ಶನಿವಾರ, ಜೂನ್ 6, 2020
27 °C

ಉಳುಮೆ ಇಲ್ಲದ ತೋಟದಲ್ಲಿವೈವಿಧ್ಯಮಯ ಬೆಳೆಗಳು

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯ ಕೃಷಿಕ ಬಸವರಾಜು ಅವರದ್ದು ಒಟ್ಟು ಎರಡೂವರೆ ಎಕರೆಯ ಬಹುಬೆಳೆಗಳಿರುವ ವೈವಿಧ್ಯಮಯ ತೋಟ. 

ಬಸವರಾಜು ಒಂದು ಕಾಲದಲ್ಲಿ ಒಂಟಿ ಎತ್ತಿನಲ್ಲಿ ಉಳುಮೆ ಮಾಡುತ್ತಿದ್ದರು. ಅದಕ್ಕೆ ಇವರಿಗೆ ‘ಒಂಟೆತ್ತಿನ ಬಸವರಾಜು’ ಎಂಬ ಹೆಸರುಂಟು. ಆದರೆ ಐದು ವರ್ಷಗಳಿಂದೀಚೆಗೆ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡ ಮೇಲೆ, ತೋಟದಲ್ಲಿ ಉಳುಮೆ ನಿಲ್ಲಿಸಿದ್ದಾರೆ. ತೋಟದಲ್ಲಿ ಮರಗಳು ಉದುರಿಸುವ ಎಲೆಗಳು, ತೆಂಗು–ಅಡಿಕೆಯಂತಹ ಬೆಳೆಯುಳಿಕೆಗಳನ್ನು ಒಟ್ಟು ಮಾಡಿ ಅಡಿಕೆ ಮತ್ತು ತೆಂಗು ಗಿಡಗಳ ಬುಡಕ್ಕೆ ಮುಚ್ಚಿಗೆ/ಹೊದಿಕೆಯಾಗಿಸುತ್ತಾರೆ. ಐದಾರು ತಿಂಗಳು ಕಳೆಯುವಷ್ಟರಲ್ಲಿ ಅಷ್ಟೂ ತ್ಯಾಜ್ಯ ಕೊಳೆತು ಗೊಬ್ಬರವಾಗಿ ಮಣ್ಣು ಸೇರುತ್ತದೆ. ತ್ಯಾಜ್ಯದ ಹೊದಿಕೆಯಿಂದ ಕಳೆ ನಿಯಂತ್ರಣಕ್ಕೆ ಬರುತ್ತದೆ. 

ಬಹುಬೆಳೆಯ ತೋಟ

ಸಣ್ಣ ಹಿಡುವಳಿ ತೋಟವಾದರೂ ಹತ್ತಕ್ಕೂ ಹೆಚ್ಚು ತರಹೇವಾರಿ ಬೆಳೆಗಳಿವೆ.  70 ತೆಂಗಿನಮರಗಳಿವೆ. 350 ಅಡಿಕೆ ಮರಗಳಿವೆ. ಅದರಲ್ಲಿ ಎಂಬತ್ತು ಗಿಡಗಳಿಗೆ ಕಾಳುಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ. ಜತೆಗೆ ಬೇಲಿಯಲ್ಲಿ 300 ತೇಗ, 100 ಹೆಬ್ಬೇವು, 100 ಸಿಲ್ವರ್‌ ಓಕ್‌ ಮರಗಳಿವೆ. ನಡುವೆ 800 ಬಾಳೆ, 30 ನಿಂಬೆಯ ಜತೆಗೆ ಏಲಕ್ಕಿ, ಬೆಣ್ಣೆಹಣ್ಣು, ಪೇರಲ, ಬೆಣ್ಣೆಹಣ್ಣು, ಪನ್ನೇರಲು, ಅನಾನಸ್‌, ವೀಳ್ಯದ ಎಲೆ, ಮಾವು, ಅನಾನಸ್...ಒಟ್ಟಾರೆ ಇವರದ್ದು ಒಂಥರ ಬಹುಬೆಳೆಯ ತೋಟ. ಇದರಲ್ಲಿ ಮುಕ್ಕಾಲುಪಾಲು ಎಲ್ಲವೂ ಫಸಲು ಕೊಡುತ್ತಿವೆ.

ಅಡಿಕೆ ಮರಗಳ ನಡುವೆ ನೆರಳಿನಲ್ಲಿ ಸಮೃದ್ಧವಾಗಿ ಸೊಪ್ಪು ಬೆಳೆದು ಮಾರಾಟ ಮಾಡುತ್ತಾರೆ. ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ, ತೀರ್ಥಹಳ್ಳಿ ತಳಿಯ ಅಡಿಕೆ ಸಸಿ, ತಿಪಟೂರು ಟಾಲ್‌ ತಳಿಯ ತೆಂಗಿನ ಸಸಿಗಳನ್ನು ಬೆಳೆಸಿ ಮಾರಾಟ ಮಾಡುತ್ತಾರೆ. ಮಂಡ್ಯ ಜಿಲ್ಲೆಯ ‘ನೈಸರ್ಗಿಕ ಕೃಷಿಕರ ಗುಂಪಿನ’  ಸದಸ್ಯರಾಗಿರುವ ಬಸವರಾಜು ತಮ್ಮ ಎಲ್ಲ ಉತ್ಪನ್ನಗಳನ್ನು ನೈಸರ್ಗಿಕ ಕೃಷಿ ಉತ್ಪನ್ನ ಮಾರಾಟ ಕೇಂದ್ರಗಳ ಮೂಲಕ ಮಾರಾಟ ಮಾಡುತ್ತಾರೆ.

ನೆಲ–ಜಲ ರಕ್ಷಣೆ 

ತೋಟ ನಿರ್ವಹಣೆಗಾಗಿ ಒಂದು ಕೊಳವೆಬಾವಿ ಕೊರೆಸಿದ್ದಾರೆ. ಅದರಲ್ಲಿ ಒಂದೂವರೆ ಇಂಚು ನೀರು ಇದೆ. ಹನಿ ನೀರಾವರಿ ಪದ್ದತಿ ಮೂಲಕ ನೀರು ಪೂರೈಸುತ್ತಾರೆ. ಬೆಳೆಯುಳಿಕೆಗಳನ್ನು ತೋಟದಲ್ಲಿ ಹರಡುವುದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚು ದಿನ ಉಳಿಯುತ್ತದೆ. ಹೆಚ್ಚಿನ ನೀರು ಕೂಡ ಬೇಕಾಗುವುದಿಲ್ಲ ಎನ್ನುವುದು ಅವರ ಅನುಭವದ ಮಾತು.

ನಾಟಿ ಹಸುವಿನ ಸೆಗಣಿ, ಗಂಜಲ, ಕಪ್ಪು ಬೆಲ್ಲ, ಹುರುಳಿ ಅಥವಾ ಕಡಲೆ ಹಿಟ್ಟು ಮತ್ತು ಕೃಷಿ ಜಮೀನಿನ ಒಂದು ಹಿಡಿ ಮಣ್ಣನ್ನು ನೀರಿನಲ್ಲಿ ಒಂದು ವಾರ ನೆನೆಸಿ ಜೀವಾಮೃತ ತಯಾರಿಸಿಕೊಳ್ಳುತ್ತಾರೆ. ವಾರಕ್ಕೊಮ್ಮೆ ಸಂಜೆ ವೇಳೆ ಪ್ರತಿ ಗಿಡಕ್ಕೂ ಜೀವಾಮೃತ ಕೊಡುತ್ತಾರೆ. ಜೀವಾಮೃತ ಬೆಳೆಗಳಿಗೆ ಉತ್ತಮ ಪೋಷಕಾಂಶ ನೀಡುತ್ತದೆ.

ಜೀವಾಮೃತ ಬಳಕೆ, ಉಳುಮೆ ರಹಿತ ಕೃಷಿ, ತ್ಯಾಜ್ಯ ಮುಚ್ಚಿಗೆ, ಹನಿ ನೀರಾವರಿ ಪದ್ಧತಿ ಅಳವಡಿಕೆ.. ಇಂಥ ಹಲವು ಕ್ರಮಗಳಿಂದಾಗಿ ಕೃಷಿ ಕಾರ್ಮಿಕರ ಮೇಲೆ ಅವಲಂಬನೆ ಕಡಿಮೆ. ಎಲ್ಲ ಕೆಲಸಗಳಲ್ಲೂ ಕುಟುಂಬ ಸದಸ್ಯರೇ ನೆರವಾಗುತ್ತಾರೆ.

ಮನೆ ಬಳಿಗೆ ಮಾರುಕಟ್ಟೆ 

ಇವರ ತೋಟದಲ್ಲಿ ಅಡಿಕೆ, ತೆಂಗು, ಬಾಳೆ, ಮೆಣಸು, ಏಲಕ್ಕಿ ಬೆಳೆಗಳು ಫಸಲು ಕೊಡುತ್ತಿವೆ. ಅಡಿಕೆ ವಾರ್ಷಿಕ ಎರಡು ಟನ್‌, ತೆಂಗು ವರ್ಷಕ್ಕೆ 9 ರಿಂದ ಹತ್ತು ಸಾವಿರ ಕಾಯಿ ಸಿಗುತ್ತದೆ. ಇವೆರಡೂ ಉತ್ಪನ್ನಗಳನ್ನು ವ್ಯಾಪಾರಸ್ಥರು ತೋಟಕ್ಕೆ ಬಂದು ಖರೀದಿಸುತ್ತಾರೆ.  ಏಲಕ್ಕಿ ತಳಿಯ ಬಲಿತ ಬಾಳೆ ಗೊನೆಗಳನ್ನು ವಾರ ವಾರವೂ ಕೊಯ್ಲು ಮಾಡುತ್ತಿದ್ದು, ಪ್ರತಿ ಕೆ.ಜಿಗೆ ₹ 40ರ ದರದಲ್ಲಿ ಮೈಸೂರಿನ ನೈಸರ್ಗಿಕ ಕೃಷಿ ಉತ್ಪನ್ನ ಮಾರಾಟ ಕೇಂದ್ರಗಳಲ್ಲಿ ಮಾರಾಟ ಮಾಡುತ್ತಾರೆ. ಸದ್ಯ ವರ್ಷಕ್ಕೆ 4 ರಿಂದ 5 ಕೆ.ಜಿಯಷ್ಟು ಕಾಳು ಮೆಣಸು, ಒಂದೂವರೆ ಕೆ.ಜಿ ಏಲಕ್ಕಿ ಸಿಗುತ್ತಿದೆ.

‘ಲಾಕ್‌ಡೌನ್‌ ಸಮಸ್ಯೆಯಾಗಿಲ್ಲ’

ಕೊರೊನಾ –ಲಾಕ್‌ಡೌನ್‌ ಇದ್ದರೂ, ಬಸವರಾಜು ಅವರ ಕೃಷಿ ಉತ್ಪನ್ನಗಳ ಮಾರಾಟದ ಮೇಲೆ ಹೇಳಿಕೊಳ್ಳುವಂತಹ ಪರಿಣಾಮ ಬೀರಿಲ್ಲ. ಏಕೆಂದರೆ, ಇವರು ಬೆಳೆಯುವ ಬಾಳೆಹಣ್ಣು, ತರಕಾರಿ ಸೇರಿದಂತೆ ಹಲವು ಉತ್ಪನ್ನಗಳಿಗೆ ಕಾಯಂ ಗ್ರಾಹಕರು ಇದ್ದಾರೆ. ಅವರೆಲ್ಲ ಮನೆ ಬಳಿಗೆ ಬಂದು ಖರೀದಿಸುತ್ತಾರೆ.  ಹೆಚ್ಚಾಗಿದ್ದನ್ನು ಮಾತ್ರ ಮೈಸೂರಿಗೆ ಕಳುಹಿಸುತ್ತಿದ್ದರು. ಹೀಗಾಗಿ ದೊಡ್ಡ ಪ್ರಮಾಣದ ಸಮಸ್ಯೆಯಾಗಿಲ್ಲ ಎನ್ನುತ್ತಾರೆ ಬಸವರಾಜು. ಜತೆಗೆ, ಅರಿಸಿನ, ಶುಂಠಿ, ಕಾಳು ಮೆಣಸಿನಂತಹ ಉತ್ಪನ್ನಗಳನ್ನು ಮನೆಯಲ್ಲಿಟ್ಟು ಮಾರಾಟ ಮಾಡುವ ಅಭ್ಯಾಸವಿದೆ. ಹೀಗಾಗಿ ಬೇಡಿಕೆ, ಬೆಲೆ ಪೂರೈಕೆಯಲ್ಲಿ ಅಂಥ ವ್ಯತ್ಯಾಸವಾಗಿಲ್ಲ ಎಂಬುದು ಬಸವರಾಜು ಅಭಿಪ್ರಾಯ.

ಚಿತ್ರಗಳು: ಲೇಖಕರವು, ಸಂಪರ್ಕಕ್ಕೆ ಮೊ:9538120461

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು