ನಾನೊಂದು ಪುಟ್ಟ ಜೀವ, ನೀವು ನನ್ನನ್ನು ಗುಬ್ಬಿ ಎಂದು ಕರೆಯುತ್ತೀರಿ. ಕೆಲವರು ಪ್ರೀತಿಯಿಂದ ಗುಬ್ಬಚ್ಚಿ ಎನ್ನುತ್ತಾರೆ. ಈ ಹಿಂದೆ ಹೂಬಳ್ಳಿ ಎಂದು ಕರೆಯುತ್ತಿದ್ದ ಹುಬ್ಬಳ್ಳಿ ಮಹಾನಗರದ ನನ್ನ ನಿವಾಸ ಸ್ಥಳ.

ಬೆಳಗಾಗುತ್ತಿದ್ದಂತೆ ಸಂಗಾತಿಯೊಂದಿಗೆ ಆಗಸಕ್ಕೆ ನೆಗೆದು, ಗಾಳಿಯ ಜೊತೆ ತೇಲುತ್ತ ಆಹಾರ ಹುಡುಕಿಕೊಂಡು ಅಲೆದಾಡೋದು, ಸಂಜೆಯಾಗುತ್ತಿದ್ದಂತೆ ಹೆಮ್ಮರವೊಂದರಲ್ಲಿ ಆಶ್ರಯ ಪಡೆಯುವುದು... ಇದು ನನ್ನ ದಿನಚರಿಯಾಗಿತ್ತು.

ನಗರದ ಗದ್ದಲ ನನ್ನ ಬದುಕನ್ನು ಆತಂಕವಾಗಿಸಿದರೂ, ಅನಿವಾರ್ಯವಾಗಿ ಅದಕ್ಕೆ ಒಗ್ಗಿಕೊಂಡವಳು ನಾನು. ನಮ್ಮಿಬ್ಬರದು ಚಂದದ ಸಂಸಾರ. ಇತ್ತೀಚಿಗಷ್ಟೇ ಅದನ್ನು ಹಿಗ್ಗಿಸುವ ನಿರ್ಧಾರ ಮಾಡಿ, ನಾವು ವಾಸಿಸುತ್ತಿದ್ದ ಮರದಲ್ಲೇ ಪುಟ್ಟ ಗೂಡನ್ನು ಕಟ್ಟಿ ಮೊಟ್ಟೆ ಇಟ್ಟಿದ್ದೆವು. ಇದು ನನ್ನ ಪಾಲಿಗೆ ಚೊಚ್ಚಲ ಮಾತೃತ್ವ. ನಾವಿಬ್ಬರು ಪುಟ್ಟ ಪುಟ್ಟ ಕಂದಮ್ಮಗಳ ನಿರೀಕ್ಷೆಯಲ್ಲಿದ್ದೆವು.

ಆದರೆ...

ಅದೊಂದು ಸಂಜೆ ನಾನು, ನನ್ನ ಸಂಗಾತಿ ಎಂದಿನಂತೆ ಮರದ ಮೇಲೆ ಕೂತಿದ್ದೆವು. ಒಂದು ಮೊಟ್ಟೆ ಒಡೆದು ಅದಾಗಲೇ ಮರಿ ಹೊರಗೆ ಬಂದಿತ್ತು. ಇನ್ನೊಂದು ಮರಿ ಹೊರಗೆ ಬರುವ ನಿರೀಕ್ಷೆಯಲ್ಲಿದ್ದಾಗ, ಏಕಾಏಕಿ ಭಾರಿ ಗಾಳಿ ಶುರುವಾಯಿತು. ಇಲ್ಲಿ ಐದಾರು ಮಳೆಗಾಲವನ್ನು ಕಂಡಿರುವವರು ನಾವು. ಅದೆಂದಿಗೂ ನಮ್ಮ ಬದುಕಿಗೆ ಭಯವನ್ನು ಹುಟ್ಟಿಸಿರಲಿಲ್ಲ. ಆದರೆ ಆ ದಿನದ ಗಾಳಿ ಅಬ್ಬಾ! ಅದು ರೌದ್ರ ಭಯಂಕರವಾಗಿತ್ತು..!!

ಮರವೇ ನಡುಗತೊಡಗಿತು. ಕೊಂಬೆಗಳು ಕಿರುಚಿದವು. ನಮ್ಮ ಗೂಡು ಹಿಡಿದುಕೊಂಡಿದ್ದ ಸಣ್ಣ ರೆಂಬೆ ಮುರಿದು ಕೆಳಕ್ಕೆ ಜಾರಿತು. ನಾನು ಗಾಬರಿಯಿಂದ ರೆಕ್ಕೆ ಬಡಿದೆ. ಗೂಡು ಸಮೇತ ನನ್ನ ಮರಿ, ಮತ್ತೊಂದು ಮೊಟ್ಟೆ ನೆಲಕ್ಕುರುಳಿತು . ನನ್ನ ಸಂಗಾತಿ ಮತ್ತು ನಾನು ದಿಕ್ಕೇ ತೋಚದೆ ಹಾರಾಡುತ್ತ ಕಿರುಚಾಡಿದೆವು, ನನ್ನ ಮಕ್ಕಳ ಉಳಿಸಲಾಗದ ಅಸಹಾಯಕ ಆರ್ತನಾದ ಗುಡುಗು, ಸಿಡಿಲ ನಡುವೆ ಸತ್ತುಹೋಯಿತು.

ಕೆಲ ಕ್ಷಣದಲ್ಲಿ ಮರ ಬುಡ ಸಮೇತ ಉರುಳಿ ಬಿದ್ದಿತ್ತು. ನೋಡ ನೋಡುತ್ತಿದ್ದಂತೆ ಬೇರುಗಳು ಮಣ್ಣಿನಿಂದ ಕಿತ್ತು ಮೇಲೆದ್ದು ಬಂದವು. ನನ್ನ ಗಂಟಲು ಸ್ತಬ್ಧವಾಯಿತು, ಗಾಳಿಯಲ್ಲೇ ನಾನು ಶಿಲೆಯಂತಾದೆ!

ಹಿಂದೆ ಈ ಮರದ ಬುಡಕ್ಕೆ ಮಳೆ ನೀರು ಇಳಿಯುತ್ತಿತ್ತು. ಮಣ್ಣು ತೇವವಾಗಿ ಮರವನ್ನು ಅಪ್ಪಿಕೊಂಡಿರುತ್ತಿತ್ತು. ಬೇರುಗಳು ಭೂಮಿಯನ್ನು ಗಟ್ಟಿಯಾಗಿ ಹಿಡಿದಿದ್ದವು. ಆದರೆ ಈಗ ಎಲ್ಲೆಲ್ಲೂ ಕಾಂಕ್ರಿಟ್ ರಸ್ತೆ, ಪೇವರ್ಸ್, ಕಲ್ಲು, ಸಿಮೆಂಟ್. ಮಳೆಯ ನೀರು ಭೂಮಿಗೆ ಇಳಿಯುತ್ತಿಲ್ಲ, ಬೇರುಗಳು ಉಸಿರಾಡಲಿಲ್ಲ. ನಾನಿದ್ದ ಮರ ಹೊರಗಿನಿಂದ ಸದೃಢವಾಗಿದೆ ಎನ್ನಿಸುತ್ತಿತ್ತು. ಆದರೆ ಒಳಗಡೆ ನಿಧಾನವಾಗಿ ಸಾಯುತ್ತಿತ್ತು. ಆ ದಿನ ಗಾಳಿ ಬಂದಾಗ ಮರಕ್ಕೆ ತನ್ನನ್ನು ತಾನು ಸಾವರಿಸಿಕೊಳ್ಳಲಾಗಲಿಲ್ಲ. ಸದ್ದು ಮಾಡುತ್ತ ರಭಸದಿಂದ ನೆಲಕ್ಕುರುಳಿತು.

ನನ್ನ ಗೂಡು... ನನ್ನ ಪುಟ್ಟ ಮನೆ... ಒಂದೇ ಕ್ಷಣದಲ್ಲಿ ನುಚ್ಚು ನೂರಾಯಿತು. ನಾನು ದಿಕ್ಕೇ ತೋಚದೆ ಆಕಾಶದಲ್ಲಿ ಸುತ್ತುತ್ತ ಒಮ್ಮೆ ಕೆಳಗೆ ಕಣ್ಣಾಡಿಸಿದೆ. ನನ್ನ ಕನಸುಗಳು ಮಣ್ಣಿನಲ್ಲಿ ಬೆರೆತು ಹೋಗಿದ್ದವು. ಬಿದ್ದ ಮರಿ ಇನ್ನೂ ಉಸಿರಾಡುತ್ತಿತ್ತು. ಕಣ್ಣು ತೆರೆಯದ ಅದು ಬಾಯಿ ಅಗಲಿಸುತ್ತ ಒದ್ದಾಡುತ್ತಿತ್ತು. ನಾನು ಕೆಳಗೆ ಬರಲು ಯತ್ನಿಸಿದೆ. ಆದರೆ, ಅಲ್ಲಿ ಮನುಷ್ಯರ ಓಡಾಟ ಹೆಚ್ಚಾಗಿತ್ತು. ಪಕ್ಕದಲ್ಲಿ ವಾಹನಗಳ ಓಡಾಟವೂ ವಿಪರೀತವಾಗಿತ್ತು.

ಆತಂಕ, ಭಯದೊಂದಿಗೆ ದೂರದ ವಿದ್ಯುತ್ ತಂತಿಯ ಮೇಲೆ ಕುಳಿತಿದ್ದೆ. ಯಾರೋ ಇಬ್ಬರು ಬಿದ್ದ ಮರಗಳನ್ನು ಕತ್ತರಿಸಲು ಬಂದರು. ನನ್ನ ಗೂಡು ಇದ್ದ ಕೊಂಬೆಗಳನ್ನು ಎಳೆದರು. ಅವರ ಕಾಲಡಿಯಲ್ಲಿ ಗೂಡು ಕಸದಂತೆ ಅಪ್ಪಚ್ಚಿಯಾಯಿತು. ಒಬ್ಬನ ಕಾಲಿನ ಕೆಳಗೆ ಒಡೆದ ಮೊಟ್ಟೆಯ ಚಿಪ್ಪು ಚಪಕ್ ಎಂದಿತು. ಆ ಕ್ಷಣ ನನ್ನ ಹೃದಯವೇ ಒಡೆದ ಶಬ್ದ ನನಗೆ ಕೇಳಿಸಿತು. ಕಿರುಚಿದೆ, ಸಾಕಷ್ಟು ಕಿರುಚಿದೆ. ಆದರೆ ಅದು ಕೇಳಿದವರಿಗೆ ಕೇವಲ 'ಹಕ್ಕಿಯ ದನಿ'ಯಷ್ಟೇ ಆಗಿತ್ತು. ಮಕ್ಕಳನ್ನು ಕಳೆದುಕೊಂಡ ಒಬ್ಬ ತಾಯಿಯ ಅಳುವಿನ ದನಿ ಅದೆಂದು ಯಾರಿಗೂ ಅರ್ಥವಾಗಲಿಲ್ಲ...

ಹಿಂದೆ ಹುಬ್ಬಳ್ಳಿ ನಗರ ಹೀಗಿರಲಿಲ್ಲ. ಮರಗಳು ನಮ್ಮ ಮನೆಗಳಾಗಿದ್ದವು. ಬೆಳಿಗ್ಗೆ ಇಲ್ಲಿಯ ಮಕ್ಕಳ ನಗುವಿನ ಜೊತೆ ನಮ್ಮ ಕೂಗು ಸಹ ಬೆರೆಯುತ್ತಿತ್ತು. ಮನೆಯ ಅಂಗಳಗಳಲ್ಲಿ ನೀರಿನ ಪಾತ್ರೆಗಳಿದ್ದವು. ಮಣ್ಣಿನ ವಾಸನೆ ಇತ್ತು. ಮಳೆ ಬಂದರೆ ನಾವು ಹರ್ಷದಿಂದ ತೋಯುತಿದ್ದೆವು. ಈಗ...? ಮಣ್ಣು ಕಾಣುತ್ತಿಲ್ಲ. ಮರಗಳು ಉಸಿರಾಡುತ್ತಿಲ್ಲ. ನಮ್ಮ ಗೂಡುಗಳಿಗೆ ಜಾಗವಿಲ್ಲ. ನಮ್ಮ ಚಿಲಿಪಿಲಿ ಹಾಡಿಗೆ ಕಿವಿಗಳಿಲ್ಲ. ನೀವು ರಸ್ತೆಗಳನ್ನು ವಿಸ್ತರಿಸಿದ್ದೀರಿ, ಆದರೆ ನಮ್ಮ ಆಕಾಶ ಕಿರಿದಾಗಿದೆ. ನೀವು ಕಟ್ಟಡಗಳನ್ನು ಎತ್ತರ ಮಾಡಿದ್ದೀರಿ; ನಮ್ಮ ಬದುಕು ನೆಲಕ್ಕುರುಳಿದೆ. ನಾವು ಮಾತಾಡಲಾರೆವು, ದೂರು ಕೊಡಲಾರೆವು. ಎಲ್ಲಿಯೂ ಸುದ್ದಿ ಸಹ ಆಗಲಾರೆವು. ನಮ್ಮ ಮರಿಗಳು ಸತ್ತರೂ, ಅದು ಕೇವಲ 'ಮರ ಬಿದ್ದ ಘಟನೆ'ಯಾಗಿ ಉಳಿಯುತ್ತದೆ...

ಇಂದು ನಸುಕಿನ ಜಾವ ನಾನು ಮರ ಉರುಳಿದ್ದ ಜಾಗಕ್ಕೆ ಹೋಗಿದ್ದೆ. ಅಲ್ಲಿ ಮರವಿರಲಿಲ್ಲ, ಚೆಲ್ಲಾಪಿಲ್ಲಿಯಾಗಿದ್ದ ಗೂಡೂ ಇರಲಿಲ್ಲ. ಮರಿಗಳ ನಿಸ್ತೇಜ ದೇಹದ ಮಾಂಸಮುದ್ದೆ ರಸ್ತೆಗೆ ಚಪ್ಪಟ್ಟೆಯಾಗಿ ಅಂಟಿಕೊಂಡಿತ್ತು. ಮರ ಬೀಳುವಾಗ ಭಯದಿಂದ ಪಟಪಟನೆ ರೆಕ್ಕೆ ಬಡಿದಾಗ ಉದುರಿದ ನನ್ನದೇ ಕೆಲವು ಗರಿಗಳು ಮಳೆ ನೀರಿನಲ್ಲಿ ಒದ್ದೆಯಾಗಿ ಅಲ್ಲಿ ಬಿದ್ದಿದ್ದವು. ನಾನು ಅವುಗಳ ಪಕ್ಕದಲ್ಲಿ ನಿಂತು ಬಹಳ ಹೊತ್ತು ನೋಡುತ್ತಿದ್ದೆ. ರಸ್ತೆಗೆ ಅಂಟಿಕೊಂಡಿದ್ದ ಮರಿಗಳ ಮಾಂಸವನ್ನ ಚೊಂಚಿನಲ್ಲಿ ಒಮ್ಮೆ ಸ್ಪರ್ಶಿಸಿದೆ. ಎದೆಕಟ್ಟೆ ಒಡೆದ ಹಾಗಾಯಿತು. ಯಾವ ತಾಯಿಗೂ ಈ ಸ್ಥಿತಿ ಬರದಿರಲಿ ಎಂದು, ಕಣ್ಣೀರು ಸುರಿಸುತ್ತಲೇ ಪ್ರಾರ್ಥಿಸಿದೆ. ಗೂಡು, ಮೊಟ್ಟೆ, ಮರಿ ಈಗ ನೆನಪು ಮಾತ್ರ. ಆಕಾಶ ಇದೆ, ಗಾಳಿಯೂ ಬೀಸುತಿದೆ. ಆದರೆ ನನ್ನ ಹಾಡು ಮಾತ್ರ ಮರಳಿ ಬರುತ್ತಿಲ್ಲ...

ನನ್ನ ನೋವು, ದುಃಖವನ್ನು ಯಾರಲ್ಲಿ ಹೇಳಿಕೊಳ್ಳಲಿ? ನಿಮ್ಮ ನಗರ ಬೆಳೆಯುತ್ತಿದೆಯಂತೆ. ಆದರೆ ನಿಮ್ಮ ಅಭಿವೃದ್ಧಿ ನಮ್ಮನ್ನಷ್ಟೇ ಅಲ್ಲ, ನಿಮ್ಮನ್ನೂ ಅವನತಿಯತ್ತ ಒಯ್ಯುತ್ತಿದೆ. ಕೆಳಗೆ ನಮ್ಮಂತ ಪುಟ್ಟ ಸಂಸಾರಗಳ ಅದೆಷ್ಟು ಸಮಾಧಿಗಳಿವೆಯೋ? ನಾಳೆ ಮತ್ತೆ ನೀವು ಗಿಡ ನೆಡಬಹುದು, ಹೊಸ ರಸ್ತೆ ಮಾಡಬಹುದು. ಹೊಸ ಕಟ್ಟಡವನ್ನೂ ಕಟ್ಟಬಹುದು. ಒಡೆದ ಮೊಟ್ಟೆಯೊಳಗಿದ್ದ ಜೀವವನ್ನು, ತಾಯಿಗಾಗಿ ಬಾಯಿ ತೆರೆದು ಸತ್ತ ಆ ಮರಿಯನ್ನು, ಗೂಡಿನ ಜೊತೆ ಕುಸಿದ ನಮ್ಮ ಕನಸುಗಳನ್ನು ಮತ್ತೆ ಕಟ್ಟಿಕೊಡಬಲ್ಲಿರಾ..?

-ನೊಂದ ತಾಯಿ ಗುಬ್ಬಚ್ಚಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.