ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದಿರು ಎಂಬ ಬೆರಗು...

ಅಕ್ಷರ ಗಾತ್ರ

ಅಮ್ಮನೊಟ್ಟಿಗೆ ಕಟ್ಟಿಗೆಗೆಂದುಕಾಡಿಗೆ ಹೋದ ಗುಂಡ ವಾಪಸ್‌ ಬರುವಾಗ ತಲೆಯ ಮೇಲೊಂದು ಸೌದೆ ಹೊರೆ ಮತ್ತು ಜೇಬುತುಂಬ ಬಿದಿರಕ್ಕಿ ತುಂಬಿಕೊಂಡು ಬಂದಿದ್ದ. ಬಂದವನೇ ಶುಂಠಿಹಕ್ಕಲಿನ ಬೇಲಿ ಬದೀಲಿ ಪಾತಿ ಮಾಡಿ ಬಿದಿರು ಬೀಜಗಳನ್ನು ಬಿತ್ತಿ ನೀರೆರೆದ. ಕುತೂಹಲದಿಂದ ಕಾದ. ವಾರ ಮುಗಿದರೂ ಮೊಳಕೆ ಕಾಣಲಿಲ್ಲ. ಹಾಗೆ, ಎರಡು-ಮೂರು ವಾರ ಕಳೆದವು. ಕೊನೆಗೆ ತಿಂಗಳಾಯ್ತು. ಅದರ ಕಥೆ ಮುಗೀತು ಅಂದುಕೊಂಡ. ಆದರೂ, ಯಾವುದೋ ಸಣ್ಣ ಭರವಸೆಯಿಂದ ನೀರೆರೆಯುತ್ತಲೇ ಇದ್ದ. ತಿಂಗಳು ಕಳೆದು ವರ್ಷ ಹೋಯ್ತು. ಆಗಲೂ ಬಿದಿರುಬೀಜ ಮೊಳೆಯುವ ಸುಳಿವಿರಲಿಲ್ಲ. ಬೀಜ ಗೆದ್ದಲಿನ ಆಹಾರವೋ, ಗೊಬ್ಬರವೋ ಆಗಿರಬಹುದು ಎಂದುಕೊಂಡು ಸುಮ್ಮನಾದ.

ಮಾರನೇ ವರ್ಷ ಅಲ್ಲಿ ನಡೆದಾಡುವಾಗ ಬೀಜ ಬಿತ್ತಿದ ನೆನಪಾಗುತ್ತಿತ್ತು. ಅಲ್ಲೇನೂ ಇರಲಿಲ್ಲ. ಹೀಗೆ ಮೂರು ವರ್ಷಗಳು ಕಳೆದವು. ಕೊನೆಗದು ಮರೆತು ಹೋಯ್ತು. ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಬೇಲಿಯಂಚಿಗೆ ಬಂದ ಗುಂಡನಿಗೊಂದು ಅಚ್ಚರಿ ಕಾದಿತ್ತು. ಬೀಜಗಳು ಅಣಬೆ ಮೊಗ್ಗುಗಳಂತೆ ರಾಶಿ ರಾಶಿಯಾಗಿ ಮೊಳಕೆಯೊಡೆಯುತ್ತಿದ್ದವು!

ನಾಲ್ಕು ವರ್ಷಗಳವರೆಗೆ ಕಾದರೂ ಕಾಣದ ಮೊಳಕೆಗಳು ಕೊನೆಯಲ್ಲಿ ಪುತಪುತನೆ ಹೊರಬರುತ್ತಿದ್ದುದನ್ನು ಚೋದ್ಯವೆಂಬಂತೆ ನೋಡುತ್ತಿದ್ದವನಿಗೆ ಮತ್ತೆ ಮತ್ತೆ ಬೆರಗು. ಬೀಜ ಮೊಳೆಯಲು ಬರೋಬ್ಬರಿ ನಾಲ್ಕು ವರ್ಷ ತೆಗೆದುಕೊಂಡ ಈ ಹುಲ್ಲು ಜಾತಿಯ ಸಸ್ಯ, ಒಮ್ಮೆ ಮೇಲೇಳುತ್ತಿದ್ದಂತೆ ಗಂಟೆಗೆ ಒಂದೂವರೆ ಇಂಚುಗಳಷ್ಟು ಹಿಗ್ಗುತ್ತಾ, ಮುಗಿಲು ಮುಟ್ಟಲು ಧಾವಿಸುತ್ತಿತ್ತು. ಗಿಡ ಬೆಳೆಯುವ ಮೊದಲಿನ ದೀರ್ಘಾವಧಿಯಲ್ಲಿ ಬೀಜಗಳು ಮಣ್ಣೊಳಗೆ ಜಡವಾಗಿ ಬಿದ್ದಿರದೇ ಕಾರ್ಯಮಗ್ನವಾಗಿದ್ದವು ಎಂಬ ನಿಸರ್ಗದ ನಿಗೂಢತೆಯೊಂದು ಅಮ್ಮನಿಂದ ಮನವರಿಕೆಯಾಯ್ತು. ಸಸ್ಯ ಪ್ರಪಂಚದಲ್ಲಿ ಅತಿವೇಗದ ಬೆಳವಣಿಗೆ ಸಾಮರ್ಥ್ಯವುಳ್ಳ ಬಿದಿರು, ಅಷ್ಟೂದಿನ ನೆಲದೊಳಗೆ ಮುಂದಿನ ಬೆಳವಣಿಗೆಯ ನೀಲಿನಕ್ಷೆ ಮತ್ತು ತಯಾರಿಯನ್ನು ಸದ್ದಿಲ್ಲದೆ ನಡೆಸಿತ್ತು. ದೊಡ್ಡ ಯಶಸ್ಸಿನ ಹಿಂದೆ ದೀರ್ಘ ಸಮಯದ ಪ್ರಯತ್ನ ಅಡಗಿರುತ್ತದೆ ಎಂಬ ದಿವ್ಯಸತ್ಯವೊಂದು ಗುಂಡನಿಗೆ ಅವತ್ತು ಗೋಚರಿಸಿತ್ತು.

ಸುಮಾರು ಅರವತ್ತರಿಂದ ನೂರು ವರ್ಷ ಬದುಕುವ ಬಹುತೇಕ ಬಿದಿರು ತಳಿಗಳು ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಅದರಲ್ಲೂ ಜೀವಿತದ ಕಡೆಗಾಲದಲ್ಲಿ ಹೂ ಬಿಡುತ್ತವೆ. ಮಲೆನಾಡು ಭಾಗದಲ್ಲಿ ಅದನ್ನು ‘ಬಿದಿರು ಕಟ್ಟೆ’ ಅಂತ ಕರೆಯುತ್ತಾರೆ. ಬಿದಿರಿಗೆ ಕಟ್ಟೆ ಬಂತೆಂದರೆ ಅದು ಬರಗಾಲದ ಸಂಕೇತ, ಕಷ್ಟಕಾಲದ ಕಣ್ಸನ್ನೆ ಅಂತ ಹಿರಿಯರು ಭಾವಿಸುತ್ತಾರೆ. ಹಿಂದೆ ಆಹಾರದ ಕೊರತೆ ಇದ್ದಾಗ ತಾವು ಬಿದಿರಕ್ಕಿ ಊಟ ಮಾಡಿದ್ದನ್ನು ಅವರು ನೆನಪು ಮಾಡಿಕೊಳ್ಳುವುದಿದೆ. ಅವತ್ತು ಹಳ್ಳಿಯ ಅಜ್ಜಿಯೊಬ್ಬರು ‘ಅಂವ ಮೂರ್ಸಾರಿ ಬಿದ್ರಕ್ಕಿ ಕಂಡೋನು’ ಅಂತ ಶ್ರಮಿಕ, ಹಿರಿಜೀವವೊಂದನ್ನು ಬಣ್ಣಿಸಿದ್ದು ನೆನಪಾಗುತ್ತಿದೆ.

ಕಳೆದ ಏಳೆಂಟು ವರ್ಷದ ಅವಧಿಯಲ್ಲಿ ಮಲೆನಾಡಿನಾದ್ಯಂತ ಸಾಮೂಹಿಕವಾಗಿ ಬಿದಿರಿಗೆ ಕಟ್ಟೆ ಬಂದ ಪರಿಣಾಮ ದಟ್ಟಡವಿಯೆಲ್ಲಾ ಖಾಲಿ ಖಾಲಿಯಾಗಿತ್ತು. ಕಾಡಲ್ಲಿ ಕಣ್ಣು ಸಾಗುವಷ್ಟೂ ಬಯಲು. ಬಿಸಿಲಿನ ಬೇಗೆ ಮತ್ತು ನೀರಿನ ತಾತ್ವರವೂ ಕಂಡಿತ್ತು. ಒಣಗಿ ನಿಂತ ಮಟ್ಟಿಗಳು ಕಾಳ್ಗಿಚ್ಚಿನ ವೇಗ ಹೆಚ್ಚಿಸಿದವು. ರಸ್ತೆ, ವಿದ್ಯುತ್‍ ತಂತಿ ಮೇಲೆ ಬಿದ್ದು ಕಿರಿಕಿರಿ ಮಾಡಿದವು. ಕಾಡಂಚಿನ ಜನರ ಸಹಜ ಕೃಷಿ ಜೀವನಕ್ಕೆ ಗೋಳಾಗಿತ್ತು. ಅವರ ನಿತ್ಯದ ಅಗತ್ಯಗಳಿಗೆ ಬಿದಿರಿನ ಅನುಪಸ್ಥಿತಿಯಲ್ಲಿ ಬೆಲೆಬಾಳುವ ಗಿಡ–ಮರಗಳು ಬಲಿಯಾದವು. ವಿರಳ ಪೊದೆಗಳ ನಡುವೆ ಕಾಡುಪ್ರಾಣಿಗಳು ಬದುಕದಾದವು. ಅದೊಂಥರಾ ಕಾನನದಲ್ಲಿನ ಸ್ಮಶಾನ ಕಳೆ. ಬಿದಿರು ಅಳಿದ ಮೇಲೆ ವನ್ಯಜೀವಿಗಳಿಗೆ ಆಹಾರದ ಕೊರತೆ ಉಂಟಾಗಿ ಅವು ರೈತರ ಗದ್ದೆ-ತೋಟಗಳಿಗೆ ದಾಳಿ ಮಾಡಿದವು. ಇದೀಗ ಮತ್ತೆ ಬಿದಿರು ಮೊಳೆಯುತ್ತಿದೆ. ಕೆಲವೆಡೆ ಎದೆಮಟ್ಟಕ್ಕೆ ಪೊದೆ ಬೆಳೆದಿದೆ. ಮತ್ತೆ ಮಲೆನಾಡು ತನ್ನ ಹಸಿರ ವೈಭವಕ್ಕೆ ಮರಳುತ್ತಿದೆ. ಕಾಡೊಳಗಿನ ಜೀವಕಳೆ ಮರುಸ್ಥಾಪನೆಗೊಳ್ಳುವ ಹಂತದಲ್ಲಿದೆ.

ಹಸಿರ ಚಪ್ಪರ ಹಾಸಿನಂತೆ ಹರಡಿಕೊಳ್ಳುತ್ತಾ ಕಾಡೊಳಗೆ ಮೈಲುಗಟ್ಟಲೆ ವಿಸ್ತರಿಸಿಕೊಳ್ಳುವ ಬಿದಿರುಮೆಳೆಗಳು ಹಲವು ಪ್ರಾಣಿ–ಪಕ್ಷಿಗಳ ಪಾಲಿನ ಬೆಚ್ಚನೆಯ ಗೂಡು. ಜೀವಪೊರೆವ ಮಮತೆಯ ಮಡಿಲು. ಕೆಲವೆಡೆ ಬೆಳಕೇ ನೆಲತಾಕದಂತಹ ಮೇಲ್ಚಾವಣಿಯಾಗಿ ಕಂಡರೆ, ಮತ್ತೆ ಕೆಲವೆಡೆ ಗಡಿಬೇಲಿಯ ತಡೆಗೋಡೆಯಂತೆ ಕಿಕ್ಕಿರಿದ ದಟ್ಟಣೆಯಲ್ಲಿ ಹಬ್ಬಿದ ಮುಳ್ಳುಮಟ್ಟಿಗಳಿವೆ. ಮುಖ್ಯವಾಗಿ ಬಿದಿರು ಆನೆ, ಜಿಂಕೆಗಳ ನೆಚ್ಚಿನ ಆಹಾರ. ಆಮ್ಲಜನಕ ಉತ್ಪಾದನೆ ಮತ್ತು ಭೂತಾಪಮಾನವನ್ನು ನಿಯಂತ್ರಿಸುವಲ್ಲಿಯೂ ಅದು ಮಹತ್ವದ ಪಾತ್ರನಿರ್ವಹಿಸುತ್ತದೆ. ಸ್ಥಳೀಯರ ಬೇಡಿಕೆಗಳಿಗೆ ಒದಗುವುದರೊಂದಿಗೆ ಬಹಳಷ್ಟು ಮರಮಟ್ಟುಗಳ ಬಳಕೆಯನ್ನು ಮಿತಿಗೊಳಿಸುವ ಮೂಲಕ ಸಸ್ಯರಾಶಿಗಳ ನಾಶವನ್ನು ತಡೆಯುತ್ತದೆ. ಸುತ್ತಗಲಕ್ಕೆ ಬಿಚ್ಚಿಕೊಳ್ಳುವ ಬೇರುಗಳು ಮೇಲ್ಮಣ್ಣಿನ ಸವಕಳಿಯನ್ನು ನಿಯಂತ್ರಿಸುವುದಲ್ಲದೆ ಮಣ್ಣಿನಜೀವಿಗಳನ್ನು ಪೊರೆಯುತ್ತಾ ಫಲವತ್ತತೆಗೂ ಅಮೂಲ್ಯ ಕಾಣಿಕೆ ನೀಡುತ್ತವೆ.

ಬಿದಿರು ಕಾಗದ, ರೇಯಾನ್ ಬಟ್ಟೆಗಾಗಿ ಬೃಹತ್ ಕೈಗಾರಿಕೆಗಳಿಗೆ ಕಚ್ಚಾವಸ್ತುವನ್ನು ಪೂರೈಸುವುದಲ್ಲದೆ ಕಲಾಕೃತಿಗಳು, ಸಂಗೀತ ಉಪಕರಣಗಳು, ಅಲಂಕಾರಿಕೆಗಳ ತಯಾರಿಕೆ, ಬೆಂಚು-ಕುರ್ಚಿ ಮುಂತಾದ ಪೀಠೋಪಕರಣಗಳು, ಚೂರ್ಣದಂತಹ ಆಯುರ್ವೇದಿಕ್ ಔಷಧಿ ತಯಾರಿಕೆ, ಗುಡಿಕೈಗಾರಿಕೆಗಳಿಗೂ ಅವಶ್ಯಕವಾಗಿದೆ.

ಬಿದಿರಿನ ಚಿಗುರು, ಕಳಲೆಯು ರುಚಿಕರ ಖಾದ್ಯವಾಗಿ, ಉಪ್ಪಿನಕಾಯಿಯಾಗಿಯೂ ಜನಪ್ರಿಯ. ಪಶು–ಪಕ್ಷಿಗಳಿಗೆ ಬಿದಿರಕ್ಕಿಯು ಕೂಡ ಅಕ್ಕಿ-ಗೋದಿಗಳಿಗಿಂತ ಹೆಚ್ಚು ಪೌಷ್ಟಿಕಾಂಶ ಉಳ್ಳದ್ದು.

ಬಿದಿರು ರೈತರು ಸಾಂಪ್ರದಾಯಿಕವಾಗಿ ಬಳಸುವ ಬಹುತೇಕ ಸಾಧನಗಳಲ್ಲಿ ತಾನೂ ಒಂದಾಗಿ ಅವನ ದಣಿವರಿಯದ ದುಡಿತಕ್ಕೆ ಜತೆಗೂಡುತ್ತದೆ. ಯಂತ್ರ ನಾಗರಿಕತೆಯ ಮೊದಲು ಬಿದಿರನ್ನು ಬಿಟ್ಟು ಗ್ರಾಮ್ಯಭಾರತದ ಬದುಕನ್ನು ಕಲ್ಪಿಸಿಕೊಳ್ಳಲಾಗುತ್ತಿರಲಿಲ್ಲ. ವಿಶೇಷವಾಗಿ ಅರಣ್ಯ ಪ್ರದೇಶದಲ್ಲಿನ ರೈತಾಪಿ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಬಿದಿರು ಭಾರ ಹೊರುವ ಬುಟ್ಟಿಯಾಗಿ, ಕಾಳು ಒಣಗಿಸುವ ತಟ್ಟಿಯಾಗಿ, ಧಾನ್ಯ ಸಂಗ್ರಹಿಸುವ ಗುಡಾಣವಾಗಿ, ಶೇಖರಿಸಿ, ಸಂರಕ್ಷಿಸುವ ಕಣಜವಾಗಿ, ಎತ್ತಿನ ಗಾಡಿಯ ತಯಾರಿಕೆಯಲ್ಲಿಯೂ ಉಪಯುಕ್ತ. ಜಾನುವಾರುಗಳ ಬರುವಿಕೆಯನ್ನು ಎಚ್ಚರಿಸಲು ಕುತ್ತಿಗೆಗೆ ಕಟ್ಟುವ ಸದ್ದುಮಾಡುವ ದೊಂಟೆ, ಮುಂಗಾರಿನಲ್ಲಿ ಮೀನು ಹಿಡಿಯುವ ಕುಣಿ, ತರಗೆಲೆ ತುಂಬುವ ಜಲ್ಲೆ, ಸಸಿನಟ್ಟಿ ಮಾಡಲು ಬೇಕಾದ ಗೊರಬು, ಒಕ್ಕಲು ಕಣದಲ್ಲಿ ಎತ್ತುಗಳಿಗೆ ಬಾಯಿಕುಕ್ಕೆ, ಹೆಂಟೆಯೊಡೆಯಲು ನಳ್ಳಿ-ನೊಗ. ಬೀಜ ಬಿತ್ತುವ ಕೂರಿಗೆ, ಒಕ್ಕಲಾಟದಲ್ಲಿ ಹುಲ್ಲು ಕೊಡಹುವ ಕೋಲು, ಎಳೆಯುವ ಕೊಕ್ಕೆ, ಉಣಗೋಲು, ಬೇಲಿಯೊಡ್ಡಿಗೆ ಬೇಕಾಗುವ ಮುಳ್ಳು-ಅಡ್ಡೆ, ಕೊನೆಗಾರನಿಗೆ ದೋಟಿಯಾಗಿಯೂ ಬಿದಿರಿಗೆ ಬಹುಬೇಡಿಕೆ ಇದೆ.

ಗೃಹೋಪಯೋಗಿ ಪರಿಕರಗಳಲ್ಲಿಯೂ ಬಿದಿರಿನದ್ದು ಮಹತ್ವಪೂರ್ಣ ಪಾತ್ರವಿದೆ. ಮನೆಮಾಡಿನ ದಬ್ಬೆ-ಗಳ, ಹುಲ್ಲುಮನೆಯ ದಿಟಿಕೆ ಗೋಡೆ-ಬಾಗಿಲು, ಸೂರಿನ ನೀರಿಗೆ ಒದಿಗೆ, ಅನ್ನ ಬಸಿವ ಸಿಬ್ಬಲ, ಅಕ್ಕಿ ಕೇರುವ ಮೊರ, ಬೆಕ್ಕಿನ ಬಾಯಿಂದ ಹಾಲು ರಕ್ಷಿಡಲು ತೂಗುವ ಸಿಕ್ಕ, ಗಾಳಿಬೀಸಲು ಬೀಸಣಿಗೆ, ಮರ ಮತ್ತು ಅಟ್ಟ ಹತ್ತಲು ಬಳಸುವ ಏಣಿಯಾಗಿ ಮಾತ್ರವಲ್ಲ ತನ್ನ ಬಾಳನದಿ ದಾಟಲು ತೆಪ್ಪ, ದೋಣಿಗಳಾಗಿಯೂ ಮನುಷ್ಯನಿಗೆ ನೆರವಾಗುತ್ತಾ ಬಂದಿದೆ.

‘ಬ್ಯಾಂಬೂಸಾ ವೊಲ್ಗಾರಿಸ್’ ಎಂಬುದು ಇಲ್ಲಿನ ಸಾಮಾನ್ಯ ಬಿದಿರು ತಳಿ. ಇದು ಅತ್ಯಂತ ವೇಗವಾಗಿ ಬೆಳೆಯುವ ಒಂದು ಹುಲ್ಲು ಜಾತಿಯ ಸಸ್ಯ. ಬಿದಿರು ಪೊಯೇಸಿ ಕುಟುಂಬಕ್ಕೆ ಸೇರಿದ್ದು ದಿನವೊಂದಕ್ಕೆ ಗರಿಷ್ಠ ನಾಲ್ಕು ಅಡಿಗಳಷ್ಟು ಬೆಳೆಯಬಲ್ಲದು. ಆದರೆ, ದೀರ್ಘಕಾಲದವರೆಗೆ ಬ್ರಿಟಿಷ್ ಆಳ್ವಿಕೆಯು ಇದನ್ನೊಂದು ಕಳೆಯೆಂದು ಪರಿಗಣಿಸಿತು. ಕಾಡಿನ ಬಿದಿರನ್ನು ನಾಶಗೊಳಿಸಿ ಸಾಗುವಾನಿ, ನೀಲಗಿರಿಯ ನೆಡುತೋಪುಗಳನ್ನು ಉತ್ತೇಜಿಸಿದ್ದು ದೇಶದ ಜೀವವೈವಿಧ್ಯಕ್ಕೆ ಬಲವಾದ ಪೆಟ್ಟು ನೀಡಿತು ಎನ್ನುತ್ತಾರೆ ಪರಿಸರ ತಜ್ಞರು.

ಬಿದಿರು ಬೆಳೆಯನ್ನು ಪ್ರೋತ್ಸಾಹಿಸಲು ಭಾರತೀಯ ಬಿದಿರು ಸಮಾಜ ಸಹಾಯಧನ ನೀಡುತ್ತಿದೆ. ಹಾಗಾಗಿ ಬೆರಗಿನ ಸಸ್ಯ ಬಿದಿರನ್ನು ಹೆಚ್ಚೆಚ್ಚು ಬಳಸಿಕೊಳ್ಳಲು, ಬೆಳೆಸಿಕೊಳ್ಳಲು ನಾವೀಗ ಮುಂದಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT