ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವ ಕಾಲಕ್ಕೂ ನಳನಳಿಸುವ ತೋಟ: ನಿವೃತ್ತ ಸಹಾಯಕ ಕ್ಷೇತ್ರ ಶಿಕ್ಷಣಾಧಿಕಾರಿ ಸಾಧನೆ

ಎರಡು ಎಕರೆಯಲ್ಲಿ ಬಗೆಬಗೆ ಗಿಡ ಬೆಳೆಸಿದ ನಿವೃತ್ತ ಸಹಾಯಕ ಕ್ಷೇತ್ರ ಶಿಕ್ಷಣಾಧಿಕಾರಿ
Last Updated 19 ಆಗಸ್ಟ್ 2022, 9:22 IST
ಅಕ್ಷರ ಗಾತ್ರ

ಕೊಟ್ಟೂರು (ವಿಜಯನಗರ ಜಿಲ್ಲೆ): ‘ನಿಮಗೆ ಇಷ್ಟವಾದರೆ ಹೂವು ಹರಿಯಬಹುದು, ಪ್ರೀತಿಸುವುದಾದರೆ ನೀರೆರೆಯಬಹುದು’ ಎಂಬ ಸಾಲುಗಳು ಕೊಟ್ಟೂರಿನ ಹುಣಸೆಕಟ್ಟೆ ಕ್ರಾಸ್‌ ಸಮೀಪದ ಆಯುಷ್‌ ಫಾರ್ಮ್‌ಹೌಸ್‌ ಗೇಟ್‌ ಮೇಲಿನ ಫಲಕ ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ.

ಹೀಗೆ ಪ್ರಕೃತಿಯ ಪ್ರೀತಿಯ ಸಂದೇಶ ಸಾರುವ ಫಲಕ ಹಾಕಿರುವ ತೋಟದ ಮಾಲೀಕ ಹಿ.ಮ. ಹಾಲಯ್ಯನವರು ಪ್ರಕೃತಿ ಪ್ರೇಮಿ.

ಕಲ್ಲು, ಮಣ್ಣಿನಿಂದ ಕೂಡಿದ ಬಂಜರು ಭೂಮಿಯಂತಿದ್ದ ಜಮೀನನ್ನು ಹದಗೊಳಿಸಿ, ಅದನ್ನು ಹಸಿರುಗೊಳಿಸಿದ ಕೀರ್ತಿ ಹಾಲಯ್ಯ ಅವರದು. ಯಾರಾದರೂ ಇವರ ತೋಟ ನೋಡಿ, ‘ಹಣ್ಣಿನ ತೋಟದ ಇಳುವರಿ ಎಷ್ಟು, ವಾರ್ಷಿಕ ಲಾಭ ಎಷ್ಟು ಎಂದು ಕೇಳಿದರೆ, ‘ತೋಟವನ್ನು ಆದಾಯಕ್ಕಾಗಿ ಮಾಡುತ್ತಿಲ್ಲ. ಖುಷಿಗಾಗಿ ಮಾಡುತ್ತಿರುವೆ’ ಎಂದು ಥಟ್ಟನೆ ಹೇಳುತ್ತಾರೆ. ಅದರಂತೆಯೇ ಅವರು ನಡೆದುಕೊಳ್ಳುತ್ತಿದ್ದಾರೆ ಕೂಡ.ಹಾಲಯ್ಯ ಅವರು ಸಹಾಯಕ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಯಿಂದ ನಿವೃತ್ತರಾದ ನಂತರ ಎರಡು ಎಕರೆ ಜಮೀನು ಖರೀದಿಸಿ ಈಗ ಅಲ್ಲಿ ತರಹೇವಾರಿ ಹಣ್ಣುಗಳನ್ನು ಬೆಳೆಸುತ್ತಿದ್ದಾರೆ.

ಕೊಳವೆಬಾವಿ ಕೊರೆಯಿಸಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ ಪಡೆದು ಹನಿ ನೀರಾವರಿಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಐದು ವರ್ಷಗಳಲ್ಲಿ ಮಾವಿನ ತೋಪು ಬೆಳೆದು ನಿಂತಿದೆ. ನಿಂಬೆ, ಸೇಬು, ಸಪೋಟ, ಕಿತ್ತಳೆ, ಹಲಸು, ನೇರಳೆ, ಪೇರಲ, ಫ್ಯಾಷನ್ ಪ್ರೂಟ್, ಹುಣಸೆ, ಕರಿಬೇವು, ತೆಂಗು, ತೇಗದ ಗಿಡಗಳೂ ತಲೆ ಎತ್ತಿದವು. ತೋಟದಲ್ಲಿ ವರ್ಷಪೂರ್ತಿ ಒಂದಲ್ಲಾ ಒಂದು ಬಗೆಯ ಹಣ್ಣು ಇದ್ದೇ ಇರುತ್ತವೆ. ಸರ್ವಋತು ಹಣ್ಣಿನ ತೋಟ ಎಂಬ ಖ್ಯಾತಿ ಗಳಿಸಿದೆ.

ತೋಟದಲ್ಲಿ ಬಿಡುವ ಹಣ್ಣುಗಳನ್ನು ಸ್ನೇಹಿತರು, ಸಂಬಂಧಿಕರಿಗೆ ಹಂಚುತ್ತಾರೆ. ತೋಟಕ್ಕೆ ಭೇಟಿ ನೀಡುವ ಅತಿಥಿಗಳಿಗೂ ಕೊಡುತ್ತಾರೆ. ಹಲವು ಜಾತಿಯ ಪಕ್ಷಿಗಳು ವರ್ಷವಿಡೀ ಇಲ್ಲಿ ಕಾಣಿಸುತ್ತವೆ. ಹಣ್ಣು ತಿಂದು, ನೀರು ಕುಡಿದು ದಾಹ ತಣಿಸಿಕೊಳ್ಳುತ್ತವೆ.

‘ಹಕ್ಕಿಗಳ ಚಿಲಿಪಿಲಿ ಕಲರವ, ಜೇನುನೊಣಗಳ ಝೇಂಕಾರ, ಪಾತರಗಿತ್ತಿ, ದುಂಬಿಗಳಿಂದ ಮನಸ್ಸಿಗೆ ಆನಂದವಾಗುತ್ತದೆ’ ಎನ್ನುತ್ತಾರೆ ಹಾಲಯ್ಯ. ತೋಟದಲ್ಲಿ ಒಂದು ಭಾಗವನ್ನು ಹೂದೋಟಕ್ಕೆ ಮೀಸಲಿಟ್ಟಿದ್ದಾರೆ. ವಿಧವಿಧವಾದ ಹೂವಿನ ಗಿಡಗಳನ್ನು ಹಾಲಯ್ಯನವರ ಪತ್ನಿ ಅಮೃತ ಪೋಷಿಸುತ್ತಿದ್ದಾರೆ.

ಆಯುಷ್ ಫಾರ್ಮ್‌ಹೌಸ್ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವೂ ಹೌದು. ಈ ತೋಟದಲ್ಲಿರುವ ಮರಗಳಿಗೆ ವಚನ ಮತ್ತು ತ್ರಿಪದಿಗಳ ಫಲಕಗಳನ್ನು ತೂಗು ಹಾಕಿರುವುದು ನೋಡುಗರ ಕಣ್ಮನ ಸೆಳೆಯುತ್ತದೆ. ಹಾಲಯ್ಯನವರು ಚುಕ್ಕಿ ಚಿತ್ರಕಲಾವಿದರೂ ಹೌದು. ಇವರ ಕೈಯಲ್ಲಿ ರಚನೆಯಾಗಿರುವ ಖ್ಯಾತ ವ್ಯಕ್ತಿಗಳ ಚುಕ್ಕಿ ಚಿತ್ರಗಳು ಮನೆಯ ಗೋಡೆ ಅಲಂಕರಿಸಿವೆ. ವಚನಗಳು, ಭಾವಗೀತೆಗಳು ಮುಖ್ಯವಾಗಿ ಘಂಟಸಾಲ ಹಾಡುಗಳನ್ನು ರಾಗವಾಗಿ ಹಾಡುತ್ತಾರೆ. ತೋಟದಲ್ಲಿ ಸಮಾನ ಮನಸ್ಕರೆಲ್ಲ ಸೇರಿ ಸಂಗೀತ ಕಚೇರಿಗಳ ಸಹ ಆಗಾಗ್ಗೆ ಏರ್ಪಡಿಸುತ್ತಾರೆ. ಹೀಗೆ ಬಹುಮಖ ಪ್ರತಿಭೆಯ ಹಾಲಯ್ಯನವರು ಸುಂದರವಾದ ತೋಟವನ್ನು ನಿರ್ಮಿಸಿ ಈ ಭಾಗದ ಕೃಷಿಕರಿಗೆ ಮಾದರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT