ಬುಧವಾರ, ಸೆಪ್ಟೆಂಬರ್ 29, 2021
20 °C

ರಂಗೇಗೌಡರ ಕೃಷಿ ಪ್ರಯೋಗ: ಯಶಸ್ಸಿನ ದಾರಿ ತೋರಿದ ಡ್ರ್ಯಾಗನ್ ಫ್ರೂಟ್‌

ವಿ. ವೀರಣ್ಣ ಧರ್ಮಪುರ Updated:

ಅಕ್ಷರ ಗಾತ್ರ : | |

Prajavani

ಧರ್ಮಪುರ: ಔಷಧೀಯ ಗುಣ ಹೊಂದಿರುವ ಡ್ರ್ಯಾಗನ್ ಫ್ರೂಟ್ ಮತ್ತು ಬೆಣ್ಣೆ ಹಣ್ಣು (ಬಟರ್ ಫ್ರೂಟ್) ಬೆಳೆ ಈಚೆಗೆ ಜನಪ್ರಿಯವಾಗುತ್ತಿವೆ. ಪ್ರಯೋಗಶೀಲತೆಗೆ ಹೆಸರಾಗಿರುವ ಧರ್ಮಪುರ ಹೋಬಳಿಯಲ್ಲಿ ಹನಿ ನೀರಾವರಿ ಪದ್ಧತಿಯ ಮೂಲಕ ಈ ಹಣ್ಣುಗಳನ್ನು ಬೆಳೆದು ಗಮನ ಸೆಳೆದಿದ್ದಾರೆ ಧರ್ಮಪುರದ ಯುವ ರೈತ ರಂಗೇಗೌಡ.

ಐಟಿಐ (ಎಲೆಕ್ಟ್ರಿಕಲ್) ವ್ಯಾಸಂಗ ಮುಗಿಸಿ ಬೆಸ್ಕಾಂ ಹರಿಯಬ್ಬೆ ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಮೀಟರ್ ರೀಡರ್ ಆಗಿ ನೇಮಕಗೊಂಡಿದ್ದ ಇವರು 13 ವರ್ಷಗಳವರೆಗೆ ಕನಿಷ್ಠ ವೇತನದಲ್ಲಿ ಕೆಲಸ ಮಾಡಿದರು. ಕೊನೆಗೆ ಬೇಸರಗೊಂಡು ಆ ಕೆಲಸಕ್ಕೆ ತಿಲಾಂಜಲಿ ಇಟ್ಟು ಕೃಷಿ ಚಟುವಟಿಕೆಗೆ ಮರಳಿದರು. ಕೃಷಿಗೆ ಕೈಹಾಕಿದ 6 ವರ್ಷಗಳಲ್ಲಿ ಸಾಧನೆಯ ಹಾದಿಯಲ್ಲಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಹೊಸ ಕೃಷಿ ಪ್ರಯೋಗ ಕೈಗೊಂಡು ಯಶಸ್ಸು ಕಂಡಿದ್ದಾರೆ.

6 ಎಕರೆ ಭೂಮಿಯಲ್ಲಿ ಮೂರು ಎಕರೆ ಅಡಿಕೆ, ಅದರಲ್ಲಿ ಮಿಶ್ರ ಬೆಳೆಯಾಗಿ ಬೆಣ್ಣೆ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಉಳಿದ 3 ಎಕರೆಯಲ್ಲಿ ದಾಳಿಂಬೆ, ಅದರಲ್ಲಿ ಅಂತರ ಬೆಳೆಯಾಗಿ ಡ್ರ್ಯಾಗನ್ ಫ್ರೂಟ್ ಸಸ್ಯಗಳನ್ನು ನಾಟಿ ಮಾಡಿದ್ದಾರೆ. ಮೂರು ತಿಂಗಳಿನಿಂದ ಇವು ಹಣ್ಣು ಬಿಡಲಾರಂಭಿಸಿವೆ. ಒಂದು ಹಣ್ಣು 400 ಗ್ರಾಂನಿಂದ 600 ಗ್ರಾಂವರೆಗೂ ತೂಕವಿದೆ. ಕೊಳ್ಳುವವರು ತೋಟಕ್ಕೆ ಬಂದು 1 ಕೆ.ಜಿ.ಗೆ ₹ 250ರಂತೆ ಖರೀದಿ ಮಾಡುತ್ತಿದ್ದಾರೆ. ಡ್ರ್ಯಾಗನ್ ಫ್ರೂಟ್‌ಗೆ ಉತ್ತಮ ಬೇಡಿಕೆ ಇದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಅಡಿಕೆ ಗಿಡಗಳಲ್ಲಿಯೂ ಫಲ ಬರಲು ಆರಂಭವಾಗಿವೆ. ಉತ್ಕೃಷ್ಟವಾಗಿ ಬೆಳೆದಿರುವ ಬೆಣ್ಣೆ ಹಣ್ಣಿನ ಬೆಳೆ ಮುಂದಿನ ವರ್ಷ ಫಸಲು ಕೊಡುವ ನಿರೀಕ್ಷೆಯಿದೆ.

‘ಸಾಂಪ್ರದಾಯಿಕ ಬೆಳೆ ಬೆಳೆಯುತ್ತಿದ್ದ ನಾವು ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಇಲ್ಲದೇ ಅಧಿಕ ಸಾಲ ಮಾಡಿ ಚಿಂತೆಗೀಡಾಗಿದ್ದೆವು. ಒಮ್ಮೆ ತುಮಕೂರು ಜಿಲ್ಲೆಯ ಹಿರೇಹಳ್ಳಿಯ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ ತರಬೇತಿಗೆ ಹೋಗಿದ್ದಾಗ ಅಲ್ಲಿನ ಮುಖ್ಯಸ್ಥರಾದ ಡಾ.ಜಿ.ಕರುಣಾಕರನ್ ಅವರ ನಿರ್ದೇಶನದಂತೆ ಕಡಿಮೆ ನೀರಿನಲ್ಲಿ, ಕಡಿಮೆ ಖರ್ಚಿನಲ್ಲಿ, ವರ್ಷ ಪೂರ್ತಿ ಬೆಳೆ ಬರಬಹುದಾದ ಡ್ರ್ಯಾಗನ್ ಫ್ರೂಟ್‌ ನನ್ನನ್ನು ಆಕರ್ಷಿಸಿತು. ನಮ್ಮಲ್ಲಿ ಪ್ರಯೋಗ ಮಾಡಿದೆ. ಇವತ್ತು ಬೆಳೆ ಚೆನ್ನಾಗಿ ಬರುತ್ತಿದ್ದು, ಉತ್ತಮ ಆದಾಯವೂ ಬರುತ್ತಿದೆ’ ಎಂದು ರಂಗೇಗೌಡ ವಿವರಿಸಿದರು.

ಬೆಳೆ ನಾಟಿ: ಡ್ರ್ಯಾಗನ್ ಫ್ರೂಟ್ ಸಸಿಗಳನ್ನು 10 ಮತ್ತು 8 ಅಡಿ ಅಂತರದಲ್ಲಿ ನಾಟಿ ಮಾಡಲಾಗಿದೆ. ಪ್ರತಿ ಗಿಡಕ್ಕೆ ಕಲ್ಲು ಕಂಬ ನಿಲ್ಲಿಸಲಾಗಿದೆ. ಕಲ್ಲುಕಂಬದ ಮೇಲೆ ಚೌಕಾಕಾರದಲ್ಲಿ ಸ್ಟ್ಯಾಂಡ್ ಮಾಡಿ ಗಿಡದ ಬಳ್ಳಿಯನ್ನು ಹಬ್ಬಿಸಲಾಗಿದೆ. ಯಾವುದೇ ರಾಸಾಯನಿಕ ಔಷಧ, ಗೊಬ್ಬರದ ಬಳಕೆ ಇಲ್ಲ. ಹೆಚ್ಚು ಕೂಲಿ ಕಾರ್ಮಿಕರು ಬೇಕಾಗಿಲ್ಲ. ವ್ಯಾಪಾರಸ್ಥರು ನೇರವಾಗಿ ತೋಟಕ್ಕೆ ಬಂದು ಕೊಂಡು ಕೊಳ್ಳುತ್ತಿದ್ದಾರೆ. ಬೆಂಗಳೂರು, ಶಿರಾ, ಹಿರಿಯೂರು, ಚಿತ್ರದುರ್ಗದಲ್ಲಿ ಮಾರುಕಟ್ಟೆ ಸೌಲಭ್ಯವಿದೆ. ರೈತರಿಗೆ ಅನುಕೂಲ ಕಲ್ಪಿಸಲು ನರ್ಸರಿ ಫಾರಂ ಮಾಡಿದ್ದು, ಅಡಿಕೆ, ದಾಳಿಂಬೆ, ಡ್ರ್ಯಾಗನ್ ಫ್ರೂಟ್ಸ್, ಪಪ್ಪಾಯಿ ಗಿಡಗಳನ್ನು ಕೊಡುತ್ತಿದ್ದಾರೆ.

ಸ್ವಲ್ಪ ನೀರು, ಕಡಿಮೆ ಖರ್ಚು
‘ಡ್ರ್ಯಾಗನ್ ಫ್ರೂಟ್ ಕಡಿಮೆ ನೀರಿನಲ್ಲಿ, ಹನಿ ನೀರಾವರಿ ಪದ್ಧತಿಯ ಮೂಲಕ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ಬೆಳೆ. ವಿಯೆಟ್ನಾಂ ಮತ್ತು ಶ್ರೀಲಂಕಾದಿಂದ ನಮಗೆ ಬರುತ್ತಿವೆ. ಹಣ್ಣು ಪೂರ್ತಿ ಮಾಗದೆ ಬೇಗನೇ ಕಿತ್ತು ಕೋಲ್ಡ್ ಸ್ಟೋರೇಜ್ ಮತ್ತು ರಾಸಾಯನಿಕ ಸಿಂಪಡಣೆ ಮೂಲಕ ನಮಗೆ ಕಳುಹಿಸುತ್ತಾರೆ. ಇದರಿಂದ ಭಾರತೀಯರಿಗೆ ಇದರ ರುಚಿ ಸರಿಯಾಗಿ ಸಿಗುವುದಿಲ್ಲ. ನಮ್ಮಲ್ಲೇ ಬೆಳೆಯುವ ಹಣ್ಣು ರುಚಿಕರವಾಗಿದೆ. ಔಷಧೀಯ ಗುಣಗಳುಳ್ಳ ಈ ಹಣ್ಣು ಸಕ್ಕರೆ ಕಾಯಿಲೆ, ರಕ್ತದ ಒತ್ತಡ ಇರುವವರಿಗೆ ನೀಡಲು ಉತ್ತಮ ಆಹಾರ. ನಾಟಿ ಮಾಡಿದ ಒಂದೇ ವರ್ಷಕ್ಕೆ ಬೆಳೆ ಫಸಲು ಶುರುವಾಗುತ್ತದೆ. ಆರಂಭದಲ್ಲಿ ಕಡಿಮೆ ಇಳುವರಿ, ನಂತರ ಒಂದು ಗಿಡಕ್ಕೆ 25ರಿಂದ 30 ಕೆ.ಜಿ. ಹಣ್ಣು ಬರುತ್ತದೆ. ನಮ್ಮ ರೈತರು ಮಾರುಕಟ್ಟೆಯ ಮಾಹಿತಿ ತಿಳಿದುಕೊಳ್ಳದೇ ಎಲ್ಲರೂ ಒಂದೇ ರೀತಿಯ ಬೆಳೆ ಬೆಳೆಯಲು ಆರಂಭಿಸುತ್ತಾರೆ. ಇದರಿಂದ ನಷ್ಟ ಅನುಭವಿಸಿರುವ ಉದಾಹರಣೆಗಳಿವೆ. ಹೀಗಾಗಿ ರೈತರು ತಾವೇ ಮಾರುಕಟ್ಟೆ ಸೃಷ್ಟಿ ಮಾಡಿಕೊಳ್ಳಬೇಕು’ ಎಂದು ತುಮಕೂರು ಜಿಲ್ಲೆಯ ಹಿರೇಹಳ್ಳಿಯ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾದ ಡಾ.ಜಿ. ಕರುಣಾಕರನ್ ಸಲಹೆ ನೀಡಿದರು.

(ಹೆಚ್ಚಿನ ಮಾಹಿತಿಗೆ 9591749223 ಸಂಪರ್ಕಿಸಬಹುದು).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು