ಗುರುವಾರ , ಆಗಸ್ಟ್ 22, 2019
21 °C

ಅಕಾಲ ಋತುಬಂಧದ ನಂತರ…

Published:
Updated:

ಕೆಲವು ಸಾಮಾನ್ಯ ಲಕ್ಷಣಗಳನ್ನು ಗಮನಿಸಿದಾಗ ಅಥವಾ ಕುಟುಂಬ ಇತಿಹಾಸವನ್ನು ಪರಿಗಣಿಸಿದಾಗ ನಿಮಗೆ ಅಕಾಲ ಋತುಬಂಧದ ಸಾಧ್ಯತೆಗಳು ತಿಳಿದುಬರುತ್ತವೆ. ಈ ಸ್ಥಿತಿ ಎದುರಾಗಿದೆ ಅಥವಾ ಬರುವ ಅಪಾಯವಿದೆ ಎನ್ನುವ ಅನುಮಾನ ಮೂಡುತ್ತಿದ್ದಂತೆ ತಜ್ಞವೈದ್ಯರನ್ನು ಸಂಪರ್ಕಿಸಬೇಕು. ಅವರು ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಕೈಗೊಂಡು ನಿಮ್ಮ ಅಂಡಾಶಯ ಅವಧಿಗೂ ಮುನ್ನವೇ ತನ್ನ ಕಾರ್ಯವನ್ನು ನಿಲ್ಲಿಸುವ ತಯಾರಿಯಲ್ಲಿದೆಯೇ ಅಥವಾ ಈಗಾಗಲೇ ನಿಲ್ಲಿಸಿದೆಯೇ ಎನ್ನುವುದನ್ನು ಖಚಿತಪಡಿಸುತ್ತಾರೆ. ಕುಟುಂಬದ ಇತಿಹಾಸ, ವೈದ್ಯಕೀಯ ಇತಿಹಾಸ ಮತ್ತು ಕೆಲವು ರಕ್ತದ ಹಾರ್ಮೋನ್ ಪರೀಕ್ಷೆಗಳ (ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್–ಎಫ್‌ಎಸ್‌ಎಚ್‌, ಈಸ್ಟ್ರೊಜೆನ್ ಮತ್ತು ಆ್ಯಂಟಿ-ಮೆಲೇರಿಯನ್– ಎಎಂಎಚ್‌ ಮಟ್ಟಗಳು) ಮೂಲಕ ಇದನ್ನು ಪತ್ತೆ ಹಚ್ಚಬಹುದು. ಕೆಲವೊಮ್ಮೆ ರೋಗನಿರ್ಣಯವನ್ನು ದೃಢಪಡಿಸಿಕೊಳ್ಳಲು ಈ ಪರೀಕ್ಷೆಗಳನ್ನು ಎರಡನೇ ಬಾರಿಯೂ ಮಾಡಬೇಕಾಗುತ್ತದೆ.

ಕ್ರೋಮೊಸೋಮಲ್‌ ವಿಶ್ಲೇಷಣೆ (ಆನುವಂಶಿಕ ಸಂಯೋಜನೆಯ ಪರೀಕ್ಷೆ) ಮತ್ತು ಫ್ರ್ಯಾಜಿಲ್ ಎಕ್ಸ್ ಸಿಂಡ್ರೋಮ್ ರೂಪಾಂತರದಂತಹ (ಎಫ್‌ಎಂಆರ್1) ಇತರ ರಕ್ತ ಪರೀಕ್ಷೆಗಳ ಮೂಲಕ ಆನುವಂಶಿಕ ಕಾರಣಗಳನ್ನು ಪತ್ತೆಹಚ್ಚಲಾಗುತ್ತದೆ. ಈ ಪರೀಕ್ಷೆಯು ಅಪಾಯದಲ್ಲಿರುವ ಇತರ ಕಾಯಿಲೆಗಳ ಬಗ್ಗೆಯೂ ಮಾಹಿತಿ ನೀಡುತ್ತದೆ. ಈ ಫಲಿತಾಂಶಗಳಿಂದ ನಿಮ್ಮ ಮತ್ತು ನಿಮ್ಮ ಕುಟುಂಬದ ಇತರ ಸದಸ್ಯರ ಆರೋಗ್ಯವನ್ನೂ ಸಹ ವಿಶ್ಲೇಷಿಸಬಹುದು. ಮೂಳೆ ಸಾಂದ್ರತೆಯ ಪರೀಕ್ಷೆ ಸಹ ನೆರವಾಗಬಹುದು.

ವಿಕಿರಣ ಅಥವಾ ಕಿಮೋಥೆರಪಿಯಂತಹ ಚಿಕಿತ್ಸೆ ಪಡೆದವರಲ್ಲಿ ಅಥವಾ ಅಂಡಾಶಯಕ್ಕೆ ಹಾನಿಯುಂಟಾಗುವ ಚಿಕಿತ್ಸೆಗಳಿಂದ ಈ ಸಂಭವ ಅಧಿಕವಾಗುತ್ತದೆ. ಇಂತಹ ಚಿಕಿತ್ಸೆಗೆ ಒಳಗಾಗುವ ಮುಂಚೆಯೇ ವೈದ್ಯರೊಂದಿಗೆ ಮತ್ತು ಸಂತಾನೋತ್ಪತ್ತಿ ತಜ್ಞರೊಂದಿಗೆ ಮಾತನಾಡಬೇಕು. ಮುಖ್ಯವಾಗಿ ಕಿಮೋಥೆರಪಿ /ವಿಕಿರಣ ಚಿಕಿತ್ಸೆಯನ್ನು ಪ್ರಾರಂಭಿಸುವ ಮುನ್ನ ಮುಂದಿನ ದಿನಗಳಿಗಾಗಿ ಲಭ್ಯವಿರುವ ಫಲವತ್ತತೆ ಸಂರಕ್ಷಣೆ ಆಯ್ಕೆಗಳ ಕುರಿತು ಚರ್ಚಿಸುವುದು ಬಹಳ ಮುಖ್ಯ. ಅಂಡಾಣುಗಳನ್ನು ಶೇಖರಿಸಿಡುವ ಆಯ್ಕೆಯ ಮೂಲಕ ನೀವು ನಾಳೆಗೆ ನಿಮ್ಮ ಫಲವತ್ತತೆಯನ್ನು ಕಾಯ್ದಿಟ್ಟುಕೊಳ್ಳಬಹುದು.

ಪಿಒಐಗೆ ಚಿಕಿತ್ಸೆ ಇದೆಯೇ?

ವಿಕಿರಣ ಚಿಕಿತ್ಸೆ ಮತ್ತು ಕಿಮೋಥೆರಪಿಯಂತಹ ವೈದ್ಯಕೀಯ ಪ್ರೇರಿತ ಕಾರಣಗಳಿಂದ ಅಂಡಾಶಯ ಕಾರ್ಯ ಸ್ಥಗಿತಗೊಂಡಿದ್ದರೆ ಕಾಲಾನಂತರದಲ್ಲಿ ಅಂಡಾಶಯದ ಕಾರ್ಯವು ಸ್ವಾಭಾವಿಕ ಸ್ವರೂಪಕ್ಕೆ ಮರಳಬಹುದು. ಕಿರಿಯ ಪ್ರಾಯದಲ್ಲಿ ಮಹಿಳೆ ಹಾನಿಕಾರಕ ಚಿಕಿತ್ಸೆಗಳಿಗೆ ಒಡ್ಡಿಕೊಂಡಲ್ಲಿ, ದಿನಕಳೆದಂತೆ ಅಂಡಾಶಯಗಳು ತಮ್ಮ ಕಾರ್ಯಸ್ಥಾನಕ್ಕೆ ಮರಳುವ ಸಾಧ್ಯತೆ ಅಧಿಕವಾಗಿರುತ್ತದೆ.

ಕೆಲವೊಮ್ಮೆ ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳು ತಿಳಿದು ಬರುವುದಿಲ್ಲ. ಈ ರೀತಿಯ ಅಂಡಾಶಯದ ವೈಫಲ್ಯವನ್ನು ಸರಿಪಡಿಸುವ ಯಾವುದೇ ಚಿಕಿತ್ಸೆಗಳೂ ಪ್ರಸ್ತುತ ಲಭ್ಯವಿಲ್ಲ. ಈ ರೋಗಲಕ್ಷಣಗಳನ್ನು ನಿರ್ವಹಿಸಲು ಹಾರ್ಮೋನ್‌ಗಳ ಚಿಕಿತ್ಸೆಯನ್ನು (ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್) ಸೂಚಿಸಲಾಗುತ್ತದೆ. ಆದರೆ ಈ ಯಾವ ಚಿಕಿತ್ಸೆಗಳೂ ಫಲವತ್ತತೆಗೆ ಪೂರಕವಾದವುಗಳಲ್ಲ. ಗರ್ಭಧಾರಣೆಯನ್ನು ಬಯಸುವ ಮಹಿಳೆಯರು ದಾನಿಯ ಅಂಡಾಣುಗಳನ್ನು ಅವಲಂಬಿಸಬೇಕಾಗುತ್ತದೆ. ಇನ್ನುಳಿದಂತೆ ತಮ್ಮ ದೀರ್ಘಕಾಲೀನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಆಸ್ಟಿಯೊಪೊರೋಸಿಸ್ ಮತ್ತು ಹೃದ್ರೋಗವನ್ನು ತಡೆಗಟ್ಟುವ ಮಾರ್ಗಗಳೇನು ಎನ್ನುವ ಬಗ್ಗೆ ತಜ್ಞವೈದ್ಯರೊಂದಿಗೆ ಚರ್ಚಿಸಬೇಕು. 

Post Comments (+)