ಮುಜುಗರದ ಹೇಳಿಕೆಗೆ ಕ್ರಮ: ಡಾ.ಜಿ. ಪರಮೇಶ್ವರ ಎಚ್ಚರಿಕೆ

7

ಮುಜುಗರದ ಹೇಳಿಕೆಗೆ ಕ್ರಮ: ಡಾ.ಜಿ. ಪರಮೇಶ್ವರ ಎಚ್ಚರಿಕೆ

Published:
Updated:
ಡಾ.ಜಿ.ಪರಮೇಶ್ವರ್

ಚಿತ್ರದುರ್ಗ: ಕೇಂದ್ರ ಸರ್ಕಾರ ಆದಾಯ ತೆರಿಗೆ (ಐಟಿ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಸೇರಿ ಎಲ್ಲ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಆರೋಪಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೀಡಿದ ನೋಟಿಸ್‌ ಕುರಿತು ಹಿರಿಯೂರು ತಾಲ್ಲೂಕಿನ ಐಮಂಗಲದಲ್ಲಿ ಬುಧವಾರ ಪ್ರತಿಕ್ರಿಯಿಸಿದರು. ‘ಆದಾಯ ತೆರಿಗೆ ಇಲಾಖೆಗೆ ಅಗತ್ಯವಿರುವ ದಾಖಲೆಗಳನ್ನು ಸಚಿವರು ಸಲ್ಲಿಸುತ್ತಾರೆ’ ಎಂದರು.

‘ಕಾಂಗ್ರೆಸ್‌ ನಾಯಕರನ್ನು ಗುರುತಿಸಿ ದಾಳಿ ಮಾಡಲಾಗುತ್ತಿದೆ. ಚುನಾವಣೆಗೂ ಮುನ್ನ ಆರಂಭವಾದ ಈ ದಾಳಿಗಳ ಕುರಿತು ಹಲವು ಬಾರಿ ಪ್ರಸ್ತಾಪ ಮಾಡಿದ್ದೇವೆ. ಆದರೂ ದಾಳಿ ಮುಂದುವರೆದಿರುವುದು ತನಿಖಾ ಸಂಸ್ಥೆಗಳ ದುರುಪಯೋಗದ ರೀತಿಯನ್ನು ಬಿಂಬಿಸುತ್ತದೆ’ ಎಂದು ಹೇಳಿದರು.

ಪೊಲೀಸರ ನೇಮಕ ಶೀಘ್ರ

‘ಪೊಲೀಸ್‌ ಇಲಾಖೆಯಲ್ಲಿ ಸುಮಾರು 23 ಸಾವಿರ ಹುದ್ದೆಗಳು ಖಾಲಿ ಇವೆ. ಪ್ರತಿ ವರ್ಷ ಸರಾಸರಿ 3,500 ಸಿಬ್ಬಂದಿ ನಿವೃತ್ತಿ ಹೊಂದುತ್ತಿದ್ದಾರೆ. ನೇಮಕಾತಿ ಮಾಡಿಕೊಳ್ಳದೆ ಇದ್ದರೆ ಸಿಬ್ಬಂದಿ ಕೊರತೆ ಉಂಟಾಗುತ್ತದೆ. ಹೀಗಾಗಿ, ಹಂತಹಂತವಾಗಿ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು’ ಎಂದರು.

‘ಪೊಲೀಸರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಎಡಿಜಿಪಿ ರಾಘವೇಂದ್ರ ಔರಾದಕರ ನೇತೃತ್ವದ ಸಮಿತಿ ನೀಡಿದ ವರದಿ ಕುರಿತು ಚರ್ಚೆ ನಡೆದಿದೆ. ಸಮಿತಿಯ ಶಿಫಾರಸು ಜಾರಿಗೆ ಶ್ರಮಿಸುತ್ತೇನೆ’ ಎಂಬ ಆಶ್ವಾಸನೆ ನೀಡಿದರು.

6 ಸಾವಿರ ಗುಂಡಿ ಪತ್ತೆ: ಬೆಂಗಳೂರಿನ ರಸ್ತೆಗಳಲ್ಲಿ 6 ಸಾವಿರ ಗುಂಡಿಗಳನ್ನು ಗುರುತಿಸಲಾಗಿದ್ದು, ಇವುಗಳನ್ನು ಮುಚ್ಚುವ ಕೆಲಸ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದರು.

‘ರಸ್ತೆ ಗುಂಡಿಗಳ ಕುರಿತು ವಾಟ್ಸ್‌ಆ್ಯಪ್‌ ಮೂಲಕ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಕೋರಿದ್ದೇವೆ. ಇದನ್ನು ವ್ಯವಸ್ಥಿತವಾಗಿ ಮುಚ್ಚಲಾಗುತ್ತಿದೆ. ಇದು 5 ನಿಮಿಷದಲ್ಲಿ ನಡೆಯುವ ಕೆಲಸವಲ್ಲ. ಈಗಷ್ಟೇ ಆರಂಭವಾಗಿದೆ’ ಎಂದರು.

ಸಂವಿಧಾನ ಬದಲಾವಣೆ; ಬೇಸರ

‘ಸಂವಿಧಾನ ಬದಲಾಯಿಸುವ ಮಾತುಗಳು ಕೇಳಿಬರುತ್ತಿರುವುದು ಆಘಾತ ಹಾಗೂ ನೋವುಂಟು ಮಾಡಿದೆ’ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದರು.

‘ಡಾ.ಬಿ.ಆರ್. ಅಂಬೇಡ್ಕರ್‌ ರಚಿಸಿದ ಸಂವಿಧಾನ ಹಲವು ದೇಶಗಳಿಗೆ ಮಾದರಿಯಾಗಿದೆ. ಆಧುನಿಕ ಸಮಾಜಕ್ಕೆ ಅನುಗುಣವಾಗಿ ಕೆಲ ತಿದ್ದುಪಡಿಗಳನ್ನು ಮಾಡಲಾಗಿದೆ. ಆದರೆ, ಸಂವಿಧಾನವನ್ನೇ ಬದಲಾಯಿಸಲು ನಡೆಯುತ್ತಿರುವ ಪ್ರಯತ್ನ ಕಳವಳಕಾರಿ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !