ಬಸನಗೌಡರ ಬಾಳೆ ಬೆಳೆಯ ಯಶೋಗಾಥೆ

7
ರಾಜ್ಯ ಕೃಪಿ ಪಂಡಿತ ಪ್ರಶಸ್ತಿ ಪುರಸ್ಕೃತ; ಪ್ರಗತಿಪರ ಕೃಷಿಕ ಕನಕರೆಡ್ಡಿ

ಬಸನಗೌಡರ ಬಾಳೆ ಬೆಳೆಯ ಯಶೋಗಾಥೆ

Published:
Updated:
Deccan Herald

ತಾಳಿಕೋಟೆ: ಒಂದೂವರೆ ದಶಕದಿಂದ ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಾಧನೆಗೈದ ತಾಲ್ಲೂಕಿನ ತಮದಡ್ಡಿ ಗ್ರಾಮದ ಕೃಷಿಕರೊಬ್ಬರ ಯಶೋಗಾಥೆಯಿದು.

ತೋಟಗಾರಿಕೆ ಬೆಳೆಗಳಾದ ಕಾಯಿಪಲ್ಲೆ, ಟೊಮೆಟೊ, ಮೆಣಸಿನಕಾಯಿ, ಈರುಳ್ಳಿ, ಬದನೆ, ಬೆಳ್ಳುಳ್ಳಿ ಬೆಳೆಯುತ್ತಾ, ಈ ಭಾಗದ ಪ್ರಗತಿಪರ ರೈತರಾಗಿ ಹೊರಹೊಮ್ಮಿರುವ ಕೃಷಿಕ ತಮದಡ್ಡಿಯ ಬಸನಗೌಡ ಗುರನಗೌಡ ಕನಕರೆಡ್ಡಿ ಪರಿಶ್ರಮಕ್ಕೆ ರಾಜ್ಯ ಕೃಷಿ ಪಂಡಿತ ಪ್ರಶಸ್ತಿಯೂ ಒಲಿದು ಬಂದಿದೆ.

ಪೂರ್ವಿಕರಿಂದ ಬಂದ ಮೂರು ಎಕರೆ ಮೂರು ಗುಂಟೆ ಜಮೀನಿನ ಅರ್ಧ ಎಕರೆಯಲ್ಲಿ ನೀರಿನ ತೊಟ್ಟಿ, ಬಯೋ ಡೈಜಿಸ್ಟ್‌, ಎರೆ ಹುಳುವಿನ ತೊಟ್ಟಿ, ಫಾರ್ಮ್‌ಶೆಡ್‌, ದನದ ಕೊಟ್ಟಿಗೆ, ಮೇವಿನ ಬಣವೆಗಳಿವೆ. ದನ–ಕರುಗಳ ಗೊಬ್ಬರ, ಬೇವಿನ ಬೀಜದ ಹಿಂಡಿ ಗೊಬ್ಬರ, ಭೂಮಿಯಲ್ಲಿ ಬೆಳೆಯಿಂದ ಸಿಗುವ ಉಳಿಕೆಗಳನ್ನು ನೆಲದಲ್ಲೇ, ಹೂತು ಹಾಕಿ ಕಾಂಪೋಸ್ಟ್‌ ಗೊಬ್ಬರ ಮಾಡಿಕೊಳ್ಳುತ್ತಾರೆ. ಇವರ ಹೊಲದಲ್ಲಿ ಒಂದು ಕಡ್ಡಿಯೂ ವ್ಯರ್ಥವಾಗದೆ ಗೊಬ್ಬರವಾಗುತ್ತದೆ.

ಸಾವಯವ ಕೃಷಿ ಪದ್ಧತಿಯಡಿ ಜವಾರಿ ಬಾಳೆ ಬೆಳೆಯುತ್ತಿದ್ದು, ವಾರ್ಷಿಕ ₹ 5–6 ಲಕ್ಷ ನಿವ್ವಳ ಲಾಭ ಗಳಿಸುತ್ತಿರುವುದು ಇವರ ವೈಶಿಷ್ಟ್ಯ.

ಜೂನ್ 2017ರಲ್ಲಿ ಗಿಡದಿಂದ ಗಿಡಕ್ಕೆ 8 ಅಡಿ, ಸಾಲಿಂದ ಸಾಲಿಗೆ 10 ಅಡಿ ಅಂತರದಲ್ಲಿ ಜವಾರಿ ಬಾಳೆ ನಾಟಿ ಮಾಡಿದ್ದಾರೆ. ಇದಕ್ಕೆ ತಮ್ಮಲ್ಲಿಯೇ ತಯಾರಿಸುವ ಸಾವಯವ ಗೊಬ್ಬರದ ಜತೆಗೆ, ಹೊರಗಿಂದ ಒಂದು ಟ್ರೈಲರ್‌ ಕುರಿ ಗೊಬ್ಬರಕ್ಕೆ ₹ 3000ದಂತೆ ಆರು ಟ್ರೈಲರ್ ಕುರಿ ಗೊಬ್ಬರ ಹಾಕಿಸಿದ್ದಾರೆ.

ಬಾಳೆ ಒಂದು ಬೆಳೆ ಮುಗಿದು, ಇದೀಗ ಎರಡು ಮರಿ ಬೆಳೆಯೂ ಕನಕರೆಡ್ಡಿ ಕಿಸೆ ತುಂಬಿಸಿದೆ. ಇದೀಗ ಪ್ರತಿ ಬೊಡ್ಡೆಗೆ ಮೂರರಿಂದ ನಾಲ್ಕು ಗಿಡಗಳಿವೆ. 1.5 ಎಕರೆಯಲ್ಲಿ ಸರಾಸರಿ 3 ಸಾವಿರ ಗಿಡಗಳಿವೆ. 1 ಗೊನೆ 17ರಿಂದ 20 ಕೆ.ಜಿ. ತೂಗುತ್ತದೆ. 15-20 ದಿನಕ್ಕೊಮ್ಮೆ ಫಲ ಕಟಾವು. ಇದು 10 ವರ್ಷ ಫಲ ನೀಡುತ್ತಲೇ ಹೋಗುತ್ತದೆ. ಸಾವಯವ ಜವಾರಿ ಬಾಳೆಗೆ ಬೇಡಿಕೆ ಹೆಚ್ಚಿದ್ದು, ಬಸವನ ಬಾಗೇವಾಡಿ, ಬೆಳಗಾವಿಯಿಂದ ಹೊಲಕ್ಕೆ ಬಂದು ವ್ಯಾಪಾರಿಗಳು ಖರೀದಿಸುತ್ತಾರೆ. ಚಿಕ್ಕೋಡಿಯಲ್ಲೊಬ್ಬರು 15 ವರ್ಷದಿಂದ ಬಾಳೆ ಫಸಲು ಇಟ್ಟುಕೊಂಡಿದ್ದಾರೆ ಎನ್ನಲಾಗಿದ್ದು, ನೋಡಬೇಕು ಎಂದು ಬಸನಗೌಡ ಬಾಳೆ ಬೆಳೆಯ ಬಗ್ಗೆ ಮಾಹಿತಿ ನೀಡಿದರು.

ಸದ್ಯ ಒಂದು ಕ್ವಿಂಟಲ್‌ಗೆ ₹ 2000 ದರವಿದೆ. ಅರ್ಧ ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಕಟಾವು ಮಾಡಲಾಗಿದ್ದು, ಖಾಲಿಯಾದ ಜಮೀನಲ್ಲಿ ಮೆಣಸಿನಕಾಯಿ ಬೆಳೆಗೆ ಸಿದ್ಧತೆ ನಡೆದಿದೆ.

ಪುಟ್ಟ ತೋಟದ ಸುತ್ತ 28 ತೆಂಗು, 10 ಲಿಂಬೆ, 5 ಸಾಗವಾನಿ, 50 ಕರಿ ಬೇವು, 4 ಸೀತಾಫಲ, ಚಿಕ್ಕು, ನುಗ್ಗೆ, ದಾಳಿಂಬೆ, 2 ಪೇರಲ 2 ಮಾವು ಮರಗಳಿವೆ. ಮನೆಗೆ ಹಣ್ಣಿನ ಜತೆ ಆದಾಯವನ್ನು ನೀಡುತ್ತಿವೆ.

ಬಸನಗೌಡರಿಗೆ ಪತ್ನಿ ಅನ್ನಪೂರ್ಣಾ ಸಮಪಾಲಿನ ಶ್ರಮ ಧಾರೆ ಎರೆಯುವ ಮೂಲಕ ಬೆನ್ನೆಲುಬಾಗಿದ್ದಾರೆ. 62ರ ಹರೆಯದಲ್ಲೂ ಸ್ವತಃ ಬೆವರಿಳಿಸುವ ಬಸನಗೌಡರು, ತಮ್ಮ ಜಮೀನಿನ ಪ್ರತಿ ಉತ್ಪನ್ನವೂ ಸಾವಯವ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಎರಡು ಬೋರ್‌ವೆಲ್ ಇದ್ದರೂ, ಮಳೆಯಿಲ್ಲದ್ದರಿಂದ ನೀರು ಕಡಿಮೆಯಾಗಿದೆ. ನೀರೆತ್ತಲು ಸೋಲಾರ್ ಹಾಗೂ ವಿದ್ಯುತ್ ಮೋಟಾರ್‌ ಅಳವಡಿಸಿರುವೆ. ಬಾಳೆಗೆ ಡ್ರಿಪ್ ಅಳವಡಿಸಿದ್ದರೂ; ಕಾಲುವೆಯಿಂದ ಹರಿ ನೀರು ಬಿಡುತ್ತಿದ್ದೇನೆ. ಮಲ್ಚಿಂಗ್ ಮಾಡಿದ್ದೇನೆ ಎಂದು ಬಸನಗೌಡ ತಮ್ಮ ಕೃಷಿ ಬಗ್ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 23

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !