ಗುರುವಾರ , ಜುಲೈ 29, 2021
20 °C

ತರಕಾರಿ ಕೈ ಕೊಡ್ತು, ರೇಷ್ಮೆ ಕೈ ಹಿಡಿಯಿತು

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

prajavani

ಕೊರೊನಾ ವೈರಸ್ ಸೋಂಕಿನ ಹೊಡೆತಕ್ಕೆ ಹಣ್ಣು, ತರಕಾರಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಆದರೆ ಹಿಪ್ಪುನೇರಳೆ ಬೆಳೆಯುತ್ತಾ  ರೇಷ್ಮೆ ಹುಳು ಸಾಕಣೆ ಮಾಡುತ್ತಾ, ಗೂಡು ಉತ್ಪಾದಿಸುವ ರೈತರು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಅಂಥ ರೈತರಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದ ರೈತ ಮಹೇಂದ್ರ ಕೂಡ ಒಬ್ಬರು. 

ಎರಡು ಎಕರೆ ಜಮೀನು ಹಿಡುವಳಿಯಿರುವ ಮಹೇಂದ್ರ ಆರು ವರ್ಷಗಳಿಂದ ರೇಷ್ಮೆ ಗೂಡು ಉತ್ಪಾದಿಸುತ್ತಿದ್ದಾರೆ. ಅಧಿಕ ಇಳುವರಿ ಮತ್ತು ಹೆಚ್ಚು ಬೆಲೆ ಇರುವ  ವಿ–1 ತಳಿಯ ಹಿಪ್ಪುನೇರಳೆ ಬೆಳೆಸಿ, ಹುಳು ಮೇಯಿಸಿ ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸುತ್ತಿದ್ದಾರೆ.

ಎಸ್‌ಎಸ್‌ಎಲ್‌ಸಿವರೆಗೆ ಓದಿರುವ ಮಹೇಂದ್ರ, ಮೊದಲು ಇದೇ ಜಮೀನಿನಲ್ಲಿ ತರಕಾರಿ ಬೆಳೆಯುತ್ತಿದ್ದರು. ಆದರೆ, ಅದರಿಂದ ಹೆಚ್ಚು ನಷ್ಟ ಅನುಭವಿಸಿದರು. ‘ತರಕಾರಿ ಬೆಳೆ ಕೈ ಹಿಡಿಯದಿದ್ದಾಗ ರೇಷ್ಮೆ ಕೃಷಿಯತ್ತ ಹೊರಳಿದೆ. ಬೆಟ್ಟಹಳ್ಳಿಯಂತಹ ಪುಟ್ಟ ಗ್ರಾಮದಲ್ಲಿ ರೇಷ್ಮೆಗೂಡು ಉತ್ಪಾದನೆ ಮಾಡುತ್ತಿದ್ದೇನೆ. ವಾರ್ಷಿಕ ₹3 ಲಕ್ಷದವರೆಗೂ ಹಣ ಸಂಪಾದನೆಯಾಗುತ್ತಿದೆ’ ಎನ್ನುತ್ತಾರೆ ಮಹೇಂದ್ರ.


ಗೂಡು ಬಿಡಿಸುವುದರಲ್ಲಿ ನಿರತರಾಗಿರುವುದು

ಗುಣಮಟ್ಟದ ಗೂಡು

ಎರಡು ಎಕರೆಯಲ್ಲಿ ವಿ–1 ತಳಿಯ ಹಿಪ್ಪುನೇರಳೆ ಬೆಳೆಯುತ್ತಾರೆ. ಈ ತಳಿ ಒಂದು ಎಕರೆಯಲ್ಲಿ 25 ಸಾವಿರದಿಂದ 35 ಸಾವಿರ ಕೆಜಿವರೆಗೆ ಸೊಪ್ಪು ಕೊಡುತ್ತದೆ. ಇದರಿಂದ 300 ಮೊಟ್ಟೆವರೆಗೂ ರೇಷ್ಮೆಹುಳು ಸಾಕಣೆ ಮಾಡಬಹುದು. ಒಂದು ಎಕರೆ ಸೊಪ್ಪನ್ನು ಎರಡು ಬ್ಯಾಚ್‌ ಮಾಡಿಕೊಂಡು ರೇಷ್ಮೆ ಹುಳುಗಳಿಗೆ ಮೇಯಿಸುತ್ತಿದ್ದಾರೆ. ‘ಸಸಿಯನ್ನು ನಾಟಿ ಮಾಡಿದ 3 ತಿಂಗಳಿಗೆ ಸೊಪ್ಪು ಕಟಾವು ಮಾಡಬಹುದು. ನಂತರ 45 ದಿನಗಳಿಗೆ ಒಮ್ಮೆ ಹದವಾದ ಸೊಪ್ಪು ಕಟಾವಿಗೆ ಸಿಗುತ್ತದೆ’ ಎನ್ನುತ್ತಾರೆ ಮಹೇಂದ್ರ.  

ಪ್ರತಿ ಬಾರಿ 150 ಮೊಟ್ಟೆ ಸಾಕಣೆ ಮಾಡುತ್ತಿದ್ದಾರೆ. ಒಂದು ಮೊಟ್ಟೆ ಎಂದರೆ 500 ರೇಷ್ಮೆ ಹುಳುಗಳ ಗೊಂಚಲು.  ಪ್ರತಿ ಮೊಟ್ಟೆಗೆ ಒಂದು ಕೆಜಿ ರೇಷ್ಮೆಗೂಡು ಸಿಗುತ್ತಿದೆ ಇವರಿಗೆ. ಬೈವೋಲ್ಟೇನ್‌ ರೇಷ್ಮೆ ಗೂಡಿಗೆ ಶೇ 50ರಷ್ಟು ಬೆಲೆ ಹೆಚ್ಚು. ಇಳುವರಿಯೂ ಹೆಚ್ಚು.  

ಬೈವೋಲ್ಟೈನ್ ಗೂಡಿಗೆ, ಹೊರ ಜಿಲ್ಲೆಯಲ್ಲದೆ ಹೊರ ರಾಜ್ಯಗಳಲ್ಲೂ ಬೇಡಿಕೆ ಇದೆ. ‘ಈ ತಳಿಯಲ್ಲಿ ಎಲ್ಲ ಹುಳುಗಳು ಒಂದೇ ಬಾರಿ ಹಣ್ಣಿಗೆ ಬರುತ್ತವೆ. ರೇಷ್ಮೆ ಹುಳುಗಳ ಮರಿಗಳನ್ನು ತಂದ ಕೇವಲ 22 ರಿಂದ 23ನೇ ದಿನಕ್ಕೆ ಗೂಡು ಬಿಚ್ಚಿ ಹಣ ಪಡೆಯಬಹುದು’ ಎನ್ನುತ್ತಾರೆ ರೇಷ್ಮೆ ನಿರೀಕ್ಷಕ ಜಯರಾಂ.

ಮೊಟ್ಟೆ ಬದಲು ಮರಿ..

ಮೊಟ್ಟೆಗಳನ್ನು ತಂದು ಮರಿ ಮಾಡಿಸಿ ರೇಷ್ಮೆಗೂಡು ಉತ್ಪಾದಿಸುವ ಪದ್ಧತಿ ಕೈಬಿಟ್ಟು, ಈಗ ಎರಡನೇ ಜ್ವರದ ಮರಿಗಳನ್ನು ತಂದು ಸಾಕುತ್ತಿದ್ದಾರೆ ಮಹೇಂದ್ರ(ಜ್ವರ ಅಂದರೆ ಮೇವು ತಿನ್ನುವುದನ್ನು ಬಿಡುವ ಸಮಯ). ಇವರು ಮೈಸೂರು ಸಮೀಪದ ವರುಣಾ ಹೋಬಳಿ ಪಿಲ್ಲಹಳ್ಳಿ ಮತ್ತು ಕನಕಪುರ ಬಳಿಯ ಕಿರಣಗೆರೆಯ ಚಾಕಿ ಕೇಂದ್ರದಿಂದ 10 ದಿನಗಳ ಮರಿಗಳನ್ನು ಖರೀದಿಸುತ್ತಾರೆ.

ರೈತ ಮಹೇಂದ್ರ ಹಿಪ್ಪುನೇರಳೆ ಸೊಪ್ಪು ಬೆಳೆಯಲು ಕೊಳವೆ ಬಾವಿಯನ್ನು ಆಶ್ರಯಿಸಿದ್ದಾರೆ. ಪತ್ನಿ ಲಕ್ಷ್ಮೀ ಅವರ ನೆರವಿನೊಂದಿಗೆ ವರ್ಷದಲ್ಲಿ 8 ರಿಂದ 9 ಬೆಳೆ ತೆಗೆಯುತ್ತಿದ್ದಾರೆ. ಪ್ರತಿ ಬೆಳೆಗೆ ಸುಮಾರು ₹45 ಸಾವಿರದಷ್ಟು ಸಂಪಾದನೆ. ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಕೆಜಿ ಗೂಡಿಗೆ ₹635ವರೆಗೂ ಮಾರಿದ ಉದಾಹರಣೆಯೂ ಇದೆ. ಬೈವೋಲ್ಟೇನ್ ತಳಿ ರೇಷ್ಮೆಗೂಡಿಗೆ  ಬೇಡಿಕೆ ಇದ್ದು, ಮನೆಗೇ ಬಂದು ಈ ಗೂಡು ಖರೀದಿಸುವವರೂ ಇದ್ದಾರಂತೆ. 

ಮನೆ ಮಂದಿಯ ದುಡಿಮೆ 

ಮನೆಯಲ್ಲಿ ದುಡಿಯುವ ಎರಡು ಕೈಗಳಿದ್ದರೆ 100 ಮೊಟ್ಟೆಯಷ್ಟು ರೇಷ್ಮೆಹುಳು ಸಾಕಣೆ ಮಾಡಬಹುದು ಎನ್ನುತ್ತಾರೆ ಮಹೇಂದ್ರ. ಸದ್ಯ ಇವರ ಮನೆಯಲ್ಲಿ  ಪತ್ನಿ ಮತ್ತು ತಾಯಿಯ ಜತೆಗೆ ಕೃಷಿ ಮಾಡುತ್ತಾರೆ. ಗೂಡು ಬಿಚ್ಚುವ ದಿನ ಹೊರತುಪಡಿಸಿ, ಬೇರೆ ಸಮಯದಲ್ಲಿ ಕಾರ್ಮಿಕರನ್ನು ಆಶ್ರಯಿಸುವುದಿಲ್ಲ. ಹಿಪ್ಪುನೇರಳೆ ಸಸಿ ನಾಟಿ, ಉಳುಮೆ, ಸೊಪ್ಪು ಕಟಾವು, ಕಸ ನಿರ್ವಹಣೆ, ಸೋಂಕು ನಿವಾರಕ ಸಿಂಪಡಣೆ ಎಲ್ಲ ಕೆಲಸಕ್ಕೂ ಮನೆಯವರೇ ಜತೆಯಾಗುತ್ತಾರೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ರೇಷ್ಮೆ ಕೃಷಿ ಚಟುವಟಿಕೆಗಳಿಗೆ ಶ್ರಮಕ್ಕೆ ಪ್ರತಿಯಾಗಿ ಕೂಲಿ ರೂಪದಲ್ಲಿ ಹಣವನ್ನೂ ಗಳಿಸುತ್ತಿದ್ದಾರೆ.

ರೇಷ್ಮೆ ಕೃಷಿ ಜತೆಗೆ ಮನೆಗೆ ಬೇಕಾದ ರಾಗಿ, ಭತ್ತ, ಜೋಳದಂತಹ ಆಹಾರ ಧಾನ್ಯಗಳನ್ನು ಬೆಳೆದುಕೊಳ್ಳುತ್ತಾರೆ. ತೋಟದ ಸುತ್ತ ತೆಂಗು ಬೆಳೆಸಿದ್ದಾರೆ. ಅವು ಫಲ ಕೊಡುತ್ತಿವೆ. ದೇಸಿ ತಳಿಯ ಜಾನುವಾರುಗಳನ್ನು ಸಾಕಿದ್ದಾರೆ.

ಮೂರು ವರ್ಷಗಳಿಂದ ಮಹೇಂದ್ರ ರೇಷ್ಮೆ ಇಲಾಖೆಯ ಹಲವು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.ಗುಣಮಟ್ಟದ ರೇಷ್ಮೆ ಗೂಡು ಉತ್ಪಾದನೆಗಾಗಿ ಜಿಕೆವಿಕೆಯಿಂದ ಯುವ ರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪತ್ನಿ ಲಕ್ಷ್ಮೀ ಅವರಿಗೆ ಯಶಸ್ವಿ ರೈತ ಮಹಿಳೆ ಪ್ರಶಸ್ತಿ ಸಂದಿದೆ.

ನರೇಗಾ ನೆರವು..

ಹಿಪ್ಪುನೇರಳೆ ಸೊಪ್ಪು ಬೆಳೆಯುವವರಿಗೆ ನರೇಗಾ ಯೋಜನೆಯಡಿ ಕೂಲಿಯ ರೂಪದಲ್ಲಿ ನೆರವು ಸಿಗುತ್ತದೆ. ರೇಷ್ಮೆ ಹುಳು ಸಾಕಣೆಯ ಮನೆ ನಿರ್ಮಾಣ, ಚಂದ್ರಿಕೆ, ಸೋಂಕು ನಿವಾರಕ ಪಂಪ್ ಖರೀದಿ ಇತರ ಉದ್ದೇಶಗಳಿಗೂ ಸರ್ಕಾರದ ಸಹಾಯ ಧನ ಇದೆ. ಮಹೇಂದ್ರ ಅವರು ನರೇಗಾ ನೆರವು ಮತ್ತು ರೇಷ್ಮೆ ಇಲಾಖೆಯ ಪ್ರೋತ್ಸಾಹದಿಂದ ಮೂರು ವರ್ಷಗಳಿಂದ ರೇಷ್ಮೆ ಕೃಷಿ ಮಾಡುತ್ತಿದ್ದಾರೆ.

‘ಆರು ವರ್ಷಗಳ ಹಿಂದೆ ತರಕಾರಿ ಬೆಳೆಯುತ್ತಿದ್ದೆ. ಬೆಲೆ ಕುಸಿತ, ರೋಗ ರುಜಿನದ ಕಾರಣದಿಂದ ಸಾಕಷ್ಟು ಬಾರಿ ಕೈ ಸುಟ್ಟುಕೊಂಡಿದ್ದೇನೆ. ರೇಷ್ಮೆ ಗೂಡಿಗೆ ಆಜುಬಾಜು ನಿಖರ ಬೆಲೆ ಸಿಗುವುದರಿಂದ ನಷ್ಟದ ಮಾತೇ ಇಲ್ಲ. ರೇಷ್ಮೆ ಉತ್ಪಾದನೆ ಶುರು ಮಾಡಿದ ಬಳಿಕ ಪ್ರತಿ ತಿಂಗಳೂ ಹಣ ಸಿಗುತ್ತಿದೆ; ಜೀವನ ಸುಧಾರಿಸಿದೆ’ ಎಂದು ಮಹೇಂದ್ರ ಖುಷಿಯಿಂದ ಹೇಳುತ್ತಾರೆ. ಸಂಪರ್ಕಕ್ಕೆ ಮೊ:9972126603.

ಚಿತ್ರಗಳು: ಲೇಖಕರವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು