ಆದಿಜಾಂಬವ ಅಭಿವೃದ್ಧಿ ನಿಗಮ ಉದ್ಘಾಟನೆ: ಎಡಗೈ–ಬಲಗೈ ನಾಯಕರ ವಾಕ್ಸಮರ

7
ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಉದ್ಘಾಟನೆ

ಆದಿಜಾಂಬವ ಅಭಿವೃದ್ಧಿ ನಿಗಮ ಉದ್ಘಾಟನೆ: ಎಡಗೈ–ಬಲಗೈ ನಾಯಕರ ವಾಕ್ಸಮರ

Published:
Updated:

ಬೆಂಗಳೂರು: ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಉದ್ಘಾಟನಾ ಸಮಾರಂಭ ಎಡಗೈ– ಬಲಗೈ ಒಳಪಂಗಡಗಳ ನಾಯಕರ ವಾಕ್ಸಮರ, ಬೆಂಬಲಿಗರ ಪರ–ವಿರೋಧ ಘೋಷಣೆಯ ವೇದಿಕೆಯಾಯಿತು. 

ಸಂಸದ ಕೆ.ಎಚ್‌.ಮುನಿಯಪ್ಪ ಮತ್ತು ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ಪರೋಕ್ಷ ಮಾತಿನ ಜಟಾಪಟಿ ನಡೆಯಿತು. 

ಆರಂಭದಲ್ಲಿ ಮುನಿಯಪ್ಪ ಅವರು ಖರ್ಗೆ ಅವರನ್ನು ಹೊಗಳುತ್ತಲೇ ಮಾತಿಗಿಳಿದರು. ಅಷ್ಟರಲ್ಲಿ ಸಭೆಯಲ್ಲಿದ್ದ ಗುಂಪೊಂದು ಜೋರಾಗಿ ಕೂಗುತ್ತಾ ಗದ್ದಲ ಎಬ್ಬಿಸಿತು. ಕೊನೆಗೆ ಮಾತಿನ ಧಾಟಿ ಬದಲಾಯಿಸಿದ ಮುನಿಯಪ್ಪ, ‘ಕೇಂದ್ರ ಸರ್ಕಾರ ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೂ ಶೇ 10ರಷ್ಟು ಮೀಸಲಾತಿ ಘೋಷಿಸಿದೆ. ಇದನ್ನು ಬೇಸರದಿಂದಲೇ ಸ್ವಾಗತಿಸುತ್ತೇನೆ. ಆದರೆ, ಚುನಾವಣೆ ಹತ್ತಿರ ಬರುತ್ತಿರುವ ವೇಳೆಯಲ್ಲಿ ಘೋಷಣೆ ಮಾಡಿದೆ. 4 ವರ್ಷಗಳ ಹಿಂದೆಯೇ ಇದನ್ನು ಘೋಷಿಸಬೇಕಿತ್ತು’ ಎಂದರು. ಹೀಗೆ ಮಾತು ಎಲ್ಲೆಲ್ಲೋ ಹರಿಯಿತು. ಯಾರೂ ತಾಳ್ಮೆಯಿಂದ ಕೇಳಿಸಿಕೊಳ್ಳಲಿಲ್ಲ.

ನಾನೇನು ಪರಮಾತ್ಮನಾ?

ಗುಂಪುಗಳ ಧಿಕ್ಕಾರದ ಧ್ವನಿಯ ಹಿಂದಿನ ಸೂಕ್ಷ್ಮತೆ ಅರಿತ ಖರ್ಗೆ, ‘ಸಮುದಾಯಕ್ಕೆ ಬೇಕಾದ ನೆರವು ಕೇಳಲು ನನ್ನಿಂದ ಮಾತ್ರ ಆಗುತ್ತದೆ ಎಂದು ಕೆಲವರು ಹೇಳುತ್ತಾರೆ. ನಾನೇನು ಪರಮಾತ್ಮನಾ? ನನ್ನನ್ನು ಮುಂದೆ ತಳ್ಳಿ. ನೀವು (ರಾಜ್ಯ ನಾಯಕರು) ಹಿಂದೆ ನಿಲ್ಲುವುದು ಆಗಬಾರದು. ನಾವೆಲ್ಲರೂ ಒಟ್ಟಾಗಿ ಸಾಗಬೇಕು. ರಾಜ್ಯದ ನಾಯಕರೂ ಒಟ್ಟಾಗಿ ಬನ್ನಿ’ ಎಂದರು.

‘ನಾನೆಂದೂ ಜಾತಿ ಆಧಾರದಲ್ಲಿ ಸಭೆ ಮಾಡಿಲ್ಲ. ಹಾಗೇನಾದರೂ ಮಾಡಿದ್ದರೆ ಒಂದು ಉದಾಹರಣೆ ತೋರಿಸಿ. ನಾನು ರಾಜೀನಾಮೆ ಕೊಡುತ್ತೇನೆ’ ಎಂದರು. 

ಎರಡು ಗುಂಪುಗಳ ಬಲಾಬಲ ಪ್ರದರ್ಶನ ಜೋರಾಗುತ್ತಿರುವುದನ್ನು ಕಂಡ ಖರ್ಗೆ, ‘ಹಿಂದುಳಿದ ಸಮುದಾಯದವರು ಒಗ್ಗಟ್ಟಾಗದ ಹೊರತು ನಿಮಗೆ ಅಧಿಕಾರ ಸಿಗುವುದಿಲ್ಲ. ಮೊದಲು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಬೇಕು. ಕೆಲವು ಶಕ್ತಿಗಳು ಅದನ್ನೆಲ್ಲಾ ನಾಶ ಮಾಡಲು ಹೊರಟಿವೆ. ಆದ್ದರಿಂದ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಒಂದಾಗಬೇಕು’ ಎಂದು ಕೋರಿದರು.

ಪರಮೇಶ್ವರ ಪ್ರಯತ್ನ: ‘ನಾವ್ಯಾರೂ ಸದಾಶಿವ ಆಯೋಗದ ವರದಿ ಅನುಷ್ಠಾನದ ವಿರೋಧಿಗಳಲ್ಲ. ಅದರ ಬಗ್ಗೆ ದೀರ್ಘ ಚರ್ಚೆ ಆಗಬೇಕು. ಒಟ್ಟಾರೆ ಬಜೆಟ್‌ನಲ್ಲಿ ಶೇ 24.1ರಷ್ಟು ಅನುದಾನವನ್ನು ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಡಬೇಕು ಎಂಬ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ’ ಎಂದು ಗುಂಪುಗಳ ಕೂಗಾಟ ತಣ್ಣಗಾಗಿಸಲು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಯತ್ನಿಸಿದರು. 

ಅಣ್ಣ –ತಮ್ಮನನ್ನು ಬೇರ್ಪಡಿಸದಿರಿ: ಕೊನೆಗೂ ಸಮಾಧಾನದ ನುಡಿಗೆ ಮುಂದಾದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಮುನಿಯಪ್ಪ ಮತ್ತು ಖರ್ಗೆ ಅಣ್ಣ ತಮ್ಮನಂತಿದ್ದಾರೆ. ದಯವಿಟ್ಟು ಅವರನ್ನು ಬೇರೆ ಮಾಡುವ ಪ್ರಯತ್ನ ಮಾಡದಿರಿ. ನನಗೆ ಯಾವುದೇ ಜಾತಿಯ ವ್ಯಾಮೋಹ ಇಲ್ಲ. ನಿಮ್ಮದೇ ಸಮುದಾಯದವರನ್ನು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದೆ. ಇಲ್ಲಿ ನಿಮ್ಮಲ್ಲಿ ಕೆಲವರು ಜೈಕಾರ – ಧಿಕ್ಕಾರ ಕೂಗುತ್ತಿದ್ದೀರಿ. ಮೊದಲು ನಿಮ್ಮಲ್ಲೇ ಒಗ್ಗಟ್ಟಿರಬೇಕು’ ಎಂದು ಉಭಯ ಗುಂಪುಗಳಿಗೆ ಟಾಂಗ್‌ ನೀಡಿದರು.

‘ಸರ್ಕಾರ ಇಂದು ಹೋಗುತ್ತದೆ, ನಾಳೆ ಹೋಗುತ್ತದೆ ಎಂಬ ಮಾತುಗಳನ್ನು ಮೆಟ್ಟಿ ನಿಂತು ಸರ್ಕಾರವನ್ನು ಉಳಿಸಿಕೊಂಡಿದ್ದೇವೆ. ದಯವಿಟ್ಟು ನಮಗೆ ಸರಿಪಡಿಸಿಕೊಂಡು ಹೋಗಲು ಅವಕಾಶ ಕೊಡಿ. ನಿಮ್ಮ ನಾಯಕರ (ಖರ್ಗೆ, ಮುನಿಯಪ್ಪ) ಮೇಲೆ ಅನುಮಾನ ಬೇಡ. ಈ ಸಮುದಾಯದ ಅಭಿವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚು ಅನುದಾನ ಮೀಸಲಿಡುತ್ತೇನೆ’ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !