ಆಧಾರ್ ತಿದ್ದುಪಡಿ; ಅಸಹಾಯಕರ ಅಳಲು

7
ತಾಳಿಕೋಟೆ ಪುರಸಭೆ ಆವರಣದ ಮೇಲಂತಸ್ತಿನಲ್ಲಿ ಆಧಾರ್ ಕೇಂದ್ರ; ಸಮಸ್ಯೆಗಳ ಗೂಡು

ಆಧಾರ್ ತಿದ್ದುಪಡಿ; ಅಸಹಾಯಕರ ಅಳಲು

Published:
Updated:
Deccan Herald

ತಾಳಿಕೋಟೆ: ಆಧಾರ್‌ ಗುರುತಿನ ಚೀಟಿಯ ತ್ರಾಸು ಇಂದಿಗೂ ತಪ್ಪದಾಗಿದೆ. ಹಲ ವರ್ಷಗಳಿಂದ ಪ್ರಕ್ರಿಯೆ ನಡೆದಿದ್ದರೂ; ಸಮಸ್ಯೆಗಳು ಬಗೆಹರಿಯದಾಗಿವೆ.

ಆಧಾರ್‌ ಗುರುತು ಪತ್ರದಲ್ಲಿನ ತಿದ್ದುಪಡಿಗಾಗಿ ನಿತ್ಯವೂ ತಾಸುಗಟ್ಟಲೇ ಪಾಳಿ ಹಚ್ಚಿ ಕಾಯುವುದನ್ನು ಪಟ್ಟಣದ ಪುರಸಭೆ ಆವರಣದಲ್ಲಿರುವ ಮೇಲಂತಸ್ತಿನಲ್ಲಿರುವ ಆಧಾರ್‌ ಕಚೇರಿ ಮುಂಭಾಗ ಕಾಣಬಹುದಾಗಿದೆ.

ಮುಂಜಾನೆಯಿಂದ ಮುಸ್ಸಂಜೆಯವರೆಗೂ ಪಾಳಿ ಹಚ್ಚಿ ನಿಂತರೂ ನಮ್ಮ ಕೆಲಸ ಆಗದಾಗಿದೆ. ಬಲವಿದ್ದವರು ಮುನ್ನುಗ್ಗಿ ತಮ್ಮ ಕೆಲಸ ಮಾಡಿಸಿಕೊಂಡು ಹೋಗುತ್ತಾರೆ. ಇದರಿಂದ ನಿತ್ಯವೂ ನಾವು ಮಾತ್ರ ಆಧಾರ್‌ ತಿದ್ದುಪಡಿ ಕೇಂದ್ರಕ್ಕೆ ಅಲೆದಾಡುವುದು, ಪಾಳಿ ಹಚ್ಚುವುದು ತಪ್ಪದಾಗಿದೆ ಎಂಬ ದೂರು ಬಹುತೇಕರದ್ದಾಗಿದೆ.

‘ರೇಷನ್‌ ಕಾರ್ಡಿಗೆ ಆಧಾರ್‌ ಬೇಕಂಥ ಬಂದೀನ್ರೀ. ನಾಲ್ಕ್ ದಿನ ಆದ್ರೂ ನನ್ನ ಪಾಳೀನೇ ಬರ್ತಿಲ್ಲ’ ಎಂದು ಸ್ಥಳೀಯರಾದ ಶಶಿಧರ ಹಿರೇಮಠ ದೂರಿದರು.

‘ನಸುಕಿನ ಐದಕ್ಕೆ ಪಾಳಿ ಹಚ್ಚಿವ್ನೀ. ನಾಲ್ಕೈದ್‌ ದಿನದಿಂದ ಇದೇ ಕೆಲಸ ಆಗೈತಿ. ಚಿಕ್ಕ ತಿದ್ದುಪಡಿಯಷ್ಟೇ ಐತಿ. ಇಲ್ಲಿಗೆ ಬಂದ್ರಾ ಮೂಕಿಹಾಳಕ್ಕೆ ಹೋಗಂದ್ರ. ಅಲ್ಲಿಗೆ ಹೋದ್ರ, ನಮ್ದೇನ್ ಇದರಲ್ಲಿಲ್ಲ. ತಾಳಿಕೋಟೆಗೆ ಹೋಗ್ರೀ ಅಂದ್ರು. ನಾ ಎಲ್ಲಿಗಾರ ಹೋಗ್ಬೇಕು ಎಂಬುದೇ ತೋಚದಂಗಾಗೈತಿ’ ಎಂದು ಹರನಾಳದ ಸಂಗಪ್ಪ ಶಿವಪ್ಪ ಅಂಬಳನೂರ ಬೇಸರ ವ್ಯಕ್ತಪಡಿಸಿದರು.

‘ನಮ್ಮದು ಸಾಸನೂರ. ಮುಂಬೈನ ವಿಳಾಸ ಬದಲು ಮಾಡಬೇಕಂಥ ಕೇಳ್ದೆ. ತಾಳಿಕೋಟೆಗೆ ಹೋಗಂದ್ರು. ಇಲ್ಲಿ ನಮ್ ಕೆಲಸ ಆಗ್ತಿಲ್ಲ. ಆದ್ರಾ ಸ್ಕೂಲ್‌ನ್ಯಾಗ ಮೇಷ್ಟ್ರು, ನಿಮ್ಮ ವಿಳಾಸ ಬದಲಿಸಿಕೊಂಡು ಬನ್ನಿ ಎಂದು ಮಕ್ಕಳನ್ನು ಮನೆಗೆ ವಾಪಸ್ ಕಳಿಸುತ್ತಿದ್ದಾರೆ. ಹಿಂಗಾದ್ರೆ ನಾವೇನು ಮಾಡಬೇಕು’ ಎಂದು ಶಾಂತಾಬಾಯಿ ಕೊಗಲ್, ಮಿಲತ ನಗರದ ಸಿಮ್ರಾನ್ ಮಕಾನದಾರ ಅಳಲು ತೋಡಿಕೊಂಡರು.

‘ಈ ಕೇಂದ್ರದಲ್ಲಿ ಕನಿಷ್ಠ ನಾಲ್ಕೈದು ಮಂದಿ ಕೆಲಸ ಮಾಡ್ಬೇಕು. ಆದ್ರೇ ಒಬ್ಬರೇ ಆಧಾರ್‌ ಕೆಲಸ ಮಾಡ್ತ್ವಾರೆ. ಇದರಿಂದ ಸಮಸ್ಯೆ ಬಿಗಡಾಯಿಸಿದೆ. ತಾಲ್ಲೂಕು ಆಡಳಿತ ತಕ್ಷಣವೇ ಸ್ಪಂದಿಸಬೇಕು’ ಎಂದು ಪಟ್ಟಣದ ಮಹಿಬೂಬ್‌ ಮುಸ್ತಾಫ್ ಕಟಗೆ ಆಗ್ರಹಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !