ಸೌತೆ ಬೆಳೆಯಲ್ಲಿ ₹ 1 ಲಕ್ಷ ಲಾಭ

7
ಇಂಚಗೇರಿಯ ಬರಡು ಭೂಮಿಯಲ್ಲಿನ ಕೃಷಿ ಯಶೋಗಾಥೆ

ಸೌತೆ ಬೆಳೆಯಲ್ಲಿ ₹ 1 ಲಕ್ಷ ಲಾಭ

Published:
Updated:
Deccan Herald

ಹೊರ್ತಿ: ಒಂದು ಎಕರೆ ಬರಡು ಭೂಮಿ. ಸಮತಟ್ಟುಗೊಳಿಸುವಲ್ಲೇ ಹೈರಾಣ. ಛಲ ಬಿಡದ ತ್ರಿವಿಕ್ರಮನಂತೆ ಹೊಸ ಮಣ್ಣು ಹಾಕಿ, ಅದರೊಳಗೆ ಕೊಟ್ಟಿಗೆ ಗೊಬ್ಬರ, ಕುರಿ–ಮೇಕೆ ಗೊಬ್ಬರ ತುಂಬಲು ₹ 50,000 ಖರ್ಚು. ಈ ಭೂಮಿಗೆ ಸೌತೆ ಬೀಜ ಹಾಕಿ, ಹನಿ ನೀರಾವರಿಯಲ್ಲಿ ನೀರುಣಿಸಿ, ಖರ್ಚು ಕಳೆದು ₹ 1 ಲಕ್ಷ ಲಾಭ ಗಳಿಸಿದ್ದಾರೆ ಇಂಚಗೇರಿಯ ಬಸವರಾಜ ನಾವಿ.

ಬಸವರಾಜ ನಾವಿಗೆ ಟ್ರ್ಯಾಕ್ಟರ್‌ ಚಾಲಕ, ಕೂಲಿ ಕಾರ್ಮಿಕ ಖಾಜಪ್ಪ ಬೆಳ್ಳೆನವರ ಸಾಥ್‌ ನೀಡಿದ್ದು, ಇಬ್ಬರ ಪರಿಶ್ರಮಕ್ಕೆ ಬಂಪರ್‌ ಫಸಲು ಸಿಕ್ಕಿದೆ. ಈಗಾಗಲೇ ಲಾಭ ಸಿಕ್ಕಿದೆ. ವಾರಕ್ಕೆ ಮೂರು ಬಾರಿ ತಲಾ 50ಕ್ಕೂ ಹೆಚ್ಚು ಟ್ರೇ ಸೌತೆಕಾಯಿ ಮಾರಾಟ ಮಾಡಿದ್ದಾರೆ.

ಮುಂಗಾರು–ಹಿಂಗಾರು ಮಳೆಯಿಲ್ಲ. ಬೋರ್‌ವೆಲ್‌ನ ಅಂತರ್ಜಲ ಕ್ಷೀಣಿಸಿತ್ತು. ಬೆಳೆಗೆ ನೀರಿನ ಸಮಸ್ಯೆ ಬಾಧಿಸಲಾರಂಭಿಸುತ್ತಿದ್ದಂತೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಅರ್ಧ ಬೆಳೆ ಉಳಿಸಿಕೊಂಡರು. ಇನ್ನರ್ಧ ಬೆಳೆ ಒಣಗಿ ಹೋಯ್ತು. ಅದೂ ಬಂದಿದ್ದರೆ ಇನ್ನೊಂದು ಲಕ್ಷ ಲಾಭ ಸಿಗ್ತಿತ್ತು ಎನ್ನುತ್ತಾರೆ ಬಸವರಾಜ ನಾವಿ.

‘ಒಂದು ಎಕರೆ ಭೂಮಿ ಗರಸು ಕಲ್ಲು ಮರಡಿಯಿಂದ ತುಂಬಿತ್ತು. ಸಮತಟ್ಟುಗೊಳಿಸುವುದೇ ದುಸ್ತರವಾಗಿತ್ತು. ಕೃಷಿ ಮಾಡಬೇಕು ಎಂಬ ಕನಸಿನೊಂದಿಗೆ ಭೂಮಿಯ ಒಡಲಿಗೆ ಕಾಲಿಟ್ಟೆ. ದುಡ್ಡು ಖರ್ಚು ಮಾಡಲು ಹಿಂದೇಟು ಹಾಕಲಿಲ್ಲ.

ಹೊರಗಿನಿಂದ ಹೊಸ ಮಣ್ಣು ತಂದು ತುಂಬಿದೆ. ಇದರ ಜತೆಯಲ್ಲೇ ಕೊಟ್ಟಿಗೆ ಗೊಬ್ಬರ, ಕುರಿ–ಮೇಕೆ ಗೊಬ್ಬರ ತುಂಬಿದೆ. ಭೂಮಿ ಬೇಸಾಯಕ್ಕೆ ಹಸನಾಯ್ತು. ಸೌತೆ ಬೀಜ ಒಡಲಿಗೆ ಹಾಕಿದೆ. ಬಳ್ಳಿ ಬೆಳೆಯಿತು. ಬೆಳೆ ಫಸಲು ಕೊಡುವ ಸಂದರ್ಭ ನೀರು ಕೈಕೊಟ್ಟಿತ್ತು. ಹಲವು ಅಡ್ಡಿಗಳ ನಡುವೆಯೂ ಸೌತೆ ಕೈ ಹಿಡಿಯಿತು. ನೀರಿನ ಇಳುವರಿ ನೋಡಿಕೊಂಡು, ಹೊಸ ಕೃಷಿ ಪ್ರಯೋಗ ಮಾಡುವ ಚಿಂತನೆಯಿದೆ’ ಎಂದು ನಾವಿ ‘ಪ್ರಜಾವಾಣಿ’ ಬಳಿ ತಮ್ಮ ಯಶೋಗಾಥೆ ಬಿಚ್ಚಿಟ್ಟರು.

‘ಕೃಷಿ ಕೆಲಸ ಪವಿತ್ರ ಕಾಯಕ. ನಿಷ್ಠೆ, ಶ್ರದ್ಧೆಯಿಂದ ಭೂಮಿ ತಾಯಿಯ ಒಡಲಲ್ಲಿ ದುಡಿದರೆ ಎಂಥ ಭೀಕರ ಪರಿಸ್ಥಿತಿಯಲ್ಲೂ ತಾಯಿ ನಮ್ಮ ಕೈ ಬಿಡಲ್ಲ ಎಂಬುದಕ್ಕೆ ನಾವೇ ಸಾಕ್ಷಿ. ಹಾಕಿದ ಬಂಡವಾಳ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ’ ಎಂದು ಖಾಜಪ್ಪ ಬೆಳ್ಳೆನವರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !