ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌| ಕಬ್ಬಿಗೆ ಪರ್ಯಾಯ ಬೆಳೆ ಬೆಳೆಯಲು ರೈತರ ಸಿದ್ಧತೆ

ಹಾನಿ ತಪ್ಪಿಸಲು ಮಿಶ್ರ ಬೆಳೆ ಬೆಳೆಯಲು ಸಲಹೆ
Last Updated 20 ಮೇ 2022, 19:30 IST
ಅಕ್ಷರ ಗಾತ್ರ

ಬೀದರ್‌: ಮುಂಗಾರು ಪ್ರವೇಶಿಸುತ್ತಿದ್ದರೂ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಬಾಕಿ ಪಾವತಿಸಲು ಸಿದ್ಧವಿಲ್ಲ. ಜಿಲ್ಲೆಯ ಕಬ್ಬಿನಲ್ಲಿ ಸಕ್ಕರೆ ಪ್ರಮಾಣವೂ ಕಡಿಮೆ ಬರುತ್ತಿರುವ ಕಾರಣ ಜಿಲ್ಲೆಯ ರೈತರು ಕಬ್ಬಿಗೆ ಪರ್ಯಾಯ ಬೆಳೆ ಬೆಳೆಯಲು ಆಲೋಚನೆ ನಡೆಸಿದ್ದಾರೆ.

ಹೊಸ ಬೆಳೆ ಬೆಳೆಸಲು ಅಗತ್ಯವಿರುವ ಬೀಜ ಹಾಗೂ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ, ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಯ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಸೋಯಾ ಜತೆ ಅಂತರ ಬೆಳೆ ಬೆಳದು ಲಾಭ ಗಳಿಸಿದ, ಶುಂಠಿ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಪಡೆದ ರೈತರ ಯಶೋಗಾಥೆ ತಿಳಿದು ಕೆಲವರು ಶುಂಠಿ ಬೆಳೆಯಲು ಸಹ ಉತ್ಸುಕತೆ ತೋರಿಸುತ್ತಿದ್ದಾರೆ.

ಕೃಷಿಕರ ಮನಸ್ಥಿತಿ ಅರಿತು ಬೀದರ್ ತಾಲ್ಲೂಕಿನ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಸಕ್ತ ವರ್ಷ ಯಾವ ಬೆಳೆ ಬೆಳೆಯಬಹುದು. ಬಿತ್ತನೆ ಹಾಗೂ ನಿರ್ವಹಣೆ ಹೇಗೆ ಮಾಡಬೇಕು ಎನ್ನುವ ಕುರಿತು ಕೆಲ ಸಲಹೆಗಳನ್ನೂ ನೀಡಿದ್ದಾರೆ.

ಮಿಶ್ರ, ಅಂತರ ಬೆಳೆಯಾಗಿ ಸೋಯಾ ಅವರೆ

ಪ್ರಸ್ತುತ ಸೋಯಾಅವರೆ ಕ್ವಿಂಟಲ್‌ಗೆ ₹ 6,850ಗೆ ಮಾರಾಟವಾಗುತ್ತಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ತಡೆದುಕೊಳ್ಳುವ ಸಾಮರ್ಥ್ಯವಿರುವ ಸೋಯಾಅವರೆ ಬೆಳೆಯಬಹುದಾಗಿದೆ. ಹಾನಿ ತಪ್ಪಿಸಲು ಮೊದಲೇ ಕೆಲ ವಿಧಾನಗಳನ್ನು ಅನುಸರಿಸಬಹುದಾಗಿದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಹಾಗೂ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ ಸಲಹೆ ನೀಡಿದ್ದಾರೆ.

ನಾಲ್ಕು ಸಾಲು ಸೋಯಾಅವರೆ ಹಾಗೂ ಎರಡು ಸಾಲು ತೊಗರಿಯನ್ನು 30 ಸೆಂ.ಮೀ. ಅಂತರದ ಸಾಲಿನಲ್ಲಿ ಬೆಳೆಯುವುದು ಹೆಚ್ಚು ಲಾಭದಾಯಕ. ಸೋಯಾಅವರೆಯನ್ನು 30 ಸೆಂ.ಮೀ ಅಂತರದ ಮೂರು ತಾಳಿನ ಕೂರಿಗೆಯಿಂದ ಬಿತ್ತನೆ ಮಾಡುವಾಗ ಕೊನೆಯ ಸಾಲಿನಲ್ಲಿ ಬೀಜ ಬೀಳದಂತೆ ಮುಚ್ಚಬೇಕು. ಈ ಸಾಲಿನಲ್ಲಿ ತೊಗರಿ ಬಿತ್ತನೆ ಮಾಡಬೇಕು.

ಹೈಬ್ರಿಡ್‌ಹತ್ತಿ + ಸೋಯಾ ಅವರೆ

ಎರಡು ಸಾಲು ಸೋಯಾಅವರೆ ಮತ್ತು ಒಂದು ಸಾಲು ಹೈಬ್ರಿಡ್ ಹತ್ತಿ ಬೆಳೆಯುವುದು ಲಾಭದಾಯಕ. ಸೋಯಾಅವರೆಯನ್ನು 40 ಸೆಂ.ಮೀ ಅಂತರದ ಮೂರು ತಾಳಿನ ಕೂರಿಗೆಯಿಂದ ನಡುವಿನ ತಾಳು ಮುಚ್ಚಿ ಬಿತ್ತಬೇಕು. ಖಾಲಿ ಬಿಟ್ಟ ಸಾಲಿನಲ್ಲಿ ಹೈಬ್ರಿಡ್ ಹತ್ತಿಯನ್ನು 60 ಸೆಂ. ಮೀ ಅಂತರದಲ್ಲಿ ಕೈಗಾಳು ಹಾಕಬೇಕು.

ಗೋವಿನಜೋಳ + ಸೋಯಾಅವರೆ

ಒಂದು ಸಾಲು ಗೋವಿನಜೋಳದ ಜತೆ ಎರಡು ಸಾಲು ಸೋಯಾಅವರೆಯನ್ನು ಬೆಳೆಯುವುದು ಸಹ ಲಾಭದಾಯಕ. ಸೋಯಾ ಅವರೆಯನ್ನು 30 ಸೆಂ. ಮೀ . ಅಂತರದ ಮೂರು ತಾಳಿನ ಕೂರಿಗೆಯಿಂದ ನಡುವಿನ ಸಾಲಿನಲ್ಲಿ ಬೀಜ ಬೀಳದಂತೆ ನಳಿಕೆ ಮುಚ್ಚಿ ಬಿತ್ತನೆ ಮಾಡಬೇಕು. ಖಾಲಿ ಬಿಟ್ಟ ಸಾಲಿನಲ್ಲಿ ಗೋವಿನಜೋಳವನ್ನು 20 ಸೆಂ.ಮೀ.ಗೆ ಅಂತರದಲ್ಲಿ ಕೈಯಿಂದ ಹಾಕಬೇಕು .

ಹೀಗೆ ಬಿತ್ತನೆಯಲ್ಲಿ ಹೊಸ ವಿಧಾನ ಅನುಸರಿಸಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಲಿದೆ. ಪ್ರಸ್ತುತ 90 ದಿನಗಳಿಗೆ ಬರುವ ಜಿಎಸ್–355 ಬಿತ್ತನೆ ಮಾಡುವುದು ಸೂಕ್ತ. ಪ್ರತಿ ಹೆಕ್ಟೇರ್‌ಗೆ 75 ಕಿ.ಗ್ರಾಂ ಬೀಜ ಬಳಸಬೇಕು. ಹೆಕ್ಟೇರ್‌ಗೆ 40 ಕೆ.ಜಿ ಸಾರಜನಕ, 80 ಕೆ.ಜಿ ರಂಜಕ, 25 ಕೆಜಿ ಪೊಟ್ಯಾಶ್ ಹಾಗೂ ಒಂದು ಕ್ವಿಂಟಲ್ ಜಿಪ್ಸಂ ಕೊಡಬೇಕು ಎಂದು ಡಾ. ಸುನೀಲಕುಮಾರ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT