ಶುಕ್ರವಾರ, ಏಪ್ರಿಲ್ 10, 2020
19 °C

ಕೃಷಿಕಾವ್ಯದ ಹಸಿರು ಸಾಲುಗಳು

ಸ.ರಘುನಾಥ Updated:

ಅಕ್ಷರ ಗಾತ್ರ : | |

ಅಲೆಮಾರಿ ಮಕ್ಕಳಿಗೆ ಕನ್ನಡ ಕಲಿಸಿ, ಅವರ ಮನಸ್ಸನ್ನು ಶಾಲಾ ಪರಿಸರಕ್ಕೆ ಅಣಿಗೊಳಿಸುವ ಕಾರ್ಯದ ನಿಮಿತ್ತ ಹಳೆಯ ವಿದ್ಯಾರ್ಥಿ ಗೌನಿಪಲ್ಲಿಯ ಅಮೀದ್ ಪಾಷಾನ ಬೈಕಿನ ಹಿಂದೆ ಕುಳಿತು ಹೋಗುತ್ತಿದ್ದೆ. ಆನೆಪಲ್ಲಿ ಬಳಿಯ ಹೊಲಗದ್ದೆಗಳ ನಡುವೆ ಗುಂಟವೆ (ಕುಂಟೆ) ಎಳೆಯುತ್ತಿದ್ದ ಯುವಕರನ್ನು ಕಂಡು ಏನೇನೋ ವಿಚಾರಗಳು ಮನಸ್ಸಿನಲ್ಲಿ ಅಲೆಗಳನ್ನೆಬ್ಬಿಸಿದವು.

ಬಹುಶಃ ಅವರಲ್ಲಿ ಎತ್ತುಗಳಿಲ್ಲದೆ ನೊಗ ಹೊತ್ತರೆ? ಕೆಲಸಕ್ಕೆ ಅಗತ್ಯವಾದ ಯಂತ್ರ ಬಳಕೆ ಮಾಡುವಷ್ಟು ಹಣಕಾಸಿರಲಿಲ್ಲವೆ? ಕೃಷಿ ಇಲಾಖೆ ಇವರ ಸ್ಥಿತಿಯನ್ನು ಗಮನಿಸಿಲ್ಲವೆ? ತಾಲ್ಲೂಕು ಜಿಲ್ಲಾಡಳಿತಗಳು ನಿದ್ದೆ ಮಾಡುತ್ತಿವೆಯೆ? ಪಕ್ಕದ ಊರಿನಲ್ಲೇ ಇರುವ ಗ್ರಾಮ ಪಂಚಾಯತಿ ನಿದ್ದೆಯಲ್ಲಿದೆಯ? ಸ್ವತಂತ್ರ ಭಾರತದ ನೇಗಿಲ ಯೋಗಿಯ ಇಂತಹ ಕರ್ಮವಿನ್ನೂ ಕಳೆದಿಲ್ಲವೆ? ಹೀಗೆ ಪ್ರಶ್ನೆಗಳ ಬಾಲಕ್ಕೆ ಕೊನೆಯೇ ಇರಲಿಲ್ಲ.

ಅಲೆಮಾರಿಗಳಿಗಾಗಿ ನಿರ್ಮಿಸಿರುವ ಹಸಿರು ಹೊನ್ನೂರಿಗೆ ಹೋಗುತ್ತಿದ್ದನ್ನು ಆ ಕ್ಷಣಕ್ಕೆ ಮರೆಯುವಂತೆ ಮಾಡಿತು, ಯುವಕರು ನೊಗ ಹೊರುತ್ತಿದ್ದ ದೃಶ್ಯ. ರಸ್ತೆ ಬದಿಯಲ್ಲಿ ಗಾಡಿ ನಿಲ್ಲಿಸಿ, ನೊಗ ಹೊತ್ತ ಯುವಕರ ಹಿನ್ನೆಲೆಯನ್ನು ಅರಿಯಲು ಮುಂದಾದೆ.

ನೊಗಕ್ಕೆ ಹೆಗಲು ಕೊಟ್ಟವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡುಗು ಪಂಚಾಯಿತಿಗೆ ಸೇರಿದ ಆನೆಪಲ್ಲಿಯ ಯುವಕರು. ಗುಂಟವೆಯ ಮೇಟಿ ಹಿಡಿದಿದ್ದವ ಹತ್ತನೇ ತರಗತಿವರೆಗೆ ಓದಿದ್ದ ಸುಧಾಕರ. ಗುಂಟವೆ ಎಳೆಯುತ್ತಿದ್ದ ಇಬ್ಬರಲ್ಲಿ ಒಬ್ಬ ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ. ವಿದ್ಯಾರ್ಥಿ ನವೀನ್‍ಕುಮಾರ್, ಇನ್ನೊಬ್ಬ ಚಿಂತಾಮಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿ ರೆಡ್ಡಿ ಶೇಖರ್. ಈ ಮೂವರೂ ಸೋದರರು. ಅವರಿಗೆ ಕೊಂಚ ದೂರದಲ್ಲಿ ಕಾರ್ಯಮಗ್ನರಾಗಿ ತಂದೆ ನರಸಿಂಹಪ್ಪ, ತಾಯಿ ನಾರಾಯಣಮ್ಮ ಇದ್ದರು.

ಇವರು ಕೊಳವೆಬಾವಿ ನೀರಾವರಿಯನ್ನು ಆಶ್ರಯಿಸಿ ಬತ್ತ ಬೆಳೆದರೆ, ಮಳೆಯನ್ನು ಆಧರಿಸಿ ರಾಗಿ ಬೆಳೆ ತೆಗೆಯುತ್ತಾರೆ. ಕುಟುಂಬದ, ಮಕ್ಕಳ ಸಾಮಾನ್ಯ ಶಿಕ್ಷಣದ ಖರ್ಚಿಗೆ ಕೊರತೆಯಿಲ್ಲದ ಸಂಸಾರ. ಈ ದಿನಗಳಲ್ಲಿಯೂ ಕಷ್ಟ-ಸುಖ ಅರಿತು ಸಹಕರಿಸುವ ಮಕ್ಕಳು. ಬೇಸಾಯದ ಬದುಕನ್ನು ಬಯಸುವುದರೊಂದಿಗೆ ನಿಂತು ದುಡಿಯುವವರು. ಹೊಲಗದ್ದೆಗಳ ಕೆಲಸಕ್ಕೆ ದನಗಳಿವೆ. ಹೀಗಿದ್ದೂ ಎತ್ತುಗಳ ಹೆಗಲಿಗಿರಬೇಕಿದ್ದ ನೊಗ ಇವರ ಹೆಗಲೇರಲು ಕಾರಣವೇನು? ಈ ಪ್ರಶ್ನೆಯೇ ಅವರ ಬಳಿಗೆ ಕರೆದೊಯ್ದದ್ದು.

ಮುಂಗಾರು ಕೈ ಕೊಟ್ಟಿತ್ತು. ಹಿಂಗಾರಿನ ಬಗ್ಗೆ ಭರವಸೆ ಹುಟ್ಟಿರಲಿಲ್ಲ. ‘ಕಡೇ ಮಳೆ ಮಳೆಯಲ್ಲ, ಕೊನೇ ಮಗ ಮಗನಲ್ಲ’ ಎಂಬ ರೈತಗಾದೆ ಮನದಲ್ಲಿದ್ದರಿಂದ ರಾಗಿ ಪೈರುಬಿಟ್ಟು ನಾಟಿ ಮಾಡಿದ್ದರು. ಕಳೆತೆಗೆಯಲು ತೇವವಿಲ್ಲದ್ದರಿಂದ ಗದ್ದೆಗೆ ಹರಿಸುವ ನೀರಿನಲ್ಲಿ ಒಂದು ಭಾಗವನ್ನು ಈ ತುಂಡು ನೆಲಕ್ಕೆ ಹರಿಸಿದ್ದರು. ತೇವ ಕಳೆಯ ವೃದ್ಧಿಗೆ ಸಹಕಾರಿಯಾಗಿತ್ತು. ಎತ್ತುಗಳನ್ನು ಕಟ್ಟಿ ಗುಂಟವೆ ಹೂಡಿದರೆ ಎತ್ತುಗಳ ಕಾಲುಗಳು ಹೂತು ಹೋಗಿ ಅವಕ್ಕೆ ಕಷ್ಟವಾಗುವುದಲ್ಲದೆ, ತುಳಿತಕ್ಕೆ ಸಿಕ್ಕಿ ಪೈರು ನಾಶವಾಗುತ್ತದೆ. ನೆಲ ಹದವಾಗಿ ಒಣಗುವವರೆಗೆ ಬಿಟ್ಟರೆ ಕಳೆ ಬಲಿತು ಪೈರು ಏಳಿಗೆಯಾಗುವುದಿಲ್ಲ. ಇಳುವರಿಯಲ್ಲಿ ನಷ್ಟವಾಗುತ್ತದೆ. ಇದನ್ನರಿತು ಗುಂಟವೆಗೆ ಹೆಗಲು ಕೊಟ್ಟಿದ್ದರು.

ಅವರ ಮಾತಿನಂತೆ ‘ಯಾವಾಗಲೂ ದುಡಿವ ಎತ್ತುಗಳಿಗೆ ಕೊಂಚ ವಿಶ್ರಾಂತಿ ಕೊಡುವುದು.’ ಇದು ಪ್ರಾಣಿದಯೆಯ ಇನ್ನೊಂದು ಮಗ್ಗುಲು. ‘ಇವತ್ತೇ ಅಲ್ಲ, ಕಾಲೇಜಿಗೆ ರಜೆ ಇದ್ದ ದಿನಗಳಲ್ಲಿ ಇವರನ್ನು ಹೊಲಗದ್ದೆಗೆ ಇಳಿಸುತ್ತೇವೆ. ಕಾಲೇಜಿಗೆ ಹೋದ ಮಾತ್ರಕ್ಕೇ ಹೊಲಗದ್ದೆಗಳಿಂದ ದೂರವಿರಬೇಕಿಲ್ಲ. ರೈತರಾದ ನಾವು ಮಕ್ಕಳನ್ನು ಭೂಮಿತಾಯಿಯಿಂದ ದೂರ ಮಾಡಬಾರದು. ಮುಂದೆ ಇವರು ಏನೇ ಆಗಲಿ, ತಾವು ರೈತರೆಂದು ಹೆಮ್ಮೆಪಡಬೇಕು. ಮುಂದೆ ಇವರು ‘ಸಂಬಳ’ವಂದಿಗರಾದರೆ ಅದು ಈ ನೆಲದ ಪ್ರಸಾದ ಎಂದು ನೆನಪಿರಬೇಕು’ ಎಂಬುದು ತಾಯಿಯ ಅಪೇಕ್ಷೆ. ಇದನ್ನು ಈ ಸೋದರರು ಗೌರವಿಸಿ, ತಂದೆ–ತಾಯಿಯ ಇಚ್ಛೆಯಂತೆ ನಡೆಯುತ್ತಿದ್ದಾರೆ. ಮೊಬೈಲು ಫೋನ್ ಬಳಸಿಯೂ ಅದರಲ್ಲಿ ಅವರು ಕಳೆದು ಹೋದವರಲ್ಲ.

ದೈಹಿಕ ದುಡಿಮೆಗೆ ಬೆಲೆ ತಂದ ಮಹಾತ್ಮರಲ್ಲಿ ಒಬ್ಬರಾದ ಬಸವಣ್ಣನವರ ಕಾಯಕ ತತ್ವ ವರ್ತಮಾನದಲ್ಲೂ ಪ್ರಸ್ತುತವೆಂಬುದಕ್ಕೆ ಈ ಯುವ ಸೋದರರು, ಅವರ ತಾಯಿ–ತಂದೆ ಜೀವಂತ ಉದಾಹರಣೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)