ಒಣಗಿದ್ದ ತೋಟಕ್ಕೆ ಜೀವ ಕಳೆ; ಸಮೃದ್ಧ ಬೆಳೆ

ಮಂಗಳವಾರ, ಏಪ್ರಿಲ್ 23, 2019
33 °C
ವಸತಿ ನಿಲಯದ ನಿವೃತ್ತ ಪಾಲಕರ ಕೃಷಿ ಪ್ರೀತಿ; ಆದಾಯ ಜಾಸ್ತಿ

ಒಣಗಿದ್ದ ತೋಟಕ್ಕೆ ಜೀವ ಕಳೆ; ಸಮೃದ್ಧ ಬೆಳೆ

Published:
Updated:
Prajavani

ತಾಳಿಕೋಟೆ: ಕೃಷಿಯಿಂದ ವಿಮುಖರಾಗುತ್ತಿರುವವರೇ ಹೆಚ್ಚುತ್ತಿರುವ ಕಾಲ ಘಟ್ಟದಲ್ಲಿ; ಪಟ್ಟಣದ ಎಸ್.ಕೆ. ವಸತಿ ನಿಲಯದ ಪಾಲಕರಾಗಿ ನಿವೃತ್ತರಾದ ಚಂದ್ರಶೇಖರ ಮಲ್ಲೇಶಪ್ಪ ಬೆಂಡೆಗುಂಬಳ ಅವರೊಳಗಿನ ಕೃಷಿ ಪ್ರೀತಿ, ಒಣಗಿದ್ದ ತೋಟಕ್ಕೆ ಜೀವ ತುಂಬಿದೆ.

ಎಪ್ಪತ್ತರ ಇಳಿ ವಯಸ್ಸಲ್ಲೂ ಚುರುಕಿನಿಂದ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುವ ಇವರ ಕಾರ್ಯವೈಖರಿಗೆ ತಲೆದೂಗದವರಿಲ್ಲ.

ಪಟ್ಟಣದಿಂದ ವಿಜಯಪುರಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿ ಕೊಣ್ಣೂರ ಗ್ರಾಮದ ಬಳಿ, ರಸ್ತೆಗೆ ಅಂಟಿಕೊಂಡಂತಿರುವ ಒಂಬತ್ತು ಎಕರೆಯ ಜಮೀನಿನಲ್ಲಿ ಇದೀಗ ವಿವಿಧ ಫಲಗಳು ಸಮೃದ್ಧವಾಗಿವೆ. ಹಸಿರು ನಳನಳಿಸುತ್ತಿದ್ದರೆ, ಪಕ್ಷಿ ಸಂಕುಲದ ಗಾನ ಕಿವಿಗೆ ಇಂಪನ್ನು ನೀಡಲಿದೆ.

ಐದು ವರ್ಷಗಳ ಹಿಂದೆ ನೀರಿನ ಅಭಾವ ನೀಗಿಸಲಾಗದೆ ಸೋತು ಸುಣ್ಣವಾಗಿದ್ದ ಮಾಲೀಕನಿಂದ ಈ ತೋಟವನ್ನು ಖರೀದಿಸಿದವರು ಬೆಂಡೆಗುಂಬಳ. ತೋಟದಲ್ಲಿದ್ದ 450 ನಿಂಬೆ, 100 ಮಾವು, 120 ತೆಂಗು, 150 ಚಕ್ಕೋತ, 150 ಸಾಗುವಾನಿ, 15 ಪೇರಲ, 60 ಬೇವಿನ ಗಿಡಗಳು ನೀರಿಲ್ಲದೆ ಒಣಗುತ್ತಿದ್ದವು.

ತೋಟದಲ್ಲಿದ್ದ ಒಂದು ತೆರೆದ ಬಾವಿ, ಎರಡು ಕೊಳವೆಬಾವಿ ಬತ್ತಿದ್ದವು. ನೀರಿಗಾಗಿಯೇ ಬೆಂಡೆಗುಂಬಳ ಕೊಣ್ಣೂರ ಗ್ರಾಮದಲ್ಲಿನ ಹಳ್ಳದಲ್ಲಿ 5 ಸೆಂಟ್ ಜಾಗ ಖರೀದಿಸಿ, ಅಲ್ಲಿ ಬಾವಿ ತೋಡಿ, ಅಲ್ಲಿಂದ 4.5 ಕಿ.ಮೀ. ದೂರದ ತಮ್ಮ ಜಮೀನಿನವರೆಗೆ ಪೈಪ್‌ಲೈನ್ ಮಾಡಿಕೊಂಡು ತೋಟಕ್ಕೆ ನೀರು ಹರಿಸಿದರು. ಕೃಷಿ ಹೊಂಡ ತುಂಬಿಸಿಕೊಂಡು, ಡ್ರಿಪ್ ಮೂಲಕ ಗಿಡಗಳಿಗೆ ನೀರುಣಿಸುತ್ತಿದ್ದಾರೆ.

ಗಿಡಗಳ ಸುತ್ತ ಪಾತಿ ಮಾಡಿ ಹೊಸಪೇಟೆಯಿಂದ ತರಿಸಿದ್ದ ಎಂಟು ಲೋಡ್ ಕುರಿ ಗೊಬ್ಬರವನ್ನು ಕೊಟ್ಟರು. ತೋಟದಲ್ಲಿ ಗಿಡ-ಮರಗಳಿಂದ ಬೀಳುತ್ತಿದ್ದ ಎಲೆಗಳನ್ನೆಲ್ಲ ಸಂಗ್ರಹಿಸಿ, ಕೊಳೆಸಿ ಜೀವಾಮೃತ ತಯಾರಿಸಿ ಸಿಂಪಡಣೆ ಮಾಡಿದರು. ರಾಸಾಯನಿಕ ಗೊಬ್ಬರ, ಔಷಧಿ ಬಳಸದೆ, ಸಾವಯವ ಗೊಬ್ಬರ ಹಾಗೂ ಜೀವಾಮೃತ ಬಳಕೆಯ ಪರಿಣಾಮವಾಗಿ ಭೂಮಿ ಸತ್ವಗೊಂಡಿತು. ಗಿಡಗಳೆಲ್ಲ ಹಸಿರಿನಿಂದ ನಳನಳಿಸಿ ಫಲ ನೀಡಲಾರಂಭಿಸಿವೆ.

ಇವರ ಶ್ರಮಕ್ಕೊಲಿದ ಭೂ ತಾಯಿ ವರ ನೀಡಿದ್ದಾಳೆ. ಇದೀಗ ವಾರದೊಳಗೆ ಮೂರು ಬಾರಿ ಸರಾಸರಿ 30,000ದಿಂದ 40,000 ನಿಂಬೆಹಣ್ಣು ಮಾರುಕಟ್ಟೆಗೆ ಹೋಗುತ್ತಿವೆ. ಉಳಿದವರಿಗಿಂತ ಗುಣಮಟ್ಟ, ಬಣ್ಣ, ಹೆಚ್ಚು ಬಾಳಿಕೆ ಹಾಗೂ ದೊಡ್ಡ ಅಳತೆಯ ನಿಂಬೆ ಹಣ್ಣು ಇವರದ್ದಾಗಿದ್ದರಿಂದ; ವಿಜಯಪುರದ ಮಾರುಕಟ್ಟೆಯಿಂದ ಮುಂಬೈ, ಉತ್ತರ ಪ್ರದೇಶ, ಚಂಡಿಗಡ, ಬಿಕಾನೇರ್‌ವರೆಗೂ ಹೋಗುತ್ತಿರುವುದು ವಿಶೇಷ.

ಇದೀಗ ತೋಟದ ಸುತ್ತ ಬದುವಿನಲ್ಲಿ 40 ತೆಂಗು, 40 ಆಫೂಸ್‌ ಮಾವು, ಅಂಜೂರ, ನುಗ್ಗೆ ಹಚ್ಚಿದ್ದಾರೆ. ಎರಡು ಆಕಳು ಕಟ್ಟಿದ್ದಾರೆ. ಇವರಿಗೆ ಆಸರೆಯಾಗಿ ಮಡದಿ ಚಿನ್ನಮ್ಮ ಇದ್ದರೆ, ತೋಟದಲ್ಲಿ ಎರಡು ಗಂಡು ಮತ್ತು ಹೆಣ್ಣಾಳು ಕಾಯಂ ನೆಲೆಸಿ, ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಬೆಂಡೆಗುಳ ಏಕೈಕ ಪುತ್ರ ಸುರೇಶ ಕೃಷಿಯಲ್ಲಿ ಎಂಎಸ್ಸಿ ಓದಿ ಬೀಜೋತ್ಪಾದನೆ ತಜ್ಞರಾಗಿದ್ದರು. 11 ವರ್ಷಗಳಿಂದ ಪಿಎಸ್‌ಐ ಹುದ್ದೆ ಅಪ್ಪಿಕೊಂಡಿದ್ದು, ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿದ್ದಾರೆ.

ನಿಂಬೆಯಿಂದ ವರ್ಷಕ್ಕೆ ₹ 10 ಲಕ್ಷದಿಂದ ₹ 12 ಲಕ್ಷ, ಮಾವು, ತೆಂಗು, ಚಕ್ಕೋತ ಮಾರಾಟದಿಂದ ಕನಿಷ್ಠ ₹ 50,000 ಕೈ ಸೇರುತ್ತಿದೆ. ಪೇರಲ ಹಣ್ಣು ಮಾರಾಟಕ್ಕಿಲ್ಲ. ಮಕ್ಕಳಿಗೆ, ಕೆಲಸ ಮಾಡುವ ಕುಟುಂಬಗಳಿಗೆ ಸೀಮಿತ.

ಕೃಷಿ ಹೊಂಡದೊಳಗೆ 4000 ಮೀನುಗಳಿದ್ದು, ಅವು ಅಲ್ಲಿನ ಕಪ್ಪೆ ಜೊಂಡು ತಿಂದು, ಶುದ್ಧ ನೀರನ್ನು ಡ್ರಿಪ್‌ಗೆ ನೀಡುತ್ತಿವೆ. ಖಾಲಿಯಿರುವ ಒಂದು ಎಕರೆ ಸ್ಥಳದಲ್ಲಿ ಜೋಳ, ಗೋದಿ ಬೆಳೆಯುತ್ತಾರೆ. ಹೈನುಗಾರಿಕೆ, ಜೇನು ಸಾಕಣೆ ಕನಸಾಗಿವೆ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !