲದಿಂದ ಮೆಜೆಸ್ಟಿಕ್‌ನತ್ತ ಬಸ್‌ ಹೊರಟಿತ್ತು. ರಿಚ್ಮಂಡ್ ವೃತ್ತದಲ್ಲಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಗುದ್ದಿತ್ತು. ಕೆಳಗೆ ಬಿದ್ದ ಅವರ ಮೇಲೆಯೇ ಬಸ್ಸಿನ ಚಕ್ರ ಹರಿದು ಹೋಗಿತ್ತು. ತೀವ್ರ ರಕ್ತಸ್ರಾವವಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸರು ಹೇಳಿದರು.

’ಅಪಘಾತದ ವೇಳೆ ಬಸ್ಸಿನಲ್ಲಿ ಪ್ರಯಾಣಿಕರೂ ಇದ್ದರು. ಅವರೆಲ್ಲ ಬೇರೊಂದು ಬಸ್ಸಿನಲ್ಲಿ ಮೆಜೆಸ್ಟಿಕ್‌ಗೆ ಹೋಗಿದ್ದಾರೆ’ ಎಂದರು.

‘ಮೃತ ವ್ಯಕ್ತಿಯ ಗುರುತು ಪತ್ತೆ ಮಾಡುತ್ತಿದ್ದೇವೆ. ಬಸ್ ಜಪ್ತಿ ಮಾಡಿ, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !