‘ಡ್ರ್ಯಾಗನ್‌ ಫ್ರೂಟ್‌’ ಒಣಭೂಮಿಯಲ್ಲಿ ವಿದೇಶಿ ಹಣ್ಣು!

7

‘ಡ್ರ್ಯಾಗನ್‌ ಫ್ರೂಟ್‌’ ಒಣಭೂಮಿಯಲ್ಲಿ ವಿದೇಶಿ ಹಣ್ಣು!

Published:
Updated:
‘ಡ್ರ್ಯಾಗನ್‌ ಫ್ರೂಟ್‌’ ಒಣಭೂಮಿಯಲ್ಲಿ ವಿದೇಶಿ ಹಣ್ಣು!

ಒಂಬತ್ತು ಎಕರೆ ಜಮೀನಿನಲ್ಲಿ ಶಾಲಾ ಮಕ್ಕಳು ಸಮವಸ್ತ್ರ ತೊಟ್ಟು ಪ್ರಾರ್ಥನೆಗೆ ಶಿಸ್ತುಬದ್ಧವಾಗಿ ಸಾಲಿನಲ್ಲಿ ನಿಂತಿರುವಂತೆ ಕಾಣುವ ಕಂಬದ ಸಾಲುಗಳು. ಕಂಬದ ಮೇಲೂ ತಟ್ಟೆ, ಅದರ ಮೇಲಿಂದ ಸುತ್ತಲೂ ಜೋತಾಡುವ ಮುಳ್ಳು ಬಳ್ಳಿಗಳು. ಬಳ್ಳಿಗಳ ನಡುವೆ ಗುಲಾಬಿ ಬಣ್ಣದ ಹಣ್ಣುಗಳ ಗೊಂಚಲು..!

ಚಿಕ್ಕಬಳ್ಳಾಪುರದ ಮರಳುಕುಂಟೆಯ ಕೃಷಿಕ ನಾರಾಯಣಸ್ವಾಮಿ, ಒಂಬತ್ತು ಎಕರೆ ಜಮೀನಿನಲ್ಲಿ ಬೆಳೆದಿರುವ ‘ಡ್ರ್ಯಾಗನ್ ಫ್ರೂಟ್’– ವಿದೇಶಿ ಹಣ್ಣಿನ ತಾಕಿನ ದೃಶ್ಯ ಹೀಗೇ ಕಾಣುತ್ತದೆ. ಕಂಬಗಳಲ್ಲಿ ತೂಗಾಡುತ್ತಿರುವ ಹಣ್ಣುಗಳು ಆಗಲೇ ಕೊಯ್ಲಿಗೆ ಬಂದುಬಿಟ್ಟಿವೆ. ಇದೇ ಮೊದಲಬಾರಿಗೆ ರೈತರೊಬ್ಬರು ಬೆಂಗಳೂರು ವ್ಯಾಪ್ತಿಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಡ್ರ್ಯಾಗನ್‌ ಫ್ರೂಟ್ ಬೆಳೆದಿದ್ದಾರೆ. ಮಳೆ ಕೊರತೆ, ಅಂತರ್ಜಲದ ಸಮಸ್ಯೆ ನಡುವೆ ಕೃಷಿ ಬೇಡವೇ ಬೇಡ ಎನ್ನುತ್ತಿರುವಾಗ, ನಾರಾಯಣಸ್ವಾಮಿ ಅವರ ಈ ಹಣ್ಣಿನ ಕೃಷಿ, ಕೆಲ ರೈತರಲ್ಲಿ ಅಚ್ಚರಿ ಮೂಡಿಸಿದೆ.

ಹಣ್ಣು ಬೆಳೆದಿರುವ ಹಿಂದಿನ ಕಥೆ: ನಾರಾಯಣ ಸ್ವಾಮಿ, ತಮ್ಮ ಪೌಲ್ಟ್ರಿಫಾರಂ ಗೊಬ್ಬರದಿಂದ ಜೈವಿಕ ಅನಿಲ ತಯಾರಿಕೆ ಕುರಿತು ಅಂತರ್ಜಾಲದಲ್ಲಿ ಮಾಹಿತಿ ಜಾಲಾಡುತ್ತಿದ್ದರು. ‘ಏನೋ ಹುಡಕಲು ಹೋಗಿ ಇನ್ನೇನೋ ಸಿಕ್ಕಿತು’ ಎನ್ನುವಂತೆ, ಆ ಮಾಹಿತಿ ಜಾಲಾಡುವಾಗ, ಈ ಹಣ್ಣಿನ ಕೃಷಿ ಬಗ್ಗೆ ಮಾಹಿತಿ ಸಿಕ್ಕಿತು. ಅಷ್ಟೇ ಅಲ್ಲ, ಹಣ್ಣಿಗಿರುವ ಮಾರುಕಟ್ಟೆ, ಅದರಲ್ಲಿರುವ ಔಷಧೀಯ ಗುಣ.. ಹೀಗೆ ಹಲವು ಪ್ರಮುಖ ಅಂಶಗಳು ಸಿಕ್ಕವು. ಕೃಷಿ ವಿಚಾರದಲ್ಲಿ ತುಸು ಸಾಹಸ ಪ್ರವೃತ್ತಿಯವರಾದ ನಾರಾಯಣಸ್ವಾಮಿ, ಮರು ಯೋಚನೆ ಮಾಡದೇ, ಮರಳುಕುಂಟೆಯ ಜಮೀನಿನಲ್ಲಿ ಡ್ರ್ಯಾಗನ್‌ ಪ್ರೂಟ್ ಸಸಿ ನಾಟಿಗೆ ನಿರ್ಧರಿಸಿದರು.

ನಿರ್ಧಾರವನ್ನೇನೋ ಮಾಡಿದರು. ಆದರೆ, ಸಸಿಗಳು ಸಿಗಬೇಕಲ್ಲ. ಸರಿ, ಡ್ರ್ಯಾಗನ್‌ ಹಣ್ಣಿನ ಸಸಿಗಳಿಗಾಗಿ ರಾಜ್ಯ ಸುತ್ತಾಡಿದರು. ನೆರೆಯ ಆಂಧ್ರ, ಮಹಾರಾಷ್ಟ್ರಕ್ಕೂ ಹೋಗಿ ಬಂದರು. ಕೊನೆಗೆ ಮಹಾರಾಷ್ಟ್ರದ ಪಿಲಿವ್ ಎಂಬ ಊರಿನ ನರ್ಸರಿಯಿಂದ ಸಸಿಗಳನ್ನು ಖರೀದಿಸಿ ತಂದರು. ದುರದೃಷ್ಟ, ಅದೇ ವೇಳೆ ಜೋರಾಗಿ ಮಳೆ ಬಂದು, ಒಂದಷ್ಟು ಸಸಿಗಳು ಕೊಳೆತವು. ಆದರೆ, ಧೃತಿಗೆಡದ ನಾರಾಯಣಸ್ವಾಮಿ, ಇರುವ ಸಸಿಗಳನ್ನೇ ಬಳಸಿಕೊಂಡು (ಕಳ್ಳಿ ಜಾತಿಯ ಬಳ್ಳಿಯಾದ್ದರಿಂದ ಕಾಂಡದ ಒಂದು ಭಾಗದಿಂದ ಸಸಿ ಬೆಳೆಸುತ್ತಾರೆ) ತಾವೇ ನರ್ಸರಿ ಮಾಡಿ, ಅಗತ್ಯ ಸಸಿಗಳನ್ನು ಅಭಿವೃದ್ಧಿಪಡಿಸಿಕೊಂಡರು.

ಸಸಿ ಬೆಳೆಸಲು ನಾಲ್ಕು ರಂಧ್ರವುಳ್ಳ ಚೌಕಾಕಾರದ ಪ್ಲೇಟ್ ಅಳವಡಿಸಿದ ಸಿಮೆಂಟ್ ಕಂಬಗಳು ಬೇಕು. ಎಷ್ಟು ಹುಡುಕಿದರೂ, ಅಂಥ ಕಂಬಗಳು ಸಿಗಲಿಲ್ಲ. ಹಠ ಬಿಡದ ಅವರು, ತಾವೇ ಸಿಮೆಂಟ್ ಕಂಬಗಳನ್ನು ತಯಾರಿಸಿಕೊಂಡು ಸಸಿ ನಾಟಿ ಆರಂಭಿಸಿದರು. ನೀರಿಗಾಗಿ ಕೊಳವೆಬಾವಿ ಕೊರೆಸಿದರು. ಜತೆಗೆ, ಮಳೆ ನೀರು ಸಂಗ್ರಹಕ್ಕಾಗಿ ಬೃಹತ್ ಕೃಷಿ ಹೊಂಡ ತೆಗೆಸಿದರು. ಮಳೆ ನೀರು, ಬೋರ್ ನೀರು ಬಳಸಿಕೊಂಡು ತುಂತುರು ನೀರಾವರಿ ಮೂಲಕ ಒಂಬತ್ತು ಎಕರೆಗೆ ಮಿತವಾಗಿ ನೀರು ಹಾಯಿಸುತ್ತಾ, ಡ್ರ್ಯಾಗನ್ ಫ್ರೂಟ್ ಬೆಳೆಸಲಾರಂಭಿಸಿದರು.

ಸಮಶೀತೋಷ್ಣ ವಲಯ ಅಗತ್ಯ : ಡ್ರ್ಯಾಗನ್‌ ಫ್ರೂಟ್ ಬೆಳೆಯಲು ಸಮಶೀತೋಷ್ಣ ವಾತಾವರಣ ಬೇಕು. ಕಡಿಮೆ ಮಳೆ ಬೀಳುವ ಪ್ರದೇಶದಲ್ಲೂ ಬೆಳೆಯಬಹುದು. ಈ ಎರಡು ವಿಷಯದಲ್ಲಿ ಚಿಕ್ಕಬಳ್ಳಾಪುರದ ವಾತಾವರಣ ಡ್ರ್ಯಾಗನ್‌ ಫ್ರೂಟ್ ಬೆಳೆಯಲು ಸೂಕ್ತವಾಗಿದೆ. ಇದಕ್ಕೆ ನಾರಾಯಣಸ್ವಾಮಿ ಅವರ ಕೃಷಿಯೇ ಉದಾಹರಣೆ ಎನ್ನುವುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ‘ಈ ವರ್ಷ ತೋಟಗಾರಿಕೆ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ‘ಡ್ರ್ಯಾಗನ್‌ ಫ್ರೂಟ್‌’ ಬೆಳೆ ಉತ್ತೇಜಿಸಲು ನಿರ್ಧರಿಸಿದೆ. ಅದಕ್ಕಾಗಿ ಪ್ರಾಯೋಗಿಕವಾಗಿ 5 ಎಕರೆಯಲ್ಲಿ ಈ ಬೆಳೆ ಬೆಳೆಯಲು ರೈತರಿಂದ ಅರ್ಜಿ ಆಹ್ವಾನಿಸಿದ್ದೇವೆ. ಒಂದು ಎಕರೆಗೆ ₹40 ಸಾವಿರ ಸಹಾಯಧನ ನೀಡಲಾಗುತ್ತದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು.

ಪರಿಶ್ರಮಕ್ಕೆ ಸಿಕ್ಕಿದ ಫಲ : ಪರಿಶ್ರಮ, ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆಸಿದ ಹಣ್ಣಿನ ಗಿಡಗಳು ಒಂದೂವರೆ ವರ್ಷದ ನಂತರ ಫಲ ನೀಡಲಾರಂಭಿಸಿವೆ. ಫಸಲು ಚೆನ್ನಾಗಿ ಬಂದಿದೆ. ಪ್ರತಿ ಗಿಡದಲ್ಲೂ ಹಣ್ಣುಗಳು ಜೋತಾಡುತ್ತಿವೆ. ತಿಂಗಳಿನಿಂದ ಮೊದಲ ಕೊಯ್ಲು ಶುರುಮಾಡಿದ್ದಾರೆ. ಬೆಂಗಳೂರಿನ ರಿಲಯನ್ಸ್, ಮೆಟ್ರೋ, ಹಾಪ್‌ಕಾಮ್ಸ್ ಗಳಿಂದ ಬೇಡಿಕೆ ಬಂದಿದೆ. ಸದ್ಯ ಒಂದು ಕೆ.ಜಿ. ಹಣ್ಣಿಗೆ ₹100 ರಿಂದ ₹120 ರವರೆಗೆ ಬೆಲೆ ಸಿಗುತ್ತಿದೆ. ‘ಬೆಂಗಳೂರಿನ ಕೆಲ ವರ್ತಕರು ನೇರವಾಗಿ ಹಣ್ಣನ್ನು ಖರೀದಿಸಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರದ ಮಳಿಗೆಗಳಿಗೂ ಕೊಡುತ್ತಿದ್ದೇನೆ. ಹಣ್ಣಿನ ಬಗ್ಗೆ ಕರಪತ್ರ ಮಾಡಿಸಿ ಹಂಚಿಸಿದ್ದೇನೆ’ ಎನ್ನುತ್ತಾ ಮಾರುಕಟ್ಟೆ ಬಗ್ಗೆ ವಿವರಿಸುತ್ತಾರೆ ನಾರಾಯಣ ಸ್ವಾಮಿ.
ಚಿಕ್ಕಬಳ್ಳಾಪುರದ ಕೃಷಿ ಭೂಮಿಯಲ್ಲಿ ವಿದೇಶಿ ಹಣ್ಣು ಬೆಳೆದಿರುವುದನ್ನು ಸುತ್ತಲಿನ ರೈತರು ಅಚ್ಚರಿಯಿಂದ ನೋಡುತ್ತಿದ್ದಾರೆ. ಮಾರುಕಟ್ಟೆಯಲ್ಲೂ ಹೊಸ ಹಣ್ಣಿನ ರುಚಿ ಸವಿಯುವ ಗ್ರಾಹಕರೂ ಹೆಚ್ಚುತ್ತಿದ್ದಾರೆ. ‘ಡ್ರ್ಯಾಗನ್‌ ಫ್ರೂಟ್‌’ ಕೃಷಿ ಕುರಿತ ಮಾಹಿತಿ ಹಂಚಿಕೆಗಾಗಿ ನಾರಾಯಣ ಸ್ವಾಮಿ ಅವರ ಸಂಪರ್ಕ ಸಂಖ್ಯೆ: 94496 52720.

(ಸಮಯ : ಸಂಜೆ 4 ರಿಂದ 6ಗಂಟೆಯೊಳಗೆ).

ಚಿತ್ರಗಳು: ಲೇಖಕರವು

 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry