ಶುಕ್ರವಾರ, ಡಿಸೆಂಬರ್ 6, 2019
21 °C
ಪ್ರಗತಿಪರ ಕೃಷಿಕ ಹನುಮಂತಪ್ಪ ಸಾಧನೆ

ಮಲೆನಾಡಿಗೆ ಹೊಸ ಬೆಳೆ ‘ಟೆಫ್’, ಇಥಿಯೋಪಿಯಾದ ಬೆಳೆ ಬೆಳೆಯುವಲ್ಲಿ ರೈತ ಯಶಸ್ವಿ

Published:
Updated:
Deccan Herald

ಶಿರಸಿ: ಪೌಷ್ಟಿಕಾಂಶ ಹೊಂದಿರುವ ಇಥಿಯೋಪಿಯಾ ಮೂಲದ ಬೆಳೆ ‘ಟೆಫ್’ ಅನ್ನು ತಾಲ್ಲೂಕಿನ ಬನವಾಸಿಯಲ್ಲಿ ಪ್ರಗತಿಪರ ಕೃಷಿಕ ಹನುಮಂತಪ್ಪ ಮಡ್ಲೂರ ಅವರು ತಮ್ಮ ಹೊಲದಲ್ಲಿ ಪ್ರಯೋಗಿಕವಾಗಿ ಬೆಳೆದಿದ್ದಾರೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ‘ಟೆಫ್’ ಅನ್ನು ನಾಟಿ ಮಾಡಿ, ಬೆಳೆ ತೆಗೆದಿರುವುದು ಇದೇ ಪ್ರಥಮವಾಗಿದೆ. ಕಡಿಮೆ ನೀರು ಬಯಸುವ ಈ ಬೆಳೆ ಒಣಭೂಮಿ ಬೇಸಾಯಕ್ಕೆ ಪೂರಕವಾಗಿದೆ. ‘ಸಿರಿಧಾನ್ಯಗಳಲ್ಲಿ ಒಂದಾಗಿರುವ ಈ ಬೆಳೆ ಗ್ಲುಟೆನ್ ರಹಿತ ಪ್ರೊಟೀನ್, ಅಮೈನೊ ಆಮ್ಲ, ಪೋಷಕಾಂಶಗಳಾದ ಕ್ಯಾಲ್ಸಿಯಂ, ಕಬ್ಬಿಣದ ಅಂಶಗಳನ್ನು ಹೊಂದಿದೆ. ಮೈಸೂರಿನ ಕೇಂದ್ರೀಯ ಆಹಾರ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಪ್ರಕಾರ ಟೆಫ್ ಭವಿಷ್ಯದ ಒಳ್ಳೆಯ ಆಹಾರ ಬೆಳೆಯಾಗಿದೆ. ಮಧುಮೇಹಿಗಳು, ಬೊಜ್ಜು ಹೊಂದಿರುವವರಿಗೆ ಇದು ಉತ್ತಮ ಆಹಾರ’ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ರೂಪಾ ಪಾಟೀಲ.

ಹನುಮಂತಪ್ಪ ಅವರಿಗೆ ಮೂರು ತಿಂಗಳ ಹಿಂದೆ ಟೆಫ್ ಬೀಜ ವಿತರಣೆ ಮಾಡಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು, ಶನಿವಾರ ಅವರ ಹೊಲಕ್ಕೆ ಭೇಟಿ ನೀಡಿ ಸಮೃದ್ಧವಾಗಿ ಬಂದಿರುವ ಬೆಳೆಯನ್ನು ವೀಕ್ಷಿಸಿದರು. ‘ಜನರಲ್ಲಿ ಆರೋಗ್ಯ ಪ್ರಜ್ಞೆ ಹೆಚ್ಚುತ್ತಿದೆ. ಆರೋಗ್ಯಕ್ಕೆ ಹಿತವಾದ ಟೆಫ್‌ನಿಂದ ಇಡ್ಲಿ, ದೋಸೆ, ಬ್ರೆಡ್ ತಯಾರಿಸಬಹುದು. ಇದು ಭವಿಷ್ಯದ ಬೇಡಿಕೆಯ ಬೆಳೆಯಾಗಬಹುದು. ಟೆಫ್ ಕೆ.ಜಿ.ಯೊಂದಕ್ಕೆ ₹ 650 ದರವಿದೆ. ಒಂದು ಎಕರೆಗೆ 50 ಗ್ರಾಂ ಬೀಜ ಬಳಸಿ, 250 ಕೆ.ಜಿ ಬೆಳೆ ತೆಗೆಯಬಹುದು’ ಎಂದು ಸಚಿವರು ಹೇಳಿದರು.

‘ಕೆವಿಕೆಯಿಂದ ನೀಡಿದ್ದ 25 ಗ್ರಾಂ ಬೀಜದಲ್ಲಿ 15 ಗ್ರಾಂನಷ್ಟು ಬೀಜವನ್ನು ಬಿತ್ತನೆ ಮಾಡಿದ್ದೆ. ಈ ಬಾರಿಯ ಅನಾವೃಷ್ಟಿಯಿಂದ ಸಸಿ ಮಡಿ ತಯಾರಿಸಿಟ್ಟರೂ, ಸಕಾಲಕ್ಕೆ ಬಿತ್ತನೆ ಮಾಡಲಾಗಿಲ್ಲ. 20 ದಿನಗಳಿಗೆ ನಾಟಿ ಮಾಡಬೇಕಾಗಿದ್ದ ಸಸಿಯನ್ನು 30 ದಿನಗಳಿಗೆ ಬಿತ್ತನೆ ಮಾಡಿದೆ. ಆದರೂ, ಉತ್ತಮ ಬೆಳೆ ಬಂದಿದೆ’ ಎಂದು ಹನುಮಂತಪ್ಪ ಮಾಹಿತಿ ನೀಡಿದರು.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು