ಶುಕ್ರವಾರ ರಾತ್ರಿ ಅಕ್ಕಿರಾಂಪುರದ ಎಪಿಎಂಸಿ ಮೈದಾನ ಇನ್ನೂ ಕತ್ತಲೆಯ ಮಡಿಲಲ್ಲೇ ಮಲಗಿತ್ತು. ಆದರೆ ದೂರದಿಂದ ಬರುವ ಟ್ರಕ್ಗಳ, ಪಿಕ್ಅಪ್ ವಾಹನಗಳ, ಆಟೊಗಳ ಬೆಳಕು ಆ ಕತ್ತಲೆಯನ್ನು ನಿಧಾನವಾಗಿ ಹಿಮ್ಮೆಟ್ಟಿಸುತ್ತಿತ್ತು. ಹೆಡ್ಲೈಟ್ಗಳ ತೀಕ್ಷ್ಣ ಬೆಳಕು ಮಣ್ಣಿನ ಮೈದಾನದಲ್ಲಿ ಉದ್ದನೆಯ ನೆರಳು ಬಿಡಿಸುತ್ತಿತ್ತು–ಕಾಲಕಾಲಕ್ಕೆ ಚಲಿಸುವ, ಮರುಕ್ಷಣದಲ್ಲೇ ಅಳಿದುಹೋಗುವ ನೆರಳು.

ಒಂದು ಟ್ರಕ್ ನಿಲ್ಲುತ್ತದೆ. ಎಂಜಿನ್ ಶಬ್ದ ನಿಧಾನವಾಗಿ ಕಡಿಮೆಯಾಗುತ್ತದೆ. ಹಿಂಭಾಗದ ಬಾಗಿಲು ತೆರೆದುಕೊಳ್ಳುತ್ತದೆ. ಒಟ್ಟಿಗೆ ಹೊರಬೀಳುವ ಶಬ್ದ: ‘ಮೇ... ಮೇ...’

ಕುರಿ–ಮೇಕೆಗಳು ಒಂದರ ಮೇಲೊಂದು ತುಳಿದು, ಹಗ್ಗಕ್ಕೆ ಸಿಕ್ಕಿಕೊಂಡಂತೆ, ಮಣ್ಣಿನ ಮೇಲೆ ಇಳಿಯುತ್ತವೆ. ಕೆಲವು ಕ್ಷಣ ಗಾಬರಿಯಿಂದ ನಿಂತು, ನಂತರ ಗುಂಪಾಗಿ ಸಾಗಲು ಶುರುಮಾಡುತ್ತವೆ. ಅವುಗಳ ಕಾಲಿನ ತಾಳಕ್ಕೆ ದೂಳು ಮೇಲೇಳುತ್ತದೆ. ಗಾಳಿಯಲ್ಲಿ ಮಣ್ಣು, ಪ್ರಾಣಿಗಳ ವಾಸನೆ, ಚಹಾದ ಬಿಸಿ ಹೊಗೆ ಎಲ್ಲವೂ ಒಂದೇ ಬಾರಿ ಮೂಗಿಗೆ ತಾಕುತ್ತವೆ. ಆ ವಾಸನೆಗೆ ಈ ಸಂತೆಯದೇ ಆದ ಒಂದು ಗುರುತು ಇದೆ.

ಹೀಗೆ ಆ ಸಂತೆ ಆರಂಭವಾಗುತ್ತದೆ. ಇದು ಸಾಮಾನ್ಯ ಮಾರುಕಟ್ಟೆಯಲ್ಲ. ಸುಮಾರು ಏಳು ದಶಕಗಳ ಇತಿಹಾಸ ಹೊಂದಿರುವ, ರಾಜ್ಯದ ಅತಿ ದೊಡ್ಡ ಗ್ರಾಮೀಣ ಭಾಗದ ಕುರಿ–ಮೇಕೆ ವಹಿವಾಟು ಕೇಂದ್ರಗಳಲ್ಲಿ ಒಂದಾದ ಅಕ್ಕಿರಾಂಪುರದ ಸಂತೆ. ಇಲ್ಲಿ ವ್ಯಾಪಾರ ಮಾತ್ರ ನಡೆಯೋದಿಲ್ಲ;ಜನರ ಜೀವನವೇ ನಡೆಯುತ್ತದೆ.

ಶುಕ್ರವಾರ ರಾತ್ರಿಯಿಂದಲೇ ಇಲ್ಲಿ ಚಟುವಟಿಕೆಗಳು ಆರಂಭವಾಗುತ್ತವೆ. ತುಮಕೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಮಧುಗಿರಿ ಭಾಗಗಳಿಂದ, ಹಾಗೇ ಆಂಧ್ರಪ್ರದೇಶದ ಹಿಂದೂಪುರ, ಮಡಕಶಿರಾ, ಪೆನುಗೊಂಡ ಪ್ರದೇಶಗಳಿಂದ ವಾಹನಗಳು ಸಾಲುಗಟ್ಟಿ ಬರುತ್ತವೆ. ಕೆಲವು ವಾಹನಗಳು ಮಧ್ಯರಾತ್ರಿ ತಲುಪುತ್ತವೆ. ಇನ್ನೂ ಕೆಲವು ಮುಂಜಾನೆ ಮುಟ್ಟುತ್ತವೆ.

ಪ್ರತಿ ಟ್ರಕ್ ಒಂದೊಂದು ಕಥೆ ಹೊತ್ತು ತರುತ್ತದೆ. ಒಂದು ಕುಟುಂಬದ ಆಸೆ, ಹಲವು ತಿಂಗಳ ಶ್ರಮ, ಕೆಲವೊಮ್ಮೆ ಸಾಲದ ಒತ್ತಡ.

ಕೆಲವರು ಟ್ರಕ್ಗಳಲ್ಲಿ, ಕೆಲವರು ಟೆಂಪೊಗಳಲ್ಲಿ, ಇನ್ನೂ ಕೆಲವರು ಆಟೊಗಳಲ್ಲಿ ಕುರಿ–ಮೇಕೆಗಳನ್ನು ತರುತ್ತಾರೆ. ಹಗ್ಗಕ್ಕೆ ಬಿಗಿದ ಅವುಗಳು ಗಾಬರಿಯಿಂದ ಬೆದರಿ ಒಂದೇ ಸಮನೆ ಅರುಚುತ್ತಲೇ ಇರುತ್ತವೆ. ಕೆಲವೊಮ್ಮೆ ಒಮ್ಮೆಗೇ ಕೂಗು. ಕೆಲವೊಮ್ಮೆ ಮೌನ. ಅದು ಇನ್ನಷ್ಟು ಗಾಢ.

ರೈತರು ಮಾರುಕಟ್ಟೆಯ ಶೆಡ್ಗಳಲ್ಲಿ, ವಾಹನಗಳ ಪಕ್ಕದಲ್ಲಿ, ಹಗ್ಗದ ಮೇಲೆ ತಲೆ ಇಟ್ಟು ಮಲಗುತ್ತಾರೆ. ಕೆಲವರು ಕಣ್ಣು ಮುಚ್ಚಿದರೂ, ಕಿವಿ ಸದಾ ಎಚ್ಚರದಲ್ಲೇ ಇರುತ್ತದೆ. ಚಹಾ ಅಂಗಡಿಗಳ ಬಳಿ ಸಣ್ಣ ಗುಂಪುಗಳು. ಒಂದು ಕಪ್ ಚಹಾ, ಒಂದು ಧಮ್, ಆಗಾಗ ಲೋಕಾಂತರ ಹರಟೆ. ಆಮ್ಲೇಟ್, ಬಿರಿಯಾನಿ ಅಂಗಡಿಗಳ ಪರಿಮಳ ಹೊಟ್ಟೆ ನೆನಪಿಸುತ್ತದೆ. ಅಂಗಡಿಯಿಂದ ಕೇಳಿಬರುವ ರಾಜ್ಕುಮಾರ್ ಹಳೆಯ ಹಾಡುಗಳು, ಕೈಯಲ್ಲಿರುವ ಮೊಬೈಲ್ ರೀಲ್ಸ್ಗಳು ಇವೆಲ್ಲ ಸೇರಿ ಸಂತೆಯನ್ನು ಎಚ್ಚರವಾಗಿರಿಸುತ್ತವೆ.

ಬೆಳಗಿನ 2 ಗಂಟೆಗೆ ವಹಿವಾಟು ಆರಂಭವಾಗುತ್ತದೆ. ಇಲ್ಲಿ ತೂಕದ ಯಂತ್ರಗಳಿಗಿಂತ ಅನುಭವವೇ ಮುಖ್ಯ. ಒಬ್ಬ ಖರೀದಿದಾರ ಕುರಿ–ಮೇಕೆಯ ಸೊಂಟದ ಭಾಗವನ್ನು ಒತ್ತಿ, ಅದರ ಹಲ್ಲುಗಳನ್ನು ನೋಡಿ ತೂಕ, ಆರೋಗ್ಯ, ಮಾಂಸದ ಗುಣವನ್ನು ಅಂದಾಜು ಮಾಡುತ್ತಾನೆ. ಅವನ ಬೆರಳುಗಳಿಗೆ ವರ್ಷಗಳ ಅನುಭವ ಜೋಡಿಸಿಕೊಂಡಿರುತ್ತದೆ.

ರೈತನ ಬೆಲೆ ಸ್ವಲ್ಪ ಜಾಸ್ತಿ. ಅವನ ಕಣ್ಣಿನಲ್ಲಿ ನಿರೀಕ್ಷೆ.

‘ಇಷ್ಟು ಸಣ್ಣ ಮರೀಗೆ ರೇಟ್ ಜಾಸ್ತಿ ಆಯ್ತು!’

ಮಧ್ಯೆ ಚೌಕಾಶಿ. ಸಣ್ಣ ಜಗಳದಂತೆ ಕಾಣುವ ಮಾತುಕತೆ. ಧ್ವನಿ ಸ್ವಲ್ಪ ಏರುತ್ತದೆ, ಮತ್ತೆ ಇಳಿಯುತ್ತದೆ. ಕೊನೆಗೆ ಒಂದು ರೇಟ್ ಫಿಕ್ಸ್ ಆಗುತ್ತದೆ. ಅಲ್ಲಿಗೆ ಚೌಕಾಸಿ ಮುಗಿಯುತ್ತದೆ. ರೈತ ಮತ್ತು ಖರೀದಿದಾರ ಇಬ್ಬರ ಮುಖದಲ್ಲೂ ಗೆಲುವಿನ ಗೆರೆಗಳು ಮೂಡುತ್ತವೆ.

‘ತೂಕದ ಯಂತ್ರ ತರಬೇಕು’ ಎನ್ನುವ ಒತ್ತಾಯವೂ ಇದೆ. ತಮಿಳುನಾಡು ಭಾಗದ ಖರೀದಿದಾರರು ಒಂದು ವಾರ ಪ್ರತಿ ಕೆ.ಜಿಗೆ ₹410 ನೀಡಿ ಮರಿ ಖರೀದಿಸಿದ್ದರು. ಆದರೆ ಗ್ರಾಮೀಣ ರೈತರು ಇನ್ನೂ ‘ಕೈಯ ತೂಕ’ದ ಮೇಲೆಯೇ ನಂಬಿಕೆ ಇಟ್ಟುಕೊಂಡಿದ್ದಾರೆ. ‘ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಬಹುದು’ ಎನ್ನುತ್ತಾರೆ ಮೈಲಾರಲಿಂಗೇಶ್ವರ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಂಘದ ಕಾರ್ಯದರ್ಶಿ ಲಕ್ಷ್ಮೀಶರೆಡ್ಡಿ.

ಮೂರು ತಿಂಗಳ ಮರಿ ₹5 ಸಾವಿರದಿಂದ ₹8 ಸಾವಿರ. ಆರು ತಿಂಗಳ ಮರಿ ₹8 ಸಾವಿರದಿಂದ ₹18 ಸಾವಿರ. ಹಬ್ಬದ ಸಮಯದಲ್ಲಿ ಅಂದರೆ ಯುಗಾದಿ, ರಂಜಾನ್, ಬಕ್ರೀದ್, ಆಯುಧಪೂಜೆಯಲ್ಲಿ ಬೆಲೆ ಗಗನಕ್ಕೇರುತ್ತದೆ. ಬೇಡಿಕೆ ಹೆಚ್ಚಾದಂತೆ, ನಿರೀಕ್ಷೆಯೂ ಏರುತ್ತದೆ.

ಮಾರ್ಚ್ 7ರಂದು ನಡೆದ ಸಂತೆಯಲ್ಲಿ 2,400 ಕುರಿ–ಮೇಕೆಗಳು ಮಾರಾಟವಾಗಿದ್ದವು. ಯುಗಾದಿ ಹಿಂದಿನ ವಾರ ಮಾರ್ಚ್ 14 ರಂದು 3,500. ಹಬ್ಬದ ಮುನ್ನಾ ದಿನ ಮಾರ್ಚ್ 18ರಂದು ನಡೆದ ವಿಶೇಷ ಸಂತೆಯಲ್ಲಿ 3,000. ಮಾರ್ಚ್ 21ರಂದು 1,000 ಮರಿ ಖರೀದಿಯಾಗಿದ್ದವು. ಈ ಸಂಖ್ಯೆಗಳು ಕೇವಲ ಅಂಕಿಗಳಲ್ಲ. ಪ್ರತಿ ಮರಿ ಹಿಂದೆ ಒಂದು ಕುಟುಂಬದ ಶ್ರಮ, ಒಂದು ಮನೆಯ ಆರ್ಥಿಕ ಲೆಕ್ಕ, ಒಂದು ಆಶಾಭಾವವಿದೆ.

ಮಧುಗಿರಿ ತಾಲ್ಲೂಕಿನ ಜೋಗೇರಹಳ್ಳಿಯ ಚಿಕ್ಕತಿಮ್ಮಯ್ಯ ತಮ್ಮ ಮರಿಗಳನ್ನು ಸಾಲಿನಲ್ಲಿ ನಿಲ್ಲಿಸುತ್ತಾರೆ. ಅವರ ಕಣ್ಣುಗಳು ಯಾವಾಗಲೂ ಖರೀದಿದಾರರನ್ನು ಹುಡುಕುತ್ತವೆ. ಒಬ್ಬನು ನಿಂತರೆ ಸಾಕು, ಅವನತ್ತ ನಡೆದು ಹೋಗಲು ಸಿದ್ಧ.

ಅವರ ಮಾತಿನಲ್ಲಿ ಆಸೆಯೂ ಇದೆ, ಆತಂಕವೂ ಇದೆ. ಕೈಯಲ್ಲಿ ಹಿಡಿದಿರುವ ಹಗ್ಗವು ಕೇವಲ ಕುರಿಯನ್ನು ಹಿಡಿದಿಲ್ಲ, ಬದುಕನ್ನೇ ಹಿಡಿದಿದೆ.

‘ಒಂದು ವಾರ ಲಾಭ, ಇನ್ನೊಂದು ವಾರ ನಷ್ಟ. ಇದನ್ನೇ ಜೀವನ ಅಂತ ಒಪ್ಪಿಕೊಳ್ಳಬೇಕು’.

ಕೊರಟಗೆರೆ ತಾಲ್ಲೂಕಿನ ನಾಗೇನಹಳ್ಳಿಯ ತಿಮ್ಮರಾಯಪ್ಪನ ಲೆಕ್ಕಾಚಾರ ಇನ್ನೂ ಕಠಿಣ.

‘ಆರು ತಿಂಗಳು ಬೆಳೆಸಿದ ಮರಿಗೆ ರೇಟು ಸಿಗದಿದ್ದರೆ ಆಟೊ ಬಾಡಿಗೆಯೇ ಹೋಗುತ್ತದೆ’.

ಅಕ್ಕಿರಾಂಪುರದ ಕುರಿಗಳ ವಿಶೇಷತೆ ಅವುಗಳ ಬೆಳವಣಿಗೆಯಲ್ಲಿದೆ. ಬಂಡೂರು ಕುರಿ, ನಾಟಿ ಕುರಿ ಮತ್ತು ಮೇಕೆಗಳು ಸಂತೆಯಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತವೆ. ಇವುಗಳು ಶೆಡ್ನಲ್ಲಿ ಕಟ್ಟಿಹಾಕಿ ಬೆಳೆದವುಗಳಲ್ಲ. ಬಯಲು, ಜಮೀನು, ಕಾಡು ಪ್ರದೇಶಗಳಲ್ಲಿ ಸುತ್ತಾಡುತ್ತಾ ಬೆಳೆದವು. ತುಮಕೂರು ಜಿಲ್ಲೆಯ ಹುಲ್ಲುಗಾವಲು, ಕುರುಚಲು ಕಾಡು, ತೇವಭರಿತ ಹಾಗೂ ಒಣ ಪ್ರದೇಶಗಳ ಮಿಶ್ರಣ–ಈ ಪರಿಸರದಲ್ಲಿ ಸಿಗುವ ಜಾಲಿಕಾಯಿ, ಕಾಡು ಸೊಪ್ಪು, ಒಣ ಎಲೆಗಳು ಅವುಗಳ ಆಹಾರ.

ಸೂರ್ಯನ ಬಿಸಿ, ಮಳೆಯ ತೇವ, ಗಾಳಿ–ಇವೆಲ್ಲವೂ ಅವುಗಳ ಬೆಳವಣಿಗೆಯಲ್ಲಿ ಪಾತ್ರವಹಿಸುತ್ತವೆ. ಈ ಸಹಜ ಬೆಳವಣಿಗೆಯೇ ಮಾಂಸಕ್ಕೆ ವಿಭಿನ್ನ ರುಚಿ ನೀಡುತ್ತದೆ. ಇದೇ ಕಾರಣಕ್ಕೆ ಬೇರೆ ರಾಜ್ಯಗಳಿಂದಲೂ ವ್ಯಾಪಾರಿಗಳು ಇಲ್ಲಿಗೆ ಬರುತ್ತಾರೆ.

ಮೈದಾನಕಷ್ಟೇ ಈ ಸಂತೆ ಸೀಮಿತವಾಗಿಲ್ಲ. ಅದು ರಸ್ತೆಗಳಿಗೂ ಚಾಚಿಕೊಳ್ಳುತ್ತದೆ. ಅಕ್ಕಿರಾಂಪುರ ಬಸ್ ನಿಲ್ದಾಣದಿಂದ ಮಾರುಕಟ್ಟೆಯವರೆಗೆ ಬಟ್ಟೆ ಅಂಗಡಿಗಳು, ಚಹಾ ಅಂಗಡಿಗಳು, ಕೃಷಿ ಪರಿಕರ ಮಾರಾಟಗಾರರು ಸಾಲಾಗಿ ನಿಂತಿರುತ್ತಾರೆ.

ಹಗ್ಗ ಮಾರುವವರು, ಮೇವು ಪಾತ್ರೆ ಮಾರುವವರು, ಕುರಿಗಳಿಗೆ ಅಲಂಕಾರ ವಸ್ತು ಮಾರುವವರು, ಪ್ರತಿ ಅಂಗಡಿಯೂ ಒಂದು ಅಗತ್ಯ ಪೂರೈಸುತ್ತದೆ.

ಚಹಾ ಗ್ಲಾಸ್ಗಳ ಟಿಣಿಟಿಣಿ, ಬಿಸಿ ಹೊಗೆ, ಒಂದು ಗುಟುಕು... ಇವು ಸಂತೆಯಲ್ಲಿನ ಸಾಮಾನ್ಯ ದೃಶ್ಯಗಳು. ಜನರು ಸ್ವಲ್ಪ ವಿರಾಮ ತೆಗೆದುಕೊಂಡು ದಣಿವು ತಗ್ಗಿಸಿಕೊಳ್ಳುತ್ತಾರೆ. ಈ ಸಣ್ಣ ಕ್ಷಣಗಳೇ ಸಂತೆಗೆ ಚೈತನ್ಯ ನೀಡುತ್ತವೆ.

ಪ್ರತಿ ಶನಿವಾರ, ಈ ಹಳ್ಳಿ ಒಂದು ಚಿಕ್ಕ ಪಟ್ಟಣವಾಗಿ ಬದಲಾಗುತ್ತದೆ. ತಾತ್ಕಾಲಿಕವಾದರೂ ಚಟುವಟಿಕೆಯಿಂದ ಕೂಡಿದ ಪಟ್ಟಣ.

ಮರಿಗಳನ್ನು ಖರೀದಿಸಿದ ನಂತರ ಕೆಲವರು ಅವುಗಳಿಗೆ ಬಣ್ಣ ಬಳಿಯುತ್ತಾರೆ. ಕೆಲವರು ಬಾಲದ ಬಳಿ ಕೂದಲು ಕತ್ತರಿಸುತ್ತಾರೆ. ಇದು ಗುರುತು, ‘ಇದು ನಮ್ಮದು’ ಎನ್ನುವ ದೃಢೀಕರಣ. ಸಂತೆಯಲ್ಲಿ ಮರಿಗಳು ತಪ್ಪಿಸಿಕೊಂಡರೂ, ಈ ಗುರುತುಗಳಿಂದಲೇ ಅವುಗಳನ್ನು ಮತ್ತೆ ಪತ್ತೆಹಚ್ಚಬಹುದು.

ಆರ್.ಸಿ. ರಮೇಶ್ ಹೇಳುತ್ತಾರೆ: ‘ಮೊದಲು ಏನೂ ಇರಲಿಲ್ಲ. ಮುಕ್ಕಾಲು ಎಕರೆ ಜಮೀನಿಟ್ಟುಕೊಂಡು ಕುಟುಂಬ ಸಾಗಿಸುವುದೇ ಕಷ್ಟವಾಗಿತ್ತು. ಈ ಸಂತೆ ಬದುಕಿಗೆ ತಿರುವು ಕೊಟ್ಟಿತು. ಎರಡು ಮನೆ ಕಟ್ಟಿಸಿದ್ದೇನೆ. ₹15 ಲಕ್ಷಕ್ಕೆ ಒಂದು ನಿವೇಶನ ಖರೀದಿಸಿದ್ದೇನೆ. ಮೂವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದೇನೆ’.

‘ನಾನು ಚಿಕ್ಕವನಿದ್ದಾಗಿಂದಲೇ ಈ ಸಂತೆ ನೋಡ್ತಾ ಬಂದಿದ್ದೀನಿ. ಈಗಲೂ ಅದೇ ಉತ್ಸಾಹ’ ಎಂದು ಅರವತ್ತು ವರ್ಷದ ಬಸಪ್ಪ ಹೇಳುತ್ತಾರೆ.

ಇಂತಹ ನೂರಾರು ಕುಟುಂಬಗಳು ಈ ಸಂತೆಯನ್ನು ಅವಲಂಬಿಸಿವೆ. ಕೆಲವರಿಗೆ ಉಪಕಸುಬು, ಕೆಲವರಿಗೆ ಮುಖ್ಯ ಜೀವನೋಪಾಯ.

ಸಂತೆ ಬೆಳೆಯುತ್ತಿದೆ. ಆದರೆ ಮೂಲಸೌಕರ್ಯಗಳು ಅದೇ ಮಟ್ಟದಲ್ಲಿ ಬೆಳೆದಿಲ್ಲ. ಸಾವಿರಾರು ಜನ ಸೇರುವ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳು ತೃಪ್ತಿಕರವಾಗಿಲ್ಲ. ರಾತ್ರಿ ಮುಂಚಿತವಾಗಿ ಬರುವವರಿಗೆ ಉಳಿಯಲು ವ್ಯವಸ್ಥೆ ಇಲ್ಲ. ಶೆಡ್ಗಳಲ್ಲಿ ಅಥವಾ ಬಯಲಲ್ಲೇ ಮಲಗಬೇಕು. ವಾಹನ ನಿಲ್ದಾಣದ ಸಮಸ್ಯೆ ಗಂಭೀರವಾಗಿದೆ. ಪ್ರತಿ ಶನಿವಾರ ಹೊಳವನಹಳ್ಳಿ ರಸ್ತೆ ಸಂಪೂರ್ಣವಾಗಿ ವಾಹನಗಳಿಂದ ತುಂಬಿ ಹೋಗುತ್ತದೆ. ಹಾರ್ನ್ಗಳ ಗದ್ದಲ, ನಿಧಾನ ಚಲನೆ–ಇದು ಸಹನೆಯ ಪರೀಕ್ಷೆ.

ಸರ್ಕಾರ ಮೈಲಾರಲಿಂಗೇಶ್ವರ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಂಘಕ್ಕೆ ಸಂತೆ ನಡೆಸುವ ಜವಾಬ್ದಾರಿ ವಹಿಸಿದೆ.ಮಾರಾಟವಾಗುವ ಪ್ರತಿ ಮರಿಗೆ ₹5 ಶುಲ್ಕ ವಿಧಿಸಲಾಗುತ್ತದೆ. ಅದರಲ್ಲಿ ₹2 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ, ₹2 ಸಂಘಕ್ಕೆ, ₹1 ಮಹಾಮಂಡಳಕ್ಕೆ ಹಂಚಿಕೆ. ಇದೇ ಹಣ ಮಾರುಕಟ್ಟೆ ನಿರ್ವಹಣೆಗೆ ಬಳಸಲಾಗುತ್ತಿದೆ. ಆದರೆ ಅಗತ್ಯಕ್ಕೆ ಸಾಕಾಗುವುದಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಸೂರ್ಯೋದಯದ ಹೊತ್ತಿಗೆ, ಸಂತೆ ನಿಧಾನವಾಗಿ ಖಾಲಿಯಾಗುತ್ತದೆ. ಮರಿಗಳು ಹೊಸ ದಾರಿಗಳತ್ತ ಹೊರಡುತ್ತವೆ. ಕೆಲವು ನಗರಗಳತ್ತ, ಕೆಲವು ಮತ್ತೆ ಗ್ರಾಮಗಳತ್ತ. ಮಣ್ಣಿನ ಮೇಲೆ ಕಾಲಿನ ಗುರುತುಗಳು ಮಾತ್ರ ಉಳಿಯುತ್ತವೆ. ದೂಳು ನಿಧಾನವಾಗಿ ಮರೆಯಾಗುತ್ತದೆ. ಶಬ್ದಗಳು ಒಂದೊಂದಾಗಿ ಅಳಿದುಹೋಗುತ್ತವೆ. ಇಲ್ಲಿ ಕೇವಲ ಕುರಿ-ಮೇಕೆಗಳ ವ್ಯವಹಾರ ನಡೆಯುವುದಿಲ್ಲ; ಪ್ರತಿ ವ್ಯವಹಾರದ ಜೊತೆ ಬದುಕು, ಭರವಸೆ ಮತ್ತು ನಷ್ಟ-ಲಾಭಗಳ ಲೆಕ್ಕವೂ ತೂಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.