ರೇಷ್ಮೆ ದಾರದೊಂದಿಗೆ ಹೊಸೆದುಕೊಂಡ ಬದುಕು, ಸ್ವಾವಲಂಬನೆ ಸಾಧಿಸಲು ‘ಗಾಂಧಿ ಪಥ’

7
‘ಗಾಂಧಿ ಪಥ’ ತುಳಿದ ಅಗರ–ಮಾಂಬಳ್ಳಿ ಗ್ರಾಮಸ್ಥರು

ರೇಷ್ಮೆ ದಾರದೊಂದಿಗೆ ಹೊಸೆದುಕೊಂಡ ಬದುಕು, ಸ್ವಾವಲಂಬನೆ ಸಾಧಿಸಲು ‘ಗಾಂಧಿ ಪಥ’

Published:
Updated:
Deccan Herald

ಯಳಂದೂರು: ತಾಲ್ಲೂಕಿನ ಅಗರ–ಮಾಂಬಳ್ಳಿ ಗ್ರಾಮದ ಜನರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ತೋರಿದ ಹಾದಿಯನ್ನು ಇನ್ನೂ ಬಿಟ್ಟಿಲ್ಲ.

ಸ್ವಾವಲಂಬನೆ ಮತ್ತು ಗ್ರಾಮ ಉದ್ಯೋಗಕ್ಕೆ ಉತ್ತೇಜನ ನೀಡಲು ಗಾಂಧೀಜಿಯರು ತಿರುಗಿಸಿದ ಚರಕದ ಸದ್ದು ಇಲ್ಲಿ ಬೇರೆ ರೂಪದಲ್ಲಿ ಈಗಲೂ ಅ‌ನುರಣಿಸುತ್ತಿದೆ. 

ಕೈಮಗ್ಗವನ್ನು ಬಳಸಿಕೊಂದು ರೇಷ್ಮೆ ಮತ್ತು ಖಾದಿ ವಸ್ತ್ರಗಳನ್ನು ದೇಶದಾದ್ಯಂತ ಪಸರಿಸಿದ್ದಾರೆ ಇಲ್ಲಿನ ಜನ. ಈಗ ಮಗ್ಗದ ಜೀವನಕ್ಕೆ ತೆರೆಬಿದ್ದರೂ, ರೇಷ್ಮೆ ನೂಲು ವಿಂಡಿಸುವ ಹುರಿ ಮಿಷನ್‌ಗಳು ಇಲ್ಲಿ ಸದ್ದು ಮಾಡುತ್ತಿವೆ.

ಸ್ವಾವಲಂಬನೆಗೆ ಪ್ರೇರಣೆ ಬಾಪೂಜಿ: ‘ಗಾಂಧಿವಾದಿ ತಗಡೂರು ರಾಮಚಂದ್ರರಾವ್‌ ಮನವಿಗೆ ಸ್ಪಂದಿಸಿ 1926ರಲ್ಲಿ ಮಹಾತ್ಮ ಗಾಂಧೀಜಿಯವರು ಬದನವಾಳು ಗ್ರಾಮಕ್ಕೆ 2 ಬಾರಿ ಭೇಟಿ ನೀಡಿದ್ದರು. ನಮ್ಮ ತಾತನೂ ರಾಷ್ಟ್ರಪಿತನನ್ನು ಕಾಣಲು ಹೋಗಿದ್ದರು. ನಾಲ್ವರು ದಲಿತ ಮಹಿಳೆಯರು ಮಹಾತ್ಮರ ನೇತೃತ್ವದಲ್ಲಿ ಗ್ರಾಮೋದ್ಯೋಗ ಕೇಂದ್ರ ತೆರೆದರು. ಇದನ್ನು ನೋಡಿ ಬಂದ ನಂತರ ಗಾಂಧಿವಾದಿ ಅಗರಂ ರಂಗಯ್ಯ ನಮ್ಮ ಸುತ್ತಲ ಹಳ್ಳಿಗಳಲ್ಲೂ ಸ್ಥಳೀಯ ಸಂಪನ್ಮೂಲ ಬಳಸಿ ಚರಕದಿಂದ ನೂಲು ಬಿಚ್ಚಣಿಕೆ ಕೇಂದ್ರಗಳನ್ನು ತೆರೆಯಲು ಪ್ರೇರೇಪಿಸಿದರು’ ಎಂದು ನೆನೆಯುತ್ತಾರೆ ಮಾಂಬಳ್ಳಿ ಶ್ವೇತಾದ್ರಿ ಅವರು.

ತಾಲ್ಲೂಕಿನ ಸುತ್ತಮುತ್ತ ಈಗ ಹತ್ತಿ ರೈತರ ನೆಚ್ಚಿನ ಬೆಳೆಯಾಗಿಲ್ಲ. ರೇಷ್ಮೆ ಬೆಳೆಗಾರರೇ ಹೆಚ್ಚು. ಕಚ್ಚಾ ರೇಷ್ಮೆಯನ್ನು ಕೊಳ್ಳೇಗಾಲ ಮಾರುಕಟ್ಟೆಯಿಂದ ತಂದು ರೀಲಿಂಗ್ ಮಾಡಿ ಎಳೆ ಬಿಡಿಸಲಾಗುತ್ತದೆ. ನಂತರ ಡಬ್ಲಿಂಗ್ ಯಂತ್ರದಿಂದ ಮೂರು ಎಳೆ ದಾರವನ್ನು ಟ್ವಿಸ್ಟಿಂಗ್ ಮೂಲಕ ಒಂದೆಳೆಯಾಗಿ ಪರಿವರ್ತಿಸಲಾಗುತ್ತದೆ. 6 ಗಜದ ಸೀರೆಗೆ
ಬೇಕಾಗುವ 4,400 ಎಳೆಗಳನ್ನು ಸಿದ್ಧಗೊಳಿಸಲಾಗುತ್ತದೆ. ಇವು ಕೈಮಗ್ಗದ ಸೀರೆಗೆ ಬಳಕೆಯಾಗುತ್ತದೆ. ಕಡಿಮೆ ವಿದ್ಯುತ್‌ ಬಳಕೆಯ ಯಂತ್ರಗಳಿಂದ ಸ್ವಯಂ ಉದ್ಯೋಗವನ್ನು ಈಗಲೂ ಮುಂದುವರಿಸುವ ಹಂಬಲ ಸುರೇಶ್ ಮತ್ತು ಸುಬ್ಬಯ್ಯ ಅವರದು. 

‘ಗಾಂಧಿವಾದಿ ತಾತ ವೀರಣ್ಣಪ್ಪರ ಕಾಲದಲ್ಲಿ ಕೈಮಗ್ಗ ಇದ್ದವು. ಇಲ್ಲಿ ಹತ್ತಿ ಮತ್ತು ಹಾಲಿನ ಬಣ್ಣದ ಬಿಳಿ ರೇಷ್ಮೆ ಪಂಚೆ, ಸೀರೆ ನೇಯುವ ಕೆಲಸ ನಡೆಯುತ್ತಿತ್ತು. ತಂತ್ರಜ್ಞಾನ ಬೆಳೆದಂತೆ ಕೈಮಗ್ಗಕ್ಕೆ ಭಾರೀ ಹೊಡೆತ ಬಿತ್ತು. ಈಗ ಹುರಿ ಮಿಷನ್ ಅಳವಡಿಸಿದ್ದೇವೆ. ಈ ಕಸುಬು ಗಾಂಧಿ ಬಳುವಳಿ ಎಂದು ಸ್ಮರಿಸುತ್ತಾರೆ’ ಇವರು.

‘ಕಚ್ಚಾ ವಸ್ತುಗಳು ಸ್ಥಳೀಯವಾಗಿ ಸಿಗುತ್ತವೆ. ಖರ್ಚು ಕಡಿಮೆ ಇದೆ. ಒಂದು ಕೆಜಿ ರೇಷ್ಮೆ ಹುರಿಗೆ ₹ 270 ಬೆಲೆ ಇದೆ. ನಾನು, ಮಡದಿ ಅನಿತಾ ಇಬ್ಬರಿಗೂ ಇದು ಬದುಕು ಕಟ್ಟಿಕೊಟ್ಟಿದೆ. ದಿನಕ್ಕೆ ₹ 500 ಆದಾಯವು ಕೈಸೇರುತ್ತದೆ’ ಎನ್ನುತ್ತಾರೆ ಇದನ್ನೇ ಈಗಲೂ ಕಾಯಕ ಮಾಡಿಕೊಂಡ ದೇವಾಂಗ ಪೇಟೆಯ ಜಗದೀಶ್‌ಕುಮಾರ್.

 ಬದನವಾಳುವಿನಿಂದ ಕಲಿತ ಪಾಠ

ಸ್ವಾತಂತ್ರ್ಯ ಹೋರಾಟದೊಡನೆ ದೀನದಲಿತರ ಆರ್ಥಿಕ ಸ್ವಾವಲಂಬನೆಗೆ ಮುನ್ನುಡಿ ಬರೆದ ಮಹಾತ್ಮ ಗಾಂಧೀಜಿ ಅವರು ಬದನವಾಳು ಗ್ರಾಮದಲ್ಲೂ ತರಬೇತಿ ಕೇಂದ್ರ ಸ್ಥಾಪಿಸಿದ್ದರು. ಬಟ್ಟೆ ನೇಯ್ಗೆ, ಬಣ್ಣಗಾರಿಕೆ, ಕತ್ತಾಳೆ ನಾರು, ಎಣ್ಣೇಗಾಣ, ರೇಷ್ಮೆ ಹುರಿಗೊಳಿಸುವಿಕೆ, ದೀಪದಕಡ್ಡಿ ಉತ್ಪಾದನೆ, ಮರಗೆಲಸಕ್ಕೂ ಮನ್ನಣೆ ನೀಡಲಾಗಿತ್ತು. ಇಲ್ಲಿ ತರಬೇತಿ ಪಡೆದ ಅಂದಿನ ಜನರ ಕುಲಕಸುಬನ್ನು ಇಂದಿನವರೂ ಅಡೆತಡೆಗಳ ನಡುವೆಯೂ ಕಾಪಿಟ್ಟಿದ್ದಾರೆ. 

‘ದೇವಾಂಗ ಸಮುದಾಯಕ್ಕೆ ಕೈಮಗ್ಗ ಮತ್ತು ಚರಕಗಳೇ ಉಸಿರಾಗಿದ್ದವು. ಈಗ ಇಲ್ಲಿನ ಗ್ರಾಮದಲ್ಲಿ ಕೈಮಗ್ಗಗಳೇ ನಶಿಸುತ್ತಿವೆ. ಹುರಿ ಮಿಷನ್ ಕಟ್ಟಿಕೊಂಡವರು ಬಸವಳಿದಿದ್ದಾರೆ. ಗಾಂಧೀ ಗ್ರಾಮದ ಪರಿಕಲ್ಪನೆಗೆ ಸ್ಫೂರ್ತಿ ತುಂಬಿದ ದೇವಾಂಗ ಕುಟುಂಬಗಳ ಆರ್ಥಿಕತೆಗೆ ಸರ್ಕಾರ ನೆರವು ಕಲ್ಪಿಸಬೇಕು’ ಎನ್ನುತ್ತಾರೆ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಆರ್. ಗೋಪಾಲಕೃಷ್ಣ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !