ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದಿಂದ ಕೈತುಂಬ ಫಸಲು!

Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

`ಒಕ್ಕಲತನದಾಗ ಏನೆಲ್ಲ ಐತ್ರಿ ಆದ್ರ ಮಾಡಬೇಕನ್ನೂ ಮನಸ್ ಬೇಕ್ರಿ, ಮೈಮುರದು ದುಡದ್ರ ಏನರ ಮಾಡಾಕ ಸಾಧ್ಯ. ಕಸಾನೂ ರಸಾ ಮಾಡಕಾಗತ್ರಿ...' ಎನ್ನುವ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಅಮರಾವತಿಯ ಸಹೋದರರು ಕಬ್ಬು, ಬಾಳೆ, ಕಬ್ಬು, ತೆಂಗು ಸೇರಿದಂತೆ ಹಲವು ಬೆಳೆ ಬೆಳೆದು ಯಶಸ್ವಿ ಕೃಷಿಕರೆನಿಸಿಕೊಂಡಿದ್ದಾರೆ.

ಇವರೇ ಸಂದಿಗವಾಡ ಕುಟುಂಬದ ಕಳಕಪ್ಪ ಹಾಗೂ ನಿಂಗಪ್ಪ. ಅಮರಾವತಿ-ಬಿಂಜವಾಡಗಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ನೀರಾವರಿಗೆ ಒಳಪಟ್ಟ 32 ಎಕರೆ ತೋಟ ಮತ್ತು ಒಣಬೇಸಾಯದ ಹೊಲಗಳು ಇವರ ಪ್ರಯೋಗಾಲಯ ಮತ್ತು ಪ್ರಾತ್ಯಕ್ಷಿಕೆಯ ಕೇಂದ್ರಗಳು. ಕೃಷಿ ಇಲಾಖೆಯಲ್ಲಿ 32 ವರ್ಷ ಸಹಾಯಕ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಿಂಗಪ್ಪ ಈ ಪ್ರಯೋಗದ ರೂವಾರಿ.

ತೋಟವನ್ನು ಅಗತ್ಯಕ್ಕೆ ತಕ್ಕಂತೆ ತುಂಡುಗಳನ್ನಾಗಿ ಮಾಡಿ ಪ್ರತಿ ತುಂಡಿಗೆ ಸುತ್ತಲೂ ಬದು, ಇಳುಕಲಿನಲ್ಲಿ ಗುಂಡಾವರ್ತಿ ನಿರ್ಮಿಸಿ ಹನಿ ನೀರು ಪೋಲಾಗದಂತೆ ಮಾಡಿದ್ದಾರೆ. ಕೊಳವೆಬಾವಿಗಳ ಮರುಜಲಪೂರಣಕ್ಕಾಗಿ ಕೊಳವೆಬಾವಿಗಳ ಸಮೀಪ ಬೃಹತ್ ಕೆರೆ ಮಾಡಿದ್ದಾರೆ. ನೈಸರ್ಗಿಕ, ಸ್ವಾವಲಂಬಿ ಕೃಷಿಗೆ ಪೂರಕವಾಗುವಂತೆ ಮನೆಯಲ್ಲಿ ಆಕಳುಗಳನ್ನು ಸಾಕಿದ್ದಾರೆ.

ಗೋಬರ್ ಗ್ಯಾಸ್ ಗುಂಡಿ ಮಾಡಿಸಿ ಮಿಥೇನ್ ಗ್ಯಾಸನ್ನು ಅಡುಗೆಗೆ, ಅದರಿಂದ ಬರುವ ತ್ಯಾಜ್ಯ ಮತ್ತು ಗೋಮೂತ್ರವನ್ನು ಪೈಪ್ ಮೂಲಕ ನೇರವಾಗಿ ಬೆಳೆಗಳಿಗೆ ಕೊಡುವುದಲ್ಲದೇ ಸ್ಲರಿ (ರಾಡಿ)ಯನ್ನು ಎರೆಹುಳು ಗೊಬ್ಬರಕ್ಕೆ ಬಳಸುತ್ತಾರೆ. ಭೂಮಿಯ ಗುಣಮಟ್ಟಕ್ಕೆ ಅಗತ್ಯ ರಸಗೊಬ್ಬರಗಳನ್ನು ಪ್ರತಿ 45 ದಿನಕ್ಕೆ 1 ಟನ್ ಎರೆಹುಳು ಗೊಬ್ಬರ ಉತ್ಪಾದಿಸಿ ಬೆಳೆಗಳಿಗೆ ಹಾಕುವರಲ್ಲದೇ 30-40 ಕೆ.ಜಿ ಎರೆಹುಳುಗಳನ್ನು ತೇವಾಂಶ ಕಾಪಾಡಲು ಮತ್ತು ತ್ಯಾಜ್ಯ ಗೊಬ್ಬರವಾಗಿ ಮಾರ್ಪಾಡಾಗಲು ತೋಟದಲ್ಲಿ ಅಲ್ಲಲ್ಲಿ ಬಿಡುತ್ತಾರೆ.

ಒಣಗಿದ ತೆಂಗಿನ ಗರಿ, ದಂಟು, ಕಬ್ಬು-ಬಾಳೆ ರವದಿ ಎಲ್ಲವನ್ನು ದೊಡ್ಡ ಗುಂಡಿಗೆ ಹಾಕಿ ಮೇಲೆ ಸಗಣಿ, ಸ್ಲರಿ, ಗೋಮೂತ್ರ ಹಾಕಿ ವರ್ಷದುದ್ದಕ್ಕೂ ಆಗುವಷ್ಟು ಸತ್ವಯುತ ಕಾಂಪೋಸ್ಟ್ ಗೊಬ್ಬರ ತಯಾರಿಸುತ್ತಾರೆ. 

ಕಸವೂ ರಸ

ತೋಟದಲ್ಲಿರುವ ಬೆಳೆಗಳ ತ್ಯಾಜ್ಯ ಮತ್ತು ಕಸವನ್ನು ಸುಟ್ಟು ಹಾಕದೇ ಟ್ರ್ಯಾಕ್ಟರ್ ಚಾಲಿತ ಆಧುನಿಕ ಉಪಕರಣಗಳಿಂದ ಮಣ್ಣಿನೊಳಗೆ ಸೇರಿಸಿ ಭೂಮಿಯ ಫಲವತ್ತತೆ ಮತ್ತು ತೇವಾಂಶ ಕಾಪಾಡುತ್ತಾರೆ. ತೋಟದ ಬದುಗುಂಟ ವಿವಿಧ ಜಾತಿಯ ಹಸಿರೆಲೆ ಗೊಬ್ಬರ, ಹಣ್ಣಿನ ಗಿಡ ನೆಟ್ಟಿದ್ದಾರೆ. ವಿವಿಧ ಪ್ರಾಣಿ, ಪಕ್ಷಿ, ಕೀಟಗಳ ಜೀವಸರಪಳಿಯನ್ನು ಇವರ ಜಮೀನಿನಲ್ಲಿ ಕಾಣಬಹುದು.

ನಾಲ್ಕು ವರ್ಷಗಳಿಂದ ಸುಧಾರಿತ ಬೇಸಾಯ ಪದ್ಧತಿಯಲ್ಲಿ ಕಬ್ಬು ಬೆಳೆದು ಸಮೀಪದ ಸದಾಶಿವ ಸಕ್ಕರೆ ಕಾರ್ಖಾನೆಗೆ ಮಾರಾಟ ಮಾಡಿದ್ದಾರೆ. ಸದ್ಯ ಅವರ ತೋಟದಲ್ಲಿ  ಸಿ.ಓ 86032 ತಳಿಯ ಕಬ್ಬು ನಳನಳಿಸುತ್ತಿದೆ. ಜೋಡುಸಾಲು ಪದ್ಧತಿಯಲ್ಲಿ ಸಾಲಿನಿಂದ ಸಾಲಿಗೆ 6 ಅಡಿ ಅಂತರದಲ್ಲಿ ಕಬ್ಬು ನಾಟಿ ಮಾಡಿದ್ದಾರೆ. ಕೃಷಿ ಸಂಬಂಧಿ ವಿಷಯಗಳ ಕುರಿತು ಅನುಭವಪೂರ್ಣವಾಗಿ ತಾಸುಗಟ್ಟಲೇ ಮಾತನಾಡುವ ನಿಂಗಪ್ಪರವರು ಕೃಷಿ ತಪಸ್ಸಿದ್ದಂತೆ ಎನ್ನುವ ಮನೋಭಾವದವರು.

ಮೊದಲ ಬೆಳೆ ಅಥವಾ ಕುಳೆ ಬೆಳೆ ಇದ್ದರೂ ಎಕರೆಗೆ 80-90 ಟನ್ ಇಳುವರಿಯನ್ನು ನಿರಾಯಾಸವಾಗಿ ಪಡೆಯಬಹುದೆನ್ನುವ ಆತ್ಮವಿಶ್ವಾಸ ಅವರಲ್ಲಿದೆ. ಅಗತ್ಯಕ್ಕೆ ತಕ್ಕಂತೆ ಆಳುಗಳಿದ್ದರೂ ಮೇಲ್ವಿಚಾರಣೆ ಮಾಡದೇ ಇವರಿಗೆ ಸಮಾಧಾನವಿಲ್ಲ. ದಿನದ ಬಹುಪಾಲು ಸಮಯವನ್ನು ತೋಟದ ನಿರ್ವಹಣೆಯಲ್ಲಿ ಕಳೆಯುವ ನಿಂಗಪ್ಪ ಸಂದಿಗವಾಡರು ತಮ್ಮ ಕಬ್ಬಿನ ಬೆಳೆಯಷ್ಟೇ ಚೈತನ್ಯವಾಗಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಇವರ ತೋಟಕ್ಕೆ ಭೇಟಿ ನೀಡುವುದರೊಂದಿಗೆ ಇತರ ರೈತರಿಗೆ ಇವರ ಅನುಭವ ಹಂಚಿಕೆಯಾಗುವಂತೆ ಮಾಡಿದ್ದಾರೆ. ಸಂಪರ್ಕಕ್ಕೆ 9448021553
- ಸಿದ್ಧಲಿಂಗಪ್ಪ ಬೀಳಗಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT