ಸುಂದರ ಪರಿಸರಕ್ಕೆ ದುರ್ನಾತವೇ ಕಪ್ಪು ಚುಕ್ಕೆ

7
ಕೊಳಚೆ ನೀರಿನಿಂದ ಕಲುಷಿತಗೊಂಡಿರುವ ಅಗರ ಕೆರೆ

ಸುಂದರ ಪರಿಸರಕ್ಕೆ ದುರ್ನಾತವೇ ಕಪ್ಪು ಚುಕ್ಕೆ

Published:
Updated:
Deccan Herald

ಬೆಂಗಳೂರು: ಒಂದು ಕಾಲದಲ್ಲಿ ಭತ್ತ ಹಾಗೂ ತೆಂಗಿನ ತೋಟಗಳಿಗೆ ಹೆಸರುವಾಸಿ ಅಗರ ಕೆರೆ ಅಚ್ಚುಕಟ್ಟು ಪ್ರದೇಶ. ಪಕ್ಕದ ಜಕ್ಕಸಂದ್ರ, ವೆಂಕಟಾಪುರ ಸುತ್ತಲಿನ ರಾಗಿ ಹೊಲಗಳಲ್ಲಿ ಕಾಳು ಕಟ್ಟಿದ ತೆನೆಗಳು ತೂಗುತ್ತಿದ್ದರೆ, ಗದ್ದೆ ಬಯಲಿನಲ್ಲಿ ಹಚ್ಚ ಹಸಿರಿನ ಪೈರು ನಳನಳಿಸುತ್ತಿತ್ತು. ಬಾವಿಗಳಲ್ಲಿ ಜಲಸೆಲೆ ಸದಾ ಕಾಲವೂ ಜಿನುಗುತ್ತಿತ್ತು. ಸಕಲ ಜೀವರಾಶಿಗೆ ಆಸರೆಯಾಗಿದ್ದ ಈ ಪುರಾತನ ಕೆರೆಯ ಗತವೈಭವ ಈಗ ಕೇವಲ ನೆನಪು.

ಚರಂಡಿ ನೀರೇ ಗತಿ: ಶತಮಾನಗಳ ಇತಿಹಾಸ ಹೊಂದಿರುವ ಈ ಕೆರೆಯ ನಿಸರ್ಗ ನಿಯಮಕ್ಕೆ ಈಗ ಮನುಷ್ಯ ನಿರ್ಮಿತ ಹಲವು ಅಡ್ಡಿಗಳು ಎದುರಾಗಿವೆ. ಕಳೆದ ಅರ್ಧ ಶತಮಾನದೀಚೆಗೆ ನಗರೀಕರಣದ ಪ್ರಭಾವದಿಂದಾಗಿ ಕೆರೆ ನೀರಿಗೆ ಕೊಳಚೆ ನೀರು ಸೇರಿಕೊಳ್ಳುತ್ತಾ ಕಲುಷಿತಗೊಂಡಿದೆ. ಒಂದು ಕಾಲದಲ್ಲಿ ಹೊಲ–ಗದ್ದೆಗಳಿಗೆ ನೀರುಣಿಸುತ್ತಿದ್ದ ಈ ಕೆರೆಗೆ ಈಗ ಕೊಳಚೆ ನೀರೇ ಗತಿ. ಈ ಭಾಗದಲ್ಲಿ ಯಥೇಚ್ಚವಾಗಿ ಮಳೆ ಸುರಿದಾಗ ಚರಂಡಿ ನೀರನ್ನೇ ತೂಬಿನ ಮೂಲಕ ಕೆರೆಗೆ ಹಾಯಿಸಲಾಗುತ್ತದೆ.

ಈಚೆಗೆ ಕೆರೆಯಲ್ಲಿ ಹೂಳೆತ್ತಲಾಗಿದೆ. ಕೆರೆ ದಂಡೆ ಸುತ್ತಲೂ ವಾಯುವಿಹಾರ ಪಥ ಮತ್ತು ಪ್ರತ್ಯೇಕ ಸೈಕಲ್ ಪಥ ನಿರ್ಮಿಸಲಾಗಿದೆ. ಯೋಗಾಸನ ಮಾಡಲು ವ್ಯವಸ್ಥೆ ಇದೆ. ವ್ಯಾಯಾಮ ಕಸರತ್ತಿಗೆ ಸಾಧನಾ ಸಲಕರಣೆಗಳನ್ನು ಇರಿಸಲಾಗಿದೆ. ಮಕ್ಕಳ ಆಟೋಟಕ್ಕೆ ಉಪಕರಣಗಳನ್ನು ಕಲ್ಪಿಸಲಾಗಿದೆ. ಉದ್ಯಾನ, ಹುಲ್ಲುಗಾವಲು, ಕಲ್ಲು ಬೆಂಚುಗಳ ವ್ಯವಸ್ಥೆಯೂ ಇವೆ.

ವಾರಾಂತ್ಯದಲ್ಲಿ ‍ಜನಜಂಗುಳಿಯೇ ನೆರೆದಿರುತ್ತದೆ. ವಾಯು ವಿಹಾರ ನಡೆಸುವ ಹಿರಿಯ ನಾಗರಿಕರು, ಮಕ್ಕಳೊಂದಿಗೆ ಆಟವಾಡುವ ದಂಪತಿ, ಹುಲ್ಲು ಹಾಸಿನ ಮೇಲೆ ಸೂರ್ಯ ರಶ್ಮಿಗೆ ಮೈಯೊಡ್ಡಿ ಒತ್ತಡ ನೀಗಿಸಿಕೊಳ್ಳುವ ಟೆಕಿಗಳು, ಪಕ್ಷಿಪ್ರಿಯರು, ಫೋಟೊಗ್ರಫಿ ಹವ್ಯಾಸಗಾರರು, ಫೋಟೊಶೂಟ್‌ ನಡೆಸುವ ಫ್ಯಾಷನ್‌ ಲಲನೆಯರು, ಪಿಸುಗುಡುವ ಪ್ರೇಮಿಗಳು ಇಲ್ಲಿ ಕಾಣಸಿಗುತ್ತಾರೆ. ಹೀಗೆ; ಕೆರೆ ಅಂಗಳ ವಾರಾಂತ್ಯದಲ್ಲಿ ಬಣ್ಣದ ಕೋಲಾಜ್‌ನಂತೆ ಕಾಣುತ್ತದೆ ಎಂದು ಜಕ್ಕಸಂದ್ರ ನಿವಾಸಿ ಹರ್ಷ ಹೇಳಿದರು.

ಕರೆ ಏರಿ ಪಕ್ಕದ ರಾಜಕಾಲುವೆ ಕೊಳಚೆ ನೀರು ಈ ಸುಂದರ ಪರಿಸರಕ್ಕೆ ಕ‍ಪ್ಪುಚುಕ್ಕೆ. ಈ ದುರ್ನಾತ ಸಹಿಸಿಕೊಂಡೇ ಸಾರ್ವಜನಿಕರು ವಾಯುವಿಹಾರ ನಡೆಸಬೇಕು. ರಾಜಕಾಲುವೆ ಮೇಲೆ ಸ್ಲ್ಯಾಬ್‌ಗಳನ್ನು ಅಳವಡಿಸಬೇಕು ಎಂದು ಹರ್ಷ ಒತ್ತಾಯ ಮಾಡಿದಾಗ, ಪಕ್ಕದಲ್ಲೇ ಇದ್ದ ನಯನಾ ಧ್ವನಿಗೂಡಿಸಿದರು. ಈ ಹಿಂದೆ ಕೆರೆ ಅಭಿವೃದ್ಧಿ ಪ್ರಾಧಿಕಾರ ನಿರ್ವಹಣೆ ಮಾಡುತ್ತಿದ್ದ ಸಂದರ್ಭದಲ್ಲಿ ಇಲ್ಲಿನ ದಿನಗೂಲಿ ನೌಕರರಿಗೆ ಸಕಾಲದಲ್ಲಿ ವೇತನ ಸಿಗುತ್ತಿತ್ತು. ಈಗ ಅರಣ್ಯ ಇಲಾಖೆಗೆ ವಹಿಸಿದ ಮೇಲೆ ಸೂಕ್ತ ಸಂಬಳ ಇಲ್ಲದೆ ನೌಕರರು ಪರದಾಡುವಂತೆ ಆಗಿದೆ. ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಉದ್ಯಾನ ನಿರ್ವಹಣೆ ಇಲ್ಲದೆ ಸೊರುಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ನೌಕರರೊಬ್ಬರು ದೂರಿದರು.

ತೇಲುವ ದ್ವೀಪಗಳ ನಿರ್ಮಾಣ: ಕೆರೆ ‍ಪ್ರವೇಶಿಸುವ ಕೊಳಚೆ ನೀರು ಸಂಸ್ಕರಿಸಲು ತೇಲುವ ದ್ವೀಪಗಳನ್ನು ನಿರ್ಮಾಣ  ಮಾಡಲಾಗಿದೆ. ಈ ವಿಧಾನದಲ್ಲಿ ದೊಡ್ಡ ಜಲಸಸ್ಯಗಳನ್ನು ನೀರಿನ ತಳದಲ್ಲಿ ಬೇರೂರಿಸದೆ ತೇಲುವ ಚಾಪೆಗಳು ಅಥವಾ ತೆಪ್ಪಗಳ ಮೇಲೆ ಬೆಳೆಸಲಾಗುತ್ತದೆ. ತೇಲುವ ದ್ವೀಪಗಳಲ್ಲಿ ಬೆಳೆಸಲಾಗುವ ಈ ದೊಡ್ಡ ಸಸ್ಯಗಳು ನೀರಿನಲ್ಲಿರುವ ಜೈವಿಕ ಪದಾರ್ಥಗಳನ್ನು ಹೀರಿಕೊಳ್ಳುತ್ತವೆ. ಈ ಮೂಲಕ ನೀರು ಶುದ್ಧಿಗೊಳ್ಳುತ್ತದೆ ಎಂದು ಇಲ್ಲಿನ ನೌಕರ ರಾಮಮೂರ್ತಿ ಮಾಹಿತಿ
ನೀಡಿದರು.

ಜೌಗು ಪ್ರದೇಶಗಳು: ಕೈಗಾರಿಕಾ ತ್ಯಾಜ್ಯ, ಚರಂಡಿ ನೀರು ಸಂಸ್ಕರಿಸಲು ಕೆರೆ ತೂಬಿನ ಪ್ರದೇಶದಲ್ಲಿ ಕೃತಕವಾಗಿ ಜೌಗು ಪ್ರದೇಶಗಳನ್ನು ನಿರ್ಮಿಸಲಾಗಿದೆ. ವಿವಿಧ ತ್ಯಾಜ್ಯಗಳನ್ನು ಸಂಸ್ಕರಿಸಲು ಈ ಜೌಗು ಪ್ರದೇಶ ಪ್ರಮುಖ ಪಾತ್ರ ವಹಿಸುತ್ತದೆ. ಪ್ರವಾಹದ ನೀರು ತಡೆ ಹಿಡಿಯುತ್ತದೆ. ಅಲ್ಲದೆ, ಅಂತರ್ಜಲ ಪುನಶ್ಚೇತನಕ್ಕೂ ನೆರವಾಗುತ್ತದೆ. ಆದರೆ, ದುರ್ನಾತ ತಡೆಯಲು ಬೇರೆ ಉಪಕ್ರಮ ಅನುಸರಿಸಬೇಕು ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಹಿಂದಿನ ಆ ಒತ್ತುವರಿ ಪ್ರಕರಣ

ಅಗರ ಕೆರೆಯಂಗಳ ಒತ್ತುವರಿ ಆರೋಪ ಎದುರಿಸುತ್ತಿದ್ದ ಮಂತ್ರಿ ಟೆಕ್ ಜೋನ್ ಮತ್ತು ಕೋರಮೈಂಡ್ ಸಾಪ್ಟ್‌ವೇರ್ ಆ್ಯಂಡ್ ಸರ್ವಿಸಸ್‌ ಸಂಸ್ಥೆಗಳ ಪರಿಸರ ಅನುಮತಿಯನ್ನು ಕರ್ನಾಟಕ ರಾಜ್ಯಮಟ್ಟದ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರ (ಎಸ್‌ಇಐಎಎಕೆ) 2017ರ ಫೆಬ್ರುವರಿ 23ರಂದು ರದ್ದುಪಡಿಸಿತ್ತು.

ಮಂತ್ರಿ ಕಂಪನಿಗೆ 2012 ಫೆ.17ರಂದು ಹಾಗೂ ಕೋರಮೈಂಡ್‌ ಕಂಪನಿಗೆ 2013 ಸೆ.30ರಂದು ಪರಿಸರ ಅನುಮತಿ ನೀಡಲಾಗಿತ್ತು. ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಅಗರ ಹಾಗೂ ಜಕ್ಕಸಂದ್ರ ಗ್ರಾಮಗಳಲ್ಲಿ ವಸತಿ, ಚಿಲ್ಲರೆ, ಹೋಟೆಲ್ ಹಾಗೂ ಕಚೇರಿ ಬಳಕೆ ಕಟ್ಟಡ ನಿರ್ಮಾಣಕ್ಕೆ ಮಂತ್ರಿ ಅನುಮತಿ ಕೋರಿತ್ತು. ಅಗರ ಗ್ರಾಮದಲ್ಲಿ ಸತ್ತ್ವ ಡೊಮೈನ್ ಕಚೇರಿ ನಿರ್ಮಾಣಕ್ಕೆ (ಸಾಪ್ಟ್‌ವೇರ್ ಟೆಕ್ನಾಲಜಿ ಪಾರ್ಕ್) ಕೋರಮೈಂಡ್‌ ಅನುಮತಿ ಕೇಳಿತ್ತು.

ಕೆರೆಗಳ ಹೊರ ಅಂಚಿನಿಂದ 75 ಮೀಟರ್ ಮತ್ತು ರಾಜಕಾಲುವೆ ಅಂಚಿನಿಂದ 50ಮೀಟರ್‌ ವ್ಯಾಪ್ತಿಯಲ್ಲಿ ಕಟ್ಟಡಗಳನ್ನು ಕಟ್ಟಲು ಅನುಮತಿ ನೀಡಬಾರದೆಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2016 ಮೇ 4ರಂದು ಆದೇಶ (ಅರ್ಜಿ ಸಂಖ್ಯೆ 222/2014 )ಹೊರಡಿಸಿತ್ತು.

ಬೆಳ್ಳಂದೂರು, ಅಗರಕೆರೆ ಅಂಗಳದಲ್ಲಿ ಮಂತ್ರಿ ಹಾಗೂ ಕೋರಮೈಂಡ್‌ ಕಟ್ಟಡ ನಿರ್ಮಾಣಕ್ಕೆ ನೀಡಿರುವ ಪರಿಸರ ಮತ್ತು ಕಟ್ಟಡ ಅನುಮತಿಯನ್ನು ನ್ಯಾಯ ಮಂಡಳಿ ರದ್ದುಪಡಿಸಿತ್ತು.  ‌ಇವುಗಳ ಕಟ್ಟಡ ನಿರ್ಮಾಣಕ್ಕೆ ಹೊಸದಾಗಿ ಪರಿಸರ ಅನುಮೋದನೆ ಪಡೆಯಬೇಕು. ಈ ಅನುಮತಿ ನ್ಯಾಯಾಲಯದ ಆದೇಶದ ಚೌಕಟ್ಟಿಗೆ ಒಳಪಟ್ಟಿರಬೇಕು. ಎಸ್‌ಇಐಎಎಕೆ ಉಸ್ತುವಾರಿಯಲ್ಲಿ ಕಟ್ಟಡ ಕಾಮಗಾರಿ ನಡೆಯಬೇಕೆಂದು ಎನ್‌ಜಿಟಿ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. 

 ***

ಮೂತ್ರ ವಿಸರ್ಜನೆ ಕಾಟ

ಕೆರೆ ಎರಡು ಬದಿಯಲ್ಲೂ ತಂತಿ ಬೇಲಿ ಅಳವಡಿಸಲಾಗಿದೆ. ಎಚ್‌ಎಸ್‌ಆರ್‌ ಲೇಔಟ್‌ ಮೇಲ್ಸೇತುವೆ ಕಡೆಯಿಂದ ಬೆಳ್ಳಂದೂರು ಕಡೆಗೆ ಹೋಗುವ ಬೈಕ್, ಕಾರು ಸವಾರರು ಮತ್ತು ಪಾದಚಾರಿಗಳು ಈ ತಂತಿ ಬೇಲಿ ಮೇಲೆಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದು ವಾಯು ವಿಹಾರಿಗಳಿಗೆ ಕಿರಿಕಿರಿಯಾಗುತ್ತದೆ. ಸಾಪ್ಟ್‌ವೇರ್ ಕಂಪನಿಗಳಿಗೆ ಹೋಗುವ ಯುವಕರು ಬೇಕಾಗಿಯೇ ಮೂತ್ರ ವಿಸರ್ಜನೆ ನೆಪದಲ್ಲಿ ಪ್ಯಾಂಟ್‌ನ ಜಿಪ್‌ ಬಿಚ್ಚಿ ನಿಂತಿರುತ್ತಾರೆ. ಈ ಮುಜಗರದಿಂದ ಎಷ್ಟೋ ಯುವತಿಯರು, ಮಹಿಳೆಯರು ವಾಯು ವಿಹಾರಕ್ಕೆ ಬರುವುದನ್ನೇ ಬಿಟ್ಟಿದ್ದಾರೆ.

-ಪ್ರಾರ್ಥನಾ, ಕೋರಮಂಗಲ ನಿವಾಸಿ

***

ಕಸದ ರಾಶಿ; ಬಾಡಿದ ಗಿಡ–ಬಳ್ಳಿ

ಕೆರೆಯ ‍ಪುನರುಜ್ಜೀವನ ಮತ್ತು ಅಭಿವೃದ್ಧಿಗೆ 2016ರಲ್ಲಿ ಶಂಕುಸ್ಥಾಪನೆ ನೆರವೇರಿಸಿ, ಅಭಿವೃದ್ಧಿ ಕೆಲಸ ಮುಗಿದ ಮೇಲೆ 2018 ಮಾರ್ಚ್‌ನಲ್ಲಿ ಉದ್ಘಾಟನೆಗೊಂಡಿದೆ. ಆರಂಭದಲ್ಲಿ ಸುಂದರ ಪರಿಸರ ಮನಸ್ಸಿಗೆ ಮುದ ನೀಡುತ್ತಿತ್ತು. ಈಗ ಎಲ್ಲೆಂದರಲ್ಲಿ ಕಸದ ರಾಶಿ ತುಂಬಿದೆ. ಕಳೆಗಿಡಗಳು ಅಳೆತ್ತರ ಬೆಳೆದಿವೆ. ಉದ್ಯಾನಕ್ಕೆ ನೀರು ಹಾಯಿಸದೆ ಗಿಡ –ಬಳ್ಳಿಗಳು ಬಾಡುತ್ತಿವೆ. ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗಿದೆ. ‌

-ಮಂಜುನಾಥ್‌, ಎಚ್ಎಸ್‌ಆರ್‌ ಲೇ ಔಟ್‌ ನಿವಾಸಿ

***

ರಾಜಕಾಲುವೆ ಮೇಲೆ ಕಬ್ಬಿಣದ ತಂತಿಗಳನ್ನು ಅಳವಡಿಸಿ, ಸುಧಾರಿತ ತಂತ್ರಜ್ಞಾನದ ಶೀಟ್‌ಗಳಿಂದ ಮುಚ್ಚಲಾಗುವುದು. ಇದರಿಂದ ದುರ್ನಾತ ತಡೆಯಬಹುದು ಗುರುಮೂರ್ತಿ ರೆಡ್ಡಿ

-ಎಚ್‌ಎಸ್‌ಆರ್‌ ಲೇಔಟ್‌ ವಾರ್ಡ್ ಸದಸ್ಯ

***

149‌ ಎಕರೆ 24ಗುಂಟೆ

ಕೆರೆಯ ವಿಸ್ತಾರ

₹16.10 ಕೋಟಿ

ಕೆರೆ ಅಭಿವೃದ್ಧಿ ಮಾಡಿದ ವೆಚ್ಚ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !