ಶನಿವಾರ, ಫೆಬ್ರವರಿ 27, 2021
19 °C
80%ನಷ್ಟು ಬಿತ್ತನೆಯಾಗಿರುವ ಭೂಮಿಯಲ್ಲಿನ ಗೋಧಿ, ಕಡಲೆ, ಬಿಳಿ ಜೋಳ ಬೆಳೆಗಳೂ ಬಾಡುವಿಕೆ

ಹಿಂಗಾರಿಯಲ್ಲೂ ಮತ್ತೆ 20% ಜಮೀನು ಪಾಳು..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ಪ್ರಸ್ತುತ ವರ್ಷ ಜಿಲ್ಲೆಯ ವ್ಯಾಪ್ತಿಯಲ್ಲಿ ಮುಂಗಾರು–ಹಿಂಗಾರು ಎರಡೂ ಮಳೆ–ಬೆಳೆಗಳು ಕೈ ಕೊಟ್ಟಿವೆ. ಸಕಾಲಕ್ಕೆ ಮಳೆಯಾಗದ ಪರಿಣಾಮ ಜಿಲ್ಲಾ ಕೃಷಿ ಇಲಾಖೆ ನಿಗದಿಪಡಿಸಿಕೊಂಡಿದ್ದ ಗುರಿಯ ಬಿತ್ತನೆ ನಡೆದಿಲ್ಲ.

ಮುಂಗಾರಿ ಹಂಗಾಮಿನಲ್ಲಿ 81% ನಷ್ಟು ಮಾತ್ರ ಬಿತ್ತನೆ ನಡೆದಿತ್ತು. ಆರಂಭದಿಂದಲೂ ವರುಣನ ಮುನಿಸು ಕಾಡಿದ್ದರಿಂದ ಬಿತ್ತಿದ್ದ ಬೆಳೆಗಳು ವ್ಯಾಪಕ ಪ್ರಮಾಣದಲ್ಲಿ ಒಣಗಿದ್ದವು. ಹಲ ರೈತರು ಹಿಂಗಾರಿನಲ್ಲಿ ಚಲೋ ವರ್ಷಧಾರೆಯಾದರೆ ಬಿತ್ತನೆ ನಡೆಸಬೇಕು ಎಂಬ ಆಶಾಭಾವದಿಂದಲೇ ಮುಂಗಾರು ಪೀಕುಗಳನ್ನು ಹರಗಿ, ಹೊಲ ಸ್ವಚ್ಛಗೊಳಿಸಿದ್ದರು. ಇದರ ಜತೆ 19% ಭೂಮಿಯಲ್ಲಿ ರೈತರಿಗೆ ಬಿತ್ತಲು ಅವಕಾಶವೇ ಸಿಕ್ಕಿರಲಿಲ್ಲ.

ಹಿಂಗಾರು ಹಂಗಾಮಿನ ವರ್ಷಧಾರೆಯ ಅವಧಿಯಾದ ಸೆಪ್ಟೆಂಬರ್‌ ತಿಂಗಳಲ್ಲಿ ಮಳೆಯ ಕೊರತೆ ಜಿಲ್ಲೆಯಾದ್ಯಂಥ ವ್ಯಾಪಕವಾಗಿ ಕಾಡಿದ್ದರಿಂದ; ನಿಗದಿತ ಗುರಿಯಲ್ಲಿ 80% ಮಾತ್ರ ಬಿತ್ತನೆಯಾಯ್ತು. ಯಥಾಪ್ರಕಾರ ಮುಂಗಾರಿನಂತೆ, ಹಿಂಗಾರಿನಲ್ಲೂ 20% ಭೂಮಿಯಲ್ಲಿ ಬಿತ್ತನೆ ಚಟುವಟಿಕೆ ನಡೆದಿಲ್ಲ ಎಂದು ಕೃಷಿ ಇಲಾಖೆಯ ಅಂಕಿ–ಅಂಶಗಳು ದೃಢಪಡಿಸಿವೆ.

ಜಮೀನು ಪಾಳು ಬಿಟ್ಟ ಕೃಷಿಕರು:

ಮುಂಗಾರು–ಹಿಂಗಾರು ಎರಡೂ ಹಂಗಾಮಿನಲ್ಲಿ, ಜಿಲ್ಲೆಯಲ್ಲಿ ಚೆದುರಿದಂತೆ ವ್ಯಾಪಕವಾಗಿ ವರ್ಷಧಾರೆ ಸುರಿಯದಿದ್ದರಿಂದ ತಲಾ 20% ಜಮೀನಿನಲ್ಲಿ ಬಿತ್ತನೆಯೇ ನಡೆದಿಲ್ಲ. ಬಿತ್ತಲು ಹೊಲ ಅಣಿಗೊಳಿಸಿದ ರೈತರು ಆಶಾಭಾವದಿಂದ ಮುಗಿಲಿನತ್ತ ಚಿತ್ತ ಹರಿಸಿದರೂ ಮೇಘರಾಜ ಕೃಪೆ ತೋರಲಿಲ್ಲ.

ಬಿತ್ತಿದವರು ಎಲ್ಲವನ್ನೂ ಭೂ ತಾಯಿ ಒಡಲಿಗೆ ಸುರಿದು ಕೈ ಸುಟ್ಟುಕೊಂಡರೇ; ಬಿತ್ತದವರು ಸಹ ನಷ್ಟ ಅನುಭವಿಸಿದವರೇ. ಹೊಲ ಸ್ವಚ್ಛಗೊಳಿಸಿ, ಹದ ಮಾಡಲು ಸಾಕಷ್ಟು ರೊಕ್ಕ ವ್ಯಯಿಸಿದವರು. ಬಿತ್ತಲಿಕ್ಕಾಗಿ ಬಿತ್ತನೆ ಬೀಜ, ಔಷಧಿ, ಗೊಬ್ಬರವನ್ನು ಮನೆಯಲ್ಲಿ ತಂದಿಟ್ಟುಕೊಂಡು ನಷ್ಟ ಅನುಭವಿಸಿದರು.

‘4.30 ಲಕ್ಷ ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆಯ ಗುರಿಗೆ 3.47 ಲಕ್ಷ ಹೆಕ್ಟೇರ್‌ನಲ್ಲಿ ವಿವಿಧ ಮುಂಗಾರು ಬೆಳೆ ಬಿತ್ತಲಾಗಿತ್ತು. ಬಿತ್ತಿದ್ದ ತೊಗರಿ, ಸಜ್ಜೆ, ಸೂರ್ಯಕಾಂತಿ, ಹೆಸರು ಮಳೆ ಅಭಾವದಿಂದ ಒಣಗಿದವು. 83,000 ಹೆಕ್ಟೇರ್‌ ಭೂಮಿಯಲ್ಲಿ ಮುಂಗಾರು ಬಿತ್ತನೆ ನಡೆಯಲಿಲ್ಲ. ಬಿತ್ತಿದ್ದ ಬೆಳೆ ಒಣಗಿದ್ದರಿಂದ ಹಿಂಗಾರಿ ಬಿತ್ತನೆಗೆ ಈ ಹೊಲಗಳನ್ನು ಹದಗೊಳಿಸಲಾಗಿತ್ತು’ ಎಂದು ಜಿಲ್ಲಾ ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ಎ.ಪಿ.ಬಿರಾದಾರ ತಿಳಿಸಿದರು.

‘ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯ ವ್ಯಾಪ್ತಿಯ 6.08 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಗೆ 4.88 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಪ್ರಮುಖವಾಗಿ ಹಿಂಗಾರಿ ಜೋಳ, ಕಡಲೆಯನ್ನು ಬಿತ್ತಲಾಗಿತ್ತು. 2.08 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ನಡೆಯಲೇ ಇಲ್ಲ.

ತೆರೆದ ಬಾವಿ, ಕೊಳವೆಬಾವಿ ಆಶ್ರಿತ ನೀರಾವರಿಯಲ್ಲೂ ಇನ್ಮುಂದೆ ಬಿತ್ತನೆ ನಡೆಯಲ್ಲ. ಕಾಲುವೆಯಲ್ಲಿ ನೀರು ಹರಿಸುತ್ತಿದ್ದು, ಇನ್ನೂ 15 ದಿನ ಕಡಲೆ, ಗೋಧಿ ಬಿತ್ತನೆಗೆ ಅವಕಾಶವಿದೆ. ಕಾಲುವೆ ನೀರು ಸಿಗುವ ಇಂಡಿ, ಸಿಂದಗಿ, ವಿಜಯಪುರ ತಾಲ್ಲೂಕಿನ ವಿವಿಧೆಡೆ ಬಿತ್ತನೆ ನಡೆಯುವ ನಿರೀಕ್ಷೆಯಿದೆ’ ಎಂದು ಬಿರಾದಾರ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು