ಮಿಶ್ರ ಬೇಸಾಯ; ನಿರೀಕ್ಷೆಗೂ ಹೆಚ್ಚಿನ ಆದಾಯ

7
ಕೃಷಿಯಲ್ಲಿ ಹೊಸ ಹೊಸ ಪ್ರಯೋಗ; ಯಶಸ್ವಿ ಪಥದಲ್ಲಿ ಕೊತಂಬಿರಿ

ಮಿಶ್ರ ಬೇಸಾಯ; ನಿರೀಕ್ಷೆಗೂ ಹೆಚ್ಚಿನ ಆದಾಯ

Published:
Updated:
Deccan Herald

ಆಲಮೇಲ: ಕೃಷಿಗೂ ಪ್ರಕೃತಿಗೂ ಅವಿನಾಭಾವ ಸಂಬಂಧ. ಸ್ವಲ್ಪ ಆಚೀಚೆಯಾದರೂ ರೈತ ಹೈರಾಣ. ಬದಲಾದ ಕಾಲಘಟ್ಟದಲ್ಲಿ ಕೃಷಿಯ ಜತೆ ಉಪ ಕಸುಬನ್ನು ಕೈಗೊಂಡು, ಯಶಸ್ವಿ ಕೃಷಿಕ ಎನಿಸಿಕೊಂಡವರು ಪಟ್ಟಣದ ಮುಕ್ತಾರ ಅಹಮದ್‌ (ಬಾಬು) ಕೊತಂಬಿರಿ.

ತಮ್ಮ 18 ಎಕರೆ ಹೊಲದಲ್ಲಿ ವಿವಿಧ ಬೆಳೆ ಬೆಳೆಯುತ್ತಾರೆ. ಪ್ರಯೋಗ ನಿರಂತರ. ನೆಲಕ್ಕೆ ಹೊಂದುವ ತರಕಾರಿ, ಹಣ್ಣು ಬೆಳೆದಿದ್ದು, ಇದೀಗ ಕ್ಯಾಬೇಜ್‌ನ್ನು (ಹೂ ಕೋಸು) ಮೂರು ಎಕರೆಯಲ್ಲಿ ಬೆಳೆದು ಉತ್ತಮ ಇಳುವರಿ ಪಡೆದಿದ್ದಾರೆ.

ಒಂದು ಎಕರೆಯಲ್ಲಿ 17000 ಸೆಂಟ್ ಕಂಪನಿಯ ಸೆಮಿನೀಸ್ ಅಗಿ ನಾಟಿ ಮಾಡಿದ್ದರು. ಎರಡೂವರೆ ತಿಂಗಳಲ್ಲಿ ಫಸಲು ಆರಂಭವಾಗಿತ್ತು. ಒಂದು ಅಗಿ ಒಂದೂವರೆ ಕೆ.ಜಿ.ಯಷ್ಟು ತೂಕದ ಕ್ಯಾಬೇಜ್ ಕೊಟ್ಟಿದೆ. ಇದೀಗ ಫಸಲು ಹೈದರಾಬಾದ್‌, ಪುಣೆ ಮಾರುಕಟ್ಟೆಗೆ ಹೋಗುತ್ತಿದೆ.

ಧಾರಣೆ ಒಂದು ಕೆ.ಜಿ.ಗೆ ₹ 6ರಿಂದ 10 ಇದೆ. ಏರಿಳಿಕೆ ಸಹಜ. 15 ದಿನದ ಅಂತರದಲ್ಲಿ ಮೂರು ಬಾರಿ ನಾಟಿ ಮಾಡಿದ್ದು, ಒಮ್ಮೊಮ್ಮೆ ಒಂದೊಂದು ಧಾರಣೆ ಸಿಗಲಿದೆ. ನಷ್ಟದ ಮಾತಿಲ್ಲ ಎನ್ನುತ್ತಾರೆ ಬಾಬು ಕೊತಂಬಿರಿ.

ಸಸಿಯಿಂದ ಒಂದು ಗಡ್ಡೆ ದೊರೆತ ಬಳಿಕ ಬೆಳೆ ತೆಗೆಯಬೇಕು. ಬಾಬು ಇಲ್ಲೂ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಒಮ್ಮೆ ಫಸಲು ತೆಗೆದ ಬೆಳೆ ಕೀಳದೆ, ಅದರಲ್ಲೇ ಮತ್ತೊಮ್ಮೆ ಫಲ ಸಿಗುವಂತೆ ಕಸಿ ಮಾಡುತ್ತಿದ್ದಾರೆ.

‘ಒಂದ್‌ ಎಕರೆಗೆ ₹ 60000 ಖರ್ಚಾಗುತ್ತದೆ. ಉತ್ತಮ ಬೆಲೆ ಸಿಕ್ಕರೆ ₹ 50000 ಲಾಭ ದೊರಕಲಿದೆ. ಪ್ರತಿ ವಾರವೂ ಮಾರುಕಟ್ಟೆಗೆ ಕ್ಯಾಬೇಜ್‌ ಕಳಿಸುತ್ತಿದ್ದು, ಉತ್ತಮ ಬೆಲೆ ಸಿಕ್ಕಿದೆ’ ಎಂದು ಖುಷಿಯಿಂದ ಹೇಳಿದರು.

ನುಗ್ಗೆ, ನಿಂಬೆ

ತಲಾ ಎರಡು ಎಕರೆಯಲ್ಲಿ 450 ನಿಂಬೆ ಹಾಗೂ 450 ನುಗ್ಗೆ ಗಿಡ ಬೆಳೆಸಿದ್ದಾರೆ. ಮಿಶ್ರ ಬೇಸಾಯವಾಗಿ ತರಕಾರಿ ಜತೆ ಮೇವು ಬೆಳೆದಿದ್ದಾರೆ. ತೆಂಗು, ಮಾವಿನ ಗಿಡಗಳು ತೋಟದ ಸುತ್ತಲಿನ ಬದಿಯಲ್ಲಿವೆ. ಕೆಲವು ಫಲ ಕೊಡುತ್ತಿದ್ದು. ಇನ್ನೂ ಕೆಲವು ಬೆಳವಣಿಗೆ ಹಂತದಲ್ಲಿವೆ.

ಏಳು ತಿಂಗಳ ನುಗ್ಗೆ ಗಿಡಗಳು ಕಾಯಿ ನೀಡುತ್ತಿವೆ. ಉತ್ತಮ ಫಸಲು ಸಿಕ್ಕಿದೆ. ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಬೆಳೆ ಕೈಹಿಡಿಯುತ್ತದೆ ಎಂಬ ಕಾರಣಕ್ಕೆ ಮತ್ತು ಭೂಮಿಗೆ ಹೊಸ ಬೆಳೆ ನಾಟಿ ಮಾಡಿದರೆ ಉತ್ತಮ ಇಳುವರಿ ಬರುತ್ತದೆ ಎಂಬ ಆತ್ಮವಿಶ್ವಾಸ ಅವರದ್ದು. ಈ ಬೆಳೆಗಳಿಗೆ ರಾಸಾಯನಿಕ ಗೊಬ್ಬರದ ಜತೆಗೆ ಜೀವಾಮೃತ ಹಾಕುತ್ತೇವೆ. ಅಲ್ಲದೆ ಕುರಿ ಗೊಬ್ಬರ ಸಂಗ್ರಹಿಸಿ, ಅದನ್ನು ನಿಂಬೆ ಗಿಡಗಳಿಗೆ ಹಾಕುತ್ತೇವೆ ಎಂದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !