ಸೋಮವಾರ, ಜುಲೈ 26, 2021
21 °C
ನಂದಿಕೂರಿನಲ್ಲಿ ದೇಸಿ ಹಸು ಗಿರ್ ತಳಿಯ ಹೈನೋದ್ಯಮ

ಓದಿದ್ದು ಅಟೋಮೋಬೈಲ್: ಕೈ ಹಿಡಿದಿದ್ದು ಹೈನುಗಾರಿಕೆ

ಹಮೀದ್‌ ಪಡುಬಿದ್ರಿ Updated:

ಅಕ್ಷರ ಗಾತ್ರ : | |

Prajavani

ಪಡುಬಿದ್ರಿ: ಕಾಪು ತಾಲ್ಲೂಕಿನ ನಂದಿಕೂರಿನಲ್ಲಿ ಆರಂಭವಾಗಿರುವ ದೇಸಿ ಹಸು ಗಿರ್ ತಳಿಯ ಹೈನುಗಾರಿಕೆ ಎಲ್ಲರ ಗಮನ ಸೆಳೆಯುತ್ತಿದೆ.

ನಂದಿಕೂರಿನ ಶ್ರೀಪತಿ ರಾವ್ ಹಾಗೂ ಕುಮುದಾ ದಂಪತಿ ಪುತ್ರ ಪ್ರಕಾಶ್‌ ಭಟ್‌ ಅಟೋಮೊಬೈಲ್ ಡಿಪ್ಲೊಮಾ ವ್ಯಾಸಂಗ ಮಾಡಿದ್ದಾರೆ. ಪುಣೆಯಲ್ಲಿ ಮಹೇಂದ್ರ ಕಂಪನಿಯಲ್ಲಿನ ಉದ್ಯೋಗ ಬಿಟ್ಟು ಬಂದು ಭಾರತೀಯ ಗಿರ್‌ ತಳಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹುಟ್ಟೂರಿನಲ್ಲಿ ಹೈನೋದ್ಯಮದ ಫಾರ್ಮ್‌ಅನ್ನು ಸ್ವಂತ ಜಮೀನಿನಲ್ಲಿ ಆರಂಭಿಸಿದ್ದಾರೆ.

ಗಿರ್ ತಳಿಯ ಹಸು ವಂಶಾಭಿವೃದ್ಧಿಗಾಗಿ ಸಾಕಾಣಿಕೆ ಮಾಡುತ್ತಿದ್ದು, ಎಲ್ಲ ಕೆಲಸವನ್ನು ಪ್ರಕಾಶ್ ಅವರೆ ಮಾಡಿಕೊಳ್ಳುತ್ತಿದ್ದು, ಹೈನುಗಾರಿಕೆ ಬಗ್ಗೆ ಅವರಿಗೆ ಇರುವ ಕಾಳಜಿ ಇತರರಿಗೆ ಮಾದರಿ ಆಗಿದೆ. ಚೆನ್ನೈನಲ್ಲಿ ಹುಟ್ಟಿ ಬೆಳೆದು ಅಲ್ಲಿಯೇ ಅಟೋಮೊಬೈಲ್ ಡಿಪ್ಲೊಮಾ ವ್ಯಾಸಂಗ ಮಾಡಿದ್ದರು. ಬಳಿಕ ಪುಣೆಯ ಮಹೇಂದ್ರ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿ ₹ 65 ಸಾವಿರ ಸಂಬಳ ಪಡೆಯುತ್ತಿದ್ದರು.

ಪುಣೆಯ ಅವರ ನಿವಾಸದ ಸಮೀಪ ಗಿರ್ ತಳಿ ಹೈನೋದ್ಯಮ ನಡೆಸುತ್ತಿರುವುದು ಪ್ರಕಾಶ್ ಭಟ್ ಅವರನ್ನು ಆಕರ್ಷಿಸಿತು. ಅದರಂತೆ ಗಿರ್ ತಳಿ ಬಗ್ಗೆ ಆಳ ಅಧ್ಯಯನ ನಡೆಸಿ ಉದ್ಯೋಗ ತೊರೆದು ಚೆನ್ನೈಗೆ ವಾಪಸ್‌ ಆಗಿದ್ದರು. ತಾಬ್ರಂ ನಗರದಲ್ಲಿ 10 ಎಕರೆ ಜಮೀನು ಗುತ್ತಿಗೆ ಆಧಾರದಲ್ಲಿ ಪಡೆದು 5 ಗಿರ್ ಹಸು ತಂದು ಹೈನೋದ್ಯಮ ಆರಂಭಿಸಿದ್ದರು.

30 ಹಸುಗಳ ಗಿರ್ ಹಾಲು ಸಹಿತ ಹಾಲಿನ ಉತ್ಪನ್ನಗಳ ಬ್ರಾಂಡ್‌ನಿಂದ ಯಶಸ್ಸು ಪಡೆದುಕೊಂಡಿದ್ದರು. ಆದರೆ, ಅವರ ಫಾರ್ಮ್ ಮಾಡಿದ್ದ ಪ್ರದೇಶ ಪ್ರತಿವರ್ಷ ನೆರೆಗೆ ಸಿಗುತ್ತಿರುವುದರಿಂದ ನಂದಿಕೂರಿನಲ್ಲಿ ಫಾರ್ಮ್ ಆರಂಭಿಸಿದ್ದಾರೆ.

ಹಸುಗಳಿಗೆ ಅಗತ್ಯ ಮೇವನ್ನು ಜಮೀನಿನಲ್ಲಿಯೇ ಬೆಳೆಸಲಾಗುತ್ತಿದೆ. ಅಲ್ಲದೆ ಜೋಳದ ಬೀಜ ಮೊಳಕೆ ಮಾಡಿ ಇಸ್ರೇಲ್ ಮಾದರಿಯಲ್ಲಿ ಬೆಳೆಸಿದ ಪೌಷ್ಟಿಕ ಆಹಾರ ಬಳಕೆ ಮಾಡಲಾಗುತ್ತಿದೆ. ಯಾವುದೆ ರಾಸಾಯನಿಕ ಬಳಸದೆ ಸಾವಯವ ಹೈನುಗಾರಿಕೆ  ಮಾಡುತ್ತಿದ್ದಾರೆ. ದಿನಂಪ್ರತಿ 40 ಲೀಟರ್ ಹಾಲು
ಹಸುಗಳಿಂದ ಸಿಗುತ್ತಿದೆ. ಸ್ಥಳೀಯ ಮನೆಗಳಿಗೆ ಹಾಲು ಮಾರಾಟ ಮಾಡಲಾಗುತ್ತಿದೆ ಎಂದು ಪ್ರಕಾಶ್‌ ಭಟ್‌ ತಿಳಿಸಿದರು. 

‘8 ಗಂಟೆಯ ಕಾಲ ಕೆಲಸ’

ಮನೆಯವರಿಂದಲೂ ಉತ್ತಮ ಪ್ರೋತ್ಸಾಹ ದೊರೆತಿದೆ. ಬಾಲ್ಯದಿಂದಲೇ ಹೈನುಗಾರಿಕೆ ಬಗ್ಗೆ ಆಸಕ್ತಿ ಇತ್ತು. ಪುಣೆಯ ನಿವಾಸದ ಬಳಿಯೇ ಇದ್ದ ಫಾರ್ಮ್‌ನಲ್ಲಿ ಈ ಬಗ್ಗೆ ಮಾಹಿತಿ ಪಡೆದುಕೊಂಡು ಆರಂಭಿಸಿದ್ದೇನೆ. ದಿನದ 8 ಗಂಟೆ ಹೈನುಗಾರಿಕಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ. ಹಾಲಿನ ಇತರ ಉತ್ಪನ್ನಗಳನ್ನು ಬೇಡಿಕೆಗನುಗುಣವಾಗಿ ಪೂರೈಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೈನುಗಾರಿಕೆ ಮಾಡುತ್ತಿರುವ ಪ್ರಕಾಶ್ ಭಟ್ ನಂದಿಕೂರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು